ಹೊನ್ನಾವರ: ಇಂದು ಸಂಜೆ 5ಕ್ಕೆ ಲಿಂಗನಮಕ್ಕಿ ಜಲಾಶಯದ ಜಲಮಟ್ಟ 1813.90 ಅಡಿಗೆ ಏರಿದೆ. ಗರಿಷ್ಠ 1819 ಮುಟ್ಟಲು ಕೇವಲ 5ಅಡಿ ಬಾಕಿ. ಇನ್ನು 3ಅಡಿ ತುಂಬಿದರೆ ಜಲಾನಯನ ಪ್ರದೇಶದ ಮಳೆಯನ್ನು ಆಧರಿಸಿ, ಒಳಹರಿವು ಪರಿಶೀಲಿಸಿ ಲಿಂಗನಮಕ್ಕಿಯಿಂದ ನೀರು ಬಿಡಲು ಆರಂಭಿಸುವ ಸಾಧ್ಯತೆ ಇದೆ.
ಲಿಂಗನಮಕ್ಕಿಯ ಒಳಹರಿವು 58,071 ಕ್ಯುಸೆಕ್‌ಗಳಿವೆ. ವಿದ್ಯುತ್ ಉತ್ಪಾದಿಸಿ 2,158 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಈ ನೀರು ಜೋಗ ಜಲಪಾತದಲ್ಲಿ ಇಳಿದು ಗೇರುಸೊಪ್ಪಾ ಅಣೆಕಟ್ಟಿಗೆ ಬಂದು ಸಂಗ್ರಹವಾಗುತ್ತದೆ. ಅಲ್ಲಿ ಗರಿಷ್ಠ ವಿದ್ಯುತ್ ಉತ್ಪಾದಿಸಿ, ನೀರು ಬಿಡಲಾಗುತ್ತಿದೆ. ಇಂದು ಕರಾವಳಿಯಲ್ಲಿ, ಶರಾವತಿಕೊಳ್ಳದಲ್ಲಿ ಮಳೆ ಜಾಸ್ತಿಯಾಗಿದೆ. ಲಿಂಗನಮಕ್ಕಿ ಭಾಗದಲ್ಲಿ ಸಾಧಾರಣಾ ಜಿಟಿಜಿಟಿ ಮಳೆಯಾಗುತ್ತದೆ ಎಂದು ಮಾವಿನಗುಂಡಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಅಶೋಕ ಹೆಗಡೆ ವರದಿ ಮಾಡುತ್ತಾರೆ.
ಯಾವಾಗ, ಎಷ್ಟು ನೀರು ಬಿಡುತ್ತೀರಿ ಎಂಬ ಪ್ರಶ್ನೆಗೆ ಕೆಪಿಸಿಯಲ್ಲೂ ಉತ್ತರವಿಲ್ಲ. ಅವರಿಗೂ ಸಂದಿಗ್ಧತೆ ಇದೆ. ಸದ್ಯ ಮಳೆ ಕಡಿಮೆ ಇದೆ, ಸಮತೋಲನ ಕಾಯ್ದುಕೊಂಡು ನೀರುತುಂಬಿಸುತ್ತಿದ್ದಾರೆ. ಕೂಡಲೇ ಮಳೆ ನಿಂತರೆ ಹಾನಿ, ಜೋರಾಗಿ ಬಂದರೂ ಕೊಳ್ಳದ ಜನಕ್ಕೆ ಹಾನಿ. ಎರಡನೇ ವಾರ ಬಂದಂತಹ ಮಳೆ ಮತ್ತೆ ಬಂದರೆ ನೀರು ಬಿಡುವುದು ಅನಿವಾರ್ಯವಾಗುತ್ತದೆ. ಮುಂದಿನ ಕೆಲವು ದಿನಗಳು ಕೆಪಿಸಿಗೆ ಸಂದಿಗ್ಧದ ದಿನಗಳು. ಶರಾವತಿಕೊಳ್ಳದ ಜನತೆಗೆ ಆತಂಕದ ದಿನಗಳು ಕೆಪಿಸಿ ಪ್ರವಾಹದ ಮೂರು ಮುನ್ನೆಚ್ಚರಿಕೆ ನೀಡಿ ಆಗಿದೆ. ತಾಲೂಕಾಡಳಿತ ಶರಾವತಿ ಎಡಬಲ ದಂಡೆಯ ಎಲ್ಲೆಡೆ 19 ಅಧಿಕಾರಿಗಳನ್ನು ನೇಮಿಸಿದೆ. ಲೈಫ್ ಜಾಕೆಟ್, ದೋಣಿಗಳ ವ್ಯವಸ್ಥೆ ಮಾಡಿದೆ. ಗಂಜಿಕೇಂದ್ರಕ್ಕೆ ಅಗತ್ಯ ಬಿದ್ದರೆ ಶಾಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದೆ. ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಚಂದ್ರಕಾಂತ ಕೊಚರೇಕರ್, ಯೋಗೇಶ ರಾಯ್ಕರ ಮೊದಲಾದವರು ಆಕಸ್ಮಾತ್ ನೀರು ಬಿಟ್ಟರೆ ಆಡಳಿತದೊಂದಿಗೆ ಸಹಕರಿಸಿ, ಒಟ್ಟಾಗಿ ನೆರೆಯಿಂದಾಗುವ ಹಾನಿಯನ್ನು ತಪ್ಪಿಸಿಕೊಳ್ಳೋಣ ಎಂದು ಕರೆನೀಡಿದ್ದಾರೆ. ಕೆಪಿಸಿ ಅಂತಿಮ ಸೂಚನೆ ನೀಡಿ, ಯಾವುದೇ ಕ್ಷಣದಲ್ಲಿ ನೀರು ಬಿಡಬಹುದು ಎಂದು ಹೇಳಿದ್ದರೂ ನೀರು ಬಿಟ್ಟು ಕನಿಷ್ಠ 12ಗಂಟೆಯ ನಂತರ ಶರಾವತಿಕೊಳ್ಳಕ್ಕೆ ತಲುಪುವಂತೆ ಮಾಡಲಿದೆ.
ಆರಂಭದಲ್ಲಿ ನಿಧಾನವಾಗಿ ನೀರು ಬಿಡಲಿದೆ. ಆ ಪರಿಸ್ಥಿತಿ ಬರದಿರಲಿ, ಅಣೆಕಟ್ಟು ತುಂಬಿಸಿ, ನೆರೆ ನಿಲ್ಲಲಿ ಎಂದು ಪ್ರಾರ್ಥಿಸಬೇಕಾಗಿದೆ.