ಬೆಂಗಳೂರು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ರಾಜಧಾನಿಯಿಂದ ತಮ್ಮ ಊರುಗಳಿಗೆ ತೆರಳುತ್ತಿದ್ದ ಪ್ರಯಾಣಿಕರಿಗೆ ಗುರುವಾರ ರಾತ್ರಿ ಟ್ರಾಫಿಕ್ ಬಿಸಿ ತಟ್ಟಿತು. ವರಮಹಾಲಕ್ಷ್ಮೀ ಹಬ್ಬ, ಎರಡನೇ ಶನಿವಾರ, ಭಾನುವಾರ ಮತ್ತು ಬಕ್ರೀದ್ ರಜೆ ಒಟ್ಟೊಟ್ಟಿಗೆ ಬಂದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸಾರ್ವಜನಿಕರು ತಮ್ಮ ಊರುಗಳಿಗೆ ಹೊರಟಿದ್ದರು. ಮಳೆ ವಾತಾವರಣದಿಂದ ತುಸು ಬೇಗನೆ ಮನೆಗಳಿಗೆ ಹೋಗಲು ಮುಂದಾದ ಪ್ರಯಾಣಿಕರಿಗೆ ಟ್ರಾಫಿಕ್ ಸಮಸ್ಯೆ ಕಾಡಿತ್ತು.
Advertisement
ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ಯಶವಂತಪುರ, ಕೆ.ಆರ್.ಪುರ, ಮೇಕ್ರಿ ವೃತ್ತ ಸೇರಿ ಹಲವು ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಸಂಜೆ 5 ಗಂಟೆಗೆ ಶುರುವಾದ ಟ್ರಾಫಿಕ್ ಬಿಸಿ ಮಧ್ಯರಾತ್ರಿ ಒಂದು ಗಂಟೆ ತನಕ ಸಾರ್ವಜನಿಕರನ್ನು ಕಾಡಿತು. ಈ ನಡುವೆ ಉತ್ತರ ಕರ್ನಾಟಕದಲ್ಲಿ ಎದುರಾಗಿರುವ ಪ್ರವಾಹ, ಮಲೆನಾಡು ಮತ್ತು ಮಡಿಕೇರಿಯಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಹಲವು ಬಸ್ ಮಾರ್ಗಗಳ ಸಂಚಾರ ಈಗಾಗಲೇ ರದ್ದಾಗಿರುವ ಕಾರಣ ಕೆಲ ಬಸ್ ಗಳು ಡಿಪೋಗಳಲ್ಲೇ ಉಳಿದಿವೆ. ಈ ಬಸ್‌ಗಳೂ ಸಂಚಾರ ಆರಂಭಿಸಿದ್ದರೆ ಮತ್ತಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗುತಿತ್ತು.
ತಿರುಪತಿ, ಚೆನ್ನೈ ಮಾರ್ಗದ ಬಸ್‌ಗಳಿಗೆ ಕೆ.ಆರ್.ಪುರವರೆಗೆ, ಬಳ್ಳಾರಿ, ಅನಂತಪುರ, ಹೈದರಾಬಾದ್ ಮಾರ್ಗದಲ್ಲಿ ಯಲಹಂಕ ತನಕ, ಶಿವಮೊಗ್ಗ, ಹಾಸನ, ಮಂಗಳೂರು, ಮುಂಬೈ ಮತ್ತು ಉತ್ತರ ಕರ್ನಾಟಕದತ್ತ ಹೊರಟವರಿಗೆ ದಾಸರಹಳ್ಳಿವರೆಗೆ ಮತ್ತು ಮೈಸೂರು, ಕೊಡಗು, ಬಂಡೀಪುರ ಮೂಲಕ ಕೇರಳ ಹೋಗುವ ವಾಹನಗಳಿಗೆ ಕೆಂಗೇರಿ ತನಕ, ಧರ್ಮವರಂ, ಕೃಷ್ಣಗಿರಿ, ಸೇಲಂ ಮಾರ್ಗವಾಗಿ ಹೋಗುವ ಬಸ್‌ಗಳಿಗೆ ಅತ್ತಿಬೆಲೆ ತನಕ ಟ್ರಾಫಿಕ್ ಜಾಮ್ ಕಾಡಿತು.