Advertisement

ಸಾಲು ರಜೆ; ಪ್ರವಾಸಿ ತಾಣಗಳಲ್ಲಿ ಫುಲ್‌ ರಶ್‌

11:05 PM Apr 21, 2019 | Sriram |

ವಿಶೇಷ ವರದಿ- ಮಹಾನಗರ: ಮತದಾನ ಸಹಿತ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಮಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ಅದರಲ್ಲಿಯೂ ನಗರದಲ್ಲಿರುವ ಪ್ರಮುಖ ಎರಡು ಬೀಚ್‌ಗಳಿಗೆ ಒಂದು ವಾರದಲ್ಲಿ ಭೇಟಿ ನೀಡಿದ ಮಂದಿ ಲಕ್ಷಕ್ಕೂ ಹೆಚ್ಚು.

Advertisement

ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಬರುವ ಪ್ರವಾಸಿಗರು ಬೀಚ್‌ಗೆ ತೆರಳದೆ ಹೋಗಲಾರರು. ಹಾಗಾಗಿ ಪಣಂಬೂರು, ತಣ್ಣೀರುಬಾವಿ ಬೀಚ್‌ಗಳಲ್ಲಿ ಪ್ರತೀ ದಿನ ಜನಜಂಗುಳಿ ಇರುತ್ತದೆ. ಪಣಂಬೂರು, ತಣ್ಣೀರುಬಾವಿ ಬೀಚ್‌ಗಳಿಗೆ ಸಾಮಾನ್ಯ ದಿನಗಳಲ್ಲಿ ತಲಾ ಸುಮಾರು 3,000ದಷ್ಟು ಪ್ರವಾಸಿಗರು, ವೀಕೆಂಡ್‌ ಸಮಯ 10 ಸಾವಿರದಷ್ಟು ಪ್ರವಾಸಿಗರು ಬರುತ್ತಾರೆ.

ಲಕ್ಷ ಮಂದಿ ಭೇಟಿ
ಆದರೆ ಈ ಒಂದು ವಾರದಲ್ಲಿ ತಲಾ ಸುಮಾರು 50 ಸಾವಿರಕ್ಕೂ ಮಂದಿ ಬಂದಿದ್ದಾರೆ. ಒಟ್ಟಾರೆ ಎರಡೂ ಬೀಚ್‌ಗಳಲ್ಲಿ ಒಂದು ವಾರದಲ್ಲಿ ಸುಮಾರು 1 ಲಕ್ಷಕ್ಕೂ ಮಿಕ್ಕಿ ಮಂದಿ ಪ್ರವಾಸಿಗರು ಆಗಮಿಸಿದ್ದಾರೆ.

ಪಿಲಿಕುಳದಲ್ಲೂ
ಪ್ರವಾಸಿಗರ ಸಂಖ್ಯೆ ಏರಿಕೆ
ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪಿಲಿಕುಳ ನಿಸರ್ಗಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆ ಯಾಗಿದೆ. ಸಾಮಾನ್ಯವಾಗಿ ಪ್ರತೀ ದಿನ ಸುಮಾರು 3,000 ಮಂದಿ ಪ್ರವಾಸಿಗರು ಪಿಲಿಕುಳ ವೀಕ್ಷಣೆಗೆ ಬರುತ್ತಾರೆ. ಆದರೆ, ರಜಾ ಹಿನ್ನೆಲೆಯಲ್ಲಿ ಪ್ರತೀ ದಿನ ಸುಮಾರು 10,000ದಷ್ಟು ಮಂದಿ ಆಗಮಿಸುತ್ತಿದ್ದಾರೆ.

ಪ್ರತೀ ದಿನ ವೀಕ್ಷಣೆಗೆ ವ್ಯವಸ್ಥೆ
ಈ ಹಿಂದೆ ಪಿಲಿಕುಳದ ಸುತ್ತ ಮುತ್ತಲ ಪ್ರದೇಶದ ನಿರ್ವ ಹಣೆಯ ಸಲುವಾಗಿ ಪ್ರತೀ ಸೋಮ ವಾರದಂದು ನಿಸರ್ಗ ಧಾಮಕ್ಕೆ ಪ್ರವಾಸಿಗರಿಗೆ ಪ್ರವೇಶ ವಿರಲಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಹಿನ್ನೆಲೆಯಲ್ಲಿ ಪ್ರತೀ ದಿನ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ಇನ್ನು, ನಿಸರ್ಗಧಾಮ ವೀಕ್ಷಣೆಗೆ ಕೋಂಬೋ ಆಫರ್‌ ಇದ್ದು, ಕೇವಲ 120 ರೂ.ನೀಡಿದರೆ,ನಿಸರ್ಗಧಾಮ, ತಾರಾಲಯ,ಗುತ್ತಿನ ಮನೆ, ಮೃಗಾಲಯ, ಕೆರೆ ಇತ್ಯಾದಿಗಳನ್ನು ವೀಕ್ಷಿಸಬಹುದು.

ಧಾರ್ಮಿಕ ಕ್ಷೇತ್ರಗಳಲ್ಲೂ ಜನಜಂಗುಳಿ
ನಗರದ ಹೆಚ್ಚಿನ ಧಾರ್ಮಿಕ ಕ್ಷೇತ್ರಗಳು ಇರುವದರಿಂದ ಪ್ರವಾಸಿಗರು ಹೆಚ್ಚಿನ ಪ್ರಾಶಸ್ತÂ ನೀಡುತ್ತಾರೆ. ಅದರಲ್ಲಿಯೂ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಕದ್ರಿ ಮಂಜುನಾಥ ದೇವಾಲಯ, ಮಂಗಳಾದೇವಿ ದೇವಸ್ಥಾನ ಸಹಿತ ಇನ್ನಿತರ ಧಾರ್ಮಿಕ ಕ್ಷೇತ್ರದಲ್ಲಿ ದಿನಂಪ್ರತಿ ಸಾವಿರಾರು ಮಂದಿ ಪ್ರವಾಸಿಗರು ದೇವರ ದರ್ಶನ ಪಡೆಯುತ್ತಿದ್ದಾರೆ.

ಪಿಲಿಕುಳಕ್ಕೆ ಬರಲಿದೆ ಹೊಸ ಅತಿಥಿ
ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಪಿಲಿಕುಳಕ್ಕೆ ಹೊಸ ಅತಿಥಿ ಆಗಮನವಾಗಲಿದೆ. ಮುಂಬಯಿಯ ಮೃಗಾಲಯದಿಂದ ಕೆಲವೊಂದು ಪಕ್ಷಿಗಳು ಪಿಲಿಕುಳಕ್ಕೆ ಬರಲಿವೆ. ಅಲ್ಲದೆ, ಹೈದರಾಬಾದ್‌ ಮೃಗಾಲಯದಿಂದ ಓತಿಕೇತ ಬರಲಿದೆ. ಅದೇ ರೀತಿ ಪಿಲಿಕುಳದಲ್ಲಿರುವ ಹೆಚ್ಚುವರಿ ಪ್ರಾಣಿಗಳು ಬೇರೆ ಮೃಗಾಲಯ ಸೇರಲಿದೆ.

 ಪ್ರವಾಸಿಗರ ಸಂಖ್ಯೆ ಹೆಚ್ಚು
ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹೊರ ಜಿಲ್ಲೆಯ ಮಂದಿ ಮಧ್ಯಾಹ್ನದ ವೇಳೆ, ಸ್ಥಳೀಯರು ಸಂಜೆ ವೇಳೆ ಬೀಚ್‌ಗೆ ಆಗಮಿಸುತ್ತಿದ್ದಾರೆ. ಬೀಚ್‌ಗಳಲ್ಲಿ ಸಾಹಸ ಜಲ ಕ್ರೀಡೆಗಳಿಗೆ ಆಗಮಿಸುವ ಮಂದಿ ಹೆಚ್ಚಾಗಿದ್ದಾರೆ.
 - ಯತೀಶ್‌ ಬೈಕಂಪಾಡಿ, ಪಣಂಬೂರು ಬೀಚ್‌ ಯೋಜನೆ ಅಭಿವೃದ್ಧಿಯ ಸಿಇಒ

 ಪ್ರತೀ ದಿನ ವೀಕ್ಷಣೆಗೆ ಲಭ್ಯ
ಪಿಲಿಕುಳ ನಿಸರ್ಗಧಾಮಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ತಿಂಗಳ ಕೊನೆಯವರೆಗೆ ವಾರದ ಏಳೂ ದಿನವೂ ನಿಸರ್ಗಧಾಮ ಪ್ರವಾಸಿಗರಿಗೆ ತೆರೆದಿರಲಿದೆ.
ಪ್ರವಾಸಿಗರ ವೀಕ್ಷಣೆಗೆ ಅನುಕೂಲವಾಗಲೆಂದು ಕೋಂಬೋ ಆಫರ್‌ ಕೂಡ ಇದೆ.
– ಎಚ್‌. ಜಯಪ್ರಕಾಶ್‌ ಭಂಡಾರಿ, ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next