Advertisement

ಮಿತ ಬಳಕೆಯಷ್ಟೇ ಜಲ ಸಂರಕ್ಷಣೆಗೆ ಉಳಿದಿರುವ ದಾರಿ

02:37 AM Jan 18, 2021 | Team Udayavani |

ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಂತರ್ಜಲದ ಮಟ್ಟ ನಿರಂತರ ಕುಸಿಯುತ್ತಿದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ನೆಲದಾಳದ ನೀರು ಮತ್ತಷ್ಟು ಆಳಕ್ಕೆ ಇಳಿದಿದೆ. ಮಿತಬಳಕೆ, ಜಲ ಮರುಪೂರಣ, ನೀರಿಂಗಿಸುವಂತಹ ಉಪಕ್ರಮಗಳಿಗೆ  ಮುಂದಾಗದೆ ಇದ್ದಲ್ಲಿ ಮುಂದಿನ ವರ್ಷಗಳಲ್ಲಿ ನಮಗೆ ತೊಂದರೆ ಖಚಿತ.

Advertisement

ಜಿಲ್ಲಾ ಅಂತರ್ಜಲ ಕಚೇರಿಯು ಪ್ರತೀ ತಿಂಗಳು ನಡೆಸುವ ಮೌಲ್ಯಮಾಪನವನ್ನು ಗಮನಿಸಿದರೆ ಕುಸಿತ ಸ್ಪಷ್ಟವಾಗುತ್ತದೆ. ವರ್ಷದಿಂದ ವರ್ಷಕ್ಕೆ ನೀರಿನ ಬಳಕೆದಾರರ ಸಂಖ್ಯೆ ಹೆಚ್ಚಳ, ಮಳೆಯಾಗುವ ಕಾಲಮಾನದಲ್ಲಿ ವ್ಯತ್ಯಾಸ, ನೀರಿನ ದುಂದುವೆಚ್ಚ ಕುಸಿತಕ್ಕೆ ಕಾರಣಗಳಲ್ಲಿ ಕೆಲವು.

ದ.ಕ., ಉಡುಪಿ ಕುಸಿತ ದಾಖಲು :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2019ಕ್ಕಿಂತ 2020ರಲ್ಲಿ ಅಂತರ್ಜಲ 0.16 ಮೀ.ನಷ್ಟು ಕೆಳಕ್ಕೆ ತಗ್ಗಿದೆ. ಈ ಎರಡು ವರ್ಷಗಳ ಡಿಸೆಂಬರ್‌ ತಿಂಗಳ ಅಂತರ್ಜಲ ಮಟ್ಟ ಗಮನಿಸಿದರೆ, ಜಿಲ್ಲೆಯ ಐದು ತಾಲೂಕುಗಳ ಪೈಕಿ ಮಂಗಳೂರು, ಕಡಬ, ಪುತ್ತೂರಿನಲ್ಲಿ ಕುಸಿತ ಹೆಚ್ಚಿರುವುದು ಕಂಡುಬರುತ್ತದೆ. ಉಳಿದ ತಾಲೂಕುಗಳಲ್ಲಿ ಕೊಂಚ ಏರಿಕೆ ಕಂಡಿದೆ. ಒಟ್ಟು ಜಿಲ್ಲಾವಾರು ತೆಗೆದುಕೊಂಡರೆ ಕುಸಿತದ ನಿರಾಶೆಯೇ ಕಾಣಿಸುತ್ತದೆ.

ಉಡುಪಿ ಜಿಲ್ಲೆಯಲ್ಲಿ 2019ಕ್ಕೆ ಹೋಲಿಸಿದರೆ 2020ರಲ್ಲಿ ಅಂತರ್ಜಲ 0.45 ಮೀ. ನಷ್ಟು ಕೆಳಕ್ಕಿಳಿದಿದೆ. ಜಿಲ್ಲಾವಾರು ಅಂಕಿಅಂಶ ತೆಗೆದುಕೊಂಡರೆ, 2017ರಲ್ಲಿ 7.36 ಮೀ., 2018ರಲ್ಲಿ 7.42 ಮೀ., 2019ರಲ್ಲಿ 6.57 ಮೀ., 2020ರಲ್ಲಿ 7.02 ಮೀ. ನಷ್ಟು ಅಂತರ್ಜಲ ಮಟ್ಟವಿತ್ತು. 2018ಕ್ಕೆ ಹೋಲಿಸಿದರೆ 2020ರಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿರುವುದು ಮತ್ತು 2019ಕ್ಕೆ ಹೋಲಿಸಿದರೆ 2020ರಲ್ಲಿ ಕುಸಿದಿರುವುದು ಕಂಡುಬಂದಿದೆ.

Advertisement

ಕೃಷಿ ಪ್ರಧಾನ ತಾಲೂಕುಗಳಲ್ಲಿ ಆತಂಕ :

ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಉಳಿದ ತಾಲೂಕುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತಗ್ಗಿದೆ. ಕೃಷಿ, ನದಿ ಪ್ರಧಾನವಾಗಿರುವ ಈ ಎರಡು ತಾಲೂಕುಗಳಲ್ಲಿ ಕುಸಿತದ ಪ್ರಮಾಣ ಆತಂಕ ಮೂಡಿಸದೆ ಇರದು.

ಅಂತರ್ಜಲದ ಸದ್ಬಳಕೆಗೆ ಸ್ವಯಂ ನಿಯಂತ್ರಣ, ಮರುಪೂರಣಗಳ ಆವಶ್ಯಕತೆ ಇದೆ. ಅಗತ್ಯವಿರುವಷ್ಟೇ ನೀರನ್ನು ಬಳಸುವುದು, ಪೋಲಾಗುವುದನ್ನು ತಪ್ಪಿಸುವುದು ಮತ್ತು ಹೆಚ್ಚು ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದು ಅತ್ಯಗತ್ಯ.– ಜಾನಕಿ,  ಹಿರಿಯ ಭೂ ವಿಜ್ಞಾನಿ, ಅಂತರ್ಜಲ ಕಚೇರಿ, ದ.ಕ. ಜಿಲ್ಲೆ

ಹಿಂಗಾರು ಮಳೆ ಚೆನ್ನಾಗಿ ಬಂದರೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಹಿಂದಿನ ಎರಡು ವರ್ಷಗಳಲ್ಲಿ ಹಿಂಗಾರು ಮಳೆ ತೀರಾ ಕಡಿಮೆಯಾಗಿತ್ತು. ಮಳೆ ವ್ಯತ್ಯಾಸ ಕೂಡ ಅಂತರ್ಜಲ ಏರುಪೇರಿಗೆ ಕಾರಣಗಳಲ್ಲಿ ಒಂದು. ಬಳಕೆದಾರರ ಸಂಖ್ಯೆಯು ವರ್ಷಕ್ಕಿಂತ ವರ್ಷ ಹೆಚ್ಚಳವಾಗುತ್ತಿರುವುದರಿಂದ ನೀರಿನ ಬಳಕೆ ಕೂಡ ಹೆಚ್ಚಿದೆ. ನೀರಿನ ಮಿತ ಬಳಕೆಗೆ ನಾವು ಆದ್ಯತೆ ನೀಡಬೇಕು.– ದಿನಕರ ಶೆಟ್ಟಿ, ಹಿರಿಯ ಭೂ ವಿಜ್ಞಾನಿ ಅಂತರ್ಜಲ ಕಚೇರಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next