Advertisement

ಪಶುಭಾಗ್ಯ ಎಂಎಲ್‌ಎ, ಎಂಎಲ್‌ಸಿ ಗ್ರಾಮಕ್ಕೆ ಮಾತ್ರ ಸೀಮಿತ

09:35 PM Oct 23, 2019 | Lakshmi GovindaRaju |

ಚನ್ನರಾಯಪಟ್ಟಣ: ಪಶುಭಾಗ್ಯ ಯೋಜನೆ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ಗ್ರಾಮಕ್ಕೆ ಮಾತ್ರ ಸೀಮಿತವಾಗಿದ್ದು, ತಾಲೂಕು ಪಂಚಾಯಿತಿ ಸದಸ್ಯರು ತಮ್ಮ ಕ್ಷೇತ್ರದ ರೈತರಿಗೆ ಈ ಯೋಜನೆ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಸದಸ್ಯ ಡಿ.ಸಿ.ಮಂಜೇಗೌಡ ಆರೋಪಿಸಿದರು.

Advertisement

ಅಧಿಕಾರಿಗಳಿಗೆ ತರಾಟೆ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ಇಂದಿರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಡರೈತರ ಆರ್ಥಿಕಾಭಿವೃದ್ಧಿಗಾಗಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪಶುಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಆದರೆ ಅಧಿಕಾರಿಗಳು ಶಾಸಕ ಸಿ.ಎನ್‌.ಬಾಲಕೃಷ್ಣ ಅವರ ಗ್ರಾಮ ಚೋಳೇನಹಳ್ಳಿ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಗ್ರಾಮ ಜಂಬೂರಿಗೆ ಸೀಮಿತ ಮಾಡಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯ ಭೈರೇಗೌಡ ಧ್ವನಿಗೂಡಿಸಿ 23 ಮಂದಿ ತಾಲೂಕು ಪಂಚಾಯಿತಿ ಸದಸ್ಯರು ಇದ್ದೇವೆ ಪ್ರತಿ ಸದಸ್ಯರ ಕ್ಷೇತ್ರಕ್ಕೆ ಎರಡು ಫ‌ಲಾನುಭವಿಗಳ ಆಯ್ಕೆ ಮಾಡಬೇಕು ಎಂಬ ನಿಯಮವನ್ನು ಪಾಲಿಸುತ್ತಿಲ್ಲ ಎಂದು ದೂರಿದರು. ಇದಕ್ಕುತ್ತರಿಸಿದ ಪಶು ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಪಶುಭಾಗ್ಯ ಯೋಜನೆಯಲ್ಲಿ ಆರು ಹೋಬಳಿಗೆ 31 ಮಂದಿ ಫ‌ಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಬೇಕಿದೆ. ಅಗತ್ಯಕ್ಕೆ ತಕ್ಕಂತೆ ಸರ್ಕಾರ ಅನುದಾನ ನೀಡುತ್ತಿಲ್ಲ ಏನು ಮಾಡೋಣ ಎಂದರು. ಸದಸ್ಯರು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚಿಸಿದರು.

ಹಾಳಾಗಿರುವ ಶುದ್ಧ ನೀರಿನ ಘಟಕಗಳು: ತಾಲೂಕಿನಲ್ಲಿ ಸುಮಾರು 10ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಕಳೆದ ಆರು ತಿಂಗಳಿನಿಂದ ಸಾರ್ವಜನಿಕರು ಕುಡಿಯುವ ನೀರಿಗೆ ಯಾತನೆ ಪಡುವಂತಾಗಿದೆ ಎಂದು ಸದಸ್ಯ ವಾಸು ಆರೋಪಿಸಿದರು. ಇವರ ಮಾತಿಗೆ ಧ್ವನಿ ಗೂಡಿಸಿದ ಸದಸ್ಯರಾದ ಶ್ಯಾಮಲಾ ಹಾಗೂ ಭೈರೇಗೌಡ ಸರ್ಕಾರ ಒಂದು ಘಟಕ ನಿರ್ಮಾಣಕ್ಕೆ 8 ರಿಂದ 10 ಲಕ್ಷ ರೂ. ಖರ್ಚಾಗುತ್ತಿದೆ. ಆದರೆ ಇದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಘಟಕ ನಿರ್ಮಿಸಿರುವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌)ದ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆಪಾದಿಸಿದರು.

ಅಧಿಕಾರಿಗಳ ಗಮನಕ್ಕೆ ತರಲಾಗಿದೆ: ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕರ ಅಭಿಯಂತರಾದ ನಳಿನಾ ಮಾತನಾಡಿ, ತಾಲೂಕಿನಲ್ಲಿ 91 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಸಹಕಾರ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗ್ರಾಮ ಪಂಚಾಯಿತಿಯಿಂದ ನಿರ್ವಹಣೆ ಮಾಡುತ್ತಿದ್ದು, ಯಾವುದೇ ತೊಂದರೆ ಇಲ್ಲ. ಆದರೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ಅವರು ಅಧೀನದಲ್ಲಿನ ಘಟಕಗಳು ಉತ್ತಮವಾಗಿ ನಿರ್ವಹಣೆ ಇಲ್ಲದೇ ತೊಂದರೆ ಆಗುತ್ತಿದೆ ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸಭೆ ಗಮನಕ್ಕೆ ತಂದರು.

Advertisement

ಸರ್ಕಾರಿ ಬೋರ್ವೆಲ್‌ ದುರ್ಬಳಕೆ: ಸದಸ್ಯ ಮೀನಾಕ್ಷಿ ಮಾತನಾಡಿ ದಮ್ಮನಿಂಗಲ ಗ್ರಾಮದಲ್ಲಿ ಇರುವ ಎರಡೂ ಸರ್ಕಾರಿ ಕೊಳವೆ ಬಾವಿಗೆ ಖಾಸಗಿಯವರು ಯಂತ್ರವನ್ನು ಬಿಟ್ಟಿದ್ದಾರೆ. ಒಂದರಲ್ಲಿ ಗ್ರಾಮಕ್ಕೆ ನೀರು ನೀಡಲಾಗುತ್ತಿದೆ. ಗ್ರಾಮದ ಹೊರ ಭಾಗದ ದೇವಾಲಯ ಸಮೀಪದಲ್ಲಿನ ಕೊಳವೆ ಬಾವಿಯರವರು ಇತರರಿಗೆ ನೀರು ನೀಡದೇ ತೊಂದರೆ ಮಾಡುತ್ತಿದ್ದಾರೆ, ಇಲಾಖೆಯಿಂದ ಕೊಳವೆ ಬಾವಿಗೆ ಯಂತ್ರಗಳನ್ನು ಅಳವಡಿಸಿ ಸಾರ್ವಜನಿಕರಿಗೆ ನೀರು ನೀಡಬೇಕು. ಸರ್ಕಾರಿ ಕೊಳವೆ ಬಾವಿಯನ್ನು ತಮ್ಮದು ಎಂಬಂತೆ ವರ್ತನೆ ಮಾಡುತ್ತಿರುವವರಿಂದ ಮುಕ್ತಿ ಕೊಡಿಸುವಂತೆ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

200 ಜನರಿಂದ ಬಿಪಿಎಲ್‌ ಕಾರ್ಡ್‌ ವಾಪಸ್‌: ಆಹಾರ ಇಲಾಖೆ ಅಧಿಕಾರಿ ಶಂಕರ ಮಾತನಾಡಿ, ತಾಲೂಕಿನಲ್ಲಿ ಸುಮಾರು 200 ಮಂದಿ ಬಿಪಿಎಲ್‌ ಪಡಿತರ ಚೀಟಿ ದಾರರು ತಮ್ಮ ಚೀಟಿಯನ್ನು ಹಿಂತಿರುಗಿಸಿದ್ದಾರೆ. ಅವರಲ್ಲಿ ಕೆಲವರು ಅಕ್ರಮವಾಗಿದ್ದವು, ಇನ್ನು ಹಲವು ಒಂದು ಮನೆಗೆ ಎರಡು ಚೀಟಿ ಇದ್ದವು ಎಂದು ಸಭೆ ಗಮನಕ್ಕೆ ತಂದರು. ಸದಸ್ಯ ವಾಸು ಮಾತನಾಡಿ, ತಾಲೂಕಿನಲ್ಲಿ ವೃದ್ಧಾಪ್ಯ ವೇತನ ಹಾಗೂ ಬಿಪಿಎಲ್‌ ಕಾರ್ಡ್‌ ದಂಧೆಯಾಗಿದೆ. ಆರ್ಥಿಕವಾಗಿ ಸಬಲರಾದವರೂ ಬಿಪಿಎಲ್‌ ಕಾರ್ಡ್‌ ಹಾಗೂ ವೃದ್ಧಾಪ್ಯ ವೇತನ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಆಪಾದಿಸಿದರು.

ಇದಕ್ಕುತ್ತರಿಸಿದ ತಾಪಂ ಇಒ ಚಂದ್ರಶೇಖರ್‌ ಮಾತನಾಡಿ, ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಪೆದವರವ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಇದುವರೆಗೂ ಪಡೆದಿರುವ ಪಡಿತರದ ಹಣವನ್ನು ವಸೂಲು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಗಿರೀಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

ಸಭೆಯಲ್ಲಿ “ಉದಯವಾಣಿ’ ವಿಶೇಷ ವರದಿ ಪ್ರಸ್ತಾವನೆ: ರಾಗಿ, ಮೆಕ್ಕೆ ಜೋಳಕ್ಕೆ ಹುಳುಬಾಧೆ ಹಾಗೂ ಸಾವಿರಾರು ಅರ್ಜಿ ಬಂದರೂ ಕೇವಲ 31 ಆಯ್ಕೆ ಮಿತಿ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ “ಉದಯವಾಣಿ’ ಪತ್ರಿಕೆಯ ವಿಶೇಷ ವರದಿಗಳ ಬಗ್ಗೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್‌ ವಿಷಯ ಪ್ರಸ್ತಾವಣೆ ಮಾಡಿದರು. ರೈತರು ಅನುಭವಿಸುತ್ತಿರುವ ಯಾತನೆ ಬಗ್ಗೆ “ಉದಯವಾಣಿ’ ಪತ್ರಿಕೆಯಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ರಾಗಿ ಜೋಳವು ರೋಗದಿಂದ ಮುಕ್ತವಾಗಲು ರೈತರು ಯಾವ ಮಾರ್ಗ ಅನುಸರಿಸಬೇಕು ಎನ್ನುವುದುನ್ನು ಸಭೆಯ ಗಮನಕ್ಕೆ ತರಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಫ್.ಕೆ.ಗುರುಸಿದ್ದಪ್ಪ ಅವರಿಗೆ ಸೂಚಿಸಿದರು. ಪಶುಭಾಗ್ಯ ಯೋಜನೆಯ ಫ‌ಲಾನುಭವಿಗಳ ಸಂಖ್ಯೆ ಕಡಿತಮಾಡಿರುವುದಕ್ಕೆ ಅಧಿಕಾರಿಗಳು ಅನುಭವಿಸುತ್ತಿರುವ ಯಾತನೆಯನ್ನು “ಉದಯವಾಣಿ’ ಪತ್ರಿಕೆ ಪತ್ರಕ್ಷವರದಿ ಮಾಡುವ ಮೂಲಕ ಹೈನುಗಾರಿಕೆ ಹಾಗೂ ಪಶುಭಾಗ್ಯ ಯೋಜನೆ ಪಡೆಯುವವರಿಗೆ ಸಮಗ್ರ ಮಾಹಿತಿ ನೀಡಿದೆ ಎಂದು ಸಭೆ ಗಮನಕ್ಕೆ ಇಒ ತಂದರು.

ಇದಕ್ಕೆ ಧ್ವನಿ ಗೂಡಿಸಿದ ತಾಪಂ ಉಪಾಧ್ಯಕ್ಷ ಗಿರೀಶ್‌ ಹೌದು ಸಾವಿರಾರು ಅರ್ಜಿಗಳು ಧೂಳು ಹಿಡಿಯುತ್ತಿವೆ. ಸರ್ಕಾರ ಫ‌ಲಾನುವಿಗಳ ಸಂಖ್ಯೆ ಹೆಚ್ಚಿಸುವಂತೆ ವರದಿಯಲ್ಲಿ ತಿಳಿಸಿದ್ದಾರೆ ಎಂದು ಪತ್ರಿಕೆ ವರದಿಯನ್ನು ಸಭೆಯ ಗಮನಕ್ಕೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next