Advertisement

ಘೋಷಣೆಗಷ್ಟೇ ಸೀಮಿತ, ವಾಸ್ತವದಲ್ಲಿ ಖೋತಾ: ಬಜೆಟ್ ಬಗ್ಗೆ ಸಿದ್ದರಾಮಯ್ಯ ಟೀಕೆ

03:32 PM Mar 08, 2022 | Team Udayavani |

ವಿಧಾನಸಭೆ : ಪ್ರಸಕ್ತ ಆರ್ಥಿಕ ವರ್ಷ ಕೊನೆಯಾಗುತ್ತಾ ಬಂದಿದ್ದರೂ, ಕಳೆದ ವರ್ಷದ 52 ಬಜೆಟ್ ಘೋಷಣೆಗಳಲ್ಲಿ ಕೆಲವಕ್ಕೆ ಆದೇಶ ಹೊರಡಿಸಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

Advertisement

ಬಜೆಟ್ ಚರ್ಚೆಯಲ್ಲಿ ಮಾತನಾಡಿದ ಅವರು, ಇನ್ನು ಕೆಲವನ್ನು ಕೈಬಿಡಲಾಗಿದೆ. ಯಾವ ಉದ್ದೇಶಕ್ಕೆ ಈ ವರೆಗೆ ಆದೇಶ ಹೊರಡಿಸಿಲ್ಲ ಎಂದು ಸರ್ಕಾರ ಈ ಬಜೆಟ್‌ನಲ್ಲಿ ಹೇಳಬೇಕಿತ್ತು. ಅದನ್ನು ಸಹ ಮಾಡಿಲ್ಲ. ಇದು ಜನಪರವಾದ ಸರ್ಕಾರ ನಡೆದುಕೊಳ್ಳುವ ರೀತಿಯಲ್ಲ ಎಂದು ಆರೋಪಿಸಿದರು.

ಅವರ ಭಾಷಣದ ವಿವರ ಹೀಗಿದೆ

ಚಾಮರಾಜನಗರದಲ್ಲಿ ಅರಿಶಿನ ಮಾರುಕಟ್ಟೆಯನ್ನು ಸಾರ್ವಜನಿಕ, ಖಾಸಗೀ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕಳೆದ ಬಜೆಟ್‌ನಲ್ಲಿ ಘೋಷಿಸಿ, ನಂತರ ಯೋಜನೆಯನ್ನು ಕೈಬಿಡಲಾಗಿದೆ ಎಂದು ಆಕ್ಷನ್ ಟೇಕನ್ ವರದಿಯಲ್ಲಿ ತಿಳಿಸಿದ್ದಾರೆ. ಯೋಜನೆ ಕೈಬಿಡುವುದಾಗಿದ್ದರೆ ಘೋಷಣೆ ಮಾಡಿದ್ದು ಏಕೆ? ಚಾಮರಾಜನಗರದ ಜನ ತಮ್ಮ ಜಿಲ್ಲೆಗೆ ಅರಿಶಿನ ಮಾರುಕಟ್ಟೆ ಬರಲಿದೆ ಎಂಬ ಆಸೆ ಇಟ್ಟುಕೊಂಡಿದ್ದರು, ಸರ್ಕಾರ ಯೋಜನೆಯನ್ನೇ ಕೈಬಿಟ್ಟರೆ ಜನ ಏನು ಮಾಡಬೇಕು? ಯೋಜನೆ ಘೋಷಿಸಿ, ಹಣ ಒದಗಿಸಲಾಗದೆ ಅದನ್ನು ಕೈಬಿಟ್ಟು ಜನರಿಗೆ ಸರ್ಕಾರ ದ್ರೋಹ ಎಸಗಿದೆ.

ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

Advertisement

ಮೊದಲನೆಯದು: ರಾಜ್ಯದ ಸಮಗ್ರ ಸಾಮಾಜಿಕ, ಆರ್ಥಿಕ ಅಭಿವೃದ್ಧಿ.
ಎರಡನೆಯದು: ದುರ್ಬಲ ವರ್ಗದವರ ರಕ್ಷಣೆ ಮತ್ತು ಏಳಿಗೆಗೆ ಒತ್ತು ನೀಡುವುದು, ಅದಕ್ಕಾಗಿ ಶಿಕ್ಷಣ, ಉದ್ಯೋಗ, ಸಬಲೀಕರಣ ನಮ್ಮ ಮಂತ್ರಗಳು.

ಮೂರನೆಯದು: ರಾಜ್ಯದ ಹಿಂದುಳಿದ ಪ್ರದೇಶಗಳನ್ನು ಗುರುತಿಸಿ, ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದು.

ನಾಲ್ಕನೆಯದು: ಕೃಷಿ, ಕೈಗಾರಿಕೆ, ಸೇವಾ ವಲಯಗಳಲ್ಲಿ ಹೆಚ್ಚಿನ ಜನರ ಪಾಲುದಾರಿಕೆಯಲ್ಲಿ ಹೆಚ್ಚಿನ ಅಭಿವೃದ್ಧಿಪಡಿಸುವುದು.

ಐದನೆಯದು: ಹೊಸ ಚಿಂತನೆ, ಹೊಸ ಚೈತನ್ಯ, ಹೊಸ ಮುನ್ನೋಟದೊಂದಿಗೆ ನವ ಭಾರತಕ್ಕಾಗಿ ನವ ಕರ್ನಾಟಕ. ಆದರೆ ಪ್ರಸಕ್ತ ಸಾಲಿನ ಬಜೆಟ್ ಈ ಐದು ಸೂತ್ರಗಳಿಗೆ ತದ್ವಿರುದ್ಧವಾಗಿದೆ.

ನಮ್ಮ ಸರ್ಕಾರದ ಅವಧಿಯಲ್ಲಿ ಇಲಾಖಾವಾರು ಮಾಹಿತಿ ಇತ್ತು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಮೇಲೆ ಬಜೆಟ್ ಪಾರದರ್ಶಕವಾಗಿರಬಾರದು ಎಂದು ವಲಯವಾರು ಬಜೆಟ್ ಶುರು ಮಾಡಿದರು. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಈ ಬಜೆಟ್‌ನಲ್ಲಿ ರೂ. 33,700 ಕೋಟಿ ಹಣ ಇಟ್ಟಿದ್ದಾರೆ. ಕಳೆದ ಸಾಲಿನಲ್ಲಿ ಯಡಿಯೂರಪ್ಪ ಅವರು ಇಟ್ಟದ್ದು ರೂ.  32,259 ಕೋಟಿ.

ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ಈ ಬಾರಿಯ ಬಜೆಟ್‌ನಲ್ಲಿ ರೂ. 68,479 ಕೋಟಿ ಹಣ ಇಟ್ಟಿದ್ದಾರೆ, ಕಳೆದ ಸಾಲಿನಲ್ಲೇ ರೂ. 72,095 ಕೋಟಿ ಹಣ ನೀಡಲಾಗಿತ್ತು. ಅಂದರೆ ಈ ಬಾರಿ ರೂ. 3,614 ಕೋಟಿ ಹಣ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಯೋಜನೆಗಳಿಗೆ ಕಡಿತ ಮಾಡಲಾಗಿದೆ.

ಆರ್ಥಿಕ ಅಭಿವೃದ್ಧಿ ಉತ್ತೇಜನ ವಲಯಕ್ಕೆ ಈ ಬಾರಿಯ ಬಜೆಟ್‌ನಲ್ಲಿ ರೂ. 55,657 ಕೋಟಿ ಹಣ ಇಟ್ಟಿದ್ದಾರೆ, ಕಳೆದ ಬಜೆಟ್ ನಲ್ಲಿ ರೂ. 55,732 ಕೋಟಿ ಇಟ್ಟಿದ್ದರು. ಕಳೆದ ಬಾರಿಗಿಂತ ಈ ಬಾರಿ ರೂ. 75 ಕೋಟಿ ಕಡಿಮೆ ಆಗಿದೆ.

ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ ಈ ಬಜೆಟ್‌ನಲ್ಲಿ ರೂ. 8,409 ಕೋಟಿ ಇಡಲಾಗಿದೆ. ಕಳೆದ ಬಜೆಟ್‌ನಲ್ಲಿ ರೂ. 8,772 ಕೋಟಿ ಇಟ್ಟಿದ್ದರು. ಅಂದರೆ ಕಳೆದ ಬಾರಿಗಿಂತ ಈ ಬಾರಿ ರೂ. 363 ಕೋಟಿ ಕಡಿಮೆ ಆಗಿದೆ.

ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಲಯಕ್ಕೆ ಈ ಬಜೆಟ್‌ನಲ್ಲಿ ರೂ. 3,012 ಕೋಟಿ, ಕಳೆದ ಬಜೆಟ್‌ನಲ್ಲಿ ರೂ. 4,552 ಕೋಟಿ ಇಟ್ಟಿದ್ದರು. ಅಂದರೆ ಈ ಬಾರಿ ರೂ. 1,540 ಕೋಟಿ ಅನುದಾನ ಕಡಿಮೆ ಆಗಿದೆ. ಸಂಸ್ಕೃತಿ, ಪರಂಪರೆಯ ಬಗ್ಗೆ ದೊಡ್ಡ ದೊಡ್ಡ ಮಾತನಾಡುವವರು ನೀಡಿರುವ ಅನುದಾನವೇ ಅವರಿಗೆ ಸಂಸ್ಕೃತಿಯ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ.

ಬಡ್ಡಿ ಸಂದಾಯ, ಸಾಲ ಮರುಪಾವತಿ ಸೇರಿದರೆ ರೂ. 43,000 ಕೋಟಿ ಆಗುತ್ತದೆ. ಇದು ಬಜೆಟ್‌ನ 17% ಆಗುತ್ತದೆ. ಇಷ್ಟು ಅನುದಾನ ಯಾವ ಇಲಾಖೆಗೂ ಇಟ್ಟಿಲ್ಲ. ಈ ಎಲ್ಲಾ ವಲಯಗಳನ್ನು ಸೇರಿಸಿದರೆ ಒಟ್ಟು ರೂ. 2,69,540 ಕೋಟಿ ಆಗುತ್ತದೆ. ಸರ್ಕಾರ ಈ ಸಾಲಿನಲ್ಲಿ ರೂ. 2,65,720 ಕೋಟಿ ಖರ್ಚು ಮಾಡುತ್ತೇವೆ ಎಂದು ಹೇಳಿದೆ. ಅಂದರೆ ರೂ. 3,820 ಕೋಟಿ ಹೆಚ್ಚುವರಿ ಅನುದಾನ ತೋರಿಸಲಾಗಿದೆ. ಸರ್ಕಾರ ಜನರ ಕಣ್ಣಿಗೆ ಮಣ್ಣೆರೆಚಲು ಹೆಚ್ಚು ಅನುದಾನ ಖರ್ಚು ಮಾಡುತ್ತೇವೆ ಎಂದು ತೋರಿಸುತ್ತಿದೆ.

ನಾನು ಮುಖ್ಯಮಂತ್ರಿ ಆಗಿ 16/02/2018 ರಂದು ಕೊನೆ ಬಜೆಟ್ ಮಂಡಿಸಿದ್ದೆ. ಬಜೆಟ್ ಗಾತ್ರ ರೂ. 2,02,200 ಕೋಟಿ. ಈಗಿನ ಬಜೆಟ್ ಗಾತ್ರ ರೂ. 2,65,720 ಕೋಟಿ. ನಾನು ನೀರಾವರಿ ಇಲಾಖೆಗೆ ನೀಡಿದ ಅನುದಾನ ರೂ. 18,112 ಕೋಟಿ. 2021-22 ರಲ್ಲಿ ನೀರಾವರಿಗೆ ನೀಡಿದ ಅನುದಾನ ರೂ. 21,180 ಕೋಟಿ, 2022-23 ರ ಬಜೆಟ್‌ನಲ್ಲಿ ರೂ. 20,660 ಕೋಟಿ. ನಮ್ಮ ಸರ್ಕಾರದ ಬಜೆಟ್ ಗೂ, ಈಗಿನ ಬಜೆಟ್ ಗೂ ಇರುವ ವ್ಯತ್ಯಾಸ ರೂ. 2,400 ಕೋಟಿ. ಇಲಾಖೆಗೆ ನೀಡುವ ಅನುದಾನದಲ್ಲಿ 31% ಬೆಳವಣಿಗೆ ದರ ಇರಬೇಕಿತ್ತು, ಅದು ಕಾಣುತ್ತಿಲ್ಲ.

ಗ್ರಾಮೀಣಾಭಿವೃದ್ಧಿಗೆ 2018-19 ರ ಬಜೆಟ್‌ನಲ್ಲಿ ರೂ. 14,268 ಕೋಟಿ ಅನುದಾನ ನೀಡಿದ್ದೆ, ಕಳೆದ ಬಜೆಟ್‌ನಲ್ಲಿ ರೂ. 16,036 ಕೋಟಿ ನೀಡಿದ್ದರು, ಈ ಬಜೆಟ್‌ನಲ್ಲಿ ರೂ. 17,325 ಕೋಟಿ ಅನುದಾನ ಇಟ್ಟಿದ್ದಾರೆ.

ನಗರಾಭಿವೃದ್ಧಿ ಇಲಾಖೆಗೆ 2018-19 ರ ಬಜೆಟ್‌ನಲ್ಲಿ ರೂ. 17,196 ಕೋಟಿ, ಈ ಬಜೆಟ್‌ನಲ್ಲಿ ರೂ. 16,076 ಕೋಟಿ ನೀಡಿದ್ದಾರೆ. ನಾಲ್ಕು ವರ್ಷದ ನಂತರ ಈ ಇಲಾಖೆಗೆ ರೂ. 1,120 ಕೋಟಿ ಅನುದಾನ ಕಡಿಮೆ ಆಗಿದೆ.

ಲೋಕೋಪಯೋಗಿ ಇಲಾಖೆಗೆ 2018-19 ರ ಬಜೆಟ್‌ನಲ್ಲಿ ರೂ. 9,271 ಕೋಟಿ ಅನುದಾನ ನೀಡಿದ್ದೆವು. ಈ ಬಜೆಟ್‌ನಲ್ಲಿ ರೂ. 10,477 ಕೋಟಿ ನೀಡಲಾಗಿದೆ.

ವಸತಿ ಯೋಜನೆಗಳಿಗೆ 2018-19 ರ ಬಜೆಟ್‌ನಲ್ಲಿ ರೂ. 3,942 ಕೋಟಿ ನೀಡಿದ್ದೆವು, ಈ ಬಜೆಟ್‌ನಲ್ಲಿ ರೂ. 3,594 ಕೋಟಿ ನೀಡಲಾಗಿದೆ. ಅಂದರೆ ರೂ. 348 ಕೋಟಿ ಕಡಿಮೆ ಆಗಿದೆ.

ಈ ರೀತಿ ಅನುದಾನ ಪ್ರಮಾಣ ನಾಲ್ಕು ವರ್ಷಗಳ ಹಿಂದೆ ನಮ್ಮ ಸರ್ಕಾರ ನೀಡಿದ್ದಕ್ಕಿಂತ ಈಗ ಕಡಿಮೆಯಾಗಲು ಕೇಂದ್ರ ಸರ್ಕಾರ ತೆರಿಗೆಯಲ್ಲಿ ನಮ್ಮ ಪಾಲನ್ನು ಸರಿಯಾಗಿ ನೀಡದಿರುವುದು, ಹದಿನೈದನೆ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲು ಹೆಚ್ಚಾಗಿರುವುದು ಮತ್ತು ಬಹಳ ಮುಖ್ಯವಾಗಿ ರಾಜ್ಯ ಸರ್ಕಾರ ಕಳೆದ ಮೂರೇ ವರ್ಷಗಳಲ್ಲಿ ರೂ. 2,64,000 ಕೋಟಿ ಸಾಲ ಮಾಡಿರುವುದು ಕಾರಣ. ಸಾಲದ ಮೇಲಿನ ಬಡ್ಡಿ ಮತ್ತು ಅಸಲಿನ ಮರುಪಾವತಿಗೆ ಬಜೆಟ್ ನ ಬಹುಪಾಲು ಹಣ ಖರ್ಚಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next