Advertisement
ಗ್ರಾಚ್ಯೂಟಿ ಯಾರಿಗೆ?ಗ್ರಾಚ್ಯೂಟಿಯನ್ನು ಯಾರು ಯಾರಿಗೂ ಕೊಡಬಹುದು. ಆದರೆ, ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕ್ಟ್, 1972 ಅಡಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳಲ್ಲೂ ಗ್ರಾಚ್ಯೂಟಿ ಪಾವತಿಯು ಕಡ್ಡಾಯ. ಕನಿಷ್ಠ ಹತ್ತು ಮಂದಿ ಉದ್ಯೋಗಿಗಳನ್ನು ಹೊಂದಿದ ಎಲ್ಲಾ ಸಂಸ್ಥೆಗಳಿಗೂ ಈ ಕಾನೂನು ಅನ್ವಯವಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಯಾವುದೇ ಒಂದು ದಿನವಾದರೂ ಕನಿಷ್ಠ ಹತ್ತು ಜನ ಕೆಲಸಕ್ಕಿದ್ದು ಉಳಿದ ದಿನಗಳಲ್ಲಿ ಹತ್ತಕ್ಕಿಂತ ಕಡಿಮೆ ಜನರಿದ್ದರೂ ಆ ವರ್ಷಕ್ಕೆ ಆ ಒಂದೇ ಒಂದು ದಿನದ ಮಹತ್ವದಿಂದಾಗಿ ಈ ಕಾನೂನು ಅನ್ವಯವಾಗುತ್ತದೆ ಎನ್ನುವುದು ನೆನಪಿರಲಿ.
ದೀರ್ಘಕಾಲದ ವೃತ್ತಿಯ ಬಳಿಕ ನಿವೃತ್ತಿಯಾಗುವ ಉದ್ಯೋಗಿ ಗಳಿಗೆ ಅವರು ಸಂಸ್ಥೆ ಬಿಡುವ ಸಮಯದಲ್ಲಿ ಗ್ರಾಚ್ಯೂಟಿ ಸಿಗು ವುದು ಎಲ್ಲರೂ ಬಲ್ಲ ವಿಚಾರ. ಆದರೆ ಗ್ರಾಚ್ಯೂಟಿ ಮೊತ್ತಕ್ಕೆ ಅಷ್ಟು ದೀರ್ಘಕಾಲ ಕಾಯಬೇಕಾಗಿಲ್ಲ. ಯಾವುದೇ ಒಂದು ಸಂಸ್ಥೆಯಲ್ಲಿ ಕನಿಷ್ಠ ಐದು ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದವರಿಗೆ ಆ ಸಂಸ್ಥೆಯ ವತಿಯಿಂದ ಸಂಸ್ಥೆ ಬಿಡುವ ಸಮಯದಲ್ಲಿ ಗ್ರಾಚ್ಯೂಟಿ ಸಲ್ಲತಕ್ಕದ್ದು. ಅಲ್ಲದೆ, ಈ ಐದು ವರ್ಷ ಸೇವೆ ಸಲ್ಲಿಸದೆಯೂ ಮೃತ್ಯು ಸಂಭವಿಸಿದರೆ ಅಂಥವರ ಕುಟುಂಬಕ್ಕೆ ಗ್ರಾಚ್ಯೂಟಿ ಸಲ್ಲತಕ್ಕದ್ದು. ಹಾಗೆಯೇ ಉದ್ಯೋಗಿಯು ಅನಾರೋಗ್ಯ/ಅಪಘಾತದ ನಿಮಿತ್ತ ಅಂಗವಿಕಲನಾದರೆ ಅಂಥವರಿಗೂ ಸೇವೆ ಬಿಡುವ ಸಂದರ್ಭದಲ್ಲಿ ಗ್ರಾಚ್ಯೂಟಿ ಸಲ್ಲತಕ್ಕದ್ದು. ಇಲ್ಲಿ ನಿರಂತರ ಸೇವೆ ಎಂದರೆ ಯಾವುದೇ ಬ್ರೇಕ್ ಇಲ್ಲದೆ ನಡೆಸಿದ ಸೇವೆ. ಅಂದರೆ ಮಧ್ಯದಲ್ಲಿ ಕೆಲಸ ಬಿಟ್ಟು ಪುನಃ ಅದೇ ಸಂಸ್ಥೆಗೆ ಸೇರಿದರೂ ಅದು ನಿರಂತರ ಸೇವೆ ಯಾಗುವುದಿಲ್ಲ. ಎರಡು ಬೇರೆ ಬೇರೆ ಸಂಸ್ಥೆಗಳ ಸೇವೆಗಳನ್ನು ಕೂಡಲು ಬರುವುದಿಲ್ಲ. ಪಡಕೊಂಡ ಅಧಿಕೃತ ರಜಾಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
Related Articles
ಸಂಸ್ಥೆಗಳು ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಪ್ರಕಾರ ಗ್ರಾಚ್ಯೂಟಿ ನೀಡಬೇಕಾದ ಅಥವಾ ಅದಕ್ಕಿಂತಲೂ ಉತ್ತಮವಾದ ಇನ್ಯಾವುದೇ ಯೋಜನೆಯ, ಪ್ರತಿ ಪೂರ್ಣಗೊಂಡ ವರ್ಷದ ಸೇವೆಗೆ ಹದಿನೈದು ದಿನಗಳ ಸಂಬಳದ ಪ್ರಕಾರ ಗ್ರಾಚ್ಯೂಟಿ ಮೊತ್ತ ಲೆಕ್ಕ ಹಾಕಲಾಗುತ್ತದೆ. ಇಲ್ಲಿ ತಿಂಗಳಿಗೆ ಇಪ್ಪತ್ತಾರು ದಿನಗಳ ಲೆಕ್ಕ ತೆಗೆದುಕೊಳ್ಳಬೇಕು ಹಾಗೂ ಆರು ತಿಂಗಳು ದಾಟಿದ ಅವಧಿಯನ್ನು ಒಂದು ಪೂರ್ತಿ ವರ್ಷವೆಂದು ಪರಿಗಣಿಸಬೇಕು. ಸಂಬಳ ಎಂದರೆ ಬೇಸಿಕ್ ಮತ್ತು ಡಿಎ ಮಾತ್ರವೇ ತೆಗೆದುಕೊಳ್ಳಬೇಕು. ಇತರ ಭತ್ತೆಗಳು ಗ್ರಾಚ್ಯೂಟಿ ಸಂದರ್ಭದಲ್ಲಿ ಲೆಕ್ಕಕ್ಕಿಲ್ಲ.
Advertisement
ಗ್ರಾಚ್ಯೂಟಿ = ಸೇವೆಯ ಅವಧಿ (ಪೂರ್ತಿವರ್ಷ) x ಮಾಸಿಕ ಸಂಬಳ x (15/26)ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕr… 1972 ಸೆಕ್ಷನ್ 4(3) ಪ್ರಕಾರ ಗ್ರಾಚ್ಯೂಟಿ ಪಾವತಿಯ ಗರಿಷ್ಠ ಮಿತಿ ಸದ್ಯಕ್ಕೆ ರೂ ಹತ್ತು ಲಕ್ಷ ಆಗಿದೆ. ಹಾಗಾಗಿ ಹಲವರಿಗೆ ಈ ಫಾರ್ಮುಲಾದ ಪ್ರಕಾರ ಹೆಚ್ಚು ಗ್ರಾಚ್ಯೂಟಿ ಬಂದರೂ ಅಂತವರಿಗೆ ಬಹುತೇಕ ಈ ಮಿತಿಯ ಪ್ರಕಾರ ಹತ್ತು ಲಕ್ಷ ರೂ.ಗಳ ಗ್ರಾಚ್ಯೂಟಿ ಮಾತ್ರವೇ ಪಾವತಿಯಾಗುತ್ತದೆ. ಇನ್ನು, ಮೊದಲೇ ಹೇಳಿದಂತೆ ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕr… 1972 ಅಡಿಯಲ್ಲಿ ಬಾರದ ಅಂದರೆ ಕನಿಷ್ಠ ಹತ್ತು ಮಂದಿ ಉದ್ಯೋಗಿಗಳು ಇಲ್ಲದ ಸಂಸ್ಥೆಗಳಿಗೆ ಗ್ರಾಚ್ಯೂಟಿ ನೀಡುವುದು ಕಡ್ಡಾಯವಲ್ಲ. ಅಂತವರು ಅವರಿಗೆ ಇಷ್ಟ ಬಂದಂತೆ ಎಷ್ಟಾದರೂ ಗ್ರಾಚ್ಯೂಟಿ ನೀಡಬಹುದು ಅಥವಾ ಬಿಡಿಕಾಸೂ ನೀಡದೆ ಸುಮ್ಮನಿರಬಹುದು. ಆದಾಯ ಕರ
ಗ್ರಾಚ್ಯೂಟಿ ಪಾವತಿ ಮತ್ತು ಗ್ರಾಚ್ಯೂಟಿ ಮೊತ್ತದ ವಿಚಾರ ಬೇರೆ; ಅದರ ಮೇಲಿನ ಆದಾಯ ಕರದ ವಿಚಾರ ಬೇರೆ. ಈಗ ಪಾವತಿಯ ವಿಚಾರ ಬಿಟ್ಟು ಅದರ ಮೇಲೆ ಅನ್ವಯವಾಗುವ ಕರ ಕಾನೂನಿನತ್ತ ಹೊರಳ್ಳೋಣ ಗ್ರಾಚ್ಯೂಟಿ ಪಾವತಿಯ ಮೇಲೆ ಆದಾಯ ಕರ ಯಾವ ರೀತಿ ಅನ್ವಯವಾಗುತ್ತದೆ ಎನ್ನುವುದು ಉದ್ಯೋಗವು ಸರಕಾರಿಯೇ ಖಾಸಗಿಯೇ ಎನ್ನುವುದರ ಮೇಲೆ ನಿರ್ಧಾರಿತವಾಗುತ್ತದೆ. (ಇಲ್ಲಿ ಸರಕಾರಿ ಅಂದರೆ ಸಂಪೂರ್ಣ ಸರಕಾರಿ, ಬ್ಯಾಂಕ್, ಎಲ್ಲೆ„ಸಿ, (ಇನ್ನಿತರ ಅರೆ ಸರಕಾರಿಗಳು ಖಾಸಗಿಯವರ ಜತೆಗೆ ಸೇರುತ್ತಾರೆ) ಉದ್ಯೋಗವು ಸರಕಾರಿಯಾದರೆ ಅಂತಹ ಗ್ರಾಚ್ಯೂಟಿ ಪಾವತಿಯು ಸರಕಾರಿ ನೌಕರರ ಕೈಯಲ್ಲಿ ಯಾವುದೇ ಮಿತಿಯಿಲ್ಲದೆ ಸಂಪೂರ್ಣವಾಗಿ ಕರಮುಕ್ತವಾಗಿರುತ್ತದೆ. ಆದರೆ ಖಾಸಗಿ ಉದ್ಯೋಗ ವಲಯದಲ್ಲಿ ಗ್ರಾಚ್ಯೂಟಿ ಪಾವತಿಯ ಮೇಲೆ ಕರವಿನಾಯಿತಿಗೆ ಒಂದು ಮಿತಿ ಇದೆ. ಈ ಮಿತಿಯು ಎರಡು ರೀತಿಯಲ್ಲಿ ಅನ್ವಯವಾಗುತ್ತದೆ. 1. ಪೇಮೆಂಡ್ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬರುವವರಿಗೆ, ಹಾಗೂ
2. ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬಾರದವರಿಗೆ. ಈ ಎರಡು ಸಂದರ್ಭಗಳ ವಿವರ ಈ ಕೆಳಗಿನಂತೆ:
1 ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬರುವವರಿಗೆ ಆ ಮಿತಿಯನ್ನು ಈ ಕೆಳಗಿನ ಮೂರು ಅಂಶಗಳಲ್ಲಿ ಕನಿಷ್ಠವಾದ ಮೊತ್ತವಾಗಿ ತೆಗೆದುಕೊಳ್ಳಲಾಗುತ್ತದೆ: – ಪ್ರತಿ ಪೂರ್ಣಗೊಂಡ ವರ್ಷದ ಸೇವೆಗೆ ಹದಿನೈದು ದಿನಗಳ ಲೆಕ್ಕದಲ್ಲಿ ಸೇವೆಯ ಅಂತ್ಯದ ಸಂಬಳದ ಅನುಸಾರ ಲೆಕ್ಕ ಹಾಕಿದರೆ ಸಿಗುವ ಮೊತ್ತ (ಒಂದು ತಿಂಗಳಿಗೆ ಇಪ್ಪತ್ತಾರು ದಿನಗಳೆಂದು ತೆಗೆದುಕೊಳ್ಳಬೇಕು ಹಾಗೂ ಆರು ತಿಂಗಳು ದಾಟಿದ ಸೇವೆಯನ್ನು ಪೂರ್ತಿ ವರ್ಷದ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಸಂಬಳ ಎಂದರೆ ಬೇಸಿಕ್ ಮತ್ತು ಡಿಎ ಎಂದು ತಿಳಿಯಬೇಕು) – ನಿಜವಾಗಿಯೂ ಪಾವತಿಗೊಂಡ ಗ್ರಾಚ್ಯೂಟಿ ಮೊತ್ತ
-ಹತ್ತು ಲಕ್ಷ ರೂ.
ಈ ಮೂರರಲ್ಲಿ ಯಾವುದು ಕನಿಷ್ಠವೋ ಅಷ್ಟು ಮೊತ್ತ ಕರಮುಕ್ತವಾಗಿರುತ್ತದೆ. ಅಂದರೆ ಈ ಕಾನೂನಿನಡಿಯಲ್ಲಿ ಪಾವತಿಸಿದ ಗ್ರಾಚ್ಯೂಟಿ ಸಂಪೂರ್ಣವಾಗಿ ಕರಮುಕ್ತ. 2 ಪೇಮೆಂಟ್ ಆಫ್ ಗ್ರಾಚ್ಯೂಟಿ ಅಡಿಯಲ್ಲಿ ಬಾರದ ಸಂದರ್ಭಗಳಲ್ಲಿ ಕರ ವಿನಾಯಿತಿಯಲ್ಲಿ ಸ್ವಲ್ಪ ಬದಲಾವಣೆ ಇದೆ. ಇಲ್ಲಿ ಪಾವತಿಯ ಬಗ್ಗೆ ಯಾವುದೇ ಫಾರ್ಮುಲಾ ನೀಡದಿದ್ದರೂ ಕರ ವಿನಾಯಿತಿ ಮೇಲೆ ಸ್ಪಷ್ಟವಾದ ಕಾನೂನು ಇದೆ.
– ಇಲ್ಲಿ ಪ್ರತಿ ಪೂರ್ಣಗೊಂಡ ವರ್ಷದ ಸೇವೆಗೆ ಹದಿನೈದು ದಿನಗಳ ಲೆಕ್ಕದಲ್ಲಿ ಕಳೆದ ಹತ್ತು ತಿಂಗಳ ಸೇವೆಯ ಸರಾಸರಿ ಸಂಬಳದ ಅನುಸಾರ ಲೆಕ್ಕ ಹಾಕಿದರೆ ಸಿಗುವ ಮೊತ್ತ (ಒಂದು ತಿಂಗಳಿಗೆ ಮೂವತ್ತು ದಿನಗಳೆಂದು ತೆಗೆದುಕೊಳ್ಳಬೇಕು ಹಾಗೂ ಇಲ್ಲಿ ಆರು ತಿಂಗಳು ದಾಟಿದ ಸೇವೆಯನ್ನು ಪೂರ್ತಿ ವರ್ಷದ ಲೆಕ್ಕಕ್ಕೆ ತೆಗೆದುಕೊಳ್ಳವ ಅಗತ್ಯವಿಲ್ಲ. ಸಂಬಳ ಎಂದರೆ ಬೇಸಿಕ್ ಮತ್ತು ಡಿಎ ಎಂದು ತಿಳಿಯಬೇಕು. – ನಿಜವಾಗಿಯೂ ಪಾವತಿಗೊಂಡ ಗ್ರಾಚ್ಯೂಟಿ ಮೊತ್ತ
-ಹತ್ತು ಲಕ್ಷ ರೂ.
ಈ ಮೂರರಲ್ಲಿ ಯಾವುದು ಕನಿಷ್ಠವೋ ಅಷ್ಟು ಮೊತ್ತ ಕರಮುಕ್ತವಾಗಿರುತ್ತದೆ. ಮೇಲಿನ ಎರಡೂ ಸಂದರ್ಭಗಳಲ್ಲೂ, ಕರಮುಕ್ತ ಮಿತಿ ಮೀರಿದ ಗ್ರಾಚ್ಯೂಟಿ ಸಿಕ್ಕಿದರೆ ಅದರ ಮೇಲೆ ಆ ವರ್ಷದ ಆದಾಯ ಸ್ಲಾಬ್ ಅನುಸರಿಸಿ ಕರಕಟ್ಟಬೇಕು.
ಹೊಸ ಬದಲಾವಣೆ ಇದೀಗ ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕ್ಟ್‌ನಲ್ಲಿ ಬರುತ್ತಿ ರುವ ಬದಲಾವಣೆಯ ಬಗ್ಗೆ ಮಾತನಾಡೋಣ. ಕಳೆದ ವಾರ ಕೇಂದ್ರ ಸರಕಾರದ ಕ್ಯಾಬಿನೆಟ್ ಗ್ರಾಚ್ಯೂಟಿಯ ಬಗ್ಗೆ ಒಂದು ಮಹತ್ತರವಾದ ನಿರ್ಧಾರವನ್ನು ತೆಗೆದುಕೊಂಡಿತು. ಅದೇನೆಂದರೆ ಮೇಲೆ ಹೇಳಿದ ಪ್ರಮೇಯಗಳಲ್ಲಿ ಗ್ರಾಚ್ಯೂಟಿ ಪಾವತಿಯ ಮಿತಿಯನ್ನು ಹತ್ತು ಲಕ್ಷ ರೂ.ಗಳಿಂದ ಇಪ್ಪತ್ತು ಲಕ್ಷ ರೂ.ಗಳಿಗೆ ಏರಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಈ ಬದಲಾವಣೆ ಸಧ್ಯಕ್ಕೆ ಒಂದು ಕ್ಯಾಬಿನೆಟ್ ನಿರ್ಧಾರವ ಮಾತ್ರವೇ ಆಗಿದೆ. ಇದಿನ್ನು ಪೇಮೆಂಟ್ ಆಫ್ ಗ್ರಾಚ್ಯೂಟಿ (ಅಮೆಂಡ್ ಮೆಂಟ್) 2017 ಮಸೂದೆಯಾಗಿ ಸಂಸತ್ತಿನಲ್ಲಿ ಮಂಡನೆಯಾಗಿ, ಅಂಗೀಕರಿಸಲ್ಪಟ್ಟು ರಾಷ್ಟ್ರಪತಿಯವರ ಸಹಿ ಪಡೆದು, ಗೆಜೆಟ್‌ನಲ್ಲಿ ನೋಟಿಫೈ ಆಗಬೇಕಿದೆ. ಈ ಪ್ರಸ್ತಾವನೆ ಕಾನೂನಾಗಲು ಕೆಲ ತಿಂಗಳೇ ಕಳೆಯಬಹುದು. ಕೆಲವೊಮ್ಮೆ ಇಂತಹ ಕ್ಯಾಬಿನೆಟ್ ನಿರ್ಧಾರಗಳು ಅನುಷ್ಠಾನಕ್ಕೆ ಬಾರದೇ ಉಳಿವುದೂ ಇವೆ. ಆದರೆ ಇಲ್ಲಿ ಮಸೂದೆಯ ಮಹತ್ವ ಹಾಗೂ ಸಂಸತ್ತಿನ ವಾತಾವರಣ ಗಣನೆಗೆ ತೆಗೆದುಕೊಂಡರೆ, ಮಸೂದೆ ಕಾನೂನಾಗಿ ಬರುವುದು ಬಹುತೇಕ ಖಚಿತವಾಗಿದೆ. ಈ ಮಾತನ್ನು ಇನ್ನೊಮ್ಮೆ ಯಾಕೆ ಒತ್ತಿ ಹೇಳುತ್ತಿದ್ದೇನೆ ಏಕೆಂದರೆ ಬಹಳಷ್ಟು ಮಂದಿ ಪತ್ರಿಕೆಯಲ್ಲಿ ಬಂದ ವಿಚಾರಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಗೊಂದಲಕ್ಕೆ ಒಳಗಾಗುತ್ತಾರೆ. ಒಂದು ಕಾನೂನು ಅನುಷ್ಠಾನಕ್ಕೆ ಬರಬೇಕಾದರೆ ಹಲವು ಹಂತಗಳನ್ನು ದಾಟಿ ಬರಬೇಕಾಗುತ್ತದೆ. ಅಂತಿಮವಾಗಿ ನೋಟಿಫೈ ಆದರೆ ಮಾತ್ರ ಅದು ಹಣ್ಣು ಇಲ್ಲದಿದ್ದರೆ ಆ ಕಾನೂನು ಕಾಯಿಯಾಗಿಯೇ ಇರುತ್ತದೆ. ಪ್ರತಿಯೊಂದು ಹೊಸ ಕಾನೂನಿನ ಬಗ್ಗೆ ಪ್ರಸ್ತಾಪ ಬಂದಾಗಲೂ ಅದು ಯಾವ ಹಂತದಲ್ಲಿದೆ ಎಂದು ಸರಿಯಾಗಿ ತಿಳಿದುಕೊಳ್ಳಬೇಕು. ಎರಡನೆಯದಾಗಿ, ಈ ಹೊಸ ತಿದ್ದುಪಡಿಯ ಬಗ್ಗೆ ಇನ್ನೂ ಸ್ವಲ್ಪ ಸ್ಪಷ್ಟತೆ ಬೇಕೇ ಬೇಕಾಗುತ್ತದೆ. ಎಷ್ಟೋ ಜನ ಅಮಾಯಕರು ತಮ್ಮ ಎಂದೋ ಸಿಗಲಿರುವ ಗ್ರಾಚ್ಯೂಟಿ ಮೊತ್ತ ಈಗಾಗಲೇ ಜಾಸ್ತಿಯಾಗಿದೆ ಎಂದು ಭ್ರಮೆಯಲ್ಲಿರುತ್ತಾರೆ. ಇಲ್ಲಿ ಅತ್ಯಂತ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ ಇಲ್ಲಿ ಗ್ರಾಚ್ಯೂಟಿಯ ಗರಿಷ್ಟ ಮಿತಿಯಲ್ಲಿ ಮಾತ್ರವೇ ಹೆಚ್ಚಳವಾಗಲಿದೆ. ಪಡೆಯಲಿರುವ ಗ್ರಾಚ್ಯೂಟಿ ಲೆಕ್ಕಾಚಾರದಲ್ಲಿ ಅಥವಾ ಫಾರ್ಮುಲಾದಲ್ಲಿ ಯಾವುದೇ ಬದಲಾವಣೆ ಇಲ್ಲ; ಅದು ಮೊದಲಿ ನಂತೆಯೇ ಇದೆ. ಅಂದರೆ, ಫಾರ್ಮುಲಾ ಪ್ರಕಾರ ಹತ್ತು ಲಕ್ಷ ಮೀರಿದ ಗ್ರಾಚ್ಯೂಟಿ ಬರುವವರಿಗೆ ಮಾತ್ರ ಈ ಮಿತಿ ಹೆಚ್ಚಳ ದಿಂದ ಲಾಭವಾಗುತ್ತದೆ. ಈಗಾಗಲೇ ಹತ್ತು ಲಕ್ಷ ಮೀರುವ ಕೆಲವರಿದ್ದಾರೆ; ಇನ್ನು ಕೆಲವರಿಗೆ ಏಳನೆಯ ಪೇ ಕಮಿಶನ್ ನಂತರದ ದಿನಗಳಲ್ಲಿ ಗ್ರಾಚ್ಯೂಟಿ ಮೊತ್ತ ಹತ್ತು ಲಕ್ಷ ಮೀರುವ ಸಂಭ ವವಿದ್ದು, ಅಂತವರಿಗೆ ಈ ಮಿತಿ ಹೆಚ್ಚಳ ಸಹಾಯವಾದೀತು. ಆದರೆ ಫಾರ್ಮುಲಾ ಪ್ರಕಾರ, ಹತ್ತು ಲಕ್ಷ ರೂ. ಕೂಡ ಗ್ರಾಚ್ಯೂಟಿ ಬಾರದ ದೇಶದ ಬಹುಪಾಲು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಈ ಹೊಸ ಕಾನೂನಿನಿಂದ ಯಾವುದೇ ಪ್ರಯೋಜನ ಆಗಲಿಕ್ಕಿಲ್ಲ !