Advertisement

ಹರೀಶ್‌ ರಾಜ್‌ಗೆ ಲಿಮ್ಕಾ ರೆಕಾರ್ಡ್‌

10:30 AM Jul 25, 2017 | |

ಆಗಾಗ ಕನ್ನಡದಲ್ಲಿ ದಾಖಲೆಗಳಾಗುತ್ತಲೇ ಇರುತ್ತವೆ. ಈಗ ಮತ್ತೂಂದು ಕನ್ನಡ ಚಿತ್ರ ದಾಖಲೆಗೆ ಸೇರ್ಪಡೆಯಾಗಿದೆ. ಹೌದು, ಹರೀಶ್‌ ರಾಜ್‌ ನಿರ್ದೇಶಿಸಿ, ನಿರ್ಮಿಸಿ ಹಾಗು ನಟಿಸಿರುವ “ಶ್ರೀ ಸತ್ಯನಾರಾಯಣ’ ಚಿತ್ರ ಇದೀಗ “ಲಿಮ್ಕಾ’ ದಾಖಲೆ ಸೇರಿದೆ. ಇಷ್ಟಕ್ಕೂ “ಶ್ರೀ ಸತ್ಯನಾರಾಯಣ’ ಚಿತ್ರ “ಲಿಮ್ಕಾ’ ದಾಖಲೆಗೆ ಕಾರಣ, ಹರೀಶ್‌ ರಾಜ್‌ ಕಾಣಿಸಿಕೊಂಡಿರುವ ಹದಿನಾರು ವಿಭಿನ್ನ ಗೆಟಪ್‌ಗ್ಳು.

Advertisement

ಹರೀಶ್‌ ರಾಜ್‌ ಈ ಚಿತ್ರದಲ್ಲಿ ಬರೋಬ್ಬರಿ ಹದಿನಾರು ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಯಾವ ನಟ ಕೂಡ ಇಷ್ಟೊಂದು ಪಾತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿಯೇ “ಶ್ರೀ ಸತ್ಯನಾರಾಯಣ’ ಚಿತ್ರದೊಳಗಿನ ಹರೀಶ್‌ರಾಜ್‌ ಅವರ ಪಾತ್ರಗಳನ್ನು ಗುರುತಿಸಿ, ಚಿತ್ರವನ್ನು “ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌’ಗೆ ಪರಿಗಣಿಸಿ, ದಾಖಲೆ ಪತ್ರ ನೀಡಲಾಗಿದೆ.

ಈಗಾಗಲೇ ಹಿರಿಯ ನಟ ಬಾಲಿವುಡ್‌ನ‌ ಸಂಜೀವ್‌ಕುಮಾರ್‌ ಅವರು 1974 ರಲ್ಲಿ ಬಿಡುಗಡೆಯಾಗಿದ್ದ “ನಯಾ ದಿನ್‌ ನಯೀ ರಾತ್‌’ ಚಿತ್ರದಲ್ಲಿ 9 ಪಾತ್ರಗಳಲ್ಲಿ ನಟಿಸಿದ್ದರು. ಅದಾದ ಬಳಿಕ ತಮಿಳಿನ ಖ್ಯಾತ ನಟ ಕಮಲ್‌ಹಾಸನ್‌ ಅವರು 2008 ರಲ್ಲಿ ಬಿಡುಗಡೆಯಾದ “ದಶಾವತಾರಂ’ ಚಿತ್ರದಲ್ಲಿ 10 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನು, 2009 ರಲ್ಲಿ ಮೂಡಿಬಂದ “ವಾಟ್ಸ್‌ ಯುವರ್‌ ರಾಶಿ’ ಚಿತ್ರದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಕೂಡ 12 ಪಾತ್ರಗಳಲ್ಲಿ ನಟಿಸಿದ್ದರು.

ಅದಾದ ಮೇಲೆ ಯಾವ ಭಾಷೆಯ ಚಿತ್ರಗಳಲ್ಲೂ ಯಾವ ನಟ, ನಟಿಯರೂ ಸಹ ಅಷ್ಟೊಂದು ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಹರೀಶ್‌ರಾಜ್‌ ನಿರ್ದೇಶಿಸಿ, ನಿರ್ಮಿಸಿ, ನಟಿಸಿರುವ “ಶ್ರೀ ಸತ್ಯನಾರಾಯಣ’ ಚಿತ್ರದಲ್ಲಿ ಅವರು 16 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರದಲ್ಲಿ ವ್ಯಾಸ ಮಹಾಮುನಿ, ಶೌನಕ ಮಹರ್ಷಿ, ಸತು ಮಹಾಮುನಿ, ನಾರಾಯಣ, ನಾರದ ಮಹರ್ಷಿ, ವ್ಯಾಪಾರಿ, ರಾಜ ಉಲ್ಕಾ ಮುಖ, ಮರ ಕಡಿಯುವವ, ಬಡ ಬ್ರಾಹ್ಮಣ, ಸುಂದರ, ಕಳ್ಳ, ರಾಜ ಚಂದ್ರಕೇತು, ರಾಜ ತುಂಗಧ್ವಜ ಹಾಗು ನಾಯಕರಾಗಿಯೂ ಅವರು ಕಾಣಿಸಿಕೊಂಡಿದ್ದಾರೆ.

ಅಲ್ಲಿಗೆ ಹರೀಶ್‌ ರಾಜ್‌ ಹದಿನಾರು ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ. ಮೊದಲು ಅವರಿಗೆ ಈ ವಿಷಯ ಗೊತ್ತಿರಲಿಲ್ಲವಂತೆ. ಆದರೆ, ಚಿತ್ರದ ಇಂಗ್ಲೀಷ್‌ ಸಬ್‌ಟೈಟಲ್‌ಗಾಗಿ ಪ್ರಕೃತಿ ಬನವಾಸಿ ಬಳಿ ಹೋದಾಗ, ಅವರು 16 ಪಾತ್ರಗಳಲ್ಲಿರುವುದನ್ನು ನೋಡಿ, “ಲಿಮ್ಕಾ’ ದಾಖಲೆಗೆ ಯಾಕೆ ಕಳುಹಿಸಬಾರದು ಎಂಬ ಸಲಹೆ ಕೊಟ್ಟರಂತೆ.

Advertisement

ತಕ್ಷಣವೇ ಅವರು ಎಲ್ಲವನ್ನೂ ಗಮನಿಸಿ, ಹಿಂದೆ ಮಾಡಿರುವ ನಟ, ನಟಿಯರ ಪಟ್ಟಿ ನೋಡಿ, ಕೊನೆಗೆ ಲಿಮ್ಕಾಗೆ ದಾಖಲೆ ಕಳುಹಿಸಿಕೊಟ್ಟಿದ್ದರಂತೆ. ಈಗ ಅಧಿಕೃತವಾಗಿಯೇ ಲಿಮ್ಕಾ ದಾಖಲೆ ಪತ್ರ ಸಿಕ್ಕಿದೆ. ದೆಹಲಿಯಲ್ಲಿ ಲಿಮ್ಕಾ ಕಚೇರಿ ಇದ್ದು, ಅದರ ಅಧ್ಯಕ್ಷರಾದ ವಿಜಯ್‌ ಗೋಸ್‌ ಅವರು ಚಿತ್ರದ ಪಾತ್ರಗಳನ್ನು ನೋಡಿ, ಲಿಮ್ಕಾ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಆ ಲಿಮ್ಕಾ ದಾಖಲೆ ಪತ್ರವನ್ನು ಹರೀಶ್‌ ರಾಜ್‌ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರ ಸಮ್ಮುಖದಲ್ಲಿ ಮಂಗಳವಾರ (ಇಂದು) ಪಡೆಯಲು ತೀರ್ಮಾನಿಸಿದ್ದಾರೆ.

ಹರೀಶ್‌ ರಾಜ್‌ ಸಹಜವಾಗಿಯೇ ಖುಷಿಗೊಂಡಿದ್ದಾರೆ. ಸದ್ಯಕ್ಕೆ ಹರೀಶ್‌ ರಾಜ್‌ ಅವರ ಕೈಯಲ್ಲಿ ಮೂರು ಹೊಸ ಸಿನಿಮಾಗಳಿವೆ. ಈ ನಡುವೆ ಅವರು ಮಣಿರತ್ನಂ ನಿರ್ದೇಶನದ ತಮಿಳಿನ “ಕಾಟ್ರವೈಲಿಡೈ’ ಚಿತ್ರದಲ್ಲಿ ನಾಯಕ ಕಾರ್ತಿ ಅವರ ಸಹೋದರನಾಗಿಯೂ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next