Advertisement

ಮಕ್ಕಳ ಮನಸ್ಸಿನ ಸುತ್ತ “ಲಿಲ್ಲಿ’

10:16 AM Jan 02, 2020 | Team Udayavani |

ಕನ್ನಡದಲ್ಲಿ ಹೊಸ ಆಲೋಚನೆಯೊಂದಿಗೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ “ಲಿಲ್ಲಿ’ ಎಂಬ ಚಿತ್ರತಂಡವೂ ಸೇರಿದೆ. ಇದೊಂದು ಸೈಕಲಾಜಿಕಲ್‌ ಮಿಸ್ಟ್ರಿ ಥ್ರಿಲ್ಲರ್‌ ಜಾನರ್‌ನ ಸಿನಿಮಾ. ಈ ಚಿತ್ರದ ಮೂಲಕ ವಿಜಯ್‌ ಎಸ್‌.ಗೌಡ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ “ನೀರ್‌ದೋಸೆ’, “ಗೋವಿಂದಾಯ ನಮಃ’ (ತೆಲುಗು ವರ್ಷನ್‌), “ರಂಗಿತರಂಗ’ ಚಿತ್ರಗಳಲ್ಲಿ ಕೆಲಸ ಮಾಡಿದ್ದ ವಿಜಯ್‌ ಎಸ್‌.ಗೌಡ, ಅನಿಮೇಷನ್‌ ಹಿನ್ನೆಲೆಯಿಂದ ಬಂದವರು.

Advertisement

8 ವರ್ಷಗಳ ಕಾಲ ಕಾರ್ಪೋರೇಟ್‌ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಅವರು, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಿನಿಮಾಗಳಿಗೆ ಸಂಬಂಧಿಸಿದ ಕೆಲಸ ಮಾಡಿಕೊಂಡಿದ್ದವರು. ಆ ಅನುಭವದ ಮೇಲೆ “ಲಿಲ್ಲಿ’ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಹೇಳುವ ಅವರು, “ಮಕ್ಕಳನ್ನು ಪೋಷಕರು ಹೇಗೆ ಕಡೆಗಣಿಸುತ್ತಾರೆ, ಮೊಬೈಲ್‌ ಎಂಬುದು ಹೇಗೆಲ್ಲಾ ಮಾನವೀಯ ಸಂಬಂಧಗಳನ್ನು ದೂರ ಮಾಡಿದೆ.

ಮೊಬೈಲ್‌ ವ್ಯಾಮೋಹದಿಂದ ಮಾನವೀಯ ಮೌಲ್ಯಗಳು ಹೇಗೆ ಕುಸಿಯುತ್ತಿವೆ. ಮೊಬೈಲ್‌ನಿಂದ ಉಂಟಾಗುವ ಭಯಾನಕ ಕಾಯಿಲೆಯೊಂದು, ಆರೇಳು ವರ್ಷದ ಮಕ್ಕಳು ತಮ್ಮ ಹೆತ್ತವರನ್ನೇ ಕೊಲೆ ಮಾಡಬೇಕು ಎಂದು ನಿರ್ಧಾರಕ್ಕೆ ಬರುವಷ್ಟರ ಮಟ್ಟಿಗೆ ಮೊಬೈಲ್‌ ಕಾರಣವಾಗುತ್ತೆ ಎಂಬ ಸೂಕ್ಷ್ಮ ಅಂಶ ಚಿತ್ರದ ಹೈಲೈಟ್‌. ಚಿತ್ರವನ್ನು ನಾಗರಾಜ್‌ ಮತ್ತು ಎಸ್‌.ಸುಬ್ರಮಣಿ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.

ಇದು ಯುನಿರ್ವಸಲ್‌ ಕಥೆ ಆಗಿದ್ದರಿಂದ ಸಿಮ್ರಾನ್‌ ಆವರನ್ನು ಕನ್ನಡಕ್ಕೆ ಕರೆತರಬೇಕು ಎಂಬ ಉದ್ದೇಶದಿಂದ ಕಥೆ ಹೇಳಲಾಗಿತ್ತು. ಅದು ಅವರಿಗೆ ಇಷ್ಟವಾಗಿ, ತಮಿಳಿನಲ್ಲೇ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ, ಇದು ಕನ್ನಡದಲ್ಲೇ ಶುರುವಾಗಬೇಕು ಎಂಬ ಆಸೆ ಚಿತ್ರತಂಡದ್ದಾಗಿದ್ದರಿಂದ ಅದು ಕೈಗೂಡಲಿಲ್ಲ. ಈಗ ಕನ್ನಡದ ರಾಧಿಕಾ ಕುಮಾರಸ್ವಾಮಿ, ಜಾಕಿ ಭಾವನಾ ಅಥವಾ ರಚಿತಾರಾಮ್‌ ಅವರಿಗೆ ಕಥೆ ಹೇಳುವ ತಯಾರಿ ನಡೆಯುತ್ತಿದೆ. ಇಲ್ಲಿ ತಾಯಿ ಪಾತ್ರ ಪ್ರಮುಖವಾಗಿದೆ. ಸಾಕಷ್ಟು ಎಮೋಶನ್ಸ್‌ ಕೂಡ ಇದೆ.

ಉಳಿದಂತೆ ಚಿತ್ರದಲ್ಲಿ ತಬಲನಾಣಿ ಇತರರು ಇರಲಿದ್ದಾರೆ. ಈಗಾಗಲೇ “ಲಿಲ್ಲಿ’ ಶೀರ್ಷಿಕೆ ನೋಂದಣಿಯಾಗಿದ್ದು, ಹೊಸ ವರ್ಷಕ್ಕೆ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಲಾಗುವುದು. ಜನವರಿಯಲ್ಲಿ ಮುಹೂರ್ತ ನಡೆಸಿ, ಚಿತ್ರೀಕರಣಕ್ಕೆ ಹೋಗುವ ಯೋಚನೆ ಇದೆ. ಚಿತ್ರಕ್ಕೆ ವಿಲಿಯಂ ಡೇವಿಡ್‌ ಛಾಯಾಗ್ರಹಣವಿದೆ. ವೀರೇಶ್‌ ಎಸ್‌.ಗೌಡ ಸಂಗೀತವಿದೆ. ಶ್ರೀಕಾಂತ್‌ ಸಂಕಲನ ಮಾಡಲಿದ್ದಾರೆ. ಬೆಂಗಳೂರಲ್ಲೇ ಚಿತ್ರೀಕರಣ ನಡೆಯಲಿದ್ದು, ಎರಡು ದೊಡ್ಡ ಸೆಟ್‌ ಹಾಕಿ 60 ದಿನಗಳ ಚಿತ್ರೀಕರಣ ನಡೆಸುವುದಾಗಿ ಹೇಳುತ್ತಾರೆ ವಿಜಯ್‌ ಎಸ್‌.ಗೌಡ.

Advertisement
Advertisement

Udayavani is now on Telegram. Click here to join our channel and stay updated with the latest news.

Next