Advertisement
“”ಅವ್ರೆಲ್ಲಿ ಮನೆಯಲ್ಲಿ ಇರ್ತಾರೆ. ಇಪ್ಪತ್ನಾಲ್ಕು ಗಂಟೆಯೂ ಕೆಲಸದ ಗುಂಗಲ್ಲೇ ಇರೋರು. ನಿನ್ನೆಯಷ್ಟೇ ಮೈಸೂರಿಗೆ ಹೋಗಿದ್ದಾರೆ” ಎನ್ನುತ್ತ ರಿಷಭ್ ಪತ್ನಿ , ಪ್ರಗತಿ ಶೆಟ್ಟಿ ಸ್ವಾಗತಿಸಿದರು.
Related Articles
Advertisement
ಕಿರಿಕ್ ಪಾರ್ಟಿ ಸಿನಿಮಾವನ್ನು ಅಮೆರಿಕದಲ್ಲಿ ಬಿಡುಗಡೆ ಮಾಡುವ ಕಾರ್ಯಕ್ರಮವಿತ್ತು. ಅದೇ ಪ್ರವಾಸವನ್ನು ಸ್ವಲ್ಪ ವಿಸ್ತರಿಸಿ ಅಮೆರಿಕದಲ್ಲಿ 10 ದಿನ ಹನಿಮೂನ್ ಅಂತ ಸುತ್ತಾಡಿದೆವು. ಆಗಷ್ಟೇ ಕಿರಿಕ್ ಪಾರ್ಟಿ ಯಶಸ್ಸು ಕಂಡಿದ್ದರೂ ಈ ರಿಷಭ್ ವಿಮಾನದಲ್ಲಿ ನನ್ನೊಡನೆ ಕುಳಿತುಕೊಂಡು, “ಯಾಕೋ ನಾನೊಬ್ಬ ಕೆಲಸವಿಲ್ಲದ ಪೋರನಂತೆ ಅನಿಸ್ತಿದೆ ಮಾರಾಯ್ತಿ’ ಅಂತ ಹೇಳುತ್ತಿದ್ದರು. ನನಗೋ ಅಚ್ಚರಿ ! ಇಲ್ಲಿ ವಿಮಾನ ಇಳಿಯುತ್ತಿದ್ದಂತೆಯೇ ಕಿವಿಗೆ ಫೋನ್ ಅಂಟಿಸಿಕೊಂಡು ಕೆಲಸ ಶುರು ಮಾಡಿಯೇ ಬಿಟ್ಟರು. ಸಿನಿಮಾ ಶೂಟಿಂಗ್ ಇದ್ದಾಗ ಮುಂಜಾನೆ ಆರು ಗಂಟೆಗೇ ಎದ್ದು ಸೆಟ್‌ಗೆ ಹೋಗಿ ಕುಳಿತುಬಿಡುತ್ತಾರೆ. ಹೇಳಿದ ತಕ್ಷಣ ಫಟಾಫಟ್ ಕೆಲಸ ಆಗಬೇಕು ಅವರಿಗೆ. ಸೆಟ್‌ನಲ್ಲಿ ಕೆಲಸ ನಿಧಾನವಾದರೆ ರೇಗಿಬಿಡುತ್ತಾರೆ. ಆದರೆ ಮನೆಯಲ್ಲಿ ಅದಕ್ಕೆ “ಉಲ್ಟಾ ‘ ಎಂಬಂತೆ ಇರುತ್ತಾರೆ. ಮನೆಯವರೊಡನೆ ಬಹಳ ಕಡಿಮೆ ಸಮಯ ಸಿಗುವುದರಿಂದ ಅವರಿಗೆ ಅದರ ಮಹತ್ವ ಗೊತ್ತಿದೆ ಅನಿಸುತ್ತದೆ. ಈಗ ಮಗ ರಣ್ವಿತ್ ಜೊತೆ ಸಮಯ ಕಳೆಯುವುದೆಂದರೆ ಅವರಿಗೆ ತುಂಬ ಖುಷಿ.
ಮದುವೆಯಾದ ಹೊಸದರಲ್ಲಿ ನಾನು ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಕಂಪೆನಿಯಲ್ಲಿ ಅಮೆರಿಕದ ಗ್ರಾಹಕರು ಹೆಚ್ಚಿದ್ದುದರಿಂದ ರಾತ್ರಿ ಪಾಳಿ ಇತ್ತು. ರಿಷಭ್ ಜೊತೆ ಇರಲು ಸಮಯವೇ ಸಿಗುತ್ತಿರಲಿಲ್ಲ. ಅಷ್ಟೇ ಅಲ್ಲ, ನನ್ನಿಷ್ಟದ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಬೇಕು ಅಂತ ಆಸೆಯಾಗುತ್ತಿತ್ತು. ಈ ಬಗ್ಗೆ ರಿಷಭ್‌ಗೆ ಹೇಳಿದಾಗ ಕೋರ್ಸ್ ಕಲಿಯುವಂತೆ ಪ್ರೋತ್ಸಾಹಿಸಿದರು. “ಮಿಫ್ಟ್’ ನಲ್ಲಿ ಕೋರ್ಸ್ ಮುಗಿಸಿ ಈಗ ನಾನು ರಿಷಭ್ ಚಿತ್ರಗಳಿಗೇ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇಷ್ಟದವರೊಂದಿಗೆ ಇಷ್ಟದ ಕೆಲಸ ಮಾಡುವುದು ನಿಜಕ್ಕೂ ಬಹಳ ಖುಷಿ.
ನಂಗೆ ಅವರ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತುಂಬಾ ಇಷ್ಟ. ಯಾಕೆಂದರೆ, ಆ ಚಿತ್ರಕ್ಕಾಗಿ ನಾವಿಬ್ಬರೂ ಒಟ್ಟಾಗಿ ಎರಡು ವರ್ಷ ಕೆಲಸ ಮಾಡಿದೆವು. ಅದೇ ಸಂದರ್ಭದಲ್ಲಿ ರಿಷಭ್ ಶೆಟ್ಟಿ ಫಿಲ್ಮ್ಸ್ ಎಂಬ ಪ್ರೊಡಕ್ಷನ್ ಹೌಸ್ ಆರಂಭವಾಯಿತು. ಆಡಿಯೋ ಕಂಪೆನಿಯೂ ಆರಂಭವಾಯಿತು. ಆ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯೂ ಬಂತು.
ಎಲ್ಲರೂ ಕೇಳುತ್ತಾರೆ, ಹೀರೋ ಗಂಡನೊಡನೆ ಜೀವನ ಮಾಡುವಾಗ ಜಗಳಗಳು ಜಾಸ್ತಿ ಅಲ್ವಾ ಅಂತ. ಆದರೆ, ನನಗೆ ಅಂತಹ ಪೊಸೆಸಿವ್‌ನೆಸ್ ಇಲ್ಲ. ನಿಜ ಹೇಳಬೇಕೆಂದರೆ ತೆರೆಯ ಹಿಂದೆ ಇದೊಂದು ನಿರಂತರ ಶ್ರಮ ಬಯಸುವ ಕೆಲಸ. ರಿಷಭ್ ಮನಸ್ಸು ನಂಗೊತ್ತು. ಯಾಕೆಂದರೆ ಅವರ ಮನಸ್ಸನ್ನು ಕೆಲಸದಿಂದ ವಿಮುಖಗೊಳಿಸುವುದು ಸಾಧ್ಯವೇ ಇಲ್ಲ. ಅಷ್ಟು ಬ್ಯುಸಿ ಇರುವ ಅವರ ಬಾಳಿನಲ್ಲಿ ನಾನು ಬಂದ ಮೇಲೆ ಅವರ ಕೌಟುಂಬಿಕ ಕಾರ್ಯಕ್ರಮಗಳಿಗೆಲ್ಲ ನಾನೇ ಪ್ರತಿನಿಧಿಯಂತೆ ಹೋಗುತ್ತಿದ್ದೇನೆ. ಕುಂದಾಪುರದ ಕೆರಾಡಿ ಎಂಬಲ್ಲಿ ಅವರ ಮನೆಯಿದೆ. ಅತ್ತೆ ರತ್ನಾವತಿ ಯಾವಾಗಲೂ ಹೇಳುತ್ತಿರುತ್ತಾರೆ, “ನೀನು ಬಂದ ಮೇಲೆ ಇವ ಆಗಾಗ ಊರಿಗೆ ಬತ್ತಿದ್ದ’ ಅಂತ. ನಮ್ಮ ಮನೆಯಲ್ಲಿಯೇ ನವರಾತ್ರಿ ಪೂಜೆ ಇರುತ್ತದೆ. ಮನೆಯ ಭೂತಕ್ಕೆ ಕೋಲ ಇದ್ದಾಗಲೂ ಊರಿಗೆ ಹೋಗುತ್ತೇವೆ. ಊರಿಗೆ ಹೋದಾಗ ರಿಷಭ್ ಫೋನಿಂದ ದೂರ ಇರ್ತಾರೆ. ಆಗೆಲ್ಲ ಅತ್ತೆ, ಮಾವ ಭಾಸ್ಕರ್ ಶೆಟ್ಟಿ , ಭಾವ ಪ್ರವೀಣ್, ಅತ್ತಿಗೆ ಸುಚಿತ್ರ ಜೊತೆ ಸಮಯ ಕಳೆಯುವುದು ಬಹಳ ಚೆನ್ನಾಗಿರುತ್ತದೆ. ಬಂಗುಡೆ ಅಂದರೆ ಅವರಿಗೆ ಪಂಚಪ್ರಾಣ. ನಂಗೆ ಏಡಿ ಮತ್ತು ಸಿಗಡಿಯಿಂದ ಮಾಡಿದ ಅಡುಗೆ ಅಂದ್ರೆ ಇಷ್ಟ. ಈಗ ಅವರಿಗೂ ಸಮುದ್ರಜೀವಿಗಳ ಅಡುಗೆ ರುಚಿಯೆನಿಸುತ್ತಿದೆ.ರಿಷಭ್‌ಗೆ ಭಾರತೀಯ ಉಡುಗೆ ಎಂದರೆ ಇಷ್ಟ. ನಾನು ಸೀರೆ ಉಟ್ಟರೆ ಬಹಳ ಸಂಭ್ರಮ ಪಡುತ್ತಾರೆ. ನನಗೂ ಅಷ್ಟೇ, ಸೀರೆ ಉಟ್ಕೊಂಡು ಅವರೊಡನೆ ಹೊರಗೆ ಹೋಗುವುದೆಂದರೆ ಬಹಳ ಖುಷಿಯಾಗುತ್ತದೆ. ಈ ರಿಷಭ್ ಸದಾ ಬ್ಯುಸಿ ಬ್ಯುಸಿ. ಸದಾ ಕೆಲಸವನ್ನೇ ಪ್ರೀತಿಸುವ ಅವರನ್ನು ನೋಡುವುದು ನನಗೂ ಇಷ್ಟವೇ. ಅದಕ್ಕೇ ತಾನೇ ಐಟಿ ಕೆಲಸ ಬಿಟ್ಟು ಅವರಿಷ್ಟ ಪಡುವ ಕೆಲಸವನ್ನೇ ನನ್ನ ವೃತ್ತಿ ಮಾಡಿಕೊಂಡದ್ದು !
– ಪ್ರಗತಿ ರಿಷಭ್ ಶೆಟ್ಟಿ ಪ್ರಗತಿ ರಿಷಭ್ ಶೆಟ್ಟಿ
ನಿರೂಪಣೆ: ಟೀಂ ಮಹಿಳಾ ಸಂಪದ