Advertisement

ಸೋಶಿಯಲ್ ಮೀಡಿಯಾ ಜಗಲಿ ಕಟ್ಟೆ, ವಾಟ್ಸಪ್ ಬೆಡ್ ರೂಂ ಇದ್ದಂತೆ! ರಾಜಾರಾಂ

06:10 PM Apr 13, 2020 | Sharanya Alva |

ಕುಂದಾಪುರ:ಸೋಶಿಯಲ್ ಮೀಡಿಯಾ ಹೆಸರಿನಲ್ಲಿ ಖಾಸಗಿ ಕ್ರಿಮಿನಲ್ ಮೀಡಿಯಾವೊಂದು ವೇಗವಾಗಿ ಬೆಳೆಯುತ್ತಿದೆ. ಅದು ವ್ಯಾಟ್ಸಪ್. ಭಯಹುಟ್ಟಿಸುವ ಇದು ಸೋಶಿಯಲ್ ಮೀಡಿಯಾವೇ ಅಲ್ಲ. ಸೋಶಿಯಲ್ ಮೀಡಿಯಾ ಒಂದು ಜಗುಲಿ ಇದ್ದ ಹಾಗೆ. ವ್ಯಾಟ್ಸಪ್ ಬೆಡ್ ರೂಂ ಇದ್ದಂತೆ ಎಂಬುದಾಗಿ ಮಾಜಿ ಪ್ರರ್ತಕರ್ತ ರಾಜಾರಾಂ ತಲ್ಲೂರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಅವರು ಕಾರ್ಟೂನ್ ಹಬ್ಬದ 2ನೇ ದಿನವಾದ ಶುಕ್ರವಾರ ಹ್ಯಾಶ್ ಟ್ಯಾಗ್ ಹರಟೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು. ಫೇಸ್ ಬುಕ್, ಟ್ವೀಟರ್ ನಲ್ಲಿ ನಡೆಯುವ ಚರ್ಚೆ ಇನ್ನೊಬ್ಬರಿಗೆ ತಿಳಿಯುತ್ತದೆ. ಆದರೆ ವಾಟ್ಸಪ್ ನಲ್ಲಿ ಅದು ಗೌಪ್ಯವಾಗಿ ಉಳಿಯುತ್ತದೆ ಎಂದು ವಿಶ್ಲೇಷಿಸಿದರು.

ಸಾಮಾಜಿಕವಾಗಿ ನಾಲ್ಕು ಮೂಲಭೂತ ಗುಣಗಳಿವೆ. ಅವು ಯಾವುದೆಂದರೆ ಸಾಮಾಜಿಕವಾಗಿ ಕಾಣಿಸಿಕೊಳ್ಳುವುದು, ಸಾಮಾಜಿಕವಾಗಿ ವ್ಯಕ್ತಪಡಿಸುವುದು, ಸಾಮಾಜಿಕವಾಗಿ ಸಂಪರ್ಕಿಸುವುದು ಹಾಗೂ ಸಾಮಾಜಿಕವಾಗಿ ಮೌಲ್ಯ ಮಾಪನ ಮಾಡಿಕೊಳ್ಳುವುದು.

ಮೇಲಿನ 3 ಗುಣಗಳನ್ನು ಸಾಮಾಜಿಕ ಜಾಲತಾಣ ಮೊಗೆ, ಮೊಗೆದು ಕೊಡುತ್ತಿದೆ. ಆದರೆ ಮೌಲ್ಯಮಾಪನವನ್ನು ಅದು ಮಾಡುತ್ತಿಲ್ಲ. ಹೀಗಾಗಿ ಇಂದು ಸಾಮಾಜಿಕ ಜಾಲತಾಣ ಆ ಸ್ಥಿತಿ ತಲುಪಿದೆ ಎಂದರು.

Advertisement

ಸೋಶಿಯಲ್ ಮೀಡಿಯಾಕ್ಕೆ ಮೈಕ್ರೋ ಮತ್ತು ಮ್ಯಾಕ್ರೊ ಎಂಬ ಎರಡು ಮುಖಗಳಿರುತ್ತದೆ. ಇದು ಆರ್ಥಿಕ ವ್ಯವಹಾರದ ಲೆಕ್ಕಾಚಾರಗಳಾಗಿವೆ. ನಮ್ಮ ಪ್ರತಿ ಯೋಚನೆ, ಪ್ರತಿ ಪೋಸ್ಟ್ ಗಳೂ ಸಾಮಾಜಿಕ ಜಾಲತಾಣಕ್ಕೆ ಹಣ ಮಾಡಲು ಸಹಾಯ ಮಾಡುತ್ತದೆ. ಇದು ಅಂಗಡಿ ಸಮೀಪದ ಪಂಚಾಯ್ತಿ ಕಟ್ಟೆ ಇದ್ದ ಹಾಗೆ. ಅಲ್ಲಿ ವ್ಯಾಪಾರವೂ ನಡೆಯುತ್ತಿರುತ್ತದೆ, ಹರಟೆ, ಚರ್ಚೆಯೂ ನಡೆಯುತ್ತಿರುತ್ತದೆ. ನಾವು ಫೇಸ್ ಬುಕ್, ಟ್ವೀಟರ್ ಗೆ ಹಾಕುವ ಪೋಸ್ಟ್ ಅನ್ನು ಯಾರು ನೋಡಬೇಕು, ಯಾರು ಲೈಕ್ ಒತ್ತಬೇಕು ಎಂಬುದನ್ನು ಫೇಸ್ ಬುಕ್ ಮಾಲೀಕ ನಿರ್ಧರಿಸುತ್ತಾನೆ. ಯಾವುದೇ ತೀರ್ಮಾನ ನಮ್ಮ ಕೈಯಲ್ಲಿ ಇರೋದಿಲ್ಲ ಎಂದು ತಿಳಿಸಿದರು.

ಕುಂದಾಪುರದ ಸಹಾಯಕ ಆಯುಕ್ತ ಭೂಬಾಲನ್ ಟಿ ಅವರು ಹ್ಯಾಶ್ ಟ್ಯಾಗ್ ಹರಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ವೇದಿಕೆಯಲ್ಲಿ ಡೆಕ್ಕನ್ ಹೆರಾಲ್ಡ್ ಬೆಂಗಳೂರು ಆವೃತ್ತಿಯ ಅಂಬರೀಶ್ ಭಟ್, ಪತ್ರಕರ್ತ ಶಶಿಧರ್ ಹೆಮ್ಮಾಡಿ, ಬಿಜೆಪಿ ಮುಖಂಡ ಕಿಶೋರ್ ಕುಮಾರ್, ಕಾಂಗ್ರೆಸ್ ಯುವ ಮುಖಂಡ ವಿಕಾಸ್ ಹೆಗ್ಡೆ ಉಪಸ್ಥಿತರಿದ್ದರು.

ಹಿರಿಯ ವ್ಯಂಗ್ಯಚಿತ್ರಕಾರ ಜೀವನ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರವಿಕುಮಾರ್ ಗಂಗೊಳ್ಳಿ ಜೀವನ್ ಶೆಟ್ಟಿ ಅವರ ಪರಿಚಯ ಮಾಡಿದರು.  ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next