Advertisement

ನೋಗ್‌ರಾಜ್‌ ಕನ್ನಡಿ ಇದ್ದಂತೆ: ದಾನಿಶ್‌ ಸ್ಪೀಕಿಂಗ್‌

11:59 AM Jan 08, 2018 | |

“ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌’ – ಈ ಹೆಸರನ್ನು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಹೆಚ್ಚೇ ಕೇಳಿರುತ್ತೀರಿ. ಅದಕ್ಕೆ ಕಾರಣ ದಾನಿಶ ಸೇಠ್. ಹೌದು, ದಾನಿಶ್‌ ಸೇಠ್ ಮೊದಲ ಬಾರಿಗೆ ಹೀರೋ ಆಗಿರುವ “ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಇದೇ ವಾರ (ಜ.12) ತೆರೆಕಾಣುತ್ತಿದೆ. ಈ ಚಿತ್ರವನ್ನು ಪುಷ್ಕರ್‌, ರಕ್ಷಿತ್‌ ಶೆಟ್ಟಿ ಹಾಗೂ ಹೇಮಂತ್‌ ರಾವ್‌ ಸೇರಿ ನಿರ್ಮಿಸಿದ್ದಾರೆ. ಸಾದ್‌ ಖಾನ್‌ ಈ ಚಿತ್ರದ ನಿರ್ದೇಶಕರು. ಚಿತ್ರ ಬಿಡುಗಡೆಯ ಖುಷಿಯಲ್ಲಿರುವ ದಾನಿಶ್‌ ಚಿತ್ರದ ಬಗ್ಗೆ ಮಾತನಾಡಿದ್ದಾರೆ …

Advertisement

* ಹೀರೋ ಆಗಿರುವ ನಿಮ್ಮ ಮೊದಲ ಚಿತ್ರ ಬರುತ್ತಿದೆ. ಏನನ್ನಿಸುತ್ತಿದೆ?
ನಾನು ಕಳೆದ ಒಂಭತ್ತು ವರ್ಷಗಳಿಂದಲೂ ಮೀಡಿಯಾದಲ್ಲೇ ಇದ್ದೇನೆ. ರೇಡಿಯೋ, ಇಂಟರ್‌ನೆಟ್‌, ಟಿವಿ… ಹೀಗೆ ಮೀಡಿಯಾ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದೇನೆ. ಈಗ ಅದೇ ಪ್ರೇಕ್ಷಕರಿಗೆ ಮತ್ತೆ ಹತ್ತಿರವಾಗಲು ಇನ್ನೊಂದು ವೇದಿಕೆ ಈ ಚಿತ್ರವಷ್ಟೇ. ಸಿನಿಮಾ ತುಂಬಾ ದೊಡ್ಡ ಜರ್ನಿ ಅಷ್ಟೇ. ಇಲ್ಲಿ ಎಲ್ಲದ್ದಕ್ಕೂ ಸಮಯ ಬೇಕಾಗುತ್ತೆ. ಮೊದಲ ಚಿತ್ರ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಬಂದಿದೆ. ಖುಷಿಯಾಗುತ್ತಿದೆ.  ನನಗೆ ಸಣ್ಣದ್ದು, ದೊಡ್ಡದ ಅಂತೇನಿಲ್ಲ. ಕೆಲಸ ಮಾಡಬೇಕು ಅಷ್ಟೇ. ಅದು ಯಾವುದೇ ವೇದಿಕೆ ಇರಲಿ, ಅಲ್ಲೊಂದು ಕೆಲಸ ಬೇಕಷ್ಟೇ. 

* ನಿಮ್ಮ ಹಿನ್ನೆಲೆ?
ಹುಟ್ಟಿ ಬೆಳೆದದ್ದು ಬೆಂಗಳೂರಲ್ಲಿ. ತಾಯಿ ಮೈಸೂರಿನವರು. ನಮ್ಮದು ರಾಜಕೀಯ ಕುಟುಂಬವಾಗಿದ್ದರು, ಅಮ್ಮನಿಗೆ ಆ ಬಗ್ಗೆ ಹೆಚ್ಚು ಒಲವಿಲ್ಲ. ಅಜೀಜ್‌ಸೇಠ್ ನಮ್ಮ ತಾತ,  ತನ್ವೀರ್‌ಸೇಠ್ ಸಂಬಂಧಿ. ಮೊದಲಿನಿಂದಲೂ ನನಗೆ ಮನರಂಜನೆ ಇಷ್ಟ. ನಾನು ಓದಿದ್ದು ಕೊಡಗಿನ ಬೋರ್ಡಿಂಗ್‌ ಸ್ಕೂಲ್‌ನಲ್ಲಿ. ಶಾಲೆ ದಿನಗಳಲ್ಲೇ ನನಗೆ ಈ ಕಲೆ ಮೇಲೆ ಆಸಕ್ತಿ ಇತ್ತು. ಹಲವು ಕಾರ್ಯಕ್ರಮ ಮಾಡುತ್ತಿದ್ದೆ. ಅಮ್ಮ ಅದನ್ನೆಲ್ಲ ಗಮನಿಸಿದ್ದರು. ಅವರ ಸಹಕಾರ, ಪ್ರೋತ್ಸಾಹದಿಂದ ಇಲ್ಲಿಯವರೆಗೆ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ನಮ್ಮದು ಮಿಡ್ಲ್ಕ್ಲಾಸ್‌ ಫ್ಯಾಮಿಲಿ.

ನಾನು 2003, 04 ರಲ್ಲಿ ಶಾರುಖ್‌ಖಾನ್‌ ಅವರ ಒಂದು ಚಿತ್ರದ ಪ್ರಮೋಷನ್‌ ಮಾಡುವ ಮೂಲಕ ಕೆಲಸ ಶುರುಮಾಡಿದೆ. ಅದು ಒಂದು ವಾಹನ ಮೂಲಕ ರೋಡ್‌ ರೋಡ್‌ನ‌ಲ್ಲಿ ಶೋ ಮಾಡುತ್ತಿದ್ದೆ. ಅಲ್ಲಿಂದ ಎಲ್ಲಾ ಮಾಲ್‌ಗ‌ಳಲ್ಲೂ ಹಲವು ಕಾರ್ಯಕ್ರಮ ಮಾಡಿದೆ. ಕಾರ್ಪೋರೇಟ್‌ ಸಂಸ್ಥೆಗಳಲ್ಲೂ ಸಾಕಷ್ಟು ಕಾರ್ಯಕ್ರಮ ಮಾಡಿದ್ದುಂಟು. ಎಲ್ಲರೂ ಮಾತಿನ ಮಲ್ಲ ಅಂತಾರೆ. ಆ ಮೂಲಕ ರೇಡಿಯೋದಲ್ಲಿ ಕೆಲಸ ಮಾಡಿದೆ. ದುಬೈನಲ್ಲಿ ಅದೇ ಕೆಲಸ ಮಾಡಿಕೊಂಡಿದ್ದೆ. ಆ ಬಳಿಕ ಇಲ್ಲಿಗೆ ಬಂದೆ. ಆರ್‌ಸಿಬಿ ಸೇರಿದಂತೆ ಇನ್ನಿತರೆ ಈವೆಂಟ್‌ ಮಾಡಿದೆ. ಈಗ ಸಿನಿಮಾ. ಮುಂದೆ ಮತ್ತದೇ ಕೆಲಸ ಮಾಡ್ತೀನಿ. 

* ನಿಮ್ಮ ಚಿತ್ರದ ವಿಶೇಷವೇನು?
ಇದೊಂದು ಮಿರರ್‌ ಇದ್ದಂಗೆ. ಸಮಾಜದಲ್ಲಿ ಏನೆಲ್ಲಾ ನಡೆಯುತ್ತೆ ಎಂಬುದನ್ನು ತೋರಿಸಲಾಗುತ್ತೆ. ಇಲ್ಲಿ ರಾಜಕೀಯ ಇದೆ. ಅದು ವಿಡಂಬಣೆಯೊಂದಿಗೆ ಸಾಗುತ್ತೆ. ಕಾಮಿಡಿ ಮೂಲಕ ಚುನಾವಣೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ. ಇಲ್ಲಿ ಮತ ಯಾರಿಗೆ ಹಾಕಬೇಕು ಅನ್ನುವುದಕ್ಕಿಂತ, ಯಾರಿಗೆ ಹಾಕಬಾರದು ಎಂಬುದನ್ನಿಲ್ಲಿ ಹೇಳ ಹೊರಟಿದ್ದೇವೆ.  ಯಾರ ಪರವೂ ಇಲ್ಲ, ಇಲ್ಲಿ ಎಡವೂ ಇಲ್ಲ ಬಡವೂ ಇಲ್ಲ. ಒಂದು ಸಮಾಜದಲ್ಲಿ ಹೇಗೆಲ್ಲಾ ನಡೆಯುತ್ತೆ ಎಂಬುದನ್ನು ಹೇಳಹೊರಟಿದ್ದೇವೆ. ಅದೇ ಚಿತ್ರದ ವಿಶೇಷ.

Advertisement

* ಯಾವ ಜಾನರ್‌ನ ಸಿನಿಮಾ ಇದು?
ಇದೊಂದು ಔಟ್‌ ಅಂಡ್‌ ಔಟ್‌ ಕಾಮಿಡಿ ಚಿತ್ರ. ಇಡೀ ಚಿತ್ರ ಮನರಂಜನೆ ಹೊರತು ಬೇರೇನೂ ಇಲ್ಲ. ಎಲ್ಲೋ ಒಂದು ಕಡೆ ಎಮೋಷನ್‌ ಬಂದರೂ, ಅದರೊಂದಿಗೆ ಕಾಮಿಡಿ ಸೇರಿಕೊಳ್ಳುತ್ತೆ.ಒಂದು ಖುಷಿ ಪಡುವ, ತಿಳಿವಳಿಕೆ ನೀಡುವ ಚಿತ್ರವಿದು. 

* ನಿಮ್ಮ ಚಿತ್ರಕ್ಕೆ ವಿರಾಟ್‌ ಕೊಹ್ಲಿ ಕೂಡಾ ವಿಶ್‌ ಮಾಡಿದ್ದಾರಲ್ವಾ?
ಹೌದು, ನನ್ನ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತು. ನಾನು ಅವಷ್ಟೇ ಅಲ್ಲ, ಸಾಕಷ್ಟು ಸೆಲೆಬ್ರೆಟಿಗಳನ್ನು ಹತ್ತಿರದಿಂದ ನೋಡಿದ್ದೇನೆ. ನನ್ನೊಳಗಿರುವ ತುಡಿತ ಕೂಡ ಅವರಿಗೆ ಗೊತ್ತು. ಮೊದಲ ಸಲ ವಿರಾಟ್‌ ಕೊಹ್ಲಿ ಕನ್ನಡ ಚಿತ್ರಕ್ಕೆ ಅದರಲ್ಲೂ ಹಂಬಲ್‌ ಪೊಲಿಟಿಷಿಯನ್‌ನೋಗರಾಜ್‌ ಚಿತ್ರಕ್ಕೆ ಬೈಟ್‌ ಮೂಲಕ ಶುಭಾಶಯ ಹೇಳಿದ್ದಾರೆ. ತೆಲುಗು ನಟ ರಾಣಾ ದಗ್ಗುಬಾಟಿ ಸಂದೇಶ ಕಳಿಸಿದ್ದಾರೆ. ಅನುರಾಗ್‌ ಕಶ್ಯಪ್‌ ಕೂಡ ಟ್ವೀಟ್‌ ಮಾಡಿ ಶುಭಾಶಯ ಕೋರಿದ್ದಾರೆ. 

* ಈ ಸಿನಿಮಾ ಮೂಲಕ ನೀವು ಕಾಮಿಡಿ ಹೀರೋ ಆಗುತ್ತಿದ್ದೀರಾ?
ಹೌದು. ಮುಂದೆ ಹೇಗೋ ಗೊತ್ತಿಲ್ಲ. ಆದರೆ, ನಾನು ಯಾವತ್ತೂ ಲೈಫ‌ನ್ನು ಸಿಂಪಲ್‌ ಆಗಿಯೇ ತೆಗೆದುಕೊಂಡಿದ್ದೇನೆ. ನನಗೆ ಇವತ್ತಿನ ಕೆಲಸವಷ್ಟೇ ಮುಖ್ಯ. ನಾಳೆ ಬಗ್ಗೆ ಯೋಚಿಸುವುದಿಲ್ಲ. ಬಂದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡ್ತೀನಿ. ನನಗೊಂದು ಗುರಿ ಇದೆ. ಅದೇನೆಂದರೆ, ನಾನು ಟೀಚರ್‌ ಆಗಿ, ಮಕ್ಕಳಲ್ಲಿ, ಜನರಲ್ಲಿ ಒಂದಷ್ಟು ಜಾಗೃತಿ ಮೂಡಿಸುವಾಸೆ. ಅದು ಬಿಟ್ಟರೆ, ನಾನು ಈ ಚಿತ್ರದ ಮೂಲಕ ಹೀರೋ ಆಗಿದ್ದೇನೆ. ಕಾಮಿಡಿ ಹೀರೋ ಆಗುತ್ತೇನೆ. ಮುಂದೆ ದೊಡ್ಡ ಸಿನಿಮಾ ಮಾಡುತ್ತೇನೆ ಎಂಬ ಆಸೆಗಳೇನೂ ಇಲ್ಲ. ಆ ಕಲ್ಪನೆಯೂ ಇಲ್ಲ. 

* ನಿರ್ಮಾಪಕರ ಬಗ್ಗೆ ಹೇಳುವುದಾದರೆ?
ಒಳ್ಳೆಯ ನಿರ್ಮಾಪಕರ ಜತೆ ಕೆಲಸ ಮಾಡಿದ್ದೇನೆ. ನಮಗೆ ಇಂತಹ ಪ್ರೊಡಕ್ಷನ್‌ ಸಿಕ್ಕಿದ್ದು ಖುಷಿಯ ವಿಷಯ. ಕನ್ನಡಕ್ಕೆ ಇಂತಹ ನಿರ್ಮಾಣ ಸಂಸ್ಥೆ ಬೇಕು. ಈ ಸಂಸ್ಥೆಯಲ್ಲಿ ಪ್ರತಿಭಾವಂತರಿಗೆ ಖಂಡಿತ ಬದುಕಿದೆ.

* ಮುಂದಿನ ಪ್ರಾಜೆಕ್ಟ್?
ಸದ್ಯಕ್ಕೆ ಏನೂ ಇಲ್ಲ. ನ್ಯೂಯಾರ್ಕ್‌ಗೆ ಹೋಗ್ತಿನಿ. ಅಲ್ಲೊಂದು ಕಾಮಿಡಿ ಸ್ಕೂಲ್‌ನಲ್ಲಿ ಕೋರ್ಸ್‌ ಮಾಡುತ್ತೇನೆ. ನನಗೆ ಓದುವ ಆಸೆ. ಇನ್ನಷ್ಟು ಕಲಿಯಬೇಕು. ಅಲ್ಲಿಗೆ ಹೋಗಿ ಬಂದ ಬಳಿಕ ಸಿಕ್ಕ ಕೆಲಸ ಮಾಡ್ತೀನಿ ಅಷ್ಟೇ. ಇದೇ ಬೇಕು, ಅದೇ ಇರಬೇಕು ಎಂಬುದೆಲ್ಲಾ ಆಸೆ ಇಲ್ಲ. ನನಗೆ ಸಿನಿಮಾ ಹೊಸದು. ಯಾವುದೇ ಗಾಡ್‌ಫಾದರ್‌ ಇಲ್ಲದೆ ಬಂದವನು. ನಾನು ನಿರ್ದೇಶಕರು ಸೇರಿ ಕಥೆ ಮಾಡಿಕೊಂಡು ಒಂದು ಚಿತ್ರ ಮಾಡಿದ್ದೇವೆ. ಜನರು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next