Advertisement
ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಎಡಿಜಿಪಿ ಆರ್.ಪಿ.ಶರ್ಮಾ ಆರೋಪ ಹಾಗೂ ಹಾಸನ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಪ್ರಕರಣಕ್ಕೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ತಡೆ ನೀಡಿರುವ ವಿಚಾರ ಸರಕಾರಕ್ಕೆ ಮುಜುಗರ ತಂದಿದೆ. ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳು ಸರ್ಕಾರದ ವರ್ಗಾವಣೆ ಕ್ರಮ ಹಾಗೂ ಸಚಿವರು ಸೇರಿದಂತೆ ಜನಪ್ರತಿನಿಧಿಗಳ ಹಸ್ತಕ್ಷೇಪದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುವುದು ಹಾಗೂ ಅಸಮಾಧಾನ ಹೊರಹಾಕುತ್ತಿರುವುದು ಒಂದು ರೀತಿಯಲ್ಲಿ ಕಾರ್ಯಾಂಗ ಹಾಗೂ ಶಾಸಕಾಂಗದ ನಡುವೆ ಸಂಘರ್ಷ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಎರಡು ವರ್ಷಗಳಿಗೊಮ್ಮೆ ವರ್ಗಾವಣೆ ಮಾಡುವುದು ವಾಡಿಕೆ. ಆದರೆ, ಇತ್ತೀಚೆಗೆ ಅದು ಕಾರಣಾಂತರಗಳಿಂದ ಆರು ತಿಂಗಳು, ಒಂದು ವರ್ಷಕ್ಕೆಲ್ಲಾ ವರ್ಗ ಆಗುತ್ತಿದೆ. ಸಚಿವರು ಹಾಗೂ ಜನಪ್ರತಿನಿಧಿಗಳ ಒತ್ತಡವೇ ಇದಕ್ಕೆ ಕಾರಣ ಎಂಬುದು ಅಧಿಕಾರಿಗಳ ಅಸಮಾಧಾನಕ್ಕೆ ಕಾರಣ.
Related Articles
Advertisement
ರೋಹಿಣಿ ಸಿಂಧೂರಿ ಹಾಗೂ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್‌ಶೆಟ್ಟಿ ಅವರು ಸರಕಾರದ ವರ್ಗಾವಣೆ ಆದೇಶ ಪ್ರಶ್ನಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋಗಿ ತಡೆ ತಂದಿದ್ದಾರೆ. ಇದು ಸರಕಾರಕ್ಕೆ ಮುಜುಗರ ಸೃಷ್ಟಿಸಿದೆ. ಇದರ ನಡುವೆ ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಅವರ ಮೇಲೆ ಹತ್ಯಾ ಪ್ರಯತ್ನ ಪ್ರಕರಣ ಕಾನೂನು ಸುವ್ಯವಸ್ಥೆ, ಭದ್ರತೆ ಬಗ್ಗೆಯೇ ಶಂಕೆ ಉಂಟುಮಾಡುವಂತಾಯಿತು. ಆ ಬಗ್ಗೆಯೂ ದೇಶಾದ್ಯಂತ ಟೀಕೆಗಳು ಕೇಳಿ ಬಂದವು. ಈ ಎಲ್ಲ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಇದರ ಪರಿಣಾಮ ಬೇರೆ ರೀತಿ ಆಗುವ ಸಾಧ್ಯತೆಯೂ ಇಲ್ಲದಿಲ್ಲ. ಸರಕಾರದ ಕ್ರಮವನ್ನು ಮುಖ್ಯಮಂತ್ರಿಯವರು ಬಿಟ್ಟರೆ ಬೇರೆ ಯಾವ ಸಚಿವರೂ ಸಮರ್ಥಿಸಿಕೊಳ್ಳುತ್ತಿಲ್ಲ ಎಂಬುದು ಗಮನಿಸಿದ ಬೇಕಾದ ಸಂಗತಿ. ಯಾವುದೇ ಒಂದು ನಿರ್ಧಾರ ಅಥವಾ ಆದೇಶ ಯಾವುದೇ ಹಂತದಲ್ಲಿ ಆದರೂ ಅದಕ್ಕೆ ಸೂಕ್ತ ಸಮರ್ಥನೆ ಸರಿಯಾದ ಹಂತದಲ್ಲಿ ಕೊಡದಿದ್ದರೆ ಅದರ ಹಿಂದೆ ಸದುದ್ದೇಶ ಅಥವಾ ಸಹಜವಾಗಿದ್ದರೂ ಗುಮಾನಿ ಮೂಡುವುದು ಸಹಜ. ಹೀಗಾಗಿ, ಒಂದು ಘಟನೆ ಪಾಠ ಕಲಿಸಿದ ನಂತರ ಮತ್ತೆ ಅಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವುದು ಅಗತ್ಯ.