ನಮ್ಮ ಲೇಔಟಿನ ಚಿಕ್ಕ ದಾರಿಯ ಪಕ್ಕದಲ್ಲೊಂದು ಪುಟ್ಟ ಗಿಡ ದೊಡ್ಡದಾಯಿತು. ಹಸು, ಕುರಿ, ಮೇಕೆಗಳು ಗಿಡದ ರೆಂಬೆಗಳನ್ನು ತಿಂದು ಹಾಕಿದರೂ, ಸರಿಯಾಗಿ ನೀರುಣಿಸುವವರು ಇಲ್ಲದಿದ್ದರೂ ಗಿಡ ದೊಡ್ಡದಾಗಿ ಮರವಾಗುತ್ತ ಬಂತು. ಮರ ಎತ್ತ¤ರೆತ್ತರಕ್ಕೆ ನಳನಳಿಸಿ ಬೆಳೆಯತೊಡಗಿದಂತೆ ಹಲವರ ತಲೆನೋವಿಗೆ ಕಾರಣವಾಯಿತು, ಸಲ್ಲದ್ದನ್ನು ಆಲೋಚಿಸುವ ಮನುಷ್ಯನಿಗೆ ಮಾತ್ರ ತಲೆನೋವು ಬರುತ್ತದೆ. “”ಇಲ್ಲೇ ಪಕ್ಕದಲ್ಲಿ ನನ್ನ ಕಾರನ್ನು ನಿಲ್ಲಿಸುತ್ತಿದ್ದೇನೆ, ಮುಂದಿನ ವರ್ಷದ ಮಳೆಗಾಲದಲ್ಲಿ ಇದರ ಕೊಂಬೆ ನನ್ನ ಕಾರಿನ ಮೇಲೆ ಬೀಳುವ ಸಾಧ್ಯತೆ ಇದೆ, ಇದರ ಕೊಂಬೆಯನ್ನಾದರೂ ಕಡಿಸಬೇಕು” ಎಂದರು ಲಂಚವನ್ನು ಬಲ ಕೈಯಲ್ಲಿ ಮುಟ್ಟದ ದೊಡ್ಡ ಕಾರಿನ ಒಡೆಯ ! ಅವರ ಹೆದರಿಕೆ ನಿವಾರಿಸಲು ಮರದ ಕೆಲವು ಕೊಂಬೆಗಳಿಗೆ ಕತ್ತಿ ಪ್ರಯೋಗವಾಯಿತು.
“”ನೋಡ್ರಿ ನಮ್ಮ ಮನೆಯ ಅಂಗಳಕ್ಕೆ ಮರದ ಎಲೆಗಳೆಲ್ಲ ಬಿದ್ದು ಕಸವೋ ಕಸ, ಮನೆಯ ಸುತ್ತಮುತ್ತ ಮರಗಳೇಕೆ ಬೇಕು?” ಎಂದರು ಮತ್ತೂಬ್ಬ ಮನೆಯೊಡೆಯ.
“”ಮರವನ್ನು ಹೀಗೆ ಬಿಟ್ಟರೆ ಇನ್ನೂ ಎತ್ತರಕ್ಕೆ ಬೆಳೆದು ಒಂದು ದಿನ ಗಾಳಿಗೆ ನಮ್ಮ ಮನೆಯ ಮೇಲೆ ಬೀಳುವುದು ಗ್ಯಾರಂಟಿ” ಎಂದರು ನಾಲ್ಕಂತಸ್ತಿನ ಮನೆಯ ರಾಯರು.
ಮನುಷ್ಯರ ಟೀಕೆಗಳು ಜಾಸ್ತಿಯಾದಂತೆ ಮತ್ತೆ ಕತ್ತಿ ಪ್ರಯೋಗವಾಯಿತು, ಈ ಸಲ ಮರದ ಪುಟ್ಟ ಒಂದೆರಡು ಕೊಂಬೆಗಳನ್ನು ಮಾತ್ರ ಬಿಟ್ಟು ಬೋಳಿಸಲಾಯಿತು.
ಮರದ ಪುಟ್ಟ ಒಂದು ಕೊಂಬೆಯೇ ದೊಡ್ಡದಾಯಿತು, ಅದರಲ್ಲೊಂದು ದಿನ 3-4 ಕೆಂಡಸಂಪಿಗೆ ಹೂವುಗಳು ಅರಳಿದವು. ಜೇನುನೊಣ, ದುಂಬಿ, ಚಿಟ್ಟೆಗಳು ಹಾರಾಡಿದವು. ಕೋಗಿಲೆಯೂ ಮನೆ ಮಾಡಿತು ಆ ಮರದಲ್ಲಿ. ಈಗ ಮರದಲ್ಲಿ ಬಿಡುವ ಸಂಪಿಗೆ ಹೂವುಗಳು ಲೇಔಟಿನ ಜನರ ದೇವರ ಕೋಣೆ ಸೇರುತ್ತಿವೆ.
ಮರ ಎಂದರೆ ಮನುಷ್ಯನಲ್ಲ , ಅದು ಬೇಗನೆ ಕ್ಷಮಿಸಿಬಿಡುತ್ತದೆ.
ಗೀತಾ ಕುಂದಾಪುರ