ಬೆಂಗಳೂರು: ಶ್ರೀಗಳು ದೀಪಾವಳಿ, ನವರಾತ್ರಿ, ಚಾತುರ್ಮಾಸ್ಯವನ್ನು ಹೆಚ್ಚಾಗಿ ಇಲ್ಲೇ ಆಚರಣೆ ಮಾಡುತ್ತಿದ್ದರು. ತಮ್ಮ 18ನೇ ವಯಸ್ಸಿನಲ್ಲಿ ಪ್ರಾರಂಭಿಸಿದ ವಿದ್ಯಾಪೀಠವೇ ಅವರ ಕಾರ್ಯಕ್ಷೇತ್ರ ಎಂದರೂ ತಪ್ಪಾಗದು. ಇಲ್ಲಿನ ವಿದ್ಯಾರ್ಥಿ ಹಾಗೂ ಶಿಷ್ಯವೃಂದ ಮೇಲೆ ವಿಶೇಷ ಪ್ರೀತಿ ಅವರಿಗಿತ್ತು. ವಿದ್ಯಾರ್ಥಿಗಳು ಕೂಡ ಅವರನ್ನು ಸ್ವಾಮೀಜಿ ಎಂದು ಭಾವಿಸಿದೆ, ಪ್ರೀತಿಯ ಅಜ್ಜಯ್ಯ ಎಂದೇ ಕರೆಯುತ್ತಿದ್ದರು.
ಶ್ರೀಗಳಿಗೆ ವಿದ್ಯಾರ್ಥಿಗಳೆಂದರೆ ಅಷ್ಟೇ ಅಚ್ಚುಮೆಚ್ಚು. ಶ್ರೀಗಳ ನೆನಪಿನ ಶಕ್ತಿ ಪವಾಡ ಇದ್ದಂತೆ. ಎಷ್ಟೇ ವರ್ಷವಾದರೂ ಹೆಸರು ಮತ್ತು ಊರು ಹೇಳಿಯೇ ಗುರುತು ಹಿಡಿಯುತ್ತಿದ್ದರು. ಪಾಠ ಮಾಡುವ ಸಂದರ್ಭದಲ್ಲೂ ಕೂಡ ಪುಟ ಸಂಖ್ಯೆಯನ್ನು ಮರೆಯುತ್ತಿರಲಿಲ್ಲ ಎಂದು ಪೂರ್ಣಪ್ರಜ್ಞಾ ವಿದ್ಯಾಪೀಠದ ಸಂಶೋಧಕರಲ್ಲಿ ಒಬ್ಬರಾದ ಕೃಷ್ಣ ಆಚಾರ್ಯ ಮಾಹಿತಿ ನೀಡಿದರು.
ಕೃಷ್ಣಾಷ್ಟಮಿಯಂದು ರಾತ್ರಿ 12 ಗಂಟೆಗೆ ಚಂದ್ರ ದರ್ಶನ ಮಾಡಿ, ಅಘಕೊಟ್ಟು, ಬೆಳಗ್ಗೆ ಪೂಜೆ ಮುಗಿಸಿ ಉಪಾಹಾರ ಸೇವಿಸುತ್ತಿದ್ದರು. ಕೃಷ್ಣನಿಗೆ ಉಡುಪಿಯಲ್ಲಿ 108 ಬಗೆ ಅಡುಗೆ ಸಮರ್ಪಿಸಲಾಗುತ್ತದೆ. ನವಮಿಯಲ್ಲಿ ಎಲ್ಲವನ್ನೂ ಹಂಚಲಾಗುತ್ತದೆ. ಬೆಂಗಳೂರಿನ ವಿದ್ಯಾಪೀಠದಲ್ಲಿ ಹತ್ತಾರು ಬಗೆಯ ಖಾದ್ಯ ತಯಾರಿಸಿ, ವಿತರಿಸಲಾಗುತ್ತಿತ್ತು. ಇದರ ನೇತೃತ್ವವನ್ನು ಸ್ವಾಮೀಜಿ ವಹಿಸುತ್ತಿದ್ದರು. ಪರ್ಯಾಯದ ಎರಡು ವರ್ಷ ಹೊರತುಪಡಿಸಿ ಉಳಿದಂತೆ ವಿದ್ಯಾಪೀಠದಲ್ಲೇ ಕೃಷ್ಣಾಷ್ಟಮಿ ಆಚರಿಸುತ್ತಿದ್ದರು ಎಂದು ಹೇಳಿದರು.
ಖಾದಿ ಪ್ರಿಯ ಶ್ರೀಗಳು
ಉಡುಪಿ: ಶ್ರೀಗಳು ಪರ್ಯಾಯೋತ್ಸವದಲ್ಲಿ ಪೀತಾಂಬರ ಧರಿಸುವುದನ್ನು ಹೊರತುಪಡಿಸಿದರೆ ಯಾವಾಗಲೂ ಸರಳವಾದ ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಇದು ಒಂದು ರೀತಿಯಲ್ಲಿ ಅವರು ತನ್ನ ಗುರು ಶ್ರೀ ವಿಶ್ವಮಾನ್ಯತೀರ್ಥರಿಗೆ ಗೌರವ ಕೊಟ್ಟಂತೆ. ಏಕೆಂದರೆ ಅವರು ಸ್ವಾತಂತ್ರ್ಯ ಹೋರಾಟಗಾರರ ಜತೆ ಸೇರಿ ವಿದೇಶಿ ಬಟ್ಟೆಗಳನ್ನು ಸುಟ್ಟಿದ್ದರು ಮತ್ತು ಖಾದಿಧಾರಿಗಳಾಗಿದ್ದರು.
ಸಾಮಾನ್ಯವಾಗಿ ರೇಷ್ಮೆ ಬಟ್ಟೆಯನ್ನು ಮಡಿ ಪಟ್ಟೆ ಎಂದು ಪರಿಗಣಿಸುತ್ತಾರೆ. ಪೇಜಾವರ ಶ್ರೀಗಳೂ ಸಂಪ್ರದಾಯದಂತೆ ರೇಷ್ಮೆ ಬಟ್ಟೆ ಧರಿಸುತ್ತಿದ್ದರು. ಕ್ರಮೇಣ ಇದನ್ನು ಹೇಗೆ ತಯಾರಿಸು ತ್ತಾರೆಂಬುದನ್ನು ಅರಿತುಕೊಂಡರು. ರೇಷ್ಮೆ ವಸ್ತ್ರ ತಯಾರಿಸುವಾಗ ರೇಷ್ಮೆ ಹುಳಗಳು ಸಾಯುತ್ತವೆ. ಇದನ್ನು ಹಿಂಸೆ ಎಂದು ಪರಿಗಣಿಸಿದ ಶ್ರೀಗಳು ಐದನೆಯ ಪರ್ಯಾಯದಿಂದ ನಾರುಮಡಿ ಬಟ್ಟೆಯನ್ನು ಧರಿಸುತ್ತಿದ್ದರು. ಇದನ್ನು ಬೆಂಗಳೂರಿನಿಂದ ಖರೀದಿಸಿ ಅದಕ್ಕೆ ಖಾವಿ ಬಣ್ಣ ಕೊಡಿಸಿ ಧರಿಸುತ್ತಿದ್ದರು.
ಶ್ರೀರಾಮಚಂದ್ರ ನಾರುಮಡಿಯನ್ನು ಉಟ್ಟು ವನವಾಸಕ್ಕೆ ಹೋದ ಎಂಬ ಪುರಾಣದ ಉಲ್ಲೇಖಗಳನ್ನೂ ಶ್ರೀಗಳು ಗಮನಿಸಿದ್ದರು. ಇಷ್ಟು ಮಾತ್ರವಲ್ಲದೆ ಸನ್ಯಾಸಿಗಳು ಹುಲಿ ಚರ್ಮ/ ಕೃಷ್ಣಾಜಿನ ಚರ್ಮದ ಮೇಲೆ ಕುಳಿತುಕೊಳ್ಳುತ್ತಾರೆ. ಈ ಚರ್ಮದ ಮೇಲೆ ಕುಳಿತುಕೊಳ್ಳುವುದರಿಂದಲೂ ಹಿಂಸಾಸಂಪರ್ಕವಾದಂತಾಗುತ್ತದೆ ಎಂದು ತಿಳಿದು ಈ ಪದ್ಧತಿಯನ್ನು ತ್ಯಜಿಸಿ ಹತ್ತಿ ಬಟ್ಟೆಯ ಆಸನದ ಮೇಲೆ ಕುಳಿತುಕೊಳ್ಳುತ್ತಿದ್ದರು.