ಪಾಟ್ನಾ: ಕಳೆದ 24ಗಂಟೆಯಲ್ಲಿ ಧಾರಾಕಾರ ಮಳೆ ಹಾಗೂ ಸಿಡಿಲು ಬಡಿದು 18 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ರೋಹ್ಟಾಸ್ ಜಿಲ್ಲೆಯಲ್ಲಿ ಐವರು, ಅರ್ವಾಲ್ ನಲ್ಲಿ ನಾಲ್ವರು, ಸರಾನ್ ನಲ್ಲಿ ಮೂವರು, ಔರಂಗಾಬಾದ್ ನಲ್ಲಿ ಇಬ್ಬರು ಹಾಗೂ ಚಂಪಾರಣ್ ನಲ್ಲಿ ಇಬ್ಬರು, ಬಂಕಾದಲ್ಲಿ ಒಬ್ಬರು ವೈಶಾಲಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:Actor: ಶವವಾಗಿ ಪತ್ತೆಯಾದ ಖ್ಯಾತ ನಟ, ನಿರ್ದೇಶಕ: 3 ದಿನಗಳಿಂದ ಬರುತ್ತಿತ್ತು ದುರ್ವಾಸನೆ
ಸಿಡಿಲು ಬಡಿದು ಕೊನೆಯುಸಿರೆಳೆದಿರುವ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರು ಗದ್ದೆ ಪ್ರದೇಶಕ್ಕೆ ತೆರಳಬಾರದು. ಅದೇ ರೀತಿ ಮರ, ವಿದ್ಯುತ್ ಕಂಬದ ಕೆಳಗೆ ನಿಂತುಕೊಳ್ಳಬಾರದು ಎಂದು ವಿಪತ್ತು ನಿರ್ವಹಣಾ ಏಜೆನ್ಸಿ ಮನವಿ ಮಾಡಿಕೊಂಡಿದೆ.
ಗುಡುಗು, ಮಿಂಚು ಬರುವ ಸಂದರ್ಭದಲ್ಲಿ ಜನರು ಮನೆಯ ಕಿಟಕಿಯಿಂದ ದೂರ ಇದ್ದು, ರಿಫ್ರಿಜರೇಟರ್, ಎಸಿಯಂತಹ ಎಲೆಕ್ಟ್ರಿಕಲ್ ಉಪಕರಣಗಳನ್ನು ಮುಟ್ಟದಂತೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಧಾರಾಕಾರ ಮಳೆಯ ಸಂದರ್ಭದಲ್ಲಿ ಜನರು ಸಾಧ್ಯವಾದಷ್ಟು ಮನೆಯಲ್ಲೇ ಇರುವುದು ಉತ್ತಮ. ಅನಾವಶ್ಯಕವಾಗಿ ಮನೆಯಿಂದ ಹೊರ ಬರುವುದು ಅಪಾಯಕಾರಿ ಸನ್ನಿವೇಶದಲ್ಲಿ ಸಿಕ್ಕಿಹಾಕಿಕೊಳ್ಳುವ ಸಂದರ್ಭ ಬಂದೊದಗಬಹುದು ಎಂದು ವಿಪತ್ತು ನಿರ್ವಹಣಾ ಏಜೆನ್ಸಿ ಎಚ್ಚರಿಕೆ ನೀಡಿದೆ.