ಅಂದು ನಾವು ಪಾಠ ಕೇಳಲು ಬೇಸರವಾದಾಗ ಬರೆದ ನಮ್ಮದೇ ಹೆಸರು, ಕಿಡಿಗೇಡಿತನದಿಂದ ಯಾವುದೋ ಹುಡುಗನ ಹೆಸರೊಂದಿಗೆ ಇನ್ನಾವುದೋ ಹುಡುಗಿಯ ಹೆಸರನ್ನು ಸೇರಿಸಿ ಬರೆದು, ಅವರು ಬಂದೊಡನೆ ಗೊಳ್ ಎಂದು ನಗುತ್ತಿದ್ದುದು… ಇದೆಲ್ಲವೂ ಅಲ್ಲಿ ದಾಖಲಾಗಿತ್ತು!
ಇತ್ತೀಚಿಗೆ ನಾನು ಓದಿದ ಕಾಲೇಜಿಗೆ ಭೇಟಿ ನೀಡಬೇಕಾದ ಪ್ರಸಂಗ ಎದುರಾಯಿತು. ಸುಮಾರು ಮೂರು ವರುಷಗಳ ಕಾಲ ನಾನು ಓದಿದ, ಹರಟೆ ಹೊಡೆದ ಕಾಲೇಜದು. ಮುಂಭಾಗದ ಪಾರ್ಕ್‌ನಲ್ಲಿನ ಹಸಿರು ಹುಲ್ಲಿನ ನಡುವಿನ ಕಲ್ಲುಚಪ್ಪಡಿಯ ಹಾದಿಯೊಳಗಿಂದ ಕಾಲೇಜಿನ ಒಳಹೊಕ್ಕು, ಕಾರಿಡಾರ್‌ನಲ್ಲಿ ನಡೆಯುತ್ತಾ ಹೋದಂತೆ ಅಲ್ಲಿಯೇ ಖಾಲಿ ಇದ್ದ ಕ್ಲಾಸೊಂದು ಕಣ್ಣಿಗೆ ಬಿತ್ತು. ಒಳ ಹೋಗಿ ಅಲ್ಲೇ ಹಿಂದಿನ ಬೆಂಚೊಂದರಲ್ಲಿ ಕುಳಿತೆ. ಆ ಬೆಂಚಿನ ಮೇಲೆ ಬರೆದಿದ್ದ ಲೆಕ್ಕವಿಲ್ಲದಷ್ಟು ಕೈ ಬರಹಗಳ ನಡುವೆ ನಾನು “ಅಂದು’ ಬರೆದಿದ್ದ ನನ್ನದೇ ಹೆಸರನ್ನು ಹುಡುಕತೊಡಗಿದೆ.
ನಮ್ಮ ಕಾಲೇಜು ಕಟ್ಟಡ ತುಂಬಾ ಹಳೆಯದು. ಅದೇ ಬೆಂಚು ಕುರ್ಚಿಗಳು. ನೂರಾರು ವರುಷಗಳಿಂದ ಆ ನಾಲ್ಕು ಗೋಡೆಗಳ ನಡುವಲ್ಲಿ ನಡೆಯುವ ಅಧ್ಯಯನ, ಪ್ರೀತಿ, ಸ್ನೇಹ, ಕೋಪ, ತಾಪ, ವಾಗ್ಯುದ್ಧಗಳನ್ನು ಕೇಳಿಕೊಳ್ಳುತ್ತಾ ಭಾವನೆಗಳನ್ನು ವ್ಯಕ್ತಪಡಿಸಲಾಗದೆ ನಿಂತಿರುವ ಅದದೇ ಬೆಂಚು ಕುರ್ಚಿಗಳು!
ಅಲ್ಲಿನ ಪೀಠೊಪಕರಣಗಳು ನೋಡಲು ಹಳತರಂತೆ ಕಂಡರೂ ಅವುಗಳ ದೃಢತೆ ಅಚ್ಚರಿ ಮೂಡಿಸಿತು. ಅದಕ್ಕಿಂತ ಹೆಚ್ಚಾಗಿ ಅವುಗಳ ಮೇಲೆ ಕೊಂಚವೂ ಜಾಗವಿಲ್ಲದಂತೆ ರಚಿತವಾಗಿರುವ ಹಸ್ತಾಕ್ಷರಗಳು! “ರವಿ ಲವ್ಸ್ ಕಾವ್ಯ, ನಿನ್ನ ಹೆಜ್ಜೆಗೆ ನನ್ನ ನೆನಪು, ಮನಸಿನ ಮಾತು ಕೇಳುತ್ತಿಲ್ಲವೆ ಚೆಲುವೆ?, Sin²Θ + Cos²Θ = 1, ಕಾಣದ ಕಡಲಿಗೆ ಹಂಬಲಿಸಿದೆ ಮನ, ಕ್ರೇಜಿ ಸ್ಟಾರ್ ರವಿಚಂದ್ರನ್, ಕನಸಿನ ರಾಣಿ ಮಾಲಾಶ್ರೀ, ನಾನು ನಾನೇ, ನುಡಿದರೆ ಮುತ್ತಿನ ಹಾರದಂತಿರಬೇಕು…’ ಇಂಥ ಅನೇಕ ಬರಹಗಳು ನನ್ನನ್ನು ಆ ಕಾಲಕ್ಕೇ ಕೊಂಡೊಯ್ದವು. ಮಹಾನ್ ವ್ಯಕ್ತಿಗಳ ನುಡಿಗಳು, ವಿದ್ಯಾರ್ಥಿಗಳ ಹೆಸರುಗಳು, ಅವರ ಪ್ರೇಯಸಿಯರ ನಾಮಧೇಯಗಳು, ಹೃದಯಾಕಾರದ ಚಿತ್ರದೊಳಗೆ ಮಿನುಗುವ ಪ್ರೇಮಿಗಳ ಹೆಸರು, ಮೇಷ್ಟ್ರುಗಳಿಗಿಟ್ಟಿರುವ ಅಡ್ಡ ಹೆಸರುಗಳು, ಪರೀಕ್ಷೆಯ ಉತ್ತರಗಳು, ದೇವರ ಹೆಸರು, ಸಿನಿಮಾ ಹೀರೋ- ಹೀರೋಯಿನ್‌ಗಳ ಬಿರುದುಗಳು… ಅಂದು ನಾವು ಪಾಠ ಕೇಳಲು ಬೇಸರವಾದಾಗ ಬರೆದ ನಮ್ಮದೇ ಹೆಸರು, ಕಿಡಿಗೇಡಿತನದಿಂದ ಯಾವುದೋ ಹುಡುಗನ ಹೆಸರೊಂದಿಗೆ ಇನ್ನಾವುದೋ ಹುಡುಗಿಯ ಹೆಸರನ್ನು ಸೇರಿಸಿ ಬರೆದು, ಅವರು ಬಂದೊಡನೆ ಗೊಳ್ ಎಂದು ನಗುತ್ತಿದ್ದುದು… ಹೀಗೆ ಎಲ್ಲವೂ ಅಲ್ಲಿ ಲಿಖೀತ ರೂಪದಲ್ಲಿ ಅಲ್ಲಿ ದಾಖಲಾಗಿತ್ತು. ಆಗ ಡೆಸ್ಕಾಗಳಿಗಾಗಿ ನಮ್ಮ ನಡುವೆಯೇ ಜಗಳಗಳು ನಡೆಯುತ್ತಿದ್ದವು. ಕೆಲವರಂತೂ ವರ್ಷವಿಡೀ ತಮ್ಮ ಕಾಯಂ ಜಾಗಕ್ಕಾಗಿ ಹೊಡೆದಾಡುತ್ತಲೇ ಇದ್ದರು.
ಆಗಾಗ ಹುಡುಗರು ತಮ್ಮ ಸಹಪಾಠಿ ಹುಡುಗಿಯರಿಗೆ “ನೋಡಮ್ಮಾ, ಮುಂದೆ ನಿನ್ನ ಮಗುವಿಗೆ ಹೆಸರಿಡಲು ಕನ್‌ಫ್ಯೂಸ್ ಆದರೆ ಸೀದಾ ಇಲ್ಲಿಗೆ ಬಂದು ಈ ಬೆಂಚ್‌ಗಳನ್ನು ನೋಡು. ಹತ್ತು ನಿಮಿಷದಲ್ಲಿ ಬೆಸ್ಟ್ ಎನ್ನಿಸುವಂಥ ಹತ್ತು ಹೆಸರು ಸಿಗುತ್ತೆ, ಡೋಂಟ್ ವರಿ’ ಎಂದು ರೇಗಿಸುತ್ತಿದ್ದರು.
ಆಗಿನ ಕಾಲೇಜು ದಿನಗಳು, ತುಂಟಾಟ, ಹುಡುಗಾಟ, ಕಾಲೇಜು ಕ್ಯಾಂಪಸ್‌ನಲ್ಲಿ ಮಾಡಿದ ಮೋಜು, ಗೆಳೆಯನ ಪ್ರೀತಿಗೆ ನೆರವಾಗಿದ್ದು, ಗೆಳತಿಗೆ ಪ್ರೀತಿಯ ನಿವೇದನೆ ಮಾಡಿದ್ದು, ಪ್ರೀತಿಯ ನಿವೇದನೆಗೆ ತರಗತಿಯ ಡೆಸ್ಕ್ ಮೇಲೆ ಬರೆದ ಪ್ರೀತಿಯ ಸಾಲುಗಳು ನೆನಪಾಗತೊಡಗಿದವು. ಅನೇಕ ಘಟನೆಗಳಿಗೆ ಸಾಕ್ಷಿಯಾಗಿತ್ತು ನನ್ನ ಕಾಲೇಜು ಜೀವನ.
ಹೀಗೆ, ಹಳೆಯ ನೆನಪುಗಳು ಮನಸ್ಸಿಗೆ ಬಂದು ಅಪ್ಪಳಿಸುತ್ತಿದ್ದ ಹೊತ್ತಿನಲ್ಲಿ ದನಿಯೊಂದು ಕೇಳಿತು- “ಸಾರ್, ಕಸಾ ಹೊಡಿಬೇಕು. ಸ್ವಲ್ಪ$ ಆಚೆಗೋಗಿ’. ತಕ್ಷಣ ವಾಸ್ತವಕ್ಕೆ ಬಂದು, ಮತ್ತೂಮ್ಮೆ ಬರುವೆನೆಂದು ಮನಸ್ಸಿನಲ್ಲೇ ಬೆಂಚಿಗೆ, ಕಾಲೇಜಿಗೆ ವಿದಾಯ ಹೇಳುತ್ತಾ ಹೊರನಡೆದೆ.
ಲಕ್ಷ್ಮೀಕಾಂತ್ ಎಲ್.ವಿ.