ರಾಯಚೂರು: ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸಲು ಅಂಗವಿಕಲರು, ಮಂಗಳಮುಖಿಯರು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಜಿಲ್ಲಾಡಳಿತ ಗುರುವಾರ ಸಂಜೆ ನಗರದಲ್ಲಿ ಮೊಂಬತ್ತಿ ಬೆಳಗಿಸಿ ಜಾಗೃತಿ ಮೆರವಣಿಗೆ ನಡೆಸಿತು.
ನಗರದ ಮಹಾತ್ಮ ಗಾಂಧಿ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದವರೆಗೆ ಅಂಗವಿಕಲರು, ಮಂಗಳಮುಖಿಯರು, ಸಾರ್ವಜನಿಕರು ಮೊಂಬತ್ತಿ ಹಿಡಿದುಕೊಂಡು ಜಾಥಾ ನಡೆಸಿದರು. ಜಿಪಂ ಸಿಇಒ ಅಭಿರಾಂ ಜಿ. ಶಂಕರ್ ಜಾಥಾಕ್ಕೆ
ಚಾಲನೆ ನೀಡಿ ಮಾತನಾಡಿ, ಚುನಾವಣೆ ವೇಳೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಮ್ಮ ಸಂವಿಧಾನ ಮತದಾನದ ಹಕ್ಕನ್ನು ನೀಡಿದೆ. ಮೇ 12ರಂದು ನಡೆಯುವ ಚುನಾವಣೆಯಲ್ಲಿ ಈ ಹಕ್ಕನ್ನು ನಿರ್ಭೀತಿಯಿಂದ ಚಲಾಯಿಸಬೇಕು ಎಂದು ಕರೆ ನೀಡಿದರು.
ಶೇ.100ರಷ್ಟು ಮತದಾನವಾದರೆ, ಅದು ನಿಜಕ್ಕೂ ಪ್ರಜಾಪ್ರಭುತ್ವದ ಗೆಲುವಿದ್ದಂತೆ. ಹೀಗಾಗಿ ತಮ್ಮ ನೆರೆ ಹೊರೆಯವರನ್ನು ಮತದಾನಕ್ಕೆ ಪ್ರೇರೇಪಿಸಿ, ಅವರನ್ನೂ ಮತಗಟ್ಟೆಗಳತ್ತ ಧಾವಿಸುವಂತೆ ಮಾಡಬೇಕು. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ, ನಿರ್ಭೀತಿಯಿಂದ ನೈತಿಕವಾಗಿ ತಪ್ಪದೆ ಮತದಾನ ಮಾಡಬೇಕು ಎಂದರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ, ಸಿಡಿಪಿಒ ವೀರನಗೌಡ, ಗೋಪಾಲ ನಾಯ್ಕ, ಶ್ರೀದೇವಿ, ಮಂಗಳಮುಖಿಯರು, ಅಂಗವಿಲಕರು ಸೇರಿ ಇತರರು ಪಾಲ್ಗೊಂಡಿದ್ದರು.
ವಸತಿ ನಿಲಯ ಬಾಲಕರಿಗೆ ಮತದಾನ ಜಾಗೃತಿ
ರಾಯಚೂರು: ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡಲು ಪ್ರೇರೇಪಿಸುವ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡ ಇಲಾಖೆಯಿಂದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಬಾಲಕರಿಗೆ ಜಾಗೃತಿ ಮೂಡಿಸಲಾಯಿತು.
ಏ.8ರಂದು ಮತದಾರರ ಮಿಂಚಿನ ನೋಂದಣಿ ಅಭಿಯಾನದ ಕುರಿತು ಜಾಗೃತಿ ಮೂಡಿಸಿದ ಅಧಿಕಾರಿಗಳು, ಮತದಾನ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಟ್ರೈಬಲ್ ವೆಲ್ಫೆಧೀರ್ ಅಧಿಕಾರಿ ರಾಜೇಂದ್ರ ಜಲದಾರ್, ತಾಲೂಕು ಟ್ರೈಬಲ್ ವೆಲ್ಫೆಧೀರ್ ಅಧಿಕಾರಿ ಯಲ್ಲಪ್ಪ ಸಾಲಿಬೆಂಚಿ, ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಎಂ.ಎಸ್. ಗೋನಾಲ ಸೇರಿ ಇತರರಿದ್ದರು.