Advertisement

ಪಂಚಮಸಾಲಿ ಶ್ರೀ ಬಗ್ಗೆ ಹಗುರ ಮಾತು: ಸಭೆಗೆ ತಡೆಯೊಡ್ಡಿ ಪ್ರತಿಭಟನೆ

12:42 PM Oct 15, 2022 | Team Udayavani |

ಹುಬ್ಬಳ್ಳಿ: ಪಂಚಮಸಾಲಿ ಸಮಾಜ ಹಾಗೂ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ ಎಂದು ಪಂಚಮಸಾಲಿ ಸಮಾಜದ ಮುಖಂಡರು ಕಾಯಕ ಸಮಾಜಗಳ ಚಿಂತನ ಮಂಥನ ಸಭೆಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.

Advertisement

ಇಲ್ಲಿನ ಜೆ.ಸಿ.ನಗರದ ಅಕ್ಕನಬಳಗ ಸಭಾಂಗಣದ ಮುಂದೆ ಪ್ರತಿಭಟನೆ ನಡೆಸಿ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ತು ಮಾಜಿ ಸದಸ್ಯ ಪುಟ್ಟಸಿದ್ದಶೆಟ್ಟಿ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಅವರನ್ನು ಕರೆಯಿಸಿ ಸಮಾಜದ ಹಾಗೂ ಶ್ರೀಗಳಲ್ಲಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಪುಟ್ಟಸಿದ್ದಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎಂದು ಒಕ್ಕೂಟದ ಹಿರಿಯರು ಪ್ರತಿಭಟನಾಕಾರರಿಗೆ ತಿಳಿಸಿ ಅವರ ಪರವಾಗಿ ಕ್ಷಮೆ ಕೇಳುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ಪ್ರಮುಖರಿಬ್ಬರಿಗೆ ಅವಕಾಶ ನೀಡಬೇಕು. ಕಾರ್ಯಕ್ರಮದಲ್ಲಿ ಸಮಾಜದ ವಿರುದ್ಧ ಮಾತನಾಡಬಾರದು ಎನ್ನುವ ಷರತ್ತಿನ ಮೇಲೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದರು.

ಇದರ ಮಧ್ಯೆ ಕಿಡಿಗೇಡಿಗಳು ಕಾರ್ಯಕ್ರಮದ ವೇದಿಕೆ ಮೇಲೆ ಹಾಕಿದ್ದ ಬ್ಯಾನರ್ ಹರಿದು ಕುರ್ಚಿಗಳನ್ನು ಚಲ್ಲಾಪಿಲ್ಲಿಯಾಗಿ ಬೀಸಾಡಿದ ಘಟನೆ ನಡೆಯಿತು. ಇಂತಹ ಅವಘಡ ನಡೆಯಬಹುದು ಎನ್ನುವ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಕ್ರಮಕ್ಕೆ ಹಾಗೂ ಸಭಾಂಗಣದ ಸುತ್ತಲಿನ ರಸ್ತೆಯಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು. ಇದರ ಮಧ್ಯೆಯೂ ಮಹಡಿ ಮೇಲಿನ ಸಭಾಂಗಣಕ್ಕೆ ನುಗ್ಗಿದ ಕಿಡಿಗೇಡಿಗಳು ಬ್ಯಾನರ್ ಹರಿದು ಹಾಕಿದ ಘಟನೆ ನಡೆಯಿತು. ಇದರಿಂದ ಒಕ್ಕೂಟದ ಪದಾಧಿಕಾರಿಗಳು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಕಾರ್ಯಕ್ರಮಕ್ಕೆ ರಕ್ಷಣೆ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆರಂಭಿಸಿದ ಘಟನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next