Advertisement

ಲೈಟ್‌ ರೂಫಿಂಗ್‌

06:00 AM Jul 16, 2018 | |

ಯಾವುದೇ ಮಾದರಿಯ ಸೂರಾಗಿರಲಿ, ಮಳೆನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಇಳಿಜಾರಿನ ವ್ಯವಸ್ಥೆ ಮಾಡಬೇಕಾಗುತ್ತದೆ. ಆರ್‌ಸಿಸಿ ಸೂರಾದರೆ ಅದರ ಮೇಲೆ ಹೆಚ್ಚುವರಿಯಾಗಿ ನೀರುನಿರೋಧಕ ಪದರವನ್ನು ಇಳಿಜಾರಿನೊಂದಿಗೆ ನೀಡಬೇಕು. ಆದರೆ ಲೈಟ್‌ ರೂಫ‌ುಗಳಿಗೆ ನೇರವಾಗಿ ಸೂಕ್ತ ಇಳಿಜಾರನ್ನು ನೀಡುವ ಮೂಲಕ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬಹುದು.

Advertisement

ಮನೆ ಕಟ್ಟಿದ್ದು ಆಗಿದೆ.  ಆಮೇಲೂ ಅದರ ಮೇಲೆ ಇನ್ನೊಂದು ಸೂರು ಬೇಕು ಅಂತ ಅನಿಸಿಬಿಡುವುದು  ಈಗ ಸಾಮಾನ್ಯವಾದ ಆಸೆಯಂತಾಗಿದೆ. ಹೀಗೆ ಸೂರನ್ನು ನಿರ್ಮಿಸಿದರೆ ಲಾಭವೂ ಉಂಟು. ಅದು ಏನಪ್ಪಾ ಅಂದರೆ, ಬಿಸಿಲು-ಮಳೆ ಹೆಚ್ಚಿರುವ ಸ್ಥಳಗಳಲ್ಲಿ ಹೆಚ್ಚುವರಿ ಶಾಖ ಹಾಗೂ ನೀರುನಿರೋಧಕವಾಗಿರುತ್ತದೆ, ಈ ಸೂರು.  ಮನೆಯಲ್ಲಿ ನಡೆವ ವಿಶೇಷ ಸಮಾರಂಭ, ಹಬ್ಬ ಹರಿದಿನಗಳಿಗೆ ಈ ಸ್ಥಳವನ್ನು ಧಾರಾಳವಾಗಿ ಉಪಯೋಗಿಸಬಹು. ಈ ಹೆಚ್ಚವರಿ ಸೂರು ನಿರ್ಮಿಸುವಾಗ ಮಾಮೂಲಿ ದಪ್ಪ ಹಲಗೆಯ ಆರ್‌ಸಿಸಿ ಬೇಕೆಂದೇನೂ ಇಲ್ಲ. ಹಗುರ ಸೂರಿಗೆ ಮಂಗಳೂರು ಟೈಲ್ಸ್‌ ಇಲ್ಲವೇ ಈಗ ಲಭ್ಯವಿರುವ ವಿವಿಧ ಬಣ್ಣದ ಅಲ್ಯೂಮಿನಿಯಮ್‌ ಅಥವಾ ಝಿಂಕ್‌ ಶೀಟನ್ನೂ  ಕೂಡ ಉಪಯೋಗಿಸಬಹುದು.

ಸೂರಿಗೆ ಆಧಾರ
ಆರ್‌ಸಿಸಿ ಕಾಲಂಗಳಿವೆ ಅನ್ನಿ. ಆಗ ಅತಿ ಸುಲಭವಾಗಿ ಇವನ್ನೇ ಮೇಲಕ್ಕೆ ಎತ್ತರಿಸಿ, ಸೂರಿನ ಮಟ್ಟಕ್ಕೆ ಇಳಿಜಾರಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಅಳವಡಿಸಿ,  ಹಗುರ ಸೂರನ್ನು ಹಾಕಬಹುದು. ಸೂರಿಗೆ ತಕ್ಕಂತೆ ತೆಳ್ಳನೆ ಆಧಾರ ಬೇಕೆಂದಿದ್ದಲ್ಲಿ ಉಕ್ಕಿನ ಪೈಪ್‌ ಬಾಕ್ಸ್‌ ಸೆಕ್ಷನ್‌ಗಳನ್ನು ಇದೇ ಆರ್‌ಸಿಸಿ ಕಂಬದ ಕಂಬಿಗೆ ವೆಲ್ಡ್‌ ಮಾಡಿ, ಮೇಲಕ್ಕೆ ಎತ್ತರಿಸಿಕೊಳ್ಳಬಹುದು. ಸಾಮಾನ್ಯವಾಗಿ ಆರ್‌ಸಿಸಿ ಕಾಲಂಗಳಲ್ಲಿ ಮುಂದೆ ಮೇಲಕ್ಕೆ ಕಟ್ಟಲು ಸಹಕಾರಿಯಾಗಿರಲಿ ಎಂದು ಕಂಬಿಗಳನ್ನು ಒಂದು ಇಲ್ಲವೇ ಎರಡು ಅಡಿಗಳಷ್ಟು ಉದ್ದದವನ್ನು ಕಾಂಕ್ರಿಟ್‌ ಹಾಕದೇನೇ ಉಳಿಸಲಾಗಿರುತ್ತವೆ. 

ಈ ಕಂಬಿಗಳನ್ನು ನಮ್ಮ ಪೈಪ್‌ ಇಲ್ಲವೇ ಬಾಕ್ಸ್‌ ಸೆಕ್ಷನ್‌ಗೆ ಹೊಂದಿಕೊಳ್ಳುವಂತೆ ಬಗ್ಗಿಸಿ, ವೆಲ್ಡ್‌ ಮಾಡಿ ಆಧಾರವಾಗಿ ಪಡೆಯಬಹುದು.
ಸೂರಿನಲ್ಲಿ ಪ್ಯಾರಪೆಟ್‌ ಮಟ್ಟಕ್ಕೆ ಆರ್‌ಸಿಸಿ ಕಾಲಂ ಇದ್ದರೂ ಅದರ ಕಂಬಿಗಳು ಮೇಲಕ್ಕೆ ಕಾಣದಿದ್ದರೆ ( ಕೆಲವೊಮ್ಮೆ ಕಂಬಿ ತುಕ್ಕು ಹಿಡಿದು ಸೂರಿನ ಅಂದ ಕೆಡಿಸುತ್ತದೆ ಎಂದೂ ಕಾಂಕ್ರಿಟ್‌ ತುಂಬಲಾಗುತ್ತದೆ) ಕಂಬದ ಮೇಲು ಭಾಗದಲ್ಲಿ ಒಂದೆರಡು ಇಂಚು ಕಾಂಕ್ರಿಟ್‌ ಒಡೆದು, ಕಂಬಿ ಕಾಣುವಂತೆ ಮಾಡಬೇಕು. ನಂತರ ಇದರ ಮೇಲೆ ಕಡೇಪಕ್ಷ 10 ಎಮ್‌ಎಮ್‌ ದಪ್ಪದ ಸ್ಟೀಲ್‌ ಪ್ಲೇಟ್‌ ಅಳವಡಿಸಿ ವೆಲ್ಡ್‌ ಮಾಡಿ,  ಈ ಪ್ಲೇಟ್‌ ಅನ್ನು ಆಧಾರವಾಗಿ ಇಟ್ಟುಕೊಂಡು ಪೈಪ್‌ ಅಥವಾ ಬಾಕ್ಸ್‌ ಸೆಕ್ಷನ್‌ಗಳನ್ನು ವೆಲ್ಡ್‌ ಮಾಡಿ ಲೈಟ್‌ ರೂಫಿಂಗ್‌ಗೆ ಸಪೋರ್ಟ್‌  ಪಡೆಯಬಹುದು.

ಉಕ್ಕಿನ ಟ್ರಸ್‌ಗಳ ಅಳವಡಿಕೆ
ಮನೆಯ ಚಾವಣಿಯ ಉದ್ದ ಹಾಗೂ ಅಗಲದ ಆಧಾರದ ಮೇಲೆ ಯಾವ ರೀತಿಯ ಟ್ರಸ್‌ ಬೇಕಾಗುತ್ತದೆ ಎಂದು ನಿರ್ಧರಿಸಲಾಗುತ್ತದೆ. ಕೇವಲ ಹತ್ತು ಹನ್ನೆರಡು ಅಡಿ ಅಗಲದ ಚಾವಣಿ ಇದ್ದರೆ, ಐ ಸೆಕ್ಷನ್‌ ಗರ್ಡರ್‌ ಇಲ್ಲವೆ ಸಿ ಚಾನೆಲ್‌ ಸಾಕಾಗಬಹುದು. ಅದೇ ಮತ್ತೂ ಅಗಲ ಇದ್ದರೆ ಅನಿವಾರ್ಯವಾಗಿ ಟ್ರಸ್‌ಗಳ ಮೊರೆ ಹೋಗಬೇಕಾಗುತ್ತದೆ. ಸೂರಿನ ಮಧ್ಯೆ ಹೆಚ್ಚುವರಿ ಆಧಾರ ಕಲ್ಪಿಸಲು ತೊಂದರೆ ಇಲ್ಲದಿದ್ದರೆ ಅಂದರೆ ಚಾವಣಿಯ ಮಧ್ಯದಲ್ಲಿ ಪೈಪ್‌ಕಂಬಗಳು ಬರುವುದು ಪರವಾಗಿಲ್ಲ ಎಂದಾದರೆ, ಟ್ರಸ್‌ಗಳ ಗೋಜಿಲ್ಲದೆ, ಐ ಇಲ್ಲ ಸಿ ಚಾನೆಲ್‌ ಅಳವಡಿಸಿ ಲೈಟ್‌ ಸೂರನ್ನು ನಿರ್ಮಿಸಬಹುದು. 

Advertisement

 ಟ್ರಸ್‌ಗಳ ಲೆಕ್ಕಾಚಾರ
ಸೂರಿನ ಮೇಲೆ ಬರುವ ಭಾರ ಹಾಗೂ ಇತರೆ ಒತ್ತಡಗಳನ್ನು ಗಮನಿಸಿ ಸೂಕ್ತ ದಪ್ಪ ಹಾಗೂ ಉದ್ದದ ಟ್ರಸ್‌ ಅನ್ನು ನಿರ್ಧರಿಸಲಾಗುತ್ತದೆ. ಮಂಗಳೂರು ಹೆಂಚು ಸಾಕಷ್ಟು ಭಾರ ಇದ್ದರೆ, ಅಲ್ಯುಮಿನಿಯಂ ಸೂರು ಅತಿ ಕಡಿಮೆ ಭಾರದಿಂದ ಕೂಡಿರುತ್ತದೆ. ಜೊತೆಗೆ ಮಳೆಯ ರಭಸ ಹಾಗೂ ಗಾಳಿ ಬೀಸಿದಾಗ ಉಂಟಾಗುವ ಒತ್ತಡವನ್ನೂ ಪರಿಗಣಿಸಿ ಟ್ರಸ್‌ಗಳ ಬಲಾಬಲವನ್ನು ನಿರ್ಧರಿಸಬೇಕಾಗುತ್ತದೆ. ಕೆಲವೊಮ್ಮೆ ಗಾಳಿ ಸೂರಿನ ಮೇಲೆ ಭಾರ ಹೊರಿಸುವುದೇ ಅಲ್ಲದೆ, ಲೈಟ್‌ ಸೂರನ್ನು ಗಾಳಿಪಟದಂತೆ ತೇಲಿಸಿಕೊಂಡು ಹೋಗಲೂಬಹುದು. ಇದಕ್ಕಾಗಿ ಟ್ರಸ್‌ಗಳನ್ನು ಕಂಬಗಳಿಗೆ ಸೂಕ್ತ ಬೋಲ್ಟ್ ನಟ್‌ಗಳ ಸಹಾಯದಿಂದ ಬಿಗಿಗೊಳಿಸುವುದರ ಜೊತೆಗೆ ಪೈಪ್‌ ಕಾಲಂಗಳನ್ನೂ ಸೂರಿಗೆ ಸೂಕ್ತ ರೀತಿಯಲ್ಲಿ ವೆಲ್ಡ್‌ ಮಾಡಿ ಗಟ್ಟಿಗೊಳಿಸಿರಬೇಕಾಗುತ್ತದೆ. ಇದಕ್ಕೆ ನುರಿತ ಆರ್ಕಿಟೆಕ್ಟ್ ಎಂಜಿನಿಯರ್‌ಗಳ ಸಲಹೆ ಪಡೆಯುವುದು ಉತ್ತಮ. 

ಇಳಿಜಾರಿನ ಲೆಕ್ಕಾಚಾರ
ಯಾವುದೇ ಮಾದರಿಯ ಸೂರಾಗಿರಲಿ, ಮಳೆನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಇಳಿಜಾರಿನ ವ್ಯವಸ್ಥೆ ಮಾಡಬೇಕಾಗುತ್ತದೆ. ಆರ್‌ಸಿಸಿ ಸೂರಾದರೆ ಅದರ ಮೇಲೆ ಹೆಚ್ಚುವರಿಯಾಗಿ ನೀರುನಿರೋಧಕ ಪದರವನ್ನು ಇಳಿಜಾರಿನೊಂದಿಗೆ ನೀಡಬೇಕು. ಆದರೆ ಲೈಟ್‌ ರೂಫ‌ುಗಳಿಗೆ ನೇರವಾಗಿ ಸೂಕ್ತ ಇಳಿಜಾರನ್ನು ನೀಡುವ ಮೂಲಕ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬಹುದು. ಮಂಗಳೂರು ಹೆಂಚಿಗೆ ಹೆಚ್ಚು ಇಳಿಜಾರು ನೀಡಬೇಕಾಗುತ್ತದೆ. ಅದರ ಬಿಲ್ಲೆಗಳ ಮಧ್ಯೆ ಸಣ್ಣ ಸಣ್ಣ ಸಂದಿಗಳು ಉಳಿಯುವುದರಿಂದ ನೀರು ಸರಾಗವಾಗಿ ಹೊರಮೈಮೇಲೆಯೇ ಹರಿಯುವಂತೆ ಹಾಗೂ ಒಳಗೆ ನುಸುಳದಂತೆ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಹತ್ತು ಅಡಿ ಅಗಲದ ಸೂರಿಗೆ ಮೂರರಿಂದ ಐದು ಅಡಿಗಳವರೆಗೆ ಎತ್ತರಿಸಿ ಇಳಿಜಾರು ನೀಡಬೇಕು. 

ಅಲ್ಯುಮಿನಿಯಂ ಇಲ್ಲವೇ ಪಾಲಿ ಕಾಬೊìನೇಟ್‌ನಿಂದ ನಿರ್ಮಿಸಿದ ಸೂರಿಗೆ ಹೆಚ್ಚು ಇಳಿಜಾರು ಬೇಕಾಗುವುದಿಲ್ಲ. ಸಾಮಾನ್ಯವಾಗಿ ಹತ್ತು ಅಡಿಗೆ ಮೂರು ಅಡಿ ಇರುವ ಈ ಶೀಟುಗಳಲ್ಲಿ ಜಾಯಿಂಟ್ಸ್‌ ಕಡಿಮೆ ಇರುತ್ತದೆ.  ಹೆಚ್ಚು ನೀರುನಿರೋಧಕ ಗುಣ ಹೊಂದಿರುತ್ತವೆ. ಆದುದರಿಂದ ಹತ್ತು ಅಡಿಗೆ ಎರಡು ಅಡಿ ಇಳಿಜಾರು ಇಟ್ಟರೂ ಸಾಲುತ್ತದೆ. ಸೂರಿನ ಇಳಿಜಾರು ಎರಡೂ ಕಡೆಗಿದ್ದರೆ, ಮಧ್ಯ ಭಾಗದಲ್ಲಿ ರಿಡ್ಜ್- ಮೇಲು ಕೋನವನ್ನು, ಸೂಕ್ತ ಶೀಟುಗಳನ್ನು ಹಾಕಿ ಮುಚ್ಚಬೇಕಾಗುತ್ತದೆ. ಹಾಗೆಯೇ, ಮಳೆ ನೀರು ನೇರವಾಗಿ ಕೆಳಗೆ ಬೀಳಬಾರದು ಎಂದಿದ್ದರೆ ಸೂಕ್ತ ದೋಣಿ ವ್ಯವಸ್ಥೆಯನ್ನೂ ಮಾಡಬೇಕಾಗುತ್ತದೆ.

ಲೈಟ್‌ ಸೂರಿನ ಅಂದ ಚಂದ
ಮನೆಯ ಮೇಲೆ ಏನನ್ನೇ ಎತ್ತರಿಸಿ ಕಟ್ಟಿದರೂ ಅದು ಕಣ್ಣಿಗೆ ಹೆಚ್ಚು ಕಾಣುವಂತೆ ಆಗುತ್ತದೆ. ಆದುದರಿಂದ ಸೂರಿನ ಮೇಲೆ ಮತ್ತೂಂದು ಸೂರನ್ನು ಮಾಡುವಾಗ ಅದರ ಕಲಾತ್ಮಕತೆಯತ್ತಲೂ ಗಮನ ಹರಿಸಬೇಕಾಗುತ್ತದೆ. ಮಂಗಳೂರು ಹೆಂಚಿನ ಸೂರಿಗೆ ಈ ಹಿಂದೆ ಬಂಗಲೆಗಳಿಗೆ ಮಾಡುತ್ತಿದ್ದ ರೀತಿಯ ಎಲಿವೇಷನ್‌ ಡಿಟೆಲ್ಸ್‌ ಗಳನ್ನು ಅಳವಡಿಸಬಹುದು. ಶೀಟ್‌ ಸೂರುಗಳಿಗೆ ಉಕ್ಕಿನ ಬಾಕ್ಸ್‌ ಸೆಕ್ಷನ್‌ ಗಳನ್ನು ಅಳವಡಿಸಿ ಸುಂದರವಾಗಿ ಕಾಣುವುದರ ಜೊತೆಗೆ ಕಳ್ಳಕಾಕರು ಒಳಬಾರದಂತೆಯೂ ಗ್ರಿಲ್‌ ಮಾದರಿಯಲ್ಲಿ ಮಾಡಬಹುದು. ಉಕ್ಕಿನ ಶೀಟುಗಳನ್ನು ಕಲಾತ್ಮಕವಾಗಿ ಕಂಪ್ಯೂಟರ್‌ ಕಂಟ್ರೋಲ್ಡ್‌ ಮೆಶಿನ್‌ಗಳಿಂದ ಕತ್ತರಿಸಿ, ಸೂಕ್ತ ರೀತಿಯಲ್ಲಿ ಅಳವಡಿಸಿಯೂ ಲೈಟ್‌ ಸೂರನ್ನು ಸುಂದರಗೊಳಿಸಬಹುದು. 

 ದೋಣಿ-ಗಟರ್‌ ಅಳವಡಿಕೆ
ಸೂರಿಗೆ ಸೂಕ್ತ ಇಳಿಜಾರು ನೀಡುವಂತೆಯೇ ದೋಣಿಗಳಿಗೂ ನೀಡಬೇಕು. ಸಾಮಾನ್ಯವಾಗಿ ಹತ್ತು ಅಡಿ ಉದ್ದಕ್ಕೆ ಎರಡು ಇಂಚು ಇಳಿಜಾರು ಅಂದರೆ ಒಂದಕ್ಕೆ ಅರವತ್ತರ ಅನುಪಾತದಂತೆ ನೀಡಿದರೆ ನೀರು ಸರಾಗವಾಗಿ ಹರಿದುಹೋಗುತ್ತದೆ. ಈ ಗಟರ್‌ಗಳಲ್ಲಿ ಶೇಖರಣೆಯಾಗಿ ಹರಿಯುವ  ನೀರು  ನಮಗೆ ಅನುಕೂಲಕರ ಸ್ಥಳಗಳಲ್ಲಿ ಕೆಳಗೆ ಹರಿದು ಹೋಗುವಂತೆ ಮಾಡಲು ಸೂಕ್ತ ಗಾತ್ರದ ಪೈಪ್‌ಗ್ಳನ್ನು ಅಳವಡಿಸಬೇಕು. ಮಳೆಯ ಸರಾಸರಿ ಲೆಕ್ಕವನ್ನು ಆಧರಿಸಿ, ಸಾಮಾನ್ಯವಾಗಿ ನಾಲ್ಕರಿಂದ ಆರು ಚದುರ ಅಡಿಗಳಷ್ಟು ವಿಸ್ತಾರದ ಸೂರಿನ ಸ್ಥಳದಲ್ಲಿ  ಬೀಳುವ ಮಳೆಯ ಹೊರೆಯನ್ನು, ಒಂದು ನಾಲ್ಕು ಇಂಚಿನ ಪೈಪ್‌ ನಿಭಾಯಿಸುವ ರೀತಿಯಲ್ಲಿ ಅಳವಡಿಸಲಾಗುತ್ತದೆ. 

ಹೆಚ್ಚಿನ ಮಾಹಿತಿಗೆ-98441 32826

ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next