ಹಾವೇರಿ: ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಜನತೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಹೊಸ ಬಟ್ಟೆ, ಹಬ್ಬದ ಪೂಜೆಗಾಗಿ ಖರೀದಿ ಜೋರಾಗಿದ್ದು, ಜಿಲ್ಲಾದ್ಯಂತ ಹಬ್ಬದ ಸಂಭ್ರಮ ಕಂಡುಬಂದಿತು. ಹಬ್ಬದ ಮೆರಗು ನೀಡಲು ಬಗೆಬಗೆಯ ಆಕಾಶ ಬುಟ್ಟಿಗಳ ಖರೀದಿ ಜೋರಾಗಿದ್ದು, ಸಾಂಪ್ರದಾಯಿಕ ಮಣ್ಣಿನ ಹಣತೆಗೂ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ.
ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ವಿಶಿಷ್ಟ ಆಕಾರದ ಆಕಾಶಬುಟ್ಟಿಗಳ ಸಾಲುಗಳು ಪ್ರಮುಖ ಆಕರ್ಷಣೆಯಾಗಿವೆ. ವೈವಿಧ್ಯಮಯ ಆಕಾಶ ಬುಟ್ಟಿಗಳನ್ನು ಖರೀದಿಸುವ ಭರಾಟೆ ಜೋರಾಗಿ ಸಾಗಿದೆ. ಹಬ್ಬದ ಖುಷಿಗಾಗಿ ಮನೆ ಮಂದಿಗೆಲ್ಲ ಹೊಸ ಬಟ್ಟೆ ಖರೀದಿಯೂ ಜೋರಾಗಿ ನಡೆದಿದೆ. ಅಲ್ಲದೇ ಜಾನುವಾರುಗಳಿಗೆ ಅಲಂಕಾರದ ಸಾಮಗ್ರಿಗಳನ್ನು ಖರೀದಿ ಮಾಡಲಾಗುತ್ತಿದೆ.
ಮೂಗುದಾರ, ಝೂಲ, ಕೊಂಬೆಣಸು, ಹಗ್ಗ, ಹಣೆಕಟ್ಟು, ಗೆಜ್ಜೆಸರ, ಕೊಂಬಿಗೆ ಹಚ್ಚಲು ಬಗೆಬಗೆಯ ಬಣ್ಣ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ. ಹಬ್ಬಕ್ಕೆ ಸಿದ್ಧತೆ: ಬುಧವಾರದಿಂದಲೇ ದೀಪಾವಳಿ ಹಬ್ಬ ಶುರುವಾಗಿದ್ದು ಮಾಡಿ ಮನೆಮಂದಿಯೆಲ್ಲ ಹಬ್ಬದ ಸಂಭ್ರಮದಲ್ಲಿದ್ದಾರೆ. ಗುರುವಾರ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಭರದ ಸಿದ್ಧತೆ ನಡೆದಿದೆ. ಶುಕ್ರವಾರ ಪಾಡ್ಯ ಸೇರಿದಂತೆ ಮೂರು ದಿನಗಳ ಹಬ್ಬ ಆಚರಣೆಗಾಗಿ ಜನ ಸಿದ್ಧತೆ ನಡೆಸಿದ್ದಾರೆ. ಹೂವು, ಹಣ್ಣು, ದಿನಸಿ ಖರೀದಿಗೆ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಖರೀದಿಗಾಗಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಿದೆ.
ಬೆಲೆ ಏರಿಕೆ: ದೀಪಾವಳಿ ಹಬ್ಬದ ಹಿನ್ನೆಲೆ ಗ್ರಾಮೀಣ ಭಾಗದ ಜನರು ವಿವಿಧ ಸಾಮಗ್ರಿ, ಹೂವು, ಹಣ್ಣು ಖರೀದಿಗೆ ಆಗಮಿಸಿದ್ದರಿಂದ ನಗರದ ಮಾರುಕಟ್ಟೆ ಜನಜಂಗುಳಿಯಿಂದ ತುಂಬಿತ್ತು. ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಸಿಮುಟ್ಟಿಸಿದೆ. ಸೇಬುಹಣ್ಣು 1 ಕೆಜಿಗೆ 120-150 ರೂ., ದ್ರಾಕ್ಷಿ ಕೆಜಿಗೆ 200 ರೂ., ದಾಳಿಂಬೆ ಕೆಜಿಗೆ 150 ರೂ., ಮೋಸಂಬಿ ಕೆಜಿಗೆ 80 ರೂ., ಕಿತ್ತಲೆ ಕೆಜಿಗೆ 60 ರೂ., ಬಾಳೆಹಣ್ಣು ಒಂದು ಡಜನ್‌ಗೆ 35-40 ರೂ., ಲಕ್ಷ್ಮಣಫಲ ಕೆಜಿಗೆ 120 ರೂ., ದರ ನಿಗದಿ ಮಾಡಲಾಗಿತ್ತು. ಇನ್ನು ಹೂವಿನ ದರ ಗಗನಮುಖೀಯಾಗಿದ್ದು, ಸೇವಂತಿ, ಕಾಕಡ, ಮಲ್ಲಿಗೆ, ಕನಕಾಂಬರ ಗುಲಾಬಿ, ದುಂಡು ಸೇವಂತಿ ಸೇರಿದಂತೆ ಹಲವು ಹೂಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಎರಡೂ¾ರು ಪಟ್ಟು ಹೆಚ್ಚಳವಾಗಿದೆ.
ಪೆಟೆಲ್ಸ್ ಗುಲಾಬಿ ಕೆಜಿಗೆ 350-400 ರೂ., ಸೇವಂತಿಗೆ ಕೆಜಿಗೆ 400 ರೂ., ಚಂಡು ಹೂ ಕೆಜಿಗೆ 100 ರೂ., ದುಂಡು ಸೇವಂತಿಗೆ ಕೆಜಿಗೆ 300 ರೂ., ಗುಲಾಬಿ ಒಂದು ಕಟ್ಟಿಗೆ 150 ರೂ., ಕಾಕಡಾ ಮಲ್ಲಿಗೆ ಒಂದು ಮಾರಿಗೆ 80 ರೂ., ಕನಕಾಂಬರ ಒಂದು ಮಾರಿಗೆ 120 ರೂ., ಸೇವಂತಿಗೆ ಒಂದು ಮಾರಿಗೆ 50-60 ರೂ., ಚಂಡು ಹೂ ಒಂದು ಮಾರಿಗೆ 30-50 ರೂ. ಹಾಗೂ ಸುಗಂಧ ಮಾಲೆ ಗಾತ್ರಕ್ಕೆ ಅನುಗುಣವಾಗಿ 30-250 ರೂ, ಒಂದು ಜೊತೆಗೆ ಬಾಳೆ ಕಂಬಕ್ಕೆ 30-40 ರೂ. ವರೆಗೆ ಮಾರಾಟ ಮಾಡಲಾಯಿತು. ಅಗಂಡಿ, ವಾಹನಗಳ ಪೂಜೆಗೆ ಹೂವಿನ ಅವಶ್ಯಕತೆ ಇರುವುದರಿಂದ ಸಹಜವಾಗಿ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ದುಪ್ಪಟ್ಟಾಗಿದೆ. ಗ್ರಾಹಕರು ವಿಧಿ ಇಲ್ಲದೇ ಚೌಕಾಸಿ ಮಾಡಿ ಅಗತ್ಯಕ್ಕೆ ತಕ್ಕಂತೆ ಹೂಗಳನ್ನು ಖರೀದಿಸುತ್ತಿದ್ದರು.