ನಂಜನಗೂಡು: ನಂಜನಗೂಡು ತಾಲೂಕಿನ ನಾಲ್ಕು ದಶಕಗಳ ಬೇಡಿಕೆ ಹಾಗೂ ಮಾಜಿ ಸಚಿವ ದಿ| ಎಂ.ಮಹದೇವು ಅವರ ಕನಸಾದ ನುಗು ಏತ ನೀರಾವರಿ ಯೋಜನೆಗೆ ತಾವು ಪ್ರಥಮ ಪ್ರಾಶಸ್ತ್ಯ ನೀಡಿ ಯೋಜನೆಯನ್ನು ಪೂರ್ಣಗೊಳಿಸಿ ಕೊಡುವುದಾಗಿ ಮಾಜಿ ಸಿಎಂ, ಬಿಜೆಪಿ ರಾಜಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಭರವಸೆ ನೀಡಿದರು.
ಸೋಮವಾರ ತಾಲೂಕಿನ ಹರದನಹಳ್ಳಿ, ಹುಲ್ಲಹಳ್ಳಿ, ಹಲ್ಲರೆ, ದುಗ್ಗಳ್ಳಿ, ಹುರಾ, ಹೇಡಿಯಾಲ ಗಳಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದರ ಪರವಾಗಿ ಮತಯಾಚಿಸಿ ಮಾತನಾಡಿದ ಯಡಿಯೂರಪ್ಪ, ಈ ಭಾಗದ ಬಹುದಿನಗಳ ಬೇಡಿಕೆ,
ದಿ|ಎಂ.ಮಹದೇವುರವರ ಕನಸಾದ ನುಗು ಏತ ನೀರಾವರಿ ಯೋಜನೆಯನ್ನು 2018 ರಲ್ಲಿ ಮುಖ್ಯಮಂತ್ರಿಯಾಗಿ ನಡೆಸುವ ಮೊದಲ ಸಚಿವಸಂಪುಟದಲ್ಲಿಯೇ ಮಂಜೂರು ಮಾಡಲಾಗುವುದು. ಕ್ಷೇತ್ರದ ಮತದಾರರು ಈ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾದ ಶ್ರೀನಿವಾಸಪ್ರಸಾದರನ್ನು ಗೆಲ್ಲಿಸಿ ಬಿಜೆಪಿಯ ಅಧಿಕಾರದ ಅಡಿಪಾಯ ನಿರ್ಮಿಸಿಕೊಟ್ಟರೆ ನುಗು ನೀರನ್ನು ನಿಮ್ಮ ಜಮೀನಿಗೆ ಪೂರೈಸುವ ಜವಾಬ್ದಾರಿ ತಮ್ಮದು ಎಂದು ಅವರು ಘೋಷಿಸಿದರು
ಸಿದ್ದರಾಮಯ್ಯಗೆ ಭ್ರಮೆ: ಹಿಂದುಳಿದ ವರ್ಗಗಳ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ನೀಡಿದ್ದೆಷ್ಟು, ತಮ್ಮ ಅವಧಿಯಲ್ಲಿ ತಾವು ನೀಡಿದ್ದೆಷ್ಟು ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಸ್ಥಾಪನೆ ಹಾಗೂ ವಾಲ್ಮೀಕಿ ಸಮುದಾಯಕ್ಕೆ ಭಗೀರಥ ಭವನ ಆರಂಭಿಸಿದ್ದು ಯಾರು ಎಂದು ಪ್ರಶ್ನಿಸಿದರು.
ತಮ್ಮ ವಿರುದ್ಧ ದ್ವೇಷ ರಾಜಕಾರಣ ಮಾಡಲು ನೀವು ಸೃಷ್ಟಿಸಿ ದಾಖಲಿಸಿದ ಎಲ್ಲಾ ದೂರುಗಳೂ ಆರೋಪರಹಿತವೆಂದು ನ್ಯಾಯಾಲಯವೇ ತೀರ್ಪಿತ್ತಿದೆ. ಆದರೂ ನೀವು ತಮ್ಮನ್ನು ಭ್ರಷ್ಟಾಚಾರಿ ಎಂದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಎರಡೂ ಕ್ಷೇತ್ರಗಳಲ್ಲೂ ಜನತೆ ನಿಮ್ಮ ಉಡಾಫೆ ಆಡಳಿತಕ್ಕೆ ಪಾಠ ಕಲಿಸಲು ಸಿದ್ದರಾಗಿದ್ದಾರೆ ಎಂದರು.
ನೀವು ಮತ್ತು ನಿಮ್ಮ ಸಚಿವ ಸಂಪುಟ ಸದಸ್ಯರು ರಾಜ್ಯವನ್ನು ಲೂಟಿ ಮಾಡಿ ನೀಡಿದ ಕಪ್ಪಕ್ಕೆ ಉತ್ತರ ಪ್ರದೇಶದಲ್ಲಿ ಬಂದಿದ್ದು ಕೇವಲ 7 ಸ್ಥಾನ. ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಧಾನಿಯವರನ್ನು ಶ್ಲಾ ಸಿದ್ದಾರೆ. ನೀವು ಮಾತ್ರ ದ್ವೇಷದಿಂದ ಮೋದಿಯವರನ್ನು ಬೇಕಾ ಬಿಟ್ಟಿಯಾಗಿ ಟೀಕಿಸುತ್ತಿದ್ದೀರಿ.
ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದ ಡೈರಿಯಲ್ಲಿ ತಮ್ಮ ಹೆಸರಿದ್ದರೆ ಹೇಳಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಡೈರಿಯಲ್ಲಿ ಅವರ ಹೆಸರಿಲ್ಲದೆ ನನ್ನ ಹೆಸರಿದೆಯೇ ಎಂದು ಪ್ರಶ್ನಿಸಿದ ಯಡಿಯೂರಪ್ಪ, ಡೈರಿ ಪ್ರಕರಣದಲ್ಲಿ ಸಿದ್ದರಾಮಯ್ಯ ಹಾಗೂ ಸಂಪುಟದ ಸದಸ್ಯರ ಪಾತ್ರವಿಲ್ಲವೆಂದಾದರೆ ನೀವೇ ಸಿಬಿಐ ತನಿಖೆಗೆ ಶಿಫಾರಸು ಮಾಡಿ ಎಂದು ಅವರು ಸಿದ್ದರಾಮಯ್ಯನವರಿಗೆ ಸವಾಲೆಸೆದರು.