Advertisement

ಲೈಫ್‌ಲಿಸ್ಟ್‌ ಅಶಕ್ತ ಸಂಜೀವರಿಗೆ ಮನೆ ಇನ್ನೂ ದೊರಕಿಲ್ಲ?

06:00 AM Jul 05, 2018 | Team Udayavani |

ಕುಂಬಳೆ: ಗಾಳಿ ಮಳೆಗೆ ಇಂದೋ ನಾಳೆಯೋ ಧರಾಶಾಯಿ ಯಾಗಲಿರುವ ಮನೆಯಲ್ಲಿ ಭಯದಿಂದ ವಾಸಿಸುತ್ತಿರುವ ಪೈವಳಿಕೆ ಪಂ.ನ ಕನಿಯಾಲ ಚಾಕಟೆಗುಳಿ ನಿವಾಸಿ ಸಂಜೀವ ಅವರ ಕುಟುಂಬಕ್ಕೆ ಸೂರಿನ ಅಗತ್ಯವಿದೆ. ಹಲವು ಬಾರಿ ಗ್ರಾಮ ಸಭೆ ಸಹಿತ ಜನಪ್ರತಿನಿಧಿಗಳಲ್ಲಿ ವಿನಂತಿಸಿದರೂ ಈತನ ಬೇಡಿಕೆ ಈಡೇರದೆ ಉಳಿದಿದೆ. ಹಿಂದುಳಿದ ಜಾತಿ ಸಮುದಾಯಕ್ಕೆ ಸೇರಿದ ಸಂಜೀವ ಅವರು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ, ಕೇಂದ್ರದಿಂದ ಉತ್ತರವೂ ತಲುಪಿ ಹಲವು ಸಮಯ ಕಳೆದರೂ ಇವರ ಸಮಸ್ಯೆ ಮಾತ್ರ ಇನ್ನೂ ಪರಿಹಾರವಾಗಿಲ್ಲ.

Advertisement

ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಲೈಫ್‌ ಲಿಸ್ಟ್‌ನಲ್ಲಿ ತಮ್ಮ ಹೆಸರಿದೆ ಎಂಬ ಉತ್ತರ ಲಭಿಸಿದೆ. ಆದರೆ ಎಂದು ಲಭಿಸಲಿದೆ ಎನ್ನುವುದರ ಬಗ್ಗೆ ಉತ್ತರ ಸಿಗಲಿಲ್ಲವಂತೆ. ಬಡತನದ ಬೇಗೆಯಲ್ಲಿರುವ ತನಗೆ ಯಾವುದೇ ಯೋಜನೆಯಲ್ಲಾದರೂ ಒಂದು ಮನೆ ನೀಡಬೇಕಿದೆ ಎನ್ನುತ್ತಾರೆ.

ಪ್ರಧಾನಿ ಕಚೇರಿಯಿಂದ ಪತ್ರ 
ಬಂದರೂ ಗಮನವಿಲ್ಲ

ಕೆಲವು ವರ್ಷಗಳಿಂದ ಕಾಲಿಗೆ ಅಶಕ್ತತೆ ಬಾಧಿಸಿದ ಹಿನ್ನೆಲೆಯಲ್ಲಿ ಕೂಲಿ ಕೆಲಸಕ್ಕೆ ತೆರಳಲು ಅಸಾಧ್ಯವಾದ ಸ್ಥಿತಿಯಲ್ಲಿರುವ ಸಂಜೀವ ಅವರು 2017ರ ಮಾರ್ಚ್‌ ತಿಂಗಳಲ್ಲಿ ಪ್ರಧಾನಿ ಕಚೇರಿಗೆ ಪತ್ರ ಬರೆದುದಕ್ಕೆ, ಬಾಯಾರು ಗ್ರಾಮ ಕಚೇರಿ ಮೂಲಕ ಮಂಜೇಶ್ವರ ಎಸ್‌. ಸಿ. ಕಚೇರಿಗೆ ಮನೆ ನಿರ್ಮಾಣದ ಅಹವಾಲನ್ನು ನೀಡಲಾಗಿತ್ತು, ಆದರೆ ಎಸ್‌.ಸಿ. ಕ್ಷೇಮಾಭಿವೃದ್ಧಿ ಅಧಿಕಾರಿ ಆವಾಸ್‌ ಯೋಜನೆಯಡಿ ಮನೆ ಕೊಡಲಾಗುವುದಿಲ್ಲವೆಂದು ಪತ್ರದಲ್ಲಿ ನಮೂದಿಸಲಾಗಿತ್ತು. ಪತ್ರಕ್ಕೆ ಪ್ರಧಾನಿ ಕಾರ್ಯಾಲಯದ ಮೂಲಕ ದೊರೆತ ಉತ್ತರದಲ್ಲಿ ನಿಮ್ಮ ಮನೆ ನಿರ್ಮಾಣದ ಬೇಡಿಕೆಯನ್ನು ಸ್ಥಳೀಯ ಜಿಲ್ಲಾ ಕಚೇರಿಯ ಮುಂದಿಡಲಾಗಿದೆ ಎಂದು ರೆಫರೆನ್ಸ್‌ ಅಂಕಿಯಿರುವ ಪತ್ರವಿದೆ.

ಆದರೆ 13 ತಿಂಗಳು ಸಂದರೂ ಸಂಜೀವರ ಮನೆ ನಿರ್ಮಾಣದ ಕಾರ್ಯ ಮಾತ್ರ ನಡೆದಿಲ್ಲ. ಇದೀಗ ಮಳೆಗಾಲದಲ್ಲಿ ಸಂಜೀವರ ಮನೆ ಸೋರುತ್ತಿದೆ. ಹೆಂಚು ಹೊದಿಸಿದ ಮೇಲ್ಛಾವಣಿ ಸೋರುವ ಕಾರಣ ಇದರಮೇಲೆ ಟಾರ್ಪಾಲು ಹೊದಿಸಲಾಗಿದೆ. ಅತ್ತ ಲೆ„ಫ್‌ ಯೋಜನೆಯಿಂದ ವಂಚಿತ ರಾಗಿರುವ ಸಂಜೀವನವರ ಕುಟುಂಬ ಸಂಕಷ್ಟದ ಜೀವನ ಸಾಗಿಸುವಂತಾಗಿದೆ. ಪತ್ರ ಲಭಿಸಿದ ಬಳಿಕ ಯಾವುದೇ ಅಧಿಕಾರಿಯಾಗಲಿ, ಚುನಾಯಿತರು ತನ್ನನ್ನು ಈ ತನಕ ಸಂಪರ್ಕಿಸಿಲ್ಲ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next