ಚಿಕ್ಕೋಡಿ: ದೇಹ ಅಮೂಲ್ಯ ವಸ್ತು. ಸಾವಿನ ನಂತರ ಅದನ್ನು ಸುಡುವುದರಿಂದ ಬೆಲೆ ಬಾಳುವ ಅಂಗಾಂಗಗಳು ಬೂದಿಯಾಗುತ್ತವೆ. ಅದರ ಬದಲು ಅಂಗಾಂಗ ದಾನ ಮಾಡುವುದರಿಂದ ಎಷ್ಟೋ ಅನಾರೋಗ್ಯ ಮತ್ತು ಅಪಘಾತಕ್ಕೀಡಾದ ಜೀವಿಗಳು ಉಳಿಯುತ್ತವೆ ಎಂದು ಮುಂಬಯಿ ಅಂಗಾಂಗ ಮತ್ತು ದೇಹದಾನ ಒಕ್ಕೂಟದ ಸಂಚಾಲಕ ಪುರುಷೋತ್ತಮ ಪವಾರ ಹೇಳಿದರು.
ಇಲ್ಲಿನ ಕೆ.ಎಲ್.ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡ ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾನವ ಜೀವನ ಜೀವಂತವಿದ್ದಾಗಲೂ ಹಾಗೂ ಮರಣದ ನಂತರವೂ ಸಮಾಜಕ್ಕೆ ಉಪಯುಕ್ತವಾಗಬೇಕು. ಮಾನವ ದೇಹದ ಅಂಗದಾನ ಮಾಡುವುದರಿಂದ ಇತರರು ಬದುಕುತ್ತಾರೆ. ನೇತ್ರದಾನದಿಂದ ಅಂಧರು ದೃಷ್ಟಿ ಪಡೆಯುತ್ತಾರೆ. ಇದರಿಂದ ಯಾರಿಗೂ ಯಾವುದೇ ನಷ್ಟವಿಲ್ಲ ಎಂದರು.
ಸಾವಿನ ನಂತರ ದೇಹದ ಅಂಗದಾನ ಮಾಡುವುದರಿಂದ ಮುಂದಿನ ಜನ್ಮದಲ್ಲಿ ಕುರುಡರಾಗುತ್ತೇವೆಂಬುದು ಮೂಢನಂಬಿಕೆ. ದೇಹದಾನ ಪವಿತ್ರ ಕೆಲಸ ಎಂದರು. ಯಾವ ಆಸ್ಪತ್ರೆಯ ಪರವಾಗಿಯೂ ನಾವು ಪ್ರಚಾರಕ್ಕೆ ಬಂದಿಲ್ಲ. ಇದು ಕೇವಲ ಸಮಾಜ ಸೇವೆ. ನಮ್ಮ ತಂಡ ಅಂಗಾಂಗ ದಾನ ಜಾಗೃತಿಗಾಗಿ ನಾಸಿಕ್‌ನಿಂದ ಬೆಳಗಾವಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ| ಪ್ರಸಾದ ರಾಂಪೂರೆ, ನಮ್ಮ ದೇಶದಲ್ಲಿ ದೇಹದಾನದ ಕುರಿತು ಭ್ರಮೆ ಇದೆ. ವರ್ಷಕ್ಕೆ 5 ಲಕ್ಷ ಜನರು ಅಂಗಾಂಗ ವೈಫಲ್ಯದಿಂದ ನಿಧನ ಹೊಂದುತ್ತಿದ್ದಾರೆ. ಭಾರತದಲ್ಲಿ ದೇಹದಾನದ ಅರಿವು ಕಡಿಮೆಯಿದ್ದು, 1000ಕ್ಕೂ ಕಡಿಮೆ ಜನ ದೇಹದಾನ ಮಾಡುತ್ತಾರೆ. ನಮ್ಮಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮುಂಬಯಿ ಅಂಗಾಂಗ ಮತ್ತು ದೇಹದಾನ ಒಕ್ಕೂಟದ ಕಾರ್ಯ ಶ್ಲಾಘನೀಯ ಎಂದರು. ಎನ್‌ಎಸ್‌ಎಸ್ ಅ ಧಿಕಾರಿ ಪ್ರೊ. ವಿಶಾಲ ದಾನವಾಡೆ ಕಾರ್ಯಕ್ರಮ ಸಂಯೋಜಿಸಿದ್ದರು.
ಕೆ.ಎಲ್.ಇ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಸವರಾಜ ಸೊಂಟನವರ, ವಿಭಾಗ ಮುಖ್ಯಸ್ಥರಾದ ಪ್ರೊ. ವಿ. ಎಂ. ಬೂದ್ಯಾಳ, ಪ್ರೊ. ಸತೀಶ ಭೋಜನ್ನವರ, ಪ್ರೊ. ಸಚಿನ ಮೆಕ್ಕಳಕಿ, 200ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಿಬ್ಬಂದಿ ಉಪಸ್ಥಿತರಿದ್ದರು. ಸುಧೀರ ಭಾಗೈತಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌರಭ ಜುಟ್ಟಿ ಸ್ವಾಗತಿಸಿದರು. ರುದ್ರನೀಲ ವಂದಿಸಿದರು. ವಿಶಾಲ ಮೆತ್ರಿ ನಿರೂಪಿಸಿದರು.