Advertisement

ಅಧ್ಯಾತ್ಮವಿಲ್ಲದ ಜೀವನ ಪರಿಪೂರ್ಣವಲ್ಲ

10:30 AM Dec 19, 2021 | Team Udayavani |

ಕಲಬುರಗಿ: ಅಧ್ಯಾತ್ಮ ಇಲ್ಲದ ಮನುಷ್ಯನ ಜೀವನ ಪರಿಪೂರ್ಣವಲ್ಲ. ಒತ್ತಡದ ಜೀವನದಿಂದ ಹೊರಬರಲು ಅಧ್ಯಾತ್ಮ ಅವಶ್ಯಕವಾಗಿದ್ದು, ಮೌಲ್ಯಯುತ, ಆದರ್ಶ ವ್ಯಕ್ತಿಗಳನ್ನು ರೂಪಿಸಲು ಶಿಕ್ಷಣದಲ್ಲಿ ಅಧ್ಯಾತ್ಮ ಇರಬೇಕೆಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ| ಬಟ್ಟು ಸತ್ಯನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರ ಹೊರವಲಯದ ಗೀತಾ ನಗರದ ಪ್ರಜಾಪಿತ ಬ್ರಹ್ಮಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಸರೋವರದ ರಿಟ್ರಿಟ್‌ ಸೆಂಟರ್‌ನಲ್ಲಿ ಶನಿವಾರ ಶರಣಬಸವ ವಿಶ್ವವಿದ್ಯಾಲಯ ಮತ್ತು ಬ್ರಹ್ಮಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಮೌಲ್ಯ ಮತ್ತು ಅಧ್ಯಾತ್ಮದ ಮೂಲಕ ಸಶಕ್ತಿಕರಣ ಮತ್ತು ಒತ್ತಡ ಮುಕ್ತ ಶಿಕ್ಷಣ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಭಾರತವು ಶ್ರೀಮಂತ ಅಧ್ಯಾತ್ಮ, ಸಾಂಸ್ಕೃತಿಕ ಪರಂಪರೆ ಹೊಂದಿದೆ. ನಳಂದಾ, ತಕ್ಷಶಿಲಾದಂತ ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯಗಳು ನಮ್ಮ ದೇಶದಲ್ಲಿದ್ದವು. ಆದರೆ, ಭಾರತ ಸ್ವಾತಂತ್ರ್ಯದ ವೇಳೆ ಬಡತನ, ಅಪೌಷ್ಟಿಕತೆ ಸೇರಿದಂತೆ ಹಲವು ಸಮಸ್ಯೆಗಳು ಭಾರತವನ್ನು ಸುತ್ತಿಕೊಂಡವು. ನಮ್ಮದೇ ಮಾದರಿಯಲ್ಲಿ ಜಪಾನ್‌, ಇಸ್ರೆಲ್‌ ಕೂಡ ಹೀನಾಯ ಸ್ಥಿತಿಯಲ್ಲಿದ್ದವು. ಆದರೆ ಆ ದೇಶಗಳು ಸದ್ಯ ಮುಂದುವರಿದ ದೇಶಗಳಾಗಿವೆ. ನಾವು ಇನ್ನೂ ಹಿಂದುಳಿದ ದೇಶ ಎಂದು ಹೇಳಿಕೊಳ್ಳುತ್ತೇವೆ. ಇದಕ್ಕೆ ಕಾರಣ ನಮ್ಮ ಇತಿಹಾಸ ಮರೆತು, ಪಶ್ಚಿಮ ರಾಷ್ಟ್ರಗಳನ್ನು ಅನುಸರಿಸುತ್ತಿರುವುದು ಎಂದರು.

ಈಗಿನ ದಿನಗಳಲ್ಲಿ ಮೌಲ್ಯಯುತ ಶಿಕ್ಷಣ ಅಗತ್ಯವಾಗಿದೆ. ಜೀವನ ಕೌಶಲ್ಯ ವೃದ್ಧಿಸಿಕೊಳ್ಳುವುದರ ಮೂಲಕ ಒತ್ತಡದ ಜೀವನದಿಂದ ಹೊರ ಬರಬೇಕು. ಐಐಟಿಗಳಂತ ಅತ್ಯುನ್ನತ ಸಂಸ್ಥೆಗಳಲ್ಲೂ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಇದಕ್ಕೆ ಒತ್ತಡದ ಶಿಕ್ಷಣವೇ ಕಾರಣ. ಆದ್ದರಿಂದ ಶಿಕ್ಷಣದ ಜತೆಗೆ ಯೋಗ, ಧ್ಯಾನ, ಕ್ರೀಡೆ ಅಳವಡಿಸಬೇಕು. ಪ್ರಸ್ತುತ ಜಾರಿಗೆ ಬಂದಿರುವ ನೂತನ ಶಿಕ್ಷಣ ನೀತಿಯೂ ವಿಜ್ಞಾನದ ಜತೆಗೆ ಅಧ್ಯಾತ್ಮಕ್ಕೂ ಪೂರಕವಾಗಿದೆ. ವಿದ್ಯಾರ್ಥಿಗಳು ಒತ್ತಡ ಮುಕ್ತ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

ಮೌಂಟ್‌ ಅಬುವಿನ ಬ್ರಹ್ಮಕುಮಾರಿ ವಿಶ್ವವಿದ್ಯಾಲ ಯದ ಶಿಕ್ಷಣ ವಿಭಾಗದ ಚೇರ್‌ಪರ್ಸನ್‌ ಮೃತ್ಯುಂಜಯ ಮಾತನಾಡಿ, ಆನಂದಮಯ ಜೀವನಕ್ಕೆ ಅಧ್ಯಾತ್ಮ ಶಿಕ್ಷಣ ಅಗತ್ಯವಾಗಿದೆ. ನಮ್ಮ ಆತ್ಮದ ಶುದ್ಧೀಕರಣ, ಸಮಾಜ ವಿಕಾಸಕ್ಕೂ ಅಧ್ಯಾತ್ಮ ಶಿಕ್ಷಣ ಮುಖ್ಯವಾಗಿದೆ ಎಂದರು.

Advertisement

ವಿಶ್ವದ ವಿವಿಧೆಡೆ ವಿವಿಧ ರೀತಿಯ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳಿವೆ. ಆದರೆ, ಅಧ್ಯಾತ್ಮ ಶಿಕ್ಷಣ ಕೊಡುತ್ತಿರುವ ಏಕೈಕ ವಿಶ್ವವಿದ್ಯಾಲಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ. ಅಲ್ಲದೇ, ದೇಶದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕೊಡಬೇಕೆಂಬ ಬೇಡಿಕೆ ಇದ್ದರೂ, ಅದನ್ನು ಪೂರೈಸಲು ಆಗಿಲ್ಲ. ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶೇ.100ರಷ್ಟು ಮಹಿಳೆಯರಿಗೆ ಮೀಸಲಾತಿ ಇದೆ. ಇಡೀ ಸಂಸ್ಥೆಯ ನೇತೃತ್ವವನ್ನು ಮಹಿಳೆಯರಿಗೆ ವಹಿಸಲಾಗಿದೆ ಎಂದರು.

ಕಲಬುರಗಿ ಬ್ರಹ್ಮಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ವಿಜಯಾ ಮಾತನಾಡಿ, ಒತ್ತಡ ಬದುಕಿನಿಂದ ಹೊರಬಂದು ಚೈನತ್ಯ ತುಂಬಿ ಕೊಳ್ಳಲು ಅಧ್ಯಾತ್ಮ ಅಗತ್ಯವಾಗಿದೆ. ನಮ್ಮ ರಕ್ತದ ಕಣದಲ್ಲಿ ಅಧ್ಯಾತ್ಮ ತುಂಬಿದ್ದು, ಅದನ್ನು ಹೊರತರುವ ಅವಶ್ಯಕತೆಯಿದೆ. ಮಾನವೀಯ ಮೌಲ್ಯಗಳ ಅಳವಡಿಕೆಯೂ ಅಗತ್ಯವಾಗಿದ್ದು, ಮೌಲ್ಯಗಳು ನಮ್ಮ ಹೊರ ಜೀವನಕ್ಕೆ ದಿಕ್ಕು ತೋರಿಸುತ್ತವೆ ಎಂದರು.

ಮೈಸೂರು ಬ್ರಹ್ಮಕುಮಾರೀಸ್‌ ಈಶ್ವರೀಯ ವಿವಿ ಮುಖ್ಯಸ್ಥೆ ಲಕ್ಷ್ಮೀ ಮಾತನಾಡಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ದಯಾನಂದ ಅಗಸರ, ಶರಣಬಸವ ವಿಶ್ವವಿದ್ಯಾಲಯದ ಸಮ ಕುಲಪತಿ ಡಾ| ವಿ.ಡಿ. ಮೈತ್ರಿ, ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಹಣಕಾಸು ಅಧಿಕಾರಿ ಪ್ರೊ| ಕಿರಣ್‌ ಮಾಕಾ ಮತ್ತ ಬ್ರಹ್ಮಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸಂಯೋಜಕ ಪ್ರೇಮ್‌, ಸುಮನ್‌, ದಾನೇಶ್ವರಿ, ಶಿವಲೀಲಾ, ಸವಿತಾ, ರಾಜೇಶ್ವರಿ, ಶರಣಬಸವ ವಿವಿಯ ಡೀನ್‌, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next