Advertisement

ಗಿಣಗೇರಿ ಕೆರೆಗೆ ಬಂತು ಜೀವ ಕಳೆ; ಗವಿಶ್ರೀ ಸಂಕಲ್ಪದಂತೆ ಹೂಳು ತೆರವು

06:14 PM Oct 08, 2022 | Team Udayavani |

ಕೊಪ್ಪಳ: ಕಳೆದ ವರ್ಷ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು ಜಾತ್ರಾ ಮಹೋತ್ಸವ ಸರಳವಾಗಿ ಆಚರಣೆ ಮಾಡಿ ಸಾಮಾಜಿಕ ಕಾರ್ಯಕ್ಕೆ ಮುನ್ನುಡಿ ಬರೆದು ತಾಲೂಕಿನ ಗಿಣಗೇರಿ ಕೆರೆ ಹೂಳೆತ್ತುವ ಸಂಕಲ್ಪ ಮಾಡಿದ್ದರು. ಶ್ರೀಗಳ ಸೇವೆಯಿಂದಾಗಿ ಗಿಣಗೇರಿ ಕೆರೆ ಈಚೆಗೆ ಸುರಿದ ಮಳೆಯಿಂದ ಮೈದುಂಬಿಕೊಂಡು ಕೋಡಿ ಬಿದ್ದಿದೆ.

Advertisement

ಸುತ್ತಲಿನ ಹತ್ತಾರು ಹಳ್ಳಿಗಳ ಜನರಲ್ಲಿ ಹರ್ಷ ತರಿಸಿದೆ. 2008ರ ಬಳಿಕ ಈಗಷ್ಟೇ ಕೆರೆ ತುಂಬಿ ಕೋಡಿ ಬಿದ್ದಿರುವುದಕ್ಕೆ, ಶ್ರೀಗಳ ಸೇವಾ ಕಾರ್ಯಕ್ಕೆ ಜನತೆ ತಲೆ ಬಾಗಿ ನಮಿಸುತ್ತಿದೆ. ಬರದ ನಾಡು ಎಂಬ ಹಣೆಪಟ್ಟಿ ಹೊತ್ತಿರುವ ಕೊಪ್ಪಳ ನಾಡನ್ನು ಜಲ ಸಂರಕ್ಷಣೆಯ ನಾಡನ್ನಾಗಿ ಮಾಡಲು ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಸಂಕಲ್ಪ ಮಾಡಿದ್ದರು. ಈ ಹಿಂದೆ 21 ಕಿ.ಮೀ ಉದ್ದದ ಹಿರೇಹಳ್ಳ ಸ್ವತ್ಛ ಮಾಡಿ ಎರಡೂ ಬದಿಯಲ್ಲಿ ಬಂಡ್‌ ನಿರ್ಮಾಣ ಮಾಡಿ ಇಡೀ ದೇಶವೇ
ತಿರುಗಿ ನೋಡುವಂತೆ ಮಾಡಿದ್ದರು. ಶ್ರೀಗಳ ಸೇವಾ ಕಾರ್ಯ ನಾಡಿನೆಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗಿತ್ತು.

ಕಳೆದೆರಡು ವರ್ಷ ಆವರಿಸಿದ್ದ ಕೋವಿಡ್‌ನಿಂದ ಭಕ್ತರ ಆರಾಧ್ಯ ದೈವ ಗವಿಸಿದ್ದೇಶ್ವರ ಜಾತ್ರೋತ್ಸವ ಆಚರಣೆಗೂ ತೊಂದರೆ ಎದುರಾಗಿ ಸಮೂಹ ಸೇರುವುದು ಕಷ್ಟಕರವಾಗಿತ್ತು. ಹಾಗಾಗಿ ಅಭಿನವ ಶ್ರೀಗಳು 2021ರಲ್ಲಿ ಜಾತ್ರೆ ಸರಳವಾಗಿ ಆಚರಿಸಿ, ಸಾಮಾಜಿಕ ಕಾರ್ಯ ಕೈಗೊಳ್ಳುವ ಸಂಕಲ್ಪ ಮಾಡಿದ್ದರು. ಅದರಲ್ಲಿ ಒಂದಾದ ತಾಲೂಕಿನ ಗಿಣಗೇರಿ ಬಳಿಯ 300 ಎಕರೆ ವಿಸ್ತಾರದ ವ್ಯಾಪ್ತಿ ಹೊಂದಿರುವ ಕೆರೆಯ ಹೂಳೆತ್ತುವ ಸಂಕಲ್ಪ ಮಾಡಿದ್ದರು.

ಕೋವಿಡ್‌ ಮಧ್ಯೆಯೂ 60 ದಿನಗಳ ಕಾಲ ಜೆಸಿಬಿ ಮೂಲಕ ಹೂಳೆತ್ತುವುದು, ಜಂಗಲ್‌ ಕಟ್‌ ಸೇರಿ ಬಂಡ್‌ ನಿರ್ಮಾಣ ಮಾಡಲಾಗಿತ್ತು. ಒತ್ತುವರಿ ಸಹಕಾರದಿಂದಲೇ ತೆರವು ಮಾಡಲಾಗಿತ್ತು. ಗಿಣಗೇರಿ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಯ ಗ್ರಾಮಸ್ಥರು ಸೇರಿ ಸಿಪಿಐ ವಿಶ್ವನಾಥ ಹಿರೇಗೌಡರ ಶ್ರೀಗಳ ಸಂಕಲ್ಪಕ್ಕೆ ಸಹಕಾರ ನೀಡಿ ಹಗಲಿರುಳು ಟೊಂಕ ಕಟ್ಟಿ ನಿಂತು ಕೆರೆ ಹೂಳೆತ್ತುವಲ್ಲಿ ಕೈಜೋಡಿಸಿದ್ದರು. ನಾಡಿನ ಗಣ್ಯರು ತನು, ಮನ, ಧನ ನೀಡಿ ಸೇವಾ ಕಾರ್ಯಕ್ಕೆ ಕೈ ಜೊಡಿಸಿದ್ದರು.

ಮೈದುಂಬಿದ ಕೆರೆಗೆ ಕೋಡಿ: 300 ಎಕರೆ ವಿಸ್ತಾರ ಹೊಂದಿದ ಕೆರೆ ಈಚೆಗೆ ಸುರಿದ ನಿರಂತರ ಮಳೆಯಿಂದ ತುಂಬಿಕೊಂಡಿದೆ. ನೀರಿಲ್ಲದೇ ಭಣಗುಡುತ್ತಿದ್ದ ಕೆರೆಗೆ ಈಗ ಜೀವ ಕಳೆ ಬಂದಿದ್ದು, ಕೋಡಿ ಬಿದ್ದು ಹರಿಯುತ್ತಿದೆ. ಹೀಗಾಗಿ ಗ್ರಾಮದ ಜನರಲ್ಲಿ ಹರ್ಷಕ್ಕೆ ಪಾರವೇ ಇಲ್ಲದಂತಾಗಿದ್ದು, ಬೆಳ್ಳಂ ಬೆಳಗ್ಗೆ ಕೆರೆ ದಡಕ್ಕೆ ಆಗಮಿಸಿ ಕಣ್ಮನ ತುಂಬಿಕೊಳ್ಳುತ್ತಿದ್ದಾರೆ. ಶ್ರೀಗಳ ಸೇವಾ ಕಾರ್ಯ ನೆನೆದು ಗುಣಗಾನ ಮಾಡುತ್ತಿದ್ದಾರೆ.ಭಕ್ತಿ-ಶಕ್ತಿಯೊಂದಿದ್ದರೆ ಎಂತಹ ಪವಾಡವನ್ನಾದ್ರೂ
ಮಾಡಬಹುದು ಎನ್ನುವುದಕ್ಕೆ ಗಿಣಗೇರಿ ಕೆರೆ ಹೂಳೆತ್ತಿದ್ದೇ ಸಾಕ್ಷಿ ಎಂದೆನ್ನುತ್ತಿದೆ.

Advertisement

2008ರಲ್ಲಿ ತುಂಬಿತ್ತು ಗಿಣಗೇರಿ ಕೆರೆ: ಗಿಣಗೇರಿ ಕೆರೆ ವಿಸ್ತಾರ ವ್ಯಾಪ್ತಿ ದೊಡ್ಡದಿದ್ದರೂ ಮಳೆಯಾದಾಗ ತುಂಬುತ್ತಿರಲಿಲ್ಲ. ಮಣ್ಣು ಸಾಗಾಟಕ್ಕೆ ಇದು ಹೆಸರಾಗಿತ್ತು. ಇದರಿಂದ ಗ್ರಾಮಸ್ಥರು ರೋಸಿ ಹೋಗಿದ್ದರು. 2008ರಲ್ಲಿ ಈ ಕೆರೆ ತುಂಬಿತ್ತು. ನಂತರ ಕೆರೆ ಬಗ್ಗೆ ಯಾರೂ ಕಾಳಜಿ ವಹಿಸದ ಕಾರಣ ತುಂಬಿರಲಿಲ್ಲ. ಈಗ ಶ್ರೀಗಳು ಕೆರೆಯತ್ತ ಚಿತ್ತ ಹರಿಸಿದ್ದರಿಂದ ಕೆರೆಗೆ ಮತ್ತೆ ಜೀವ ಕಳೆ ಬಂದೆ. 2008ರ ತರುವಾಗ ಈಗ ಕೆರೆ ತುಂಬಿ ಕೋಡಿ ಬಿದ್ದಿದೆ. ಶ್ರೀಗಳ ಸೇವಾ ಕಾರ್ಯಕ್ಕೆ ಇಡೀ ಜನತೆ ತಲೆಬಾಗಿ ನಮಿಸುತ್ತಿದೆ.

ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳ ಸಂಕಲ್ಪದಂತೆ ಗಿಣಗೇರಿ ಕೆರೆ ಹೂಳೆತ್ತುವ ಕಾರ್ಯ ಸಾಂಗವಾಗಿ ನೆರವೇರಿತ್ತು. ಈಚೆಗೆ ಸುರಿದ ಮಳೆಯಿಂದ ಕೆರೆ ತುಂಬಿ ಕೋಡಿ ಬಿದ್ದಿದೆ. 2008ರಲ್ಲಿ ಈ ಕೆರೆ ತುಂಬಿತ್ತು. ತರುವಾಯ ಈಗ ತುಂಬಿ ಕೋಡಿ ಬಿದ್ದಿದೆ. ಶ್ರೀಗಳ ಸೇವಾ ಕಾರ್ಯ ಎಷ್ಟು ವರ್ಣಿಸಿದರೂ ಸಾಲದು. ಕೆರೆ ಹೂಳೆತ್ತುವಲ್ಲಿ ಸಿಪಿಐ ವಿಶ್ವನಾಥ ಹಿರೇಗೌಡ್ರ ಸೇರಿದಂತೆ ಸರ್ವರ ಸಹಕಾರವೂ ಸಿಕ್ಕಿದೆ. ಕೆರೆಗೆ ಬಾಗಿನ ಅರ್ಪಿಸುವ ಕುರಿತಂತೆ ಸ್ವಾಮೀಜಿಗಳ ಜೊತೆಗೆ ನಾವೆಲ್ಲ ಚರ್ಚೆ ಮಾಡಲಿದ್ದೇವೆ. ಆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು.
ಸುಬ್ಬಣ್ಣಾಚಾರ್‌,
ಗಿಣಗೇರಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರು

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next