Advertisement

ಬದುಕಿನ ಪಾಠ ಕಲಿಸುವ ಹಾಸ್ಟೆಲ್‌ ಜೀವನ

03:55 PM Apr 04, 2019 | pallavi |

ಮನೆಯವರು ಹೇಳಿದ್ದು, ಕೇಳದ ಮಕ್ಕಳನ್ನಷ್ಟೇ ಹಾಸ್ಟೆಲ್‌ಗೆ ಸೇರಿಸುವ ಪರಿಪಾಠವಿತ್ತು. ಆದರೆ ಕಾಲ ಬದಲಾದಂತೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಹಾಸ್ಟೆಲ್‌ ಬದುಕು ಪೂರಕ ಎನ್ನುವ ಪರಿಕಲ್ಪನೆ ಬೆಳೆಯತೊಡಗಿದೆ. ಹೀಗಾಗಿ ಹಾಸ್ಟೆಲ್‌ ಸೇರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮಾತ್ರವಲ್ಲ ಬದುಕಿನ ಮೌಲ್ಯಗಳನ್ನೂ ತಿಳಿಸಿಕೊಡುವ ಪ್ರಯತ್ನ ನಡೆಯುತ್ತಿದೆ.

Advertisement

ಶಾಲೆ, ಕಾಲೇಜು ಕಲಿಯಲು ದೂರದೂರಿನವರ ಅನುಕೂಲಕ್ಕಾಗಿ ಹಾಸ್ಟೆಲ್‌ ಎಂಬ ಕಲ್ಪನೆಗಳು ಹುಟ್ಟಿಕೊಂಡವು. ಈ ಕಾಲಘಟ್ಟದಲ್ಲಿ ಸಂಚಾರ, ಸಂಪರ್ಕ, ಆರ್ಥಿಕ ಸಮಸ್ಯೆಗಳು ಇಲ್ಲದಿದ್ದರೂ, ಹಾಸ್ಟೆಲ್‌ ಬಯಸುವರ ಸಂಖ್ಯೆ ಇಳಿಮುಖವಾಗಿಲ್ಲ. ಹಾಗಾಗಿ ಹಾಸ್ಟೆಲ್‌ ಸ್ಥಾಪನೆ, ಪ್ರವೇಶ ಪಡೆಯುವವರ ಸಂಖ್ಯೆ ಏರುತ್ತಲೇ ಇದೆ. ಅದರ ಅಗತ್ಯತೆಗೆ ನಾನಾ ಕಾರಣಗಳು ಇರಬಹುದು. ಇಂತಹ ಹಾಸ್ಟೆಲ್‌ಗ‌ಳು ಶಿಸ್ತು, ಸಮಯ ಪರಿಪಾಲನೆ, ಸಹಬಾಳ್ವೆ ಮೊದಲಾದ ಜೀವನದ ಪಾಠ ಕಲಿಸುವ ಅಮೂಲ್ಯ ನೆಲೆ ಕೂಡ ಹೌದು.
ಹಾಸ್ಟೆಲ್‌ಗ‌ಳಿಗೆ ಮಕ್ಕಳನ್ನು ಸೇರಿಸುವುದೆಂದರೆ ಹೆತ್ತವರಿಗೆ ಆತಂಕವು ಇದೆ. ಕಾರಣ ಅಲ್ಲಿ ಅಪ್ಪ, ಅಮ್ಮನ ಪ್ರೀತಿ ಸಿಗುವುದಿಲ್ಲ. ಇಷ್ಟದ ಆಹಾರ, ನಿದ್ದೆ, ಕೌಟುಂಬಿಕ ಸಂಬಂಧ, ಹಬ್ಬ ಹರಿದಿನ ಮೊದಲಾದವುಗಳಿಂದ ವಂಚಿತರಾಗಿ ಬಿಡುತ್ತಾರೆ ಎಂದು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುವ ಹೆತ್ತವರೂ ಇರುತ್ತಾರೆ.

ಆದರೆ ಹಾಸ್ಟೆಲ್‌ಗೆ ಹೊಕ್ಕ ಮೇಲೆ ಅಲ್ಲಿನ ನೀತಿ ನಿರೂಪಣೆ ತಕ್ಕಂತೆ ನಡೆದುಕೊಂಡಲ್ಲಿ ಮನೆಯಿಂದ ಸಿಗುವ ಮೌಲ್ಯಗಳ ಜತೆಗೆ, ಸ್ವಾವಲಂಬಿ ಬದುಕು, ಸಹಬಾಳ್ವೆ ಮೊದಲಾದ ಜೀವನ ರೂಪಿಸುವ ಮೌಲ್ಯಗಳು ದೊರೆಯುತ್ತದೆ ಅನ್ನುವುದು ಅಷ್ಟೇ ಸತ್ಯ. ಹಾಗಂತ ಹಾಸ್ಟೆಲ್‌ಗೆ ಹೋದವರೆಲ್ಲ ಈ ಸದ್ಗುಣ ರೂಢಿಸಿಕೊಳ್ಳುತ್ತಾರೆ ಎಂದಲ್ಲ. ಉದ್ದೇಶ ಅರಿತು, ಗುರಿ ಮುಟ್ಟುವ ಛಲದೊಂದಿಗೆ ಬರುವ ವಿದ್ಯಾರ್ಥಿಗಳು ಈ ಸಕಾರಾತ್ಮಕ ಅಂಶಗಳನ್ನು ಬಳಸಿಕೊಂಡು ಯಶಸ್ಸು ಸಾಧಿಸಬಲ್ಲರು.

ಮಕ್ಕಳ ಗುರಿಯಿಲ್ಲದ ಬದುಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಸ್ಟೆಲ್‌ ಬಹುಮುಖ್ಯ ಪಾತ್ರ ವಹಿಸಬಲ್ಲುದು. ಜವಾಬ್ದಾರಿಯುತ ಬದುಕು ರೂಪಿಸಲು ಸ್ವಯಂ ಪ್ರೇರಿತ ಪಾಠ ಹೇಳುವ, ಅದನ್ನು ಪ್ರಾಕ್ಟಿಕಲ್‌ ಆಗಿ ಅಭ್ಯಸಿಸಲು ಅವಕಾಶ ನೀಡುವ ಪಾಠ ಶಾಲೆ ಈ ಹಾಸ್ಟೆಲ್‌.

ಮನೆಯಲ್ಲಿ ಅಪ್ಪ ಅಮ್ಮನ ಶಿಸ್ತಿನ ಗರಡಿಯಲ್ಲಿ ಇರುವ ಮಕ್ಕಳು ಒಮ್ಮೆಮ್ಮೆ ಯಾಮಾರಿಸಿ ತನ್ನಿಷ್ಟದಂತೆ ನಡೆಯುವುದುಂಟು. ಆದರೆ ಹಾಸ್ಟೆಲ್‌ನಲ್ಲಿ ಆ ತರಹ ಮಾಡುವುದು ಅಷ್ಟು ಸಲಿಸಲ್ಲ. ಹಾಗಾಗಿ ಆರಂಭದ ದಿನಗಳಲ್ಲಿ ಕೊಂಚ ಕಷ್ಟ ಅನಿಸಿದರೂ, ಅದನ್ನು ಸಹಿಸಿಕೊಂಡು ನಿಂತರೆ ಅದರಿಂದ ಸಿಗುವ ಲಾಭ ಅಧಿಕ.

Advertisement

ಸ್ವತಂತ್ರ ಬದುಕು
ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತ್ತೇ ಎನ್ನುವ‌ಂತೆ, ಹಾಸ್ಟೆಲ್‌ ಅನ್ನುವ ಶಾಲೆ, ಗಿಡವಾಗಿ ಬಗ್ಗಿಸಿಯೇ ನಮ್ಮನ್ನು ಮರವನ್ನಾಗಿಸುವ ಪ್ರಯತ್ನ ಮಾಡುತ್ತದೆ.ಬೆಳಗ್ಗೆ ಎದ್ದೇಳುವ ಸಮಯ ಪರಿಪಾಲನೆಯಿಂದ ತೊಡಗಿ ರಾತ್ರಿ ನಿದ್ದೆಗೆ ಜಾರುವ ತನಕ ಸ್ವತಂತ್ರವಾಗಿ ಬದುಕು ರೂಪಿಸಲು ಬೇಕಾದ ಎಲ್ಲ ವಿಚಾರಗಳು ನಮಗೆ ದೊರೆಯುತ್ತದೆ. ಇದು ಬದುಕು ರೂಪಿಸುವ ಹಲವು ಬಗೆಗೆಳನ್ನು ಕಲಿಸುತ್ತದೆ.

ಮುಖ್ಯವಾಗಿ ಸಮಯ ಪರಿಪಾಲನೆ. ಬೆಳಗ್ಗೆ ಎದ್ದೇಳುವುದು, ಓದಿನ ಸಮಯ, ದಿನ ನಿತ್ಯದ ಕೆಲಸ ಕಾರ್ಯ, ಶಾಲೆಗೆ ಹೊರಡುವುದು, ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಆಹಾರ ಸೇವನೆಯ ಸಮಯ, ಮರಳಿ ಹಾಸ್ಟೆಲ್‌ಗೆ ಬರಬೇಕಾದ ಸಮಯ, ತನಗೆ ಸಂಬಂಧಿಸಿದ ಕೆಲಸವನ್ನು ಪೂರೈಸಿಕೊಳ್ಳಲು ಇಂತಿಷ್ಟು ಸಮಯ ಹೀಗೆ ದಿನವಿಡಿ ವಿದ್ಯಾರ್ಥಿಯೊಬ್ಬ ಸೂಚಿತ ದಿನಚರಿಯಲ್ಲಿ ತನ್ನ ಕೆಲಸ ಪೂರೈಸಬೇಕು. ಅದಕ್ಕೆ ತದ್ವಿರುದ್ಧವಾಗಿ ನಡೆಯುವಂತಿಲ್ಲ. ಈ ಶಿಸ್ತು ಕಾಲೇಜು ಬಿಟ್ಟ ಮೇಲೆ ಉದ್ಯೋಗ, ಮನೆ ನಿಭಾಯಿಸುವಿಕೆ ಸಂದರ್ಭದಲ್ಲಿಯೂ ಪ್ರಯೋಜನಕಾರಿ. ತನ್ನ ಕೆಲಸಕ್ಕೆ ಇನ್ನೊಬ್ಬರನ್ನು ಅವಲಂಬನೆ, ಗೊತ್ತು ಗುರಿಯಿಲ್ಲದ ಟೈಮ್‌ಟೇಬಲ್‌ ಈ ಎಲ್ಲ ಗೊಂದಲ ದೂರವಾಗಿಸಲು ಹಾಸ್ಟೆಲ್‌ ದಿನಚರಿ ಹಲವರ ಬದುಕಿನ ಬದಲಾವಣೆಗೆ ಪ್ರೇರಣೆ ನೀಡಿದೆ.

ಹಾಸ್ಟೆಲ್‌ನಲ್ಲಿ ಜಾತಿ, ಧರ್ಮ, ಬಡವ, ಶ್ರೀಮಂತ ಎಂಬ ಹಂಗಿಲ್ಲ. ಇಲ್ಲಿ ಎಲ್ಲರೂ ಒಂದೇ. ದುಃಖವಾದಾಗ ಸಂತೈಸುವ, ಸಂತಸವಾದಾಗ ಹಂಚಿಕೊಳ್ಳುವ, ಕಷ್ಟ ಬಂದಾಗ ಪರಸ್ಪರ ಜತೆಯಾಗುವ ಸಹ ಬಾಳ್ವೆಯ ಪಾಠವಿಲ್ಲಿದೆ. ಬೇರೆ-ಬೇರೆ ಊರಿಂದ ಬರುವ ವಿದ್ಯಾರ್ಥಿಗಳು ಒಂದೆ ಹಾಸ್ಟೆನೊಳಗೆ ಅಣ್ಣ ತಮ್ಮ, ಅಕ್ಕ ತಂಗಿಯರಂತೆ ಬಾಳಬೇಕು. ಪ್ರತಿ ದಿನ ಎಲ್ಲರೂ ಒಂದೆ ತರಹದ ಊಟ, ಉಪಹಾರ ಸೇವಿಸಬೇಕು.
ಇವೆಲ್ಲವೂ ಹಂಚಿಕೊಂಡು ಬದುಕಲು ಸಿಗುವ ಪ್ರೇರಣೆಗಳು. ಗುಂಪು ಸ್ಟಡಿ, ಇಕೋ ಕ್ಲಬ್‌, ಮನೋರಂಜನೆ ತಂಡ ರಚಿಸಿ ವಿಶೇಷ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಚಟುವಟಿಕೆಗಳು ಹಾಸ್ಟೆಲ್‌ ಬಿಟ್ಟ ಬಳಿಕವೂ ಓದುವ ಹವ್ಯಾಸ, ಸಮಾಜಮುಖೀ ಕಾರ್ಯ ಚಟುವಟಿಕೆಗಳಲ್ಲಿ ತೊಡಗುವ ಆಸಕ್ತಿ ಮೂಡಿಸಲು ಕಾರಣವಾಗುತ್ತದೆ.

ಹಾಸ್ಟೆಲ್‌ನಲ್ಲಿ  ಹೀಗಿದ್ದರೆ ಉತ್ತಮ ಗುರಿ, ಉದ್ದೇಶ ಅರಿತುಕೊಂಡು ಹಾಸ್ಟೆಲ್‌ ಸೇರಬೇಕು. ಅದನ್ನು ಬರೆದಿಟ್ಟುಕೊಂಡು ದಿನಲೂ ಗಮನಿಸಬೇಕು. ಸಹಪಾಠಿಗಳನ್ನು ಸ್ನೇಹಿತರಂತೆ ಕಾಣಬೇಕು. ಸಮಾನ ಗೌರವ, ವಿಶ್ವಾಸವನ್ನು ನೀಡಬೇಕು. ಹಾಸ್ಟೆಲ್‌ ಅನ್ನು ಅನುಕೂಲ/ ಅನನುಕೂಲಕರ ರೀತಿಯಲ್ಲಿಯು ಬಳಸುವವರು ಇದ್ದಾರೆ. ಅನುಕೂಲಕರ ರೀತಿಯಲ್ಲಿ ಬಳಸಿಕೊಂಡು ಇತರರಿಗೆ ಮಾದರಿಯಾಗಬೇಕು. ಸುಖಾ ಸುಮ್ಮನೆ ಕಾಲ ಹರಣ ಮಾಡುವ ಬದಲು, ಜ್ಞಾನ ವೃದ್ಧಿಸುವ, ವ್ಯಕ್ತಿತ್ವಕ್ಕೆ ಪೂರಕವಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.

 ಕಿರಣ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next