Advertisement

ಪ್ರಾಣ ವಾಯು ನೀಡುವ ವೃಕ್ಷ ಸಂತತಿಗಳ ಮೇಲೆ ಹಲ್ಲೆ ಸಲ್ಲದು 

09:00 AM Nov 04, 2018 | Team Udayavani |

ಈಗ ನಾವು ಉತ್ತಮ ಆರೋಗ್ಯಕ್ಕಾಗಿ ಶುದ್ಧ ಗಾಳಿಯ ಸೇವಿಸಲು ಉದ್ಯಾನವನಗಳಿಗೆ ವಾಯು ವಿಹಾರಕ್ಕೆಂದು ಹೋಗ ಬೇಕಾಗಿದೆ. ಅಲ್ಲದೆ ಊರುಗಳಲ್ಲಿ ಉದ್ಯಾನವನಗಳ ನಿರ್ಮಾಣಕ್ಕೆ ಆಡಳಿತ ವ್ಯವಸ್ಥೆಗಳಿಗೆ ಬೇಡಿಕೆ ಇಡಬೇಕಾದ ಪರಿಸ್ಥಿತಿಯು ನಮ್ಮ ಮುಂದಿದೆ. 

Advertisement

ಜನ ವಸತಿ ಸಂಕೀರ್ಣ, ವಾಣಿಜ್ಯ ಸಂಕೀರ್ಣ ಉದ್ಯಮಗಳ ನಿರ್ಮಿಸುವ ಸಲುವಾಗಿ ನಾವು ಭೂ ಮಾತೆಯು ಉಟ್ಟ ಹಚ್ಚ ಹಸಿರುಡುಗೆ ಕಳಚಿ ಪ್ರಕೃತಿ ಮಾತೆಯನ್ನು ಬೆತ್ತಲುಗೊಳಿಸುತ್ತಿದ್ದೆವೆ. ಇಂದು ನಾವು ಪರಿಸರ ನಾಶಗೊಳಿಸಿ ಕಾಂಕ್ರೇಟ್‌ ಕಾಡುಗಳ ಬೆಳೆಸಲು ಬಹಳವಾಗಿ ಒತ್ತು ಕೊಟ್ಟಿದ್ದೆವೆ. ಒತ್ತು ಕೊಟ್ಟಂತೆಯೇ ಶರವೇಗದಲ್ಲಿ ಕಾಂಕ್ರೀಟ್‌ ಕಾಡು ಬೆಳೆಸಲು ಮರ ಗಿಡಗಳ ನಾಶ ಪಡಿಸುತ್ತಿದ್ದೆವೆ. ರಾಜಾಡಳಿತ ಕಾಲಘಟ್ಟದಲ್ಲಿ ರಾಜರುಗಳು ನಿರ್ಮಾಣ ಮಾಡಿದ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ನೆಲಸಮಗೊಳಿಸಿ ಅಲ್ಲಿಯೂ ಗಗನಚುಂಬಿ ಕಟ್ಟಡಗಳನ್ನು ಕಟ್ಟುತ್ತಿದ್ದೆವೆ. ಅಮೂಲ್ಯ ಜೀವ ಜಲ ಮೂಲಗಳ ನಾಶ ಪಡಿಸುತ್ತಿದ್ದೆವೆ. ಅಂತರಜಲ ಮಟ್ಟದ ಕುಸಿತ, ಅನಾವೃಷ್ಟಿ ಉಂಟಾಗಲು ಕಾರಣರಾಗುತ್ತಿದ್ದೆವೆ. ಮೊದಲೆಲ್ಲ ಸೇವಿಸಲು ಬೇಕಾಗಿರುವ ಪರಿಶುದ್ಧವಾದ ಗಾಳಿಯನ್ನು ಪ್ರಕೃತಿಯೇ ಉಣಬಡಿಸುತಿತ್ತು. ಈಗ ನಾವು ಉತ್ತಮ ಆರೋಗ್ಯಕ್ಕಾಗಿ ಶುದ್ಧ ಗಾಳಿಯ ಸೇವಿಸಲು ಉದ್ಯಾನವನಗಳಿಗೆ ವಾಯು ವಿಹಾರಕ್ಕೆಂದು ಹೋಗ ಬೇಕಾಗಿದೆ. ಅಲ್ಲದೆ ಊರುಗಳಲ್ಲಿ ಉದ್ಯಾನವನಗಳ ನಿರ್ಮಾಣಕ್ಕೆ ಆಡಳಿತ ವ್ಯವಸ್ಥೆಗಳಿಗೆ ಬೇಡಿಕೆ ಇಡಬೇಕಾದ ಪರಿಸ್ಥಿತಿಯು ನಮ್ಮ ಮುಂದಿದೆ. ಅವಿದ್ಯಾವಂತರು ಅಧಿಕ ಇರುವ ಕಾಲಘಟ್ಟದಲ್ಲಿ ಪರಿಸರದ ಮೇಲೆ ಹಲ್ಲೆಗಳು ನಡೆದಿರುವುದು ಕಡಿಮೆ. ಶಿಕ್ಷಿತರ ಸಂಖ್ಯೆ ಹೆಚ್ಚಾಗಿರುವ ಈ ಕಾಲಮಾನದ ನಾಗರಿಕ ಸಮಾಜದಲ್ಲಿ, ಪ್ರಕೃತಿಯ ಮೇಲೆ ಹಲ್ಲೆಗಳು ಶಿಕ್ಷಿತರಿಂದಲೇ ಆಗುತ್ತಿರುವುದು ವಿಪರ್ಯಾಸ.

ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅರಣ್ಯ ಇಲಾಖೆ ಅವರು ನಾಟಿ ಮಾಡಿ ಬೆಳೆಸಿದ ಸಾಲು ಮರಗಳು ಕಂಡು ಬರುತ್ತವೆ. ಅವುಗಳು ತಾಪಮಾನವನ್ನು ತಣಿಸುವುದಲ್ಲದೆ, ಬಹುವಿಧದ ಪಕ್ಷಿ ಸಂಕುಲಗಳಿಗೆ ಆಶ್ರಯವನ್ನು ನೀಡುತ್ತವೆ. ವಾಹನ ನಿಲುಗಡೆಗೆ, ಬಿಸಿಲ ಧಗೆಯಲ್ಲಿ ಬಸವಳಿದವರಿಗೆ ನೆರಳಿನ ಆಶ್ರಯ ನೀಡುತ್ತವೆ. ಊರಿಗೂ ಹಸಿರು ಶೋಭೆಯಿಂದ ಸೌಂದರ್ಯ ನೀಡುತ್ತದೆ. ಇಂತಹ ಪರೋಪಕಾರಿ ಮರಗಳು ಮಾನವನಿಂದಲೇ ನಿರಂತರವಾಗಿ ಹಲವು ರೀತಿಯಲ್ಲಿ ಹಲ್ಲೆಗಳನ್ನು ಎದುರಿಸುತ್ತಿವೆ. ಪೇಟೆಗಳಲ್ಲಿ ಅಂಗಡಿ ಮಾಲಿಕರು ತಮ್ಮ ಅಂಗಡಿ ಬಾಗಿಲುಗಳಲ್ಲಿ ಗುಡಿಸಿ ಒಟ್ಟು ಮಾಡಿದ ಕಸ, ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಾಶಗೊಳಿಸಲು ಮರಗಳ ಬುಡದಲ್ಲಿ ರಾಶಿ ಹಾಕಿ ಬೆಂಕಿ ಇಡುತ್ತಾರೆ. ಈ ಮೂಲಕ ಪರಿಸರ ತಂಪಾಗಿಸುವ ವೃಕ್ಷಗಳಿಗೆ ಅಗ್ನಿ ಶಾಖದ ಹಿಂಸೆ ನೀಡುತ್ತಿ¨ªಾರೆ. ಕೆಲವು ದಿನಗಳ ಬಳಿಕ ಆ ಮರವು ಸಾವು ಕಾಣುತ್ತದೆ. ವಿದ್ಯುತ್‌ ತಂತಿಗಳು ಮರಗಳ ಗೆಲ್ಲುಗಳಿಗೆ ಸ್ಪರ್ಶಿದ ಪರಿಣಾಮ ವಿದ್ಯುತ್‌ ವ್ಯತ್ಯಯ ಉಂಟಾಗುತ್ತದೆ. ಈ ಸಂದರ್ಭದಲ್ಲಿ ವಿದ್ಯುತ್‌ ಇಲಾಖೆಯ ಸಿಬ್ಬಂದಿಗಳು ಮರಗಳ ಗೆಲ್ಲುಗಳನ್ನು ಕಡಿಯುತ್ತಾರೆ. ಇದನ್ನು ವಿದ್ಯುತ್‌ ನಷ್ಟವನ್ನು ತಡೆಗಟ್ಟಲು ಅನಿವಾರ್ಯ ಪರಿಸ್ಥಿತಿಯಲ್ಲಿ ಮಾಡಬೇಕಾದ ಕೆಲಸ ಎನ್ನಬಹುದು. ಆದರೆ ಕೆಲವು ಸಂದರ್ಭಗಳಲ್ಲಿ ಸಿಬ್ಬಂದಿಗಳು ಮರಗಳ ರಂಬೆ ಕೊಂಬೆಗಳು ತಂತಿ ಸ್ಪರ್ಶ ತಪ್ಪಿಸಲು ಮರಗಳನ್ನು ಬುಡ ಸಮೇತ ಕಟಾವುಗೊಳಿಸುವ ವಿಕೃತ ಕೃತ್ಯಗಳು ನಡೆದಿರುವ ಪ್ರಕರಣಗಳು ಬಹಳಷ್ಟು ಬೆಳಕಿಗೆ ಬಂದಿರುತ್ತವೆ. ಅರಣ್ಯ ಇಲಾಖೆ ಅವರು ಸಾಲು ಮರಗಳಾಗಲು ಗಿಡಗಳ ನಾಟಿ ಮಾಡುವಾಗ ಮೇಲ್ಭಾಗದ ವಿದ್ಯುತ್‌ ತಂತಿಗಳ ಗಮನಿಸಿ ನಾಟಿ ಕಾರ್ಯ ಮಾಡಬೇಕು. ಹೀಗೆ ಮಾಡಿದರೆ ಮುಂದಾಗುವ ವೃಕ್ಷ ಹತ್ಯೆಗಳನ್ನು ತಪ್ಪಿಸಲು ಸಾಧ್ಯವಿದೆ. 

ಜಾಹೀರಾತು ಫ‌ಲಕಗಳನ್ನು ಸಾಲು ಮರಗಳ ಕಾಂಡಗಳ ಭಾಗಗಳಿಗೆ ಕಬ್ಬಿಣದ ಮೊಳೆಗಳ ಜಡಿದು ಅಳವಡಿಸುವ ದೃಶ್ಯಗಳು ಸಾಮಾನ್ಯವಾಗಿ ಎಲ್ಲಾ ನಗರ ಗಳಲ್ಲಿ ಕಂಡು ಬರುತ್ತವೆ. ಈ ರೀತಿಯಲ್ಲಿಯೂ ಮರಗಳಿಗೆ ಹಿಂಸೆ ನೀಡುತ್ತಿದ್ದೇವೆ. ಯಾವುದೇ ಜಾಹಿರಾತು ಫ‌ಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವಾಗ ಸ್ಥಳಿಯ ಆಡಳಿತ ವ್ಯವಸ್ಥೆಗಳಿಂದ ನಿಗದಿತ ಶುಲ್ಕವನ್ನು ಕಟ್ಟಿ ಪರವಾನಿಗೆ ಪಡೆಯಬೇಕಾಗುತ್ತದೆ. ಪರವಾನಿಗೆ ಪಡೆದ ಬಳಿಕ ಫ‌ಲಕಗಳನ್ನು ಸಾರ್ವಜನಿಕ ಸೊತ್ತುಗಳು ಘಾಸಿಗೊಳ್ಳದಂತೆ, ಸಾರ್ವಜನಿಕರಿಗೂ ತೊಂದರೆಯಾ ಗದಂತೆ, ಆರೋಗ್ಯಕರವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಬೇಕೆನ್ನುವ ನಿಯಮಗಳಿರುತ್ತವೆ. ಆದರೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಫ‌ಲಕಗಳನ್ನು ಅಳವಡಿಸುತ್ತಾರೆ. ಈ ತರಹದ ದೃಶ್ಯಾವಳಿಗಳು ಅಲ್ಲಲ್ಲಿ ಕಂಡು ಬರುತ್ತಿದ್ದರೂ ಕಾನೂನು ಪಾಲನೆ ಮಾಡಬೇಕಾದ ಆಡಳಿತ ವರ್ಗದಿಂದ ಸೂಕ್ತ ಕ್ರಮ ಕೈಗೊಳ್ಳುವ ಕೆಲಸಗಳು ನಡೆಯುತ್ತಿಲ್ಲ. ಪರಿಸರ ಪ್ರಜ್ಞೆ ಹೊಂದಿದವರ ಆಕ್ರೋಶದ ಧ್ವನಿಗಳು ಎದ್ದಾಗ ಮಾತ್ರ ಮೊಳೆ ಜಡಿದ ತಗಡು ಫ‌ಲಕಗಳು ಮರಗಳಿಂದ ತೆರವುಗೊಳ್ಳುತ್ತವೆ. 

ವಾಹನ ದಟ್ಟಣೆ ಹೆಚ್ಚಳವಾದಂತೆ ರಸ್ತೆಗಳು ಸುಗಮ ಸಂಚಾರಕ್ಕೆ ಕಿರಿದಾಗಿ ರಸ್ತೆ ದುರಂತಗಳು ನಡೆಯುತ್ತವೆ. ಸುವ್ಯಸ್ಥೆಗಾಗಿ ರಸ್ತೆ ಅಗಲೀಕರಣ ಅಭಿವೃದ್ಧಿ ಕಾರ್ಯಗಳು ಅಗತ್ಯವಾಗಿ ನಡೆಯ ಬೇಕಾಗುತ್ತದೆ. ಈ ಸಂದರ್ಭದಲ್ಲಿ ರಸ್ತೆಯ ಎರಡು ಪಾರ್ಶ್ವಗಳಲ್ಲಿ ಇರುವ ಸಾಲು ಮರಗಳ ಧರೆಗೆ ಉರುಳಿಸುವ ಪ್ರಕ್ರಿಯಿಗಳು ನಡೆಯುತ್ತವೆ. ಇದು ಅಭಿವೃದ್ಧಿಯ ಕಾರಣದಿಂದ, ಅನಿವಾರ್ಯವಾಗಿ ನಡೆಯುವ ಪರಿಸರ ನಾಶಗೊಳಿಸುವ ಕೃತ್ಯ ಎನ್ನಬಹುದು. ಇಲ್ಲಿಯೂ ಮರಗಳ ಉಳಿಸುವ ಸಾಧ್ಯತೆ ಇರುತ್ತದೆ. ಮರಗಳ ಸ್ಥಳಾಂತರಿಸಿ ನೆಡಲು ಸಾಧ್ಯತೆ ಇದೆ. ಇಂತಹ ಪ್ರಯತ್ನಗಳು ಯಶಸ್ವಿಯಾದ ಬಹಳ ನಿರ್ದೇಶನಗಳಿವೆ. ಆದರೆ ಯಾವೊಂದು ಇಲಾಖೆಗಳು ಈ ಬಗ್ಗೆ ಚಿಂತಿಸುವುದಿಲ್ಲ.

Advertisement

ಮರಗಳ ಕಟಾವು ಪ್ರಕ್ರಿಯೆಗಳನ್ನು ಪರಿಸರವಾದಿಗಳ ಗಮನಕ್ಕೆ ಬಂದರೆ ಧ್ವನಿ ಎತ್ತುತ್ತಾರೆ ಎಂಬ ಕಾರಣದಿಂದ ನರಪಿಳ್ಳೆಗಳ ಸುಳಿವು ಇರದ ನಡುರಾತ್ರಿ, ತಡರಾತ್ರಿ ಸಮಯಗಳಲ್ಲಿ ಇಲಾಖೆಗಳೇ ಮುಂದೆ ನಿಂತು, ಧರೆಗೆ ಉರುಳಿಸುವ ಕೃತ್ಯಗಳ ನಡೆಯುತ್ತವೆ. ಹೀಗೆಲ್ಲಾ ಮನುಕುಲಕ್ಕೆ ಪ್ರಾಣವಾಯು ನೀಡುವ ವೃಕ್ಷ ಸಂತತಿಗಳ ಮೇಲೆ ಹಲ್ಲೆಗಳು, ಹತ್ಯೆಗಳು ಒಂದೊಂದು ರೀತಿಯಲ್ಲಿ ನಡೆಯುತ್ತಲೇ ಇದೆ. ದೇಶದ ಪ್ರತಿ ನಾಗರಿಕನು ಗಂಭೀರವಾಗಿ ನಾಳೆಯ ದಿನಗಳ ಅಗತ್ಯಗೊಸ್ಕರ ಚಿಂತಿಸಬೇಕಾಗಿರುವ ವಿಷಯ ಇದು. ನಾವು ಮರಗಳನ್ನು ದೇವರಂತೆ ಆರಾಧಿಸ ಬೇಕಾಗಿದೆ. ಹೆತ್ತಬ್ಬೆಯನ್ನು ಪ್ರೀತಿಸಿದಂತೆ ಪ್ರೀತಿಸ ಬೇಕಾಗಿದೆ. ಇಲ್ಲದಿದ್ದರೆ ಪ್ರಕೃತಿಯೇ ಮುನಿದು ಮನುಕುಲಕ್ಕೆ ಪಾಠ ಹೇಳುವ ಪರಿಸ್ಥಿತಿ ಬರಬಹುದು. ಹಾಗಾಗಿ ನಾವು ವೃಕ್ಷ ಸಂತತಿಯನ್ನು ರಕ್ಷಿಸೋಣ. “ಪ್ರಕೃತಿ ದೇವೋ ಭವ’ ಎಂದು ಪೂಜ್ಯಭಾವದಿಂದ ಆರಾಧಿಸೋಣ.

ತಾರಾನಾಥ್‌ ಮೇಸ್ತ ಶಿರೂರು 

Advertisement

Udayavani is now on Telegram. Click here to join our channel and stay updated with the latest news.

Next