Advertisement
ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿದ್ದ ಪದ್ಮ ರಾಜು ಕೋರ್ಟ್ ಮೂಲಕ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದಾರೆ.
Related Articles
Advertisement
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪದ್ಮರಾಜು, ಟಿಕೆಟ್ ವಿಚಾರ ಅಥವಾ ಮತ್ತೂಂದು ವಿಚಾರಗಳೆಲ್ಲ ಸುಳ್ಳು. ಗುತ್ತಿಗೆ ಕೆಲಸ ಕೊಡಿಸುವ ಸಂಬಂಧ ಗೋಪಾಲಯ್ಯ 15 ಲಕ್ಷ ರೂ. ಪಡೆದುಕೊಂಡಿದ್ದರು. ಆದರೆ, ಯಾವುದೇ ಗುತ್ತಿಗೆ ಕೆಲಸ ಕೊಡಿಸಿಲ್ಲ. ಜತೆಗೆ ಹಣ ವಾಪಸ್ ನೀಡಿರಲಿಲ್ಲ. ಹೀಗಾಗಿ ತಡರಾತ್ರಿ ಕರೆ ಮಾಡಿ ಹಣ ಕೊಡುವಂತೆ ಕೇಳಿಕೊಂಡೆ. ಆಗ ಅವರು ಏರುಧ್ವನಿಯಲ್ಲಿ ಮಾತಾಡಿದರು. ಅದರಿಂದ ಬೇಸರಗೊಂಡು ಮಾತನಾಡಿದ್ದೇನೆ ಎಂದು ಹೇಳಿದರು.
ಆರ್.ಅಶೋಕ್, ಮಾಜಿ ಶಾಸಕನ ವಿರುದ್ಧ ಆರೋಪ: ಮತ್ತೂಂದೆಡೆ ಪದ್ಮರಾಜು, ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಮೈಸೂರು ಮಾಜಿ ಶಾಸಕ ನಾಗೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “2010ರಲ್ಲಿ ನಾನು ಬಿಜೆಪಿಯಲ್ಲಿ ಇದ್ದಾಗ, ಬಿಬಿಎಂಪಿ ಮೇಯರ್ ಮಾಡುವುದಾಗಿ ನಂಬಿಸಿ ಅಶೋಕ್ 1 ಕೋಟಿ ರೂ. ಪಡೆದು ಕೊಂಡಿದ್ದರು. ಯಾವ ಮೇಯರ್ ಮಾಡಲಿಲ್ಲ. ಈ ವ್ಯವಹಾರಕ್ಕೆ ಶಾಸಕರಾಗಿದ್ದ ಮೈಸೂರಿನ ನಾಗೇಂದ್ರ ಸಂಪರ್ಕ ಸೇತುವೆಯಾಗಿದ್ದರು. ಆ ಬಳಿಕ ನಾನು ಕಾಂಗ್ರೆಸ್ ಸೇರ್ಪಡೆಗೊಂಡಾಗ ಈ ಹಣ ವಸೂಲಿ ಮಾಡಿಕೊಂಡಿದ್ದೇನೆ. 1 ಕೋಟಿ ರೂ.ಗೆ ಎಷ್ಟು ಬಡ್ಡಿ ಕಟ್ಟಿದ್ದೇನೆಂದು ವಾಟ್ಸ್‌ಆ್ಯಪ್ ಮೂಲದ ಅಶೋಕ್ ಅವರಿಗೆ ಕಳುಹಿಸಿದ್ದೇನೆ’ ಎಂದು ಆರೋಪಿಸಿದ್ದಾರೆ.
ಪದ್ಮರಾಜ್ ಗಡಿಪಾರು ಮಾಡಲು ಶಾಸಕ ಗೋಪಾಲಯ್ಯ ಮನವಿ:
ವಿಧಾನಸಭೆ: ಮಾಜಿ ಕಾರ್ಪೊರೇಟರ್ ಪದ್ಮರಾಜ್‌ರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಆಗುತ್ತಿರುವ ಮಾನಸಿಕ ಕಿರುಕುಳದ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಗೋಪಾಲಯ್ಯ, ಅಕ್ರಮ ಕ್ಲಬ್ ವ್ಯವಹಾರದಿಂದ ಹಣ ಗಳಿಸಿರುವ ಪದ್ಮರಾಜ್, ಈ ಹಿಂದೆ ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಸುರೇಶಕುಮಾರ್ ಗೂ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಆತನನ್ನು ತಕ್ಷಣ ಗಡಿಪಾರು ಮಾಡಬೇಕು. ಶಾಸಕರ ಹಕ್ಕು ರಕ್ಷಣೆ ಮಾಡಬೇಕೆಂದು ಆಗ್ರಹಿಸಿದರು. ರಾತ್ರಿ 12 ಗಂಟೆಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಮನೆಯೊಳಗೆ ಸೇರಿಕೊಂಡಿರುವ ಆತನನ್ನು ಪೊಲೀಸರು ತಕ್ಷಣ ಬಂಧಿಸಿಲ್ಲ. ಕುಡಿದು ಮದ ಏರಿಸಿಕೊಂಡು ಮನಬಂದಂತೆ ವರ್ತಿಸುತ್ತಾನೆ. ಪದ್ಮರಾಜ್ ಜತೆಗೆ ಅಕ್ರಮ ಕ್ಲಬ್‌ಗಳಿಗೂ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಸುರೇಶ್‌ಕುಮಾರ್, ಪದ್ಮರಾಜ್ ಜನಪ್ರತಿನಿಧಿಗಳಿಗೆ ಕಿರುಕುಳ ನೀಡುವುದು ಇದೇ ಮೊದಲಲ್ಲ. ನಾನು ಹಾಗೂ ಆರ್.ಅಶೋಕ್ ಈ ಅಟ್ಟಹಾಸದ ಫಲಾನುಭವಿಗಳು. ಗೋಪಾಲಯ್ಯನವರಿಗೇ ಈ ರೀತಿ ಬೆದರಿಕೆ ಬಂದಿದೆ ಎಂದರೆ ಅದರ ತೀವ್ರತೆ ಗಮನಿಸಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರಿಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶಾಸಕರಿಗೆ ಕರೆ ಮಾಡಿ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದ ಬಿಬಿಎಂಪಿ ಮಾಜಿ ಸದಸ್ಯ ಪದ್ಮರಾಜ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ತಿಳಿಸಿದರು.