ಬೆಂಗಳೂರು: ಗಿರಿನಗರದ ಪೊಲೀಸ್ ಠಾಣೆಯ ಪೇದೆಯೊಬ್ಬರ ಮೇಲೆ ವೈದ್ಯೆ ಒಬ್ಬರಿಗೆ ನಿರಂತರ ಕಿರುಕುಳ ಹಾಗೂ ಗುಂಡಿಟ್ಟು ಕೊಲ್ಲುವ ಬೆದರಿಕೆಯೊಡ್ಡಿದ್ದ ಗಂಭೀರ ಆರೋಪ ಕೇಳಿ ಬಂದಿದೆ.
ದೂರುದಾರ ವೈದ್ಯೆ, ಆರೋಪಿತ ಪೊಲೀಸ್ ಪೇದೆ ಸುದರ್ಶನ್ ಅಸ್ಕಿ ಎಂಬುವವರ ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಕುರಿತು ಸುದರ್ಶನ್ ವಿರುದ್ಧ ಐಪಿಸಿ ಕಲಂ (354) 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಬೆಳವಣಿಗೆಗಳ ಮಧ್ಯೆಯೇ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, “ಆರೋಪಿತ ಪೇದೆ ಸುದರ್ಶನ್ ಅಸ್ಕಿಯನ್ನು ವೃತ್ತಿಗೆ ಅಗೌರವ ತರುವ ರೀತಿ ನಡೆದುಕೊಂಡ ಕಾರಣದಲ್ಲಿ ಸೇವೆಯಿಂದ ಬುಧವಾರ ಅಮಾನತು ಗೊಳಿಸಿದ್ದಾರೆ”ಅಷ್ಟೇ ಅಲ್ಲದೆ, ಸುದರ್ಶನ್ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಎಸಿಪಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆಪ್ತವಾಗಿ ನಡೆದುಕೊಳ್ಳುವಂತೆ ಕಿರುಕುಳ: ಕಳೆದ ನಾಲ್ಕು ವರ್ಷಗಳ ಹಿಂದೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರುದಾರೆ ಮಹಿಳಾ ವೈದ್ಯ ಕ್ಲಿನಿಕ್ ನಡೆಸುತ್ತಿದ್ದೆ. ಈ ವೇಳೆ ಚಿಕಿತ್ಸೆಗೆ ಎಂದು ಬಂದ ಪೇದೆ ಸುದರ್ಶನ್ ಅಸ್ಕಿ, ಮೊಬೈಲ್ ನಂಬರ್ ಪಡೆದು ಆಗಾಗ್ಗೆ ಕರೆ ಮಾಡುತ್ತಿದ್ದ, ಕೆಲವೇ ದಿನಗಳಲ್ಲಿ ಆತನ ವರ್ತನೆ ಬದಲಾಗಿ ರಾತ್ರಿ ವೇಳೆ ಕರೆ ಮಾಡುತ್ತಿದ್ದ. ಆತನ ವರ್ತನೆ ವಿಚಾರ ಪತಿಗೆ ತಿಳಿಸಿ ನಾಗದೇವನಹಳ್ಳಿಗೆ ವಿಳಾಸ ಬದಲಿಸಿದ್ದೆವು.
ನಮ್ಮ ಮನೆ ವಿಳಾಸ ಪತ್ತೆ ಹಚ್ಚಿದ ಸುದರ್ಶನ್ ಪುನ: ಕಿರುಕುಳ ನೀಡುತ್ತಿದ್ದ, ಆತನೊಂದಿಗೆ ಆಪ್ತವಾಗಿ ನಡೆದುಕೊಳ್ಳುವಂತೆ ಪೀಡಿಸುತ್ತಿದ್ದ, ಇಲ್ಲದಿದ್ದರೆ ಗುಂಡಿಟ್ಟು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದ ಎಂದು ವೈದ್ಯೆ ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ರಾಜೀ ಸಂಧಾನ: ವೈದ್ಯೆ ದೂರು ನೀಡುತ್ತಲೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣದಲ್ಲಿ ರಾಜೀಸಂಧಾನ ನಡೆಸಲು ಯತ್ನಿಸಿದ್ದರು. ಜತೆಗೆ, ಸುದರ್ಶನ್‌ನನ್ನು ಠಾಣೆಗೆ ಕರೆಸಿಕೊಂಡು ಮುಂದೆ ತಪ್ಪು ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆಸಿಕೊಂಡರೂ,ಸುಮ್ಮನಾಗದ ಸುದರ್ಶನ್ ಕೆಲ ಅ.16ರಂದು ಮನೆಗೆ ಬಂದು ಜಗಳವಾಡಿ ಪುನ: ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ .
ಗಿರಿನಗರ ಠಾಣೆ ಪೊಲೀಸ್ ಪೇದೆ ಸುದರ್ಶನ್ ಅಸ್ಕಿಯನ್ನು ವೃತ್ತಿಗೆ ಚ್ಯುತಿ ತರುವಂತೆ ನಡೆದುಕೊಂಡ ಆರೋಪ ಕಾರಣಕ್ಕೆ ಅಮಾನತು ಮಾಡಲಾಗಿದೆ. ಪ್ರಕರಣದ ಬಗ್ಗೆ ವರದಿ ನೀಡುವಂತೆ ಎಸಿಪಿಗೆ ಸೂಚಿಸಲಾಗಿದೆ.
ಅಣ್ಣಾಮಲೈ, ಡಿಸಿಪಿ, ದಕ್ಷಿಣ ವಿಭಾಗ