Advertisement
ಇದು ದ್ವಿತೀಯ ಮಹಾಯುದ್ಧ ಕಾಲದಲ್ಲಿ ನಡೆದ ಒಂದು ಕಥೆ.
ಯುದ್ಧ ನಡೆ ಯುತ್ತಿತ್ತು. ಒಂದು ದಿನ ಸಂಜೆಯ ಹೊತ್ತಿಗೆ ಸೈನಿಕರೆಲ್ಲರೂ ಯುದ್ಧ ಭೂಮಿಯಿಂದ ಶಿಬಿರಕ್ಕೆ ಮರಳಿದರು. ಆದರೆ ಇಬ್ಬರು ಗೆಳೆಯರಲ್ಲಿ ಒಬ್ಬನಿಗೆ ತನ್ನ ಸ್ನೇಹಿತ ಬಂದಿಲ್ಲ ಎನ್ನುವುದು ಅರಿವಿಗೆ ಬಂತು. ಅನುದಿನವೂ ಅನೇಕರು ಯುದ್ಧದಲ್ಲಿ ಪ್ರಾಣ ತೆರುತ್ತಿದ್ದಾರೆ, ತನ್ನ ಗೆಳೆಯನೂ ಹಾಗೆ ಸತ್ತನೇನೋ ಎಂಬ ಸಂಶಯ ಇನ್ನೊಬ್ಬ ಯೋಧನಿಗೆ. ಆತ ಕಳವಳದಿಂದ ಶಿಬಿರದೆಲ್ಲೆಡೆ ಓಡಾಡಿ ಹಲವರನ್ನು ವಿಚಾರಿಸಿದ. ಕೆಲವರು ಹೇಳಿದರು, “ಅವನನ್ನು ಮಧ್ಯಾಹ್ನದಿಂದೀಚೆಗೆ ಕಂಡಿಲ್ಲ. ಪ್ರಾಯಃ ಸತ್ತಿರಬಹುದು.’ ಒಬ್ಬ ಸೈನಿಕ ಮಾತ್ರ, “ಆತ ಸತ್ತಿದ್ದಾನೆಯೋ ಇಲ್ಲವೋ ಖಚಿತವಾಗಿ ಗೊತ್ತಿಲ್ಲ. ಆದರೆ ಆತ ತೀವ್ರ ವಾಗಿ ಗಾಯಗೊಂಡು ಬಿದ್ದಿರುವುದನ್ನು ಸಂಜೆಯ ಹೊತ್ತಿಗೆ ಕಂಡಿದ್ದೇನೆ. ಇಷ್ಟು ಹೊತ್ತಿಗೆ ರಕ್ತಸ್ರಾವವಾಗಿ ಸತ್ತುಹೋಗಿರಲೂ ಬಹುದು’ ಎಂದ.
Related Articles
ಮೇಲಧಿಕಾರಿಗಳು ಬುದ್ಧಿವಾದ ಹೇಳಿದರು, “ಬೇಡ, ಈಗ ಹೋಗಬೇಡ. ನಾಳೆ ನೋಡೋಣ. ನೀನು ಹೋದರೆ ಶತ್ರುಗಳ ದಾಳಿಗೆ ಸಿಲುಕುತ್ತೀ. ನೀನೂ ಗಾಯಗೊಳ್ಳುತ್ತೀ… ಬೇಡ, ಹೋಗಬೇಡ.’ ಆದರೆ ಈತ ಕೇಳದೆ ಶಿಬಿರದಿಂದ ಹೊರಗಡಿಯಿರಿಸಿದ.
Advertisement
ತುಂಬಾ ರಾತ್ರಿಯಾಗಿತ್ತು. ಯುದ್ಧಭೂಮಿಯಲ್ಲಿ ಎಲ್ಲೆಡೆ ಶವಗಳು ಬಿದ್ದಿದ್ದವು. ಕತ್ತಲು ಬೇರೆ. ಹುಡುಕುವುದು ತುಂಬಾ ಕಷ್ಟ. ಆಗೀಗ ಗುಂಡುಗಳು ತೂರಿ ಬರುತ್ತಿದ್ದವು.
ಸೈನಿಕ ತನ್ನ ಸ್ನೇಹಿತ ನಿಗಾಗಿ ಹುಡುಕಾಡಿದ. ಕೊನೆಗೆ ನಟ್ಟಿರುಳಿನಲ್ಲಿ ಗೆಳೆಯನ ಶವವನ್ನು ಬೆನ್ನ ಮೇಲೆ ಹೊತ್ತುಕೊಂಡು ತೂರಾಡುತ್ತ ಶಿಬಿರ ತಲುಪಿದ. ಅವನಿಗೂ ಗುಂಡೇಟು ತಗುಲಿತ್ತು, ಮೈಯಿಂದ ರಕ್ತ ಸೋರುತ್ತಿತ್ತು. ಶಿಬಿರದ ಬಾಗಿಲಿನ ಬಳಿಗೆ ಬಂದವನೇ ಗೆಳೆಯನ ಶವವನ್ನು ಇಳುಹಿ ತಾನೂ ಅದರ ಪಕ್ಕದಲ್ಲಿ ಉರುಳಿಕೊಂಡ. ಜೀವ ಹೋಗುವುದು ಆಗಲೋ ಈಗಲೋ ಎಂಬಂತಿತ್ತು.
ಮೇಲಧಿಕಾರಿಗಳು ಮತ್ತು ಜತೆಯ ಸೈನಿಕರು ಸುತ್ತ ನೆರೆದರು. ಮೇಲಧಿಕಾರಿ ಹೇಳಿದ, “ನಾನು ಆಗಲೇ ಹೇಳಿದ್ದೆ, ಇದು ಮೂರ್ಖತನದ ಕೆಲಸ. ಹೋಗಬೇಡ ಎಂದು. ನೋಡೀಗ, ನಾವು ನಿನ್ನನ್ನೂ ಕಳೆದುಕೊಳ್ಳುವಂತಾಯಿತು. ನಿನ್ನ ಗೆಳೆಯ ಸತ್ತಿದ್ದಾನೆ, ನೀನೂ ಸಾಯುತ್ತಿದ್ದೀ…’
ಕುಟುಕು ಜೀವ ಹಿಡಿದುಕೊಂಡಿದ್ದ ಯೋಧ ಕಣ್ತೆರೆದು, “ಆದರೆ ನನ್ನ ಪಾಲಿಗೆ ಅದು ಅಮೂಲ್ಯವಾಗಿತ್ತು. ನೀನು ಬಂದೇ ಬರುತ್ತೀ ಎಂಬುದು ಗೊತ್ತಿತ್ತು ಗೆಳೆಯಾ ಎಂದು ಹೇಳಿಯೇ ಇವನು ಜೀವ ತೊರೆದದ್ದು’ ಎಂದ.
ಪ್ರೀತಿಗಾಗಿ ಪ್ರಾಣವನ್ನೂ ಕೊಡಬಹುದು. ನಾವು ಇದುವರೆಗೆ ತಿಳಿದುಕೊಂಡದ್ದು ಎಂದರೆ, ಬದುಕುವುದಕ್ಕಾಗಿ ಎಲ್ಲವನ್ನೂ ಬಲಿ ಕೊಡಬಹುದು, ತ್ಯಾಗ ಮಾಡಬಹುದು, ಜೀವಿಸುವುದಕ್ಕಾಗಿ ಎಲ್ಲವನ್ನೂ ತೊರೆಯಬಹುದು. ಆದರೆ ನಿಜ ಹಾಗಲ್ಲ; ಪ್ರೀತಿಗಾಗಿ ಎಲ್ಲವನ್ನೂ – ಜೀವನವನ್ನು ಕೂಡ ಅರ್ಪಿಸಬಹುದು.
( ಸಾರ ಸಂಗ್ರಹ)