Advertisement

UV Fusion: ಬದುಕು ಕಲಿಸುತ್ತದೆ, ಕಲಿಯೋಣ

02:27 PM Oct 09, 2023 | Team Udayavani |

ಒಬ್ಬ ಸಾಧು ಗುರು. ಒಂದು ಗುರುಕುಲ. ಇಪ್ಪತ್ತು ಮಂದಿ ಶಿಷ್ಯರು. ಹತ್ತಿರದಲ್ಲೇ ಹರಿಯುವ ಒಂದು ನದಿ. ಇರಲು ಒಂದು ಆಶ್ರಮ. ಅದೇ ಇಷ್ಟೂ ಮಂದಿಯ ಜಗತ್ತು.

Advertisement

ಬೆಳಗ್ಗೆ ಸೂರ್ಯ ಏಳುವ ಮೊದಲೇ ಇವರದ್ದೆಲ್ಲ ವ್ಯಾಯಾಮ. ಬಳಿಕ ನದಿಯಲ್ಲಿ ಸ್ನಾನ. ಅನಂತರ ತೋಟದಲ್ಲಿ ಕೆಲಸ. ಮತ್ತೆ ಓದು. ಗೋಸೇವೆ. ಸಂಜೆಯಾಗುವಾಗ ಕೊಂಚ ವಿರಾಮ. ಸಂಜೆಯ ಗಾಳಿ ತೂಗಿ ಬರುವಾಗ ನದಿಯ ನಾದಕ್ಕೆ ಕಿವಿಗೊಡುವುದು ಒಂದು ಖಯ್ನಾಲಿ.

ಈ ಪೈಕಿ ಮೂವರು ಶಿಷ್ಯರ ಕಲಿಕೆ ಮುಗಿಯಿತು. ಇನ್ನೇನಿದ್ದರೂ ಬದುಕಿನ ಕಲಿಕೆ ಆರಂಭವಾಗಬೇಕು. ಒಂದು ದಿನ ಬೆಳಗ್ಗೆ ಗುರುಗಳ ಎದುರು ಮೂವರೂ ನಿಂತರು. ಗುರುಗಳು ಕಂಡು, “ಭೇಷ್‌ ಚೆನ್ನಾಗಿ ಕಲಿತಿದ್ದೀರಿ. ಇನ್ನು ಹೊರಗೆ ಜಗತ್ತಿನಲ್ಲಿ ಅನ್ವಯಿಸುತ್ತಾ ಬದುಕಿ ಬನ್ನಿ’ ಎಂದು ಹರಸಿದರು.

ಮೂವರೂ ಬದುಕನ್ನು ಕಲಿಯಲು ಹೊರಟರು. ಅದರರ್ಥ ತಿರುಗಾಟ ಆರಂಭ. ನಡೆದೇ ಪಯಣ. ಸುಸ್ತಾದಲ್ಲಿ ಕೊಂಚ ವಿಶ್ರಮಿಸಿ ಮತ್ತೆ ಪ್ರಯಾಣ. ಹೀಗೇ ಮೊದಲನೆಯ ದಿನದ ಪ್ರಯಾಣ ಮುಗಿಯುವಾಗ ರಾತ್ರಿ ಎಂಟರ ಹೊತ್ತು. ಇನ್ನೆರಡು ಗಂಟೆ ನಡೆದಿದ್ದರೆ ಆ ಅರಣ್ಯ ದಾಟಿ ಬಿಡುತ್ತಿದ್ದರು. ಈಗ ಅರಣ್ಯದ ಬಾಗಿಲಲ್ಲೇ ಇದ್ದಾರೆ. ರಾತ್ರಿ ಅಲ್ಲಿಯೇ ಕಳೆಯಬೇಕು.

ಒಬ್ಬನಿಗೆ ನಡೆದೆ ತ್ರಾಸವಾಗಿತ್ತು. ಅತ್ತ ಇತ್ತ ಕಂಡ. ಮರದಲ್ಲಿ ಹಣ್ಣುಗಳು ಕಂಡವು. ಯಾವ ಹಣ್ಣು ಏನೂ ಅರಿಯುವ ಗೋಜಿಗೆ ಹೋಗಲಿಲ್ಲ. ಒಂದಿಷ್ಟು ಕಿತ್ತುಕೊಂಡು ತಿನ್ನುತ್ತಾ “ಎಂಥ ರುಚಿ. ಇಂಥ ರುಚಿಯ ಹಣ್ಣು ಒಂದು ದಿನವೂ ನಮಗೆ ಆಶ್ರಮದಲ್ಲಿ ಸಿಗಲೇ ಇಲ್ಲವಲ್ಲ’ ಎಂದು ಹೇಳುವಷ್ಟರಲ್ಲಿ ಒಂದು ತೇಗು ಬಂದಿತು. ಖುಷಿಯಾಯಿತು. ಅಲ್ಲೇ ಬದಿಯಲ್ಲೇ ಮರಕ್ಕೆ ಒರಗಿ ಕುಳಿತ. ನಿದ್ರೆ ಆವರಿಸಿಕೊಂಡಿತು.

Advertisement

ಮತ್ತೂಬ್ಬ ಮೊದಲಿನವ ಹೇಳಿದ್ದೆಲ್ಲವನ್ನೂ ಕೇಳಿದ. ಆ ಬಳಿಕ ಹಣ್ಣು ಯಾವುದು ಎಂದು ತಿಳಿದುಕೊಳ್ಳಲು ಒಂದು ಹಣ್ಣನ್ನು ಕಿತ್ತ. ಎಲ್ಲೂ ಕಂಡಂತಿರಲಿಲ್ಲ. ಯಾಕೋ ಅನುಮಾನ ಕಾಡತೊಡಗಿತು. ಯಾವ ಹಣ್ಣೋ, ಹೇಗೋ ಎಂದುಕೊಂಡ. ಆದರೂ ಮೊದಲಿನವ ಅಷ್ಟೆಲ್ಲ ತಿಂದನಲ್ಲ ಎನಿಸಿತು. ಹಣ್ಣಿನ ಒಂದು ತುದಿಯನ್ನು ಕಚ್ಚಿದ. ಸ್ವಲ್ಪ ಹುಳಿ, ಒಗರು, ಸಿಹಿ ಎನಿಸಿತು. ಇನ್ನೂ ಸ್ವಲ್ಪ ಕಚ್ಚಿದ. ಮತ್ತೆ ಅದೇ ರುಚಿ. ಯಾಕೋ ಚೆನ್ನಾಗಿಲ್ಲ ಎನಿಸಿತು. ದೂರಕ್ಕೆ ಎಸೆದ. ಹತ್ತಿರದಲ್ಲೇ ತೊರೆಯ ಶಬ್ದ ಕೇಳಿಸುತ್ತಿತ್ತು. ಅತ್ತ ನಡೆದ. ಬೊಗಸೆಯಲ್ಲಿ ಒಂದಿಷ್ಟು ನೀರು ಕುಡಿದ. ವಾಪಸು ಬಂದು ಮಲಗಿದ.

ಮೂರನೆಯವ ಇಬ್ಬರ ಕಥೆಯನ್ನೂ ಕಂಡ. ಏನು ಮಾಡುವುದು? ಎರಡನೆಯವನು ಬುದ್ಧಿವಂತ. ಅದಕ್ಕೇ ಮೊದಲಿನವನಂತೆ ಬಾಯಿಗೆ ಸಿಕ್ಕಿದ್ದು ತಿನ್ನಲಿಲ್ಲ. ನನಗೋ ಅವೆಲ್ಲವನ್ನೂ ತಿಂದು ಬದುಕಲಾರೆ. ಕಷ್ಟ. ಇನ್ನು ತೊರೆಗೆ ಹೋಗಿ ನೀರು ಕುಡಿಯಲೂ ಹೆದರಿಕೆ. ಕತ್ತಲೆಯಲ್ಲಿ ನನ್ನಂತೆಯೇ ಯಾವುದಾದರೂ ಪ್ರಾಣಿ ಬಂದು ನೀರು ಕುಡಿಯುತ್ತಿದ್ದರೆ..ಅದಕ್ಕೆ ಆಹಾರವಾಗಿ ಬಿಟ್ಟರೆ? ಬೇಡವೇ ಬೇಡ. ಹೇಗೋ ರಾತ್ರಿ ಕಳೆಯುವ. ಬೆಳಗಾದ ಮೇಲೆ ಏನಾದರೂ ತಿನ್ನೋಣ ಎಂದು ಮಲಗಿದ.

ಸೂರ್ಯ ಎದ್ದ. ಇವರೂ ಎದ್ದರು. ಎರಡನೆಯವ ಮತ್ತು ಮೂರನೆಯವನಿಗೆ ಹೊಟ್ಟೆ ಜೋರಾಗಿ ಹಸಿಯತೊಡಗಿತ್ತು. ಏನು ತಿನ್ನುವುದು ಎಂದುಕೊಂಡು ಮರವನ್ನು ಕಂಡರು. ಒಂದೂ ಹಣ್ಣು ಕಾಣಲಿಲ್ಲ. ಎಲ್ಲವೂ ಹಸಿರು. ಏನು ಮಾಡುವುದು? ಈ ಕಾಯಿಯನ್ನೇ ತಿನ್ನಬೇಕೇ ಎನಿಸಿತು. ಯಾಕೋ ರುಚಿಸಲಿಲ್ಲ. ಮೂವರೂ ಹೊರಟರು ಮತ್ತೂಂದು ಊರಿಗೆ.

ಅರಣ್ಯ ದಾಟುವಾಗ ಒಂದು ಗುಡ್ಡ ಎದುರಾಯಿತು. ಗುಡ್ಡ ಹತ್ತಿ ಇಳಿದರೆ ಮತ್ತೂಂದು ಊರು. ಮೊದಲನೆಯವ ಏನೂ ಹೇಳದೇ ಮೆಲ್ಲಗೆ ಏರತೊಡಗಿದ. ಎರಡನೆಯವ ಗುಡ್ಡ ಹೇಗಿದ್ದರೂ ಹತ್ತಲೇಬೇಕು. ಇಲ್ಲವಾದರೆ ಊರು ಸಿಗದು ಏನು ಮಾಡುವುದು ಎಂದುಕೊಂಡು ಏರತೊಡಗಿದ. ಮೂರನೆಯವ ಗುಡ್ಡವನ್ನು ಕಣ್ಣಲ್ಲೇ ಅಳೆಯುತ್ತಾ ಇದನ್ನು ಏರಿ ಕೆಳಗಿಳಿಯಲು ಸಾಧ್ಯವೇ? ಇವರಿಗೆಲ್ಲ ಹುಚ್ಚು. ಬೇರೆ ಯಾವುದೋ ದಾರಿ ಇರಬಹುದು. ನೋಡುವ ಎನ್ನುತ್ತಾ ದಾರಿಹೋಕರನ್ನು ಕಾಯುತ್ತಾ ಕುಳಿತ.

ಇಬ್ಬರೂ ಗುಡ್ಡ ಇಳಿದು ಮತ್ತೂಂದು ಊರಿಗೆ ಬಂದರು. ಅಲ್ಲಿ ಒಂದು ದೇವಸ್ಥಾನವಿತ್ತು. ಕೆಲವರು ಅನ್ನದಾನ ಮಾಡುತ್ತಿದ್ದರು. ಮೊದಲನೆಯವ ತಡ ಮಾಡಲಿಲ್ಲ. ಬಂದು ಸಾಲಿಗೆ ನಿಂತ. ಸಿಕ್ಕಿದ್ದನ್ನು ಪಡೆದು ಹತ್ತಿರದಲ್ಲೇ ಕುಳಿತು ಸೇವಿಸಿದ.

ಎರಡನೆಯವನು ಏನು ಮಾಡುವುದೆಂದು ಯೋಚಿಸತೊಡಗಿದ. ಕೊನೆಗೆ ಅನಿವಾರ್ಯವೆಂದು ಹೋಗಿ ಸಾಲಿನಲ್ಲಿ ನಿಂತ. ಅವನ ಸರತಿ ಬರುವಷ್ಟರಲ್ಲಿ ಕೆಲವು ಅಗುಳುಗಳಷ್ಟೇ ಉಳಿದಿದ್ದವು. ಅದನ್ನೇ ಪಡೆದು ಬಂದು ತಿಂದ. ಇತ್ತ ಮೂರನೆಯವ ಏನಾದನೆಂದು ತಿಳಿಯಲಿಲ್ಲ.

ಊಟ ಮುಗಿಸಿ ಸ್ವಲ್ಪ ವಿಶ್ರಮಿಸಿ ಇಬ್ಬರೂ ಪ್ರಯಾಣ ಮುಂದುವರಿಸಿದರು. ಹೀಗೇ ನಡೆದು ನಡೆದೂ ಒಂದು ನದಿಯ ದಡಕ್ಕೆ ಬಂದರು. ಆ ದಡ ದಾಟಿದರೆ ಮತ್ತೂಂದು ಊರು. ದೋಣಿ, ಅಂಬಿಗ ಯಾರೂ ಇರಲಿಲ್ಲ. ಮೊದಲನೆಯವ ಈಜು ಸ್ವಲ್ಪ ಬರುತ್ತಿತ್ತು. ಧೈರ್ಯ ಮಾಡಿ ನೀರಿಗೆ ಇಳಿದು ಈಜುತ್ತಾ ಈಜುತ್ತಾ ಮತ್ತೂಂದು ದಡ ಸೇರಿದ. ಮತ್ತೂಬ್ಬನಿಗೆ ಈಜು ಬಾರದು. ಸಹಾಯಕ್ಕೂ ಯಾರೂ ಬರಲಿಲ್ಲ. ವಿಧಿಯಿಲ್ಲದೆ ಅಲ್ಲೇ ಉಳಿದ.

ಮತ್ತೂಂದು ಊರು ಸೇರಿದ ಮೊದಲನೆಯವ ಅಲ್ಲೆಲ್ಲ ಸುತ್ತಾಡಿ, ಒಂದಿಷ್ಟು ಜನರನ್ನು ಮಾತನಾಡಿಸಿ, ಒಂದಿಷ್ಟು ವಿಶಿಷ್ಟ ಸಾಧಕರನ್ನೂ ಕಂಡು ಎಲ್ಲ ಮುಗಿಸಿ ಒಂದಿಷ್ಟು ದಿನಗಳ ಬಳಿಕ ವಾಪಸು ಗುರುಕುಲಕ್ಕೆ ಬಂದ. ಅಷ್ಟರಲ್ಲಿ ಇನ್ನಿಬ್ಬರೂ ಅಲ್ಲಿಗೆ ಬಂದಿದ್ದರು.

ಗುರುಗಳು ಮರು ದಿನ ಬೆಳಗ್ಗೆ ಎಲ್ಲ ಶಿಷ್ಯಂದಿರ ಎದುರು ಇವರನ್ನೂ ಕರೆದು, ಅನುಭವಗಳನ್ನು ಹಂಚಿಕೊಳ್ಳಿ ಎಂದರು. ಮೂವರೂ ತಮ್ಮ ತಮ್ಮ ಅನುಭವ ಹಂಚಿಕೊಂಡರು. ಎಲ್ಲ ಮುಗಿದ ಮೇಲೆ ಗುರುಗಳು, ಎಲೆಯ ಮೇಲಿನ ಒಂದು ನೀರುಗುಳ್ಳೆಯನ್ನು ತೋರಿಸಿ, “ಬದುಕು, ನಮ್ಮ ಬದುಕೂ ಈ ನೀರುಗುಳ್ಳೆಯಂತೆಯೇ. ಯಾವುದೇ ಕ್ಷಣಗಳಲ್ಲಿ ನಾಶವಾದೀತು. ಹಾಗೆಂದು ಆ ಕ್ಷಣದೊಳಗೆ ಅನುಭವಿಸಬೇಕು. ಅದೇ ಬದುಕು’ ಎಂದರು.

ಮೊದಲನೆಯವ ಬದುಕು ಬಂದಂತೆ ಸ್ವೀಕರಿಸಿದ. ಎಲ್ಲಿ ಅಗತ್ಯವೋ ಅಲ್ಲಿ ತನ್ನಲ್ಲಿದ್ದ ಅರೆಬರೆ ತಿಳಿವಾದರೂ ಬಳಸಲು ಹಿಂಜರಿಯಲಿಲ್ಲ. ಪ್ರಯತ್ನಿಸಿದ. ಪ್ರತಿ ಕ್ಷಣವನ್ನೂ ಬದುಕಬೇಕೆಂಬುದಕ್ಕೇ ಅನುಭವಿಸಿದ. ಬದುಕು ಅರ್ಥವಾಯಿತು. ಬದುಕನ್ನು ಗೆದ್ದು ಬಂದ.

ಎರಡನೆಯವನಲ್ಲಿ ಉತ್ಸಾಹವಿತ್ತು. ಆದರೆ ಆಯ್ಕೆಯಲ್ಲೇ ಅರ್ಧ ಬದುಕಿನ ಕಾಲವನ್ನು ಕಳೆದ. ಆಯ್ಕೆ ಸಿಕ್ಕಿತೆನ್ನುವಷ್ಟರಲ್ಲಿ ಅದೃಷ್ಟ ಕೈ ಕೊಟ್ಟಿತು. ಒಟ್ಟಿನಲ್ಲಿ ಇತ್ತ ಬದುಕನ್ನು ಸಂಪೂರ್ಣ ಅನುಭವಿಸಲೂ ಇಲ್ಲ, ಮತ್ತೂಂದೆಡೆ ಇಲ್ಲವೆನ್ನುವಂತೆಯೂ ಇಲ್ಲ. ತ್ರಿಶಂಕು ಸ್ವರ್ಗ.

ಮೂರನೆಯವನಿಗೆ ಬದುಕನ್ನು ಗೆಲ್ಲುವುದಕ್ಕಿಂತ ಬೇರೆಯವರ ಕಷ್ಟವನ್ನು ಕಂಡೇ ದಣಿದು ಹೋದ. ಅನ್ಯಥಾ ಅವರ ಪರಿಸ್ಥಿತಿಯಲ್ಲಿ ತನ್ನನ್ನು ಇರಿಸಿಕೊಂಡು ಹಲುಬಿದ. ಬದುಕೂ ಸಿಗಲಿಲ್ಲ, ಗೆಲುವೂ ಸಿಗಲಿಲ್ಲ. ಆಯುಷ್ಯ ಹರಣವಾಯಿತಷ್ಟೇ.

ಬದುಕು ಇರುವುದು ಬದುಕಲಿಕ್ಕೆ, ಅನುಭವಿಸಲಿಕ್ಕೆ. ನಾವು ಪಡೆಯುವ ಕಲಿಕೆ ಇತ್ಯಾದಿ ಎಲ್ಲವೂ ಇದನ್ನು ಅನುಭವಿಸಲು ಇರುವ ಸಾಧನಗಳಷ್ಟೇ. ಅವುಗಳೇ ಸಾಧನೆಯಲ್ಲ. ಕಲಿತದ್ದನ್ನೂ ಪ್ರಯೋಗಿಸುತ್ತಾ, ಅನ್ವಯಿಸುತ್ತಾ ಬದುಕನ್ನು ಗೆಲ್ಲಬೇಕು. ಅದೇ ಆತ್ಮ ತೃಪ್ತಿಯ ಕಾಯಕ.

ಇಷ್ಟು ಹೇಳಿ ಗುರುಗಳು, ಇಲ್ಲಿ ಕಲಿತರಷ್ಟೇ ಸಾಲದು, ಕಲಿತದ್ದನ್ನು ಪ್ರಯೋಗಿಸುವುದನ್ನೂ ಕಲಿಯಬೇಕು’ ಎಂದರು. ಈ ಮಾತು ಅಕ್ಷರಶಃ ಸತ್ಯ. ಕಲಿಕೆ ಬದುಕುವುದನ್ನು ಕಲಿಸೀತು, ಬದುಕು ಕಲಿಯುವುದನ್ನು ಕಲಿಸಿಯೇ ಕಲಿಸುತ್ತದೆ. ಅದಕ್ಕೆ ಸಂಶಯವಿಲ್ಲ.

ಅಪ್ರಮೇಯ

Advertisement

Udayavani is now on Telegram. Click here to join our channel and stay updated with the latest news.

Next