Advertisement
ಹೌದು, ರವೀಂದ್ರ ಜಡೇಜಾ ಶ್ರೀಮಂತರ ಮನೆತನದ ಹುಡುಗ ಏನಲ್ಲ. ಬಾಲ್ಯದಲ್ಲಿ ತುಂಬಾನೇ ಕಷ್ಟಪಟ್ಟಿದ್ದ ಜಡೇಜಾ ಇಂದು ವಿಶ್ವ ಕ್ರಿಕೆಟ್ ನಲ್ಲಿ ಸೂಪರ್ ಸ್ಟಾರ್ ಆದ ಕಥೆ ಏನು ಸುಲಭದಲ್ಲ. ಅಲ್ಲಿ ಬಡತನವಿತ್ತು, ನೋವಿತ್ತು, ಹತಾಶೆಯಿತ್ತು, ಅವಮಾನವಿತ್ತು. ಅದಕ್ಕೂ ಮೇಲಾಗಿ ಸಾಧಿಸಿಯೇ ತೀರುತ್ತೇನೆಂಬ ಛಲವಿತ್ತು. ಅದುವೇ ಗುಜರಾತ್ ನ ಜ್ಯಾಮ್ ನಗರದ ಹುಡುಗ ರವೀಂದ್ರ ಸಿನ್ಹ ಜಡೇಜಾನನ್ನು ವಿಶ್ವ ಗುರುತಿಸುವಂತೆ ಮಾಡಿದ್ದು.
ರವೀಂದ್ರ ಸಿನ್ಹ ಅನಿರುದ್ದ್ ಸಿನ್ಹಾ ಜಡೇಜಾ ಹುಟ್ಟಿದ್ದು ಡಿಸೆಂಬರ್ ಆರು 1988ರಂದು. ತಂದೆ ಅನಿರುದ್ದ್ ಸಿನ್ಹಾ ಖಾಸಗಿ ಕಂಪೆನಿಯಲ್ಲಿ ವಾಚ್ ಮ್ಯಾನ್. ತಾಯಿ ಲತಾ. ಅಕ್ಕ ನೈನಾ ಆಸ್ಪತ್ರೆಯೊಂದರಲ್ಲಿ ನರ್ಸ್. ಇವರೇ ಜಡೇಜಾ ಕ್ರಿಕೆಟ್ ಜೀವನಕ್ಕೆ ಮರು ಹುಟ್ಟು ನೀಡಿದ್ದು. ಅಕ್ಕ ನೈನಾರ ಬೆಂಬಲ ಇಲ್ಲದೇ ಇದ್ದರೆ ಜಡೇಜಾ ಇಂದು ಸೇನೆಯಲ್ಲೋ ಅಥವಾ ಇನ್ಯಾವುದೋ ಕೆಲಸ ಮಾಡಿಕೊಂಡಿರುತ್ತಿದ್ದರು. 2005ರಲ್ಲಿ ಮೊದಲ ಬಾರಿಗೆ ಭಾರತೀಯ ಅಂಡರ್ 19 ತಂಡಕ್ಕೆ ಆಯ್ಕೆಯಾದಾಗ ಜಡೇಜಾಗಿನ್ನು 19ರ ಹರೆಯ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜಡೇಜಾ ಮೂರು ವಿಕೆಟ್ ಪಡೆದು ಮಿಂಚಿದರೂ ಭಾರತ ಸೋತಿತ್ತು. ನಂತರ 2008ರ ಅಂಡರ್ 19 ವಿಶ್ವಕಪ್ ತಂಡದಲ್ಲಿ ಉಪನಾಯಕನಾಗಿದ್ದ ಜಡೇಜಾ ಕೂಟದಲ್ಲಿ 10 ವಿಕೆಟ್ ಪಡೆದು ಮಿಂಚಿದರು. ಆ ವಿಶ್ವಕಪ್ ಗೆದ್ದ ಭಾರತದ ಹುಡುಗರ ನಾಯಕನಾಗಿದ್ದು ವಿರಾಟ್ ಕೊಹ್ಲಿ.
Related Articles
Advertisement
2008ರ ಫೆಬ್ರವರಿ ಎಂಟರಂದು ಮೊದಲ ಬಾರಿಗೆ ರವೀಂದ್ರ ಜಡೇಜಾ ಟೀಂ ಇಂಡಿಯಾ ಕ್ಯಾಪ್ ತೊಟ್ಟರು. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಜಡೇಜಾ ಮೊದಲ ಪಂದ್ಯದಲ್ಲೇ 60 ರನ್ ಗಳಿಸಿದ್ದರು. ಎರಡು ದಿನಗಳ ನಂತರ ಅಂತಾರಾಷ್ಟ್ರೀಯ ಟಿ- ಟ್ವೆಂಟಿ ಪದಾರ್ಪಣೆ ಮಾಡಿದರೂ 2009ರ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ನೀರಸ ಪ್ರದರ್ಶನದಿಂದ ಜಡೇಜಾ ಭಾರಿ ಟೀಕೆಗೊಳಗಾದರು. ಆ ಸಮಯದಲ್ಲಿ ತಂಡದಿಂದ ಜಡೇಜಾ ಹೊರಬಿದ್ದರು. ಸ್ಥಿರ ಪ್ರದರ್ಶನದ ಕೊರತೆಯಿಂದಾಗಿ 2011ರ ವಿಶ್ವಕಪ್ ಆಡುವ ಅವಕಾಶ ತಪ್ಪಿಸಿಕೊಂಡರು.ತಂಡದಲ್ಲಿ ಆಲ್ ರೌಂಡರ್ ಆಗಿದ್ದ ಯೂಸುಫ್ ಪಠಾಣ್ ಅವರ ಕಳಪೆ ಪ್ರದರ್ಶನದಿಂದ ಹೊರ ಬಿದ್ದಾಗ ಜಡೇಜಾ ಮತ್ತೆ ಟೀಂ ಇಂಡಿಯಾ ಸೇರಿದರು. ಕಮ್ ಬ್ಯಾಕ್ ಮಾಡಿದ ಮೊದಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಪಡೆದ ಜಡ್ಡು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. 2012ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಜಡೇಜಾ, ರವಿ ಅಶ್ವಿನ್ ಜೊತೆಗೆ ತಂಡದ ಖಾಯಂ ಸ್ಪಿನ್ನರ್ ಆಗಿದ್ದರು. ಕೆಲವು ಟೆಸ್ಟ್, ಏಕದಿನ ಸರಣಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಡ್ಡು, 2015ರ ಏಕದಿನ ವಿಶ್ವಕಪ್ ಗೆ ಆಯ್ಕೆಯಾದ ಜಡ್ಡು, ಎಂಟು ಪಂದ್ಯಗಳಿಂದ ಒಂಬತ್ತು ವಿಕೆಟ್ ಕಬಳಿಸಿದರು. ಆದರೆ ಬ್ಯಾಟಿಂಗ್ ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಜಡ್ಡು, ನಂತರ ಟೀಂ ಇಂಡಿಯಾದಿಂದ ಹೊರ ಬೀಳಬೇಕಾಯಿತು. ಈ ವೇಳೆಗೆ ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ತಂಡಕ್ಕೆ ಕಾಲಿಟ್ಟು ಮಿಂಚಿದ್ದರಿಂದ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಗೆ ತಂಡದ ಬಾಗಿಲು ಮುಚ್ಚಿತ್ತು.
2019ರಲ್ಲಿ ಹಾರ್ದಿಕ್ ಪಾಂಡ್ಯಾ ಗಾಯಾಳಾಗಿ ಟೀಂ ಇಂಡಿಯಾದಲ್ಲಿ ಆಲ್ ರೌಂಡರ್ ಕೊರತೆ ಎದುರಾದಾಗ ರವೀಂದ್ರ ಜಡೇಜಾಗೆ ಮತ್ತೆ ರಾಷ್ಟ್ರೀಯ ತಂಡದ ಕರೆ ಬಂತು. 2019ರ ವಿಶ್ವಕಪ್ ತಂಡಕ್ಕೆ ಕೊನೆಯದಾಗಿ ಆಯ್ಕೆಯಾದ ಜಡೇಜಾ ಮಾತ್ರ ತಮ್ಮ ಆಯ್ಕೆಯನ್ನು ಉತ್ತಮವಾಗಿ ಸಮರ್ಥಿಸಿಕೊಂಡರು. ಮಿಂಚಿನ ವೇಗದ ಫೀಲ್ಡಿಂಗ್, ನಿಖರ ಬೌಲಿಂಗ್ ಮತ್ತು ನಿರ್ಣಾಯಕ ಸೆಮಿ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಡೇಜಾ ಮುಂದೆ ಟೀಂ ಇಂಡಿಯಾದ ಖಾಯಂ ಆಟಗಾರನಾಗುವ ವಿಶ್ವಾಸದಲ್ಲಿದ್ದಾರೆ. 2016ರ ಎಪ್ರಿಲ್ 17ರಂದು ರಿವಾ ಸೋಲಂಕಿಯವರನ್ನು ವಿವಾಹವಾದ ಜಡೇಜಾಗೆ ನಿಧ್ಯಾನ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ. 2019ರಲ್ಲಿ ರಿವಾ ಸೋಲಂಕಿ ಭಾರತೀಯ ಜನತಾ ಪಾರ್ಟಿಗೆ ಸೇರಿದರೆ, ಅದೇ ಸಮಯದಲ್ಲಿ ಜಡೇಜಾ ತಂದೆ ಮತ್ತು ಅಕ್ಕ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.