Advertisement
ಆಂಧ್ರ ಪ್ರದೇಶದ ಕಾಕಿನಾಡದಲ್ಲಿ 1993 ಅಕ್ಟೋಬರ್ 13ರಂದು ಜನಿಸಿದವರು ಗಾಡೆ ಹನುಮ ವಿಹಾರಿ. ಬಲಗೈ ಬ್ಸಾಟ್ಸ್ ಮನ್ ಆಗಿರುವ ವಿಹಾರಿ ಬಲಗೈ ಆಫ್ ಸ್ಪಿನ್ನರ್ ಕೂಡ. 2012ರ ಅಂಡರ್ 19 ವಿಶ್ವಕಪ್ ಆಡಬಯಸಿದ್ದರೂ ಮೊದಲು ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆದರೆ ಒಬ್ಬ ಆಟಗಾರ ಗಾಯಗೊಂಡು ತಂಡದಿಂದ ಹೊರಬಿದ್ದಾಗ ಆ ಜಾಗಕ್ಕೆ ಹನುಮ ವಿಹಾರಿ ಆಯ್ಕೆಯಾದರು.
Related Articles
Advertisement
2014ರ ಐಪಿಎಲ್ ಆವೃತ್ತಿಯಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ವಿಹಾರಿಯನ್ನು ಕೈಬಿಟ್ಟಿತು. ಈ ಅವಮಾನದಿಂದ ಎದೆಗುಂದದೆ ಸವಾಲಾಗಿ ಸ್ವೀಕರಿಸಿದ ವಿಹಾರಿ, ಒಂದು ದಿನ ಈ ಫ್ರಾಂಚೈಸಿಗಳೇ ತನನ್ನು ದುಂಬಾಲು ಬಿದ್ದು ಖರೀದಿಸಬೇಕು. ಅಂತಹ ಆಟಗಾರರ ತಾನಾಗಬೇಕು ಒಂದು ಖಚಿತ ನಿರ್ಧಾರ ಮಾಡಿದ್ದ.
ಹೈದರಾಬಾದ್ ಪರ ರಣಜಿ ಕ್ರಿಕೆಟ್ ಆಡುತ್ತಿದ್ದ ಹನುಮ ತನ್ನ ಆಟದಿಂದ ತಂಡಕ್ಕೇನೋ ನೆರವಾಗುತ್ತಿದ್ದ. ಆದರೆ ಆ ಆಟ ಅವನನ್ನು ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಲು ನೆರವಾಗುತ್ತಿರಲಿಲ್ಲ. ಏತನ್ಮಧ್ಯೆ ಹೈದರಾಬಾದ್ ತಂಡ ತೊರೆದು ಆಂಧ್ರಪ್ರದೇಶ ರಣಜಿ ತಂಡ ಸೇರಿದ ಹನುಮ ಅಲ್ಲಿಯೂ ಮಿಂಚಲಾರಂಭಿಸಿದ.
ರನ್ ಗುಡ್ಡೆ ಹಾಕತೊಡಗಿದ, ಆಂಧ್ರ ತಂಡದ ನಾಯಕನೂ ಆದ. 2017-18ರ ರಣಜಿ ಋತುವಿನ ಆರು ಪಂದ್ಯಗಳಿಂದ 752 ರನ್ ಬಾರಿಸಿದ. ಒಡಿಶಾ ವಿರುದ್ಧದ ಹನುಮ ವಿಹಾರಿ ಸಿಡಿಸಿದ ಅಜೇಯ ತ್ರಿಶತಕದ ಸುದ್ದಿ ರಾಷ್ಟ್ರೀಯ ಆಯ್ಕೆಗಾರರ ಕಿವಿಗೂ ಬಿದ್ದಿತ್ತು.
ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 60ರ ಸರಾಸರಿಯಲ್ಲಿ ರನ್ ಕಲೆ ಹಾಕುತ್ತಿದ್ದ ಹನುಮನಿಗೆ ಮೊದಲ ಬಾರಿ ರಾಷ್ಟ್ರೀಯ ತಂಡದ ಬುಲಾವ್ ಬಂದಿದ್ದು 2018ರ ಇಂಗ್ಲೆಂಡ್ ಸರಣಿಗೆ. ಮೊದಲ ಟೆಸ್ಟ್ ಇನ್ನಿಂಗ್ಸ್ ನಲ್ಲೇ ಅರ್ಧಶತಕ ಸಿಡಿಸಿದ ವಿಹಾರಿ ಆ ಪಂದ್ಯದಲ್ಲಿ ಅಲಿಸ್ಟರ್ ಕುಕ್ ವಿಕೆಟ್ ಕೂಡಾ ಪಡೆದರು. ಅದು ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಲೆಜೆಂಡ್ ಅಲಿಸ್ಟರ್ ಕುಕ್ ಅವರ ಕೊನೆಯ ಟೆಸ್ಟ್ ಇನ್ನಿಂಗ್ಸ್ !
ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರ್ಣಾಯಕ ಇನ್ನಿಂಗ್ಸ್ ಆಡಿದ ಎರಡು ಅರ್ಧಶತಕ ಮತ್ತು ಒಂದು ಶತಕ ಸಿಡಿಸಿದರು. ವೆಸ್ಟ್ ಇಂಡೀಸ್ ನಲ್ಲಿನ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿಹಾರಿ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸ್ಥಾನ ಭದ್ರಗೊಳಿಸಿದ್ದಾರೆ. ಐದು ವರ್ಷಗಳ ನಂತರ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಡೇರ್ ಡೆವಿಲ್ಸ್ ಹನುಮ ವಿಹಾರಿಯನ್ನು 2 ಕೋಟಿ ಕೊಟ್ಟು ಖರೀದಿಸಿದೆ.
ತಮ್ಮ ಪ್ರತಿಭೆಯಿಂದಲೇ ತಂಡದಲ್ಲಿ ಸ್ಥಾನ ಗಿಟ್ಟಿಸಿರುವ ಹನುಮ ವಿಹಾರಿ ಭವಿಷ್ಯದಲ್ಲಿ ಟೀಂ ಇಂಡಿಯಾದ ತಾರಾ ಆಟಗಾರನಾಗುವ ಲಕ್ಷಣ ತೋರಿಸಿದ್ದಾರೆ. ತನ್ನ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಂಡರೆ ಇದರಲ್ಲಿ ಅನುಮಾನವೇ ಇಲ್ಲ.