Advertisement

ಬೆಂಕಿಯಲ್ಲಿ ಅರಳಿದ ಹೂವು: ಬಡತನ, ಕಷ್ಟಗಳ ಮಧ್ಯೆ ಸಾಧನೆ ಮಾಡಿದ ಚೇತನ್ ಸಕಾರಿಯಾ

04:08 PM Apr 15, 2021 | ಕೀರ್ತನ್ ಶೆಟ್ಟಿ ಬೋಳ |

ಬಡತನ, ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ತನ್ನ ಗುರಿ ಸಾಧನೆಗೆ ಸತತ ಪ್ರಯತ್ನ ಮಾಡುವವರು ಎಂದೂ ತಮ್ಮ ಪ್ರಯತ್ನದಲ್ಲಿ ಜಯ ಪಡುತ್ತಾರೆ. ತಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಪಡೆಯುತ್ತಾರೆ. ಈ ಲೇಖನದ ಹೀರೋ ಕೂಡಾ ಹಾಗೆ ಕಷ್ಟಗಳ ಸರಮಾಲೆಯನ್ನು ಕಂಡಾತ. ವೈಯಕ್ತಿಕ ಬದುಕಿನಲ್ಲಿ ದುರಂತಗಳನ್ನು ನೋಡಿದಾತ. ಒಂದರ್ಥದಲ್ಲಿ ಈತ ಬೆಂಕಿಯಲ್ಲಿ ಅರಳಿದ ಹೂವು!

Advertisement

ಈತ ಚೇತನ್ ಸಕಾರಿಯಾ. ಗುಜರಾತ್ ನ ವರ್ತೆಜ್ ಎಂಬ ಹಳ್ಳಿಯ ಹುಡುಗ. ಇದು ರಾಜಕೋಟ್ ನಿಂದ 180 ಕಿ.ಮೀ ದೂರದಲ್ಲಿರುವ ಹಳ್ಳಿ. ಬಾಲ್ಯದಿಂದಲೂ ಕ್ರಿಕೆಟ್ ಹುಚ್ಚಿದ್ದ ಸಕಾರಿಯಾ ಟೆನ್ನಿಸ್‌ ಬಾಲ್ ಕ್ರಿಕೆಟ್ ಆಡಿಕೊಂಡು ಬೆಳಿದಿದ್ದ. 12ನೇ ತರಗತಿಯವರೆಗೆ ಬ್ಯಾಟ್ಸ್‌ಮನ್‌ ಆಗಿದ್ದ ಚೇತನ್, ಕಾಲೇಜಿನಲ್ಲಿ ಬೌಲರ್ ಗಳಿಗೆ ಹೆಚ್ಚಿನ ಅವಕಾಶ ದೊರೆಯುತ್ತಿದ್ದನ್ನು ಕಂಡು ಬೌಲಿಂಗ್ ನಡೆಸಲಾರಂಭಿಸಿದ.

ಬಾಲ್ಯದಿಂದಲೇ ಬಡತನದ ಕಷ್ಟಗಳನ್ನು ನೋಡಿದಾತ. ಚೇತನ್ ನ ತಂದೆ ಟೆಂಪೋ ಓಡಿಸುತ್ತಿದ್ದರು. ಅವರ ಆದಾಯದಿಂದಲೇ ಕುಟುಂಬ ನಿರ್ವಹಣೆ ನಡೆಯಬೇಕಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ಅವರು ಕೆಲಸ ಬಿಡಬೇಕಾದ ಸ್ಥಿತಿ ಬಂದಾಗ ಹಿರಿಯ ಮಗ ಚೇತನ್ ದುಡಿಯಬೇಕಾದ ಪರಿಸ್ಥಿತಿ ಎದುರಾಗಿತ್ತು.

16ನೇ ವಯಸ್ಸಿನ ತನಕ ಯಾವುದೇ ಕೋಚಿಂಗ್ ಗೆ ಹೋದವನಲ್ಲ. ಸ್ವಂತ ಪರಿಶ್ರಮದಿಂದ ಕಲಿತವ. ಆರು ವರ್ಷಗಳ ಹಿಂದೆ ಮೊದಲ ಬಾರಿಗೆ ಕೂಚ್ ಬೆಹಾರ್ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಆಡಿದ ಚೇತನ್ ಅದ್ಭುತ ಸಾಧನೆ ಮಾಡಿದ್ದ. ಆಡಿದ ಆರು ಪಂದ್ಯಗಳಲ್ಲಿ ಚೇತನ್ 18 ವಿಕೆಟ್ ಕಬಳಿಸಿದ್ದ. ಕರ್ನಾಟಕ ತಂಡದ ವಿರುದ್ಧ ಐದು ವಿಕೆಟ್ ಪಡೆದು ಮಿಂಚಿದ್ದ. ಈ ಪ್ರದರ್ಶನದ ಬಳಿಕ ಗ್ಲೆನ್ ಮೆಕ್ ಗ್ರಾತ್ ರ ಪೇಸ್ ಫೌಂಡೇಶನ್‌ನಲ್ಲಿ ಸ್ಕಾಲರ್ ಶಿಪ್ ಮತ್ತು ತರಬೇತಿ ಪಡೆಯುವ ಅವಕಾಶ ಪಡೆದ.

Advertisement

ಚೇತನ್ ತನ್ನ ಬೌಲಿಂಗ್ ನಿಂದ ಸ್ಥಳೀಯವಾಗಿ ಹೆಸರು ಗಳಿಸಿದ್ದ. ಸೌರಷ್ಟ್ರ ಹಿರಿಯರ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಮೂಡಿಸಿದ್ದ. ಆದರೆ ಬೌಲಿಂಗ್ ನಡೆಸುವಾಗ ಧರಿಸಲು ಚೇತನ್ ಗೆ ಸರಿಯಾದ ಶೂ ಕೂಡಾ ಇರಲಿಲ್ಲ. ಭಾವ್ ನಗರದಲ್ಲಿ ಅಭ್ಯಾಸ ನಡೆಸುವ ವೇಳೆ ಇದನ್ನು ಗಮನಿಸಿದ ಸೌರಾಷ್ಟ್ರ ಆಟಗಾರ ಶೆಲ್ಡನ್ ಜ್ಯಾಕ್ಸನ್ ಆತನಿಗೆ ಒಂದು ಜೊತೆ ಶೂ ಉಚಿತವಾಗಿ ನೀಡಿದ್ದರು.

ಇದನ್ನೂ ಓದಿ:‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು

ಚೇತನ್ ನ ತಂದೆ ಚಾಲಕ ವೃತ್ತಿ ಬಿಟ್ಟ ಮೇಲೆ ಕುಟುಂಬದ ಆದಾಯ ನಿಂತು ಹೋಗಿತ್ತು. ಮಗನ ಕ್ರಿಕೆಟ್ ಖರ್ಚುಗಳಿಗೆ ಹಣ ನೀಡಲು ತಂದೆಗೆ ಸಾಧ್ಯವಾಗಲಿಲ್ಲ. ಈ ವೇಳೆ ನೆರವಿಗೆ ಬಂದ ಸಂಬಂಧಿಯೋರ್ವರು ಚೇತನ್ ನ ಕ್ರಿಕೆಟ್ ಕುರಿತಾದ ಎಲ್ಲಾ ಖರ್ಚುಗಳನ್ನು ತಾನೇ ನೋಡಿಕೊಂಡರು.

ಚೇತನ್ ಗೆ ಆಗ 17 ವರ್ಷ. ಕ್ರಿಕೆಟ್ ನಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಹಠ ಹೊಂದಿದ್ದ ಹುಡುಗನಿಗೆ ಸರಿಯಾದ ಮಾರ್ಗದರ್ಶನದ ಕೊರತೆಯಿತ್ತು. ಬೌಲಿಂಗ್ ವೇಗ ಹೆಚ್ಚಿಸಲು ಹೋದ ಚೇತನ್ ಹೆಚ್ಚು ಹೆಚ್ಚು ಅಭ್ಯಾಸ ಮಾಡತೊಡಗಿದೆ. ಇದು ಆತನ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಗಾಯಗೊಂಡ ಚೇತನ್ ಮತ್ತೆ ಬೌಲಿಂಗ್ ನಡೆಸಲು ಒಂದು ವರ್ಷವೇ ಕಾಯಬೇಕಾಯಿತು. ಆದರೆ ಈ ಸಮಯದಲ್ಲಿ ತನಗೆ ಸಹಾಯ ಮಾಡಿದ ಸಂಬಂಧಿಯ ಸಗಟು ಸಾಮಾಗ್ರಿ ಮಾರಾಟದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ಬಿಲ್ಲಿಂಗ್, ಟ್ಯಾಲಿ, ಬ್ಯಾಂಕ್ ವ್ಯವಹಾರಗಳನ್ನು ಮಾಡಿ ಸಂಪಾದನೆಗೆ ದಾರಿ ಕಂಡುಕೊಂಡ.

2018-19ರ ರಣಜಿ ಕೂಟದಲ್ಲಿ ಸೌರಾಷ್ಟ್ರ ಪರ ಆಡಿದ ಚೇತನ್, ಇದುವರೆಗೆ 15 ಪ್ರಥಮ ದರ್ಜೆ ಪಂದ್ಯಗಳು, ಏಳು ಲಿಸ್ಟ್ ಎ ಕ್ರಿಕೆಟ್, 16 ಟಿ20 ಪಂದ್ಯಗಳನ್ನಾಡಿದ್ದಾನೆ. ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಕೂಟದಲ್ಲಿ 12 ವಿಕೆಟ್ ಕಬಳಿಸಿದ ಚೇತನ್, ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವ ಅವಕಾಶ ಪಡೆದಿದ್ದಾನೆ.

ಚೇತನ್ ಅತ್ತ ಸಯ್ಯದ್ ಮುಷ್ತಾಕ್ ಅಲಿ ಟ್ರೋಪಿಯಲ್ಲಿ ಆಡುತ್ತಿದ್ದರೆ, ಇತ್ತ ಮನೆಯಲ್ಲಿ ಕಿರಿಯ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದ. ವಿಚಾರ ತಿಳಿದರೆ ಚೇತನ್ ಕೂಟದಿಂದ ಹಿಂದೆ ಬರುತ್ತಾನೆ ಎಂದು ಆತನ ತಾಯಿ, ತಮ್ಮನ ಸಾವಿನ ಸುದ್ದಿಯನ್ನು ಚೇತನ್ ಗೆ ಹೇಳಿರಲೇ ಇಲ್ಲ. ಹತ್ತು ದಿನಗಳ ಬಳಿಕ ತಮ್ಮನ ಸಾವಿನ ಸುದ್ದಿ ತಿಳಿದ ಚೇತನ್ ವಾರಗಟ್ಟಲೆ ಮನೆಯವರೊಂದಿಗೆ ಮಾತನಾಡಲೇ ಇಲ್ಲ.

ಸದ್ಯ ರಾಜಸ್ಥಾನ ರಾಯಲ್ಸ್ ತಂಡ ಈ ಯುವ ವೇಗಿಯನ್ನು 1.2 ಕೋಟಿ ರೂ. ಬೆಲೆಗೆ ಖರೀದಿಸಿದೆ. ಆಡಿದ ಮೊದಲ ಪಂದ್ಯದಲ್ಲೇ ಪಂಜಾಬ್ ವಿರುದ್ಧ 31 ರನ್ ನೀಡಿ ಮೂರು ವಿಕೆಟ್ ಪಡೆದು, ಭವಿಷ್ಯದಲ್ಲಿ ಟೀಂ ಇಂಡಿಯಾದಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾನೆ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next