Advertisement
ಒಮ್ಮೆ ಲೋಕಕ್ಕೆಲ್ಲ ಬರಗಾಲ ಬಂತು. ನದಿ, ಕೆರೆ, ಬಾವಿಗಳೆಲ್ಲ ಒಣಗಿದವು. ಬೇಸಾಯ ಕಷ್ಟವಾಗಿ ಬದುಕು ಕಷ್ಟವಾಯ್ತು. ಜನರ ಕಷ್ಟ ನೋಡಿದ ಗೌತಮ ಮಹರ್ಷಿಗಳು ಉಗ್ರತಪಸ್ಸು ಮಾಡಿದರು. ಬ್ರಹ್ಮ ಪ್ರತ್ಯಕ್ಷನಾಗಿ, ಬಿತ್ತಿದ ಕೂಡಲೆ ಬೀಜವಾಗಿ ಸಮೃದ್ಧ ಬೆಳೆ ನೀಡುವ ಮೂರು ಬೀಜಗಳನ್ನು ನೀಡಿದನು. ಗೌತಮರು ಆ ಬೀಜಗಳನ್ನು ಅಹಲೆಗೆ ನೀಡಿದರು. ಅಹಲೆ ಪ್ರತಿ ದಿನ ಆ ಬೀಜ ನೆಟ್ಟು ಸ್ನಾನಕ್ಕೆ ಹೋಗಿ ಬರುವಷ್ಟರಲ್ಲಿ ಫಲವಾಗುತ್ತಿತ್ತು. ಇದರಿಂದ ûಾಮದ ಸಮಯದಲ್ಲಿ ಆಶ್ರಮದಲ್ಲಿ ಅನ್ನದಾನ ಮಾಡಲು ಸಾಧ್ಯವಾಯಿತು. ವಿಷಯ ತಿಳಿದು ಬರದಿಂದ ತತ್ತರಿಸಿದ ಸಹಸ್ರಾರು ಜನಗಳೆಲ್ಲ ಗೌತಮರ ಆಶ್ರಮಕ್ಕೆ ಆಹಾರ ಹುಡುಕಿ ಬಂದರು. ಸುದ್ದಿ ತಿಳಿದ ಬ್ರಾಹ್ಮಣರೂ ಆಶ್ರಮಕ್ಕೆ ಬಂದು ನೆಲೆಸಿದರು. ಬಹಳ ಕಾಲದ ನಂತರದ ಪರಿಸ್ಥಿತಿ ಸುಧಾರಿಸಿ ಉತ್ತಮ ಮಳೆ ಸುರಿಯಿತು. ಊರು ಬಿಟ್ಟು ಬಂದಿದ್ದ ಜನಗಳು ಊರಿಗೆ ಮರಳಿದರು. ಬ್ರಾಹ್ಮಣರಿಗೂ ಮರಳಿ ಊರಿಗೆ ಹೋಗುವ ಮನಸ್ಸಾಯಿತು. ಗೌತಮರಲ್ಲಿ ವಿಷಯ ತಿಳಿಸಿದರು. “ನಾನು ನಿಮ್ಮ ಸೇವೆ ಮಾಡುತ್ತೇನೆ. ನೀವು ಇಲ್ಲಿಯೇ ನೆಲೆಸಬೇಕು’ ಎಂದು ಗೌತಮರು ವಿನಂತಿಸಿದರು.
Related Articles
Advertisement
“ಇಲ್ಲಿನ ಶಿಲೆಗಳ ಮೇಲೆ ನೀನು ಬಾಣಗಳನ್ನು ಎಸೆದೆ. ಇದರಿಂದ ನದಿಗೆ ಶರಾವತಿಯೆಂದು ಹೆಸರು ಬಂದಿತು. ಬಾಣಸ್ಪರ್ಶ ಭೂಮಿಯಲ್ಲಿ ಕಲ್ಪಾಂತರದವರೆಗೆ ಕಾಣುವುದು’ ಎಂದರು.
ಗೋದಾವರಿ, ಕೋಟಿತೀರ್ಥ, ಶರಾವತಿಗಳಿಗಷ್ಟೇ ಅಲ್ಲ, ಕಾವೇರಿ, ಕೃಷ್ಣೆ, ಭೀಮಾ, ವೇದಾವತಿ ಸೇರಿದಂತೆ ಎಲ್ಲದಕ್ಕೂ ಕತೆಗಳಿವೆ. ವೇದ ಪುರಾಣಗಳು ನದಿ ಕತೆಗಳ ಮಹಾ ಕಣಜವಾಗಿವೆ. ಸಂಸ್ಕೃತದಲ್ಲಿ 15-16ನೇ ಶತಮಾನದಲ್ಲಿ ರಚಿತವಾಗಿರಬಹುದೆನ್ನಲಾದ “ಸಹ್ಯಾದ್ರಿ ಖಂಡ’ ಕೃತಿ, ನದಿ ಕತೆಗಳ ಆಗರ. ಸಹ್ಯಾದ್ರಿ ಪರ್ವತವೇ ಶಿವನ ಲಿಂಗವೆಂಬ ಪತ್ರ ಭಾವನೆ ಇದೆ. ನಾಡಿನ ಝರಿ, ನದಿಗಳು ದೈವಗಂಗೆಯಾಗಿವೆ. ಶಿವನ ಶಿರದ ಗಂಗೆಯಂತೆ ನಮ್ಮ ನದಿ ಮೂಲಗಳಿವೆ. ವೇದ ಪುರಾಣಗಳ ಪ್ರಕಾರ ಋಷಿ ಮುನಿಗಳು, ರಾಜ ಮಹಾರಾಜರು, ಗೃಹಸ್ಥರಾದಿಯಾಗಿ ಎಲ್ಲರೂ ತೀರ್ಥಯಾತ್ರೆ ಮಾಡಿದ್ದಾರೆ. ನದಿ, ಸರೋವರಗಳ ನೆಲೆಯಲ್ಲಿರುವ ಪುಣ್ಯಕ್ಷೇತ್ರಕ್ಕೆ ಪ್ರವಾಸ ಹೋಗುವ ಪವಿತ್ರ ಕಾರ್ಯದಲ್ಲಿ ನದಿ ದರ್ಶನ ಯೋಗವಿದೆ. ಜಗದ ಜನಜೀವನ, ಕೃಷಿ ಬದುಕು ಅರಿಯುವ ವಿಶೇಷವಿದೆ. ಕಾಲ್ನಡಿಗೆಯಲ್ಲಿ ಯಾತ್ರೆ ಹೋಗುತ್ತಿದ್ದ ಆ ಕಾಲದಲ್ಲಿ ತೀರ್ಥಯಾತ್ರೆಗೆ ಹೋದವರು ಮನೆಗೆ ಮರಳುತ್ತಾರೆಂಬ ನಂಬಿಕೆ ಇರಲಿಲ್ಲ. ದೈವೀಭಾವನೆಯಿಂದ ಕ್ಷೇತ್ರದರ್ಶನ ಜೀವನದ ಪುಣ್ಯ ಕೆಲಸವಾಗಿತ್ತು. ಪ್ರಕೃತಿಗೆ ಶರಣಾಗುವ ಯಾತ್ರೆಯ ಪರಿಕಲ್ಪನೆ ಅರಿವನ್ನು ವಿಸ್ತರಿಸುವ ಮಾರ್ಗವಾಗಿದೆ.
ರಾಜ ಮಹಾರಾಜರ, ಋಷಿಮುನಿಗಳ ಭಕ್ತಿ ಮಾರ್ಗ ವಿವರಿಸುವ ಪುರಾಣಗಳು ನದಿ, ಕಾಡಿನ ಕತೆಗಳ ಮೂಲಕ ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಪರಿಣಾಮಕಾರಿ ಪಠ್ಯವಾಗಿ ಕೆಲಸ ಮಾಡಿವೆ. ಹೀಗಾಗಿ ನಮಗೆ ನದಿಗಳೆಂದರೆ ವರ್ಷಕ್ಕೆ ಇಂತಿಷ್ಟು ಕ್ಯುಸೆಕ್ಸ್ ನೀರು ಹರಿಸುವ ಕಾಲುವೆಗಳಲ್ಲ. ಅಣೆಕಟ್ಟೆಯಲ್ಲಿ ನಿಲ್ಲುವ ನೀರಲ್ಲ. ಮರಗಳೆಂದರೆ ಸಸ್ಯಶಾಸ್ತ್ರೀಯ ಹೆಸರು ಹೊತ್ತ ವಾಣಿಜ್ಯ ಉತ್ಪನ್ನವಲ್ಲ. ವೃಕ್ಷದಲ್ಲಿ ದೇವರನ್ನು ತೋರಿಸಿದ ಪುರಾಣ ನದಿ, ಕಾಡುಗಳನ್ನು ಪವಿತ್ರ ಭಾವನೆಯಿಂದ ನೋಡಲು ಕಲಿಸಿದೆ. ಭಕ್ತಿ ಶಿಕ್ಷಣ ನೀತಿ ಮೈದಳೆದಿದೆ. ಇಲ್ಲಿ ವಿಜಾnನದ ನಿಖರ ಕಾರ್ಯ-ಕಾರಣದ ವಿವರಗಳಿಲ್ಲದಿರಬಹುದು. ಪರಿಸರ ಸಂರಕ್ಷಣೆಯ ಮೂಲಕ ಒಟ್ಟಾರೆ ಸಂಕುಲದ ಭವಿಷ್ಯ ಉಳಿಸುವ ಕಾಳಜಿ ಇದೆ. ತಲೆಮಾರಿನ ಜನಕ್ಕೆ ಅರ್ಥವಾಗುವ ಮಾರ್ಗದಲ್ಲಿ ಮನಮುಟ್ಟುವ ಕತೆಗಳು ರೂಪುಗೊಂಡಿವೆ. ರಾಮಾಯಣ, ಮಹಾಭಾರತ ರಚನೆಯಾಗಿ ಸಾವಿರ ಸಾವಿರ ವರ್ಷಗಳ ಬಳಿಕವೂ ಸೀತೆ, ರಾಮ, ಹನುಮ, ಅರ್ಜುನ, ಕೃಷ್ಣರೆಲ್ಲ ಕಾಡು ನದಿಗಳಲ್ಲಿ ಸಿಗುತ್ತಾರೆ. ಇಲ್ಲಿ ಕೃತಿಯ ಸತ್ವವೂ ಇದೆ, ನದಿಯ ಮಹತ್ವವೂ ಇದೆ.
ಮುತ್ತುಗಕ್ಕೆ ಮೂರು ಎಲೆಗಳಿರುತ್ತವೆ. ಮಧ್ಯದ ಎಲೆ ವಿಷ್ಣು, ಎಡಗಡೆಯದು ಬ್ರಹ್ಮ, ಬಲಭಾಗದ್ದು ಶಿವನೆಂದು ನಂಬಲಾಗಿದೆ. ಮುತ್ತುಗದ ಕೋಲನ್ನು ವಟುಗಳು ಬ್ರಹ್ಮದಂಡವಾಗಿ ಬಳಸುತ್ತಾರೆ. ಮಹಾಭಾರತ ಕಾಲದಲ್ಲಿ ಒಮ್ಮೆ ಜಮದಗ್ನಿ ಮಹರ್ಷಿಗಳು ದೇವತೆಗಳಿಗಾಗಿ ಒಂದು ಯಾಗ ಮಾಡುತ್ತಾರೆ. ಯಾಗಕ್ಕೆ ದೇಶದ ಎಲ್ಲ ನದಿಗಳು ಬಂದಿದ್ದವಂತೆ! ಯಾಗ, ಪಲಾಶ ವೃಕ್ಷ(ಮುತ್ತುಗ)ದ ವನದಲ್ಲಿ ನಡೆಯಿತೆಂಬ ಪ್ರತೀತಿ ಇದೆ. ಮುತ್ತುಗ ಜನಪದರಿಗೆ ಮಳೆಯ ಭವಿಷ್ಯ ಹೇಳುವ ಮರವಾಗಿದೆ. ಮುತ್ತುಗದ ಸೋಡಿಗೆಯಲ್ಲಿನ ಬೀಜಗಳ ಸಂಖ್ಯೆ, ಅವುಗಳ ಗಾತ್ರ ಗಮನಿಸಿ ಹಿಂಗಾರಿ, ಮುಂಗಾರಿ ಮಳೆ ಹೇಗೆ ಸುರಿಯುತ್ತದೆಂಬ ಅಂದಾಜು ಮಾಡುತ್ತಿದ್ದರು. ನಾಲ್ಕನೇ ಶತಮಾನದಲ್ಲಿ ರಚಿತವಾದ ಕುರುಬರ ರಟ್ಟಮತ ಶಾಸ್ತ್ರದಲ್ಲಿ ಮರದ ಮಳೆಯ ಕತೆ ಇದೆ. ಪರಿಸರ ಲಕ್ಷಣದ ರೀತ್ಯಾ ಹೇಳುವುದಾದರೆ ಮುತ್ತುಗ ಅರೆಮಲೆನಾಡು, ಬಯಲುಸೀಮೆಯಲ್ಲಿರುತ್ತದೆ. ಅಂದರೆ ಸ್ವಾಭಾಕವಾಗಿ ನೀರಿನ ಸಮಸ್ಯೆ ಇರುವಲ್ಲಿದೆ. ಪಾಪ! ಜಮದಗ್ನಿ ಮಹರ್ಷಿ ನೀರಿಲ್ಲದ ಆ ನೆಲದಲ್ಲಿ ದೇವತೆಗಳಿಗೆ ಯಾಗ ಮಾಡುವಾಗ ದೇಶದ ನದಿಗಳೆಲ್ಲ ಬಂದಿದ್ದು ದೇವತೆಗಳ ದಾಹ ತೀರಿಸುವ ಸಂಕೇತದಂತಿದೆ!
ಪುರಾಣದ ಕತೆ ಓದುತ್ತ, ನದಿ ನಾಡು ಸುತ್ತಾಡುವಾಗ, ವರ್ತಮಾನ ಸಂಕಟ ಹುಟ್ಟಿಸುತ್ತಿದೆ. ವರ್ಷವಿಡೀ ಭಕ್ತರನ್ನು ಸೆಳೆದು ಪುಣ್ಯಸ್ನಾನಕ್ಕೆ ನೆರವಾಗುತ್ತಿದ್ದ ಪತ್ರ ತೀರ್ಥಗಳು ಒಣಗಲು ಶುರುವಾಗಿ ದಶಕಗಳಾಗಿವೆ. ನದಿಗಳು ಬೇಸಿಗೆ ಆರಂಭದಲ್ಲಿಯೇ ಹರಿವು ನಿಲ್ಲಿಸಿ ಕಡಲ ನೆಂಟಸ್ತನ ಕಡಿದುಕೊಳ್ಳುತ್ತಿವೆ. ಪರಿಸರಸ್ನೇಹಿ ಬದುಕಿನ ಮಾರ್ಗ ತೋರಿಸಿದ ಋಷಿಮುನಿಗಳ ತಪಸ್ಸಿನಿಂದ ಧರೆಗಿಳಿದ ದೈವಗಂಗೆ ಕಳಕೊಂಡು ನಾಡು ನಡುಗುತ್ತಿದೆ. ನಮ್ಮ ಶಾಲೆಗಳಲ್ಲಿ ನದಿ, ಕೆರೆಗಳ ಕತೆ ಕಳೆದು ಹೋಗಿದೆ. ನಲ್ಲಿಯ ಕತೆ, ಕೊಳವೆ ಬಾವಿಗೆ ಬಿದ್ದ ಮಕ್ಕಳ ಕತೆ, ಜಲಕ್ಷಾಮದ ಕತೆಗಳು ಜಾಸ್ತಿಯಾಗಿವೆ. ಮೋಡಬಿತ್ತನೆ, ಪಾತಾಳ ಗಂಗೆಯಿಂದ ನಿಸರ್ಗ ದೋಚುವ ಕತೆಗಳು ಬರುತ್ತಿವೆ. ನದಿ ಸಂರಕ್ಷಣೆಯ ಆಂದೋಲನ ಈಗ ದೇಶದ ಜನರ ಗಮನವನ್ನೇನೋ ಸೆಳೆಯುತ್ತಿದೆ. ಆದರೆ ಮುನಿಗಳಂಥ ತಪಸ್ಸು, ಪರಿಸರಸ್ನೇಹಿ ಬದುಕಾದರೂ ಏಲ್ಲಿದೆ? ನದಿ ಉಳಿಸುವ ಮಾತಿನ ಜಾತ್ರೆ ಹವಾನಿಯಂತ್ರಿತ ಕೊಠಡಿಯಲ್ಲಿ ಮೆರೆಯುತ್ತಿದೆ, ಗಬ್ಬು ನೊರೆ ಸೂಸುವ ಬೆಂಗಳೂರಿನ ಬೆಳ್ಳಂದೂರು ಕೆರೆಯ ಚಿತ್ರಗಳು ನೆಲ ಜಲದ ಅನಾಗರಿಕ ನಡೆಗೆ ಸಾಕ್ಷಿಯಾಗಿವೆ.
ಶಿವಾನಂದ ಕಳವೆ