ಹಾನಗಲ್ಲ: ಜೀವನ ಕೌಶಲ್ಯದ ಮಾರ್ಗದರ್ಶ ನವಿಲ್ಲದೆ ಯುವಪೀಳಿಗೆ ಬದುಕು ಕಟ್ಟಿಕೊಳ್ಳ ಲಾಗದ ಸ್ಥಿತಿಯಲ್ಲಿದ್ದಾರೆ ಎಂದು ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಪಿ.ವೈ. ಗುಡಗುಡಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಜಿಲ್ಲಾ ಕ್ರೀಡಾ ಇಲಾಖೆ ಯುವ ಸ್ಪಂದನ ಸಂಯುಕ್ತವಾಗಿ ಆಯೋಜಿಸಿದ್ದ ಜೀವನಕೌಶಲ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಯುವ ಜನತೆ ಬಡತನ, ನಿರುದ್ಯೋಗ, ಅಜ್ಞಾನ, ತಾರತಮ್ಯದ ಮಧ್ಯ ಮಾನಸಿಕ ಆರೋಗ್ಯವು ಕವಲು ದಾರಿಯಲ್ಲಿದ್ದು, ಅವರಿಗೆ ಜೀವನ ನಡೆಸುವ ಕೌಶಲಗಳ ವೈಜ್ಞಾನಿಕ ಬಳಕೆಯ ಮಾರ್ಗದರ್ಶನ ಅಗತ್ಯವಿದೆ. ಯುವ ಜನರಲ್ಲಿ ಶಕ್ತಿ ಮತ್ತು ಉತ್ಸಾಹ ಅಗಾಧವಾಗಿದ್ದು, ಇಂದಿನ ದಿನದಲ್ಲಿ ಸಾಮಾಜಿಕ ಮತ್ತು ಮಾನಸಿಕ ಜಂಜಾಟದಲ್ಲಿ ಅನೇಕ ತೊಂದರೆ-ತೊಡರುಗಳನ್ನು ಅನುಭವಿಸುತ್ತಿರುವ ಯುವಕರಿಗೆ ಅವರಿಗಿರುವ ಶಕ್ತಿ-ಉತ್ಸಾಹಗಳನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳುವುದು ಅಸಾಧ್ಯವಾಗಿದೆ. ಹೀಗಾಗಿ ಕೌಶಾಲ್ಯಾಭಿವೃದ್ಧಿಯ ಮಾರ್ಗದರ್ಶನಕ್ಕೆ ಈಗ ಮೊದಲ ಆದ್ಯತೆ ನೀಡಬೇಕಿದೆ ಎಂದರು.
ಜಿಲ್ಲೆಯ ಕ್ರೀಡಾ ಇಲಾಖೆಯ ಯುವ ಸ್ಪಂದನಾ ಸಂಪನ್ಮೂಲ ವ್ಯಕ್ತಿ ಸಂಜೀವಕುಮಾರ ಬೆಳವತ್ತಿ ಮಾತನಾಡಿ, ಪ್ರಸ್ತುತ ದಿನದಲ್ಲಿ ಎಲ್ಲವೂ ಅಂಗೈಯಲ್ಲಿಯೇ ಮಾಹಿತಿ ಲಭ್ಯವಾಗುತ್ತಿದೆ. ಒಳ್ಳೆಯದು ಕೆಟ್ಟದ್ದೂ ಎರಡೂ ನಮ್ಮ ಮುಂದೆ ಇದ್ದು, ನಮ್ಮ ಬುದಕಿಗೆ ಅಗತ್ಯವಿರುವುದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಶಾಲೆ ಕಾಲೇಜುಗಳು ಕೇವಲ ಪುಸ್ತಕದಲ್ಲಿರುವುದನ್ನು ಮಸ್ತಕಕ್ಕೇರಿಸುವುದು ಮಾತ್ರವಲ್ಲ, ಬೌದ್ಧಿಕ, ನೈತಿಕ ಹಾಗೂ ಸಾಮಾಜಿಕ ಜೀವನ ಶೈಲಿಯನ್ನು ಕಲಿಸುವಂತಾಗಬೇಕು ಎಂದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಈಶ್ವರ ಹುಣಸಿಕಟ್ಟಿ ಮಾತನಾಡಿ, ಇಂದು ಸರ್ಕಾರ ಸಂಘ-ಸಂಸ್ಥೆಗಳು ಯುವ ಪೀಳಿಗೆಗಳಿಗೆ ಉತ್ತಮ ಕೌಶಾಲಾಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುತ್ತಲೇ ಇವೆ. ಆದರೆ, ಇದನ್ನು ಸ್ವೀಕರಿಸಬೇಕಾದ ಯುವ ಸಮುದಾಯ ಎಷ್ಟರ ಮಟ್ಟಿಗೆ ಸಫಲವಾಗಿದೆ ಎಂಬುದು ಈಗಿನ ಪ್ರಶೆಯಾಗಿದೆ. ನಾಳೆಗಾಗಿ ಈಗ ಎಚ್ಚರಗೊಳ್ಳದಿದ್ದರೆ ಯುವ ಜನತೆ ಬದುಕು ಹಸನಾಗಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಪ್ರಾಂಶುಪಾಲ ಪ್ರೊ| ಸಿ. ಮಂಜುನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನಿಗೆ ಬುದ್ಧಿ ಅಳತೆ ಮಾಡುವ ಜತೆಗೆ ಕೌಶಲ್ಯದ ಅಳತೆಗೋಲನ್ನು ನೋಡಬೇಕು. ನನ್ನೋಳಗಿನ ಶಕ್ತಿಯನ್ನು ವಿಫಲಗೊಳಿಸಲು ಅವಕಾಶ ನೀಡದೇ ಅದರ ಸದುಪಯೋಗಕ್ಕೆ ಯತ್ನಿಸಿದರೆ ಮಾತ್ರ ಜೀವನ ಯಶಸ್ವಿಯಾಗಬಲ್ಲದು. ಯುವಕರು ನಾಳೆಗಾಗಿ ಇಂದೇ ಸಿದ್ಧರಾಗಬೇಕು ಎಂದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ| ಪ್ರಕಾಶ ಹೊಳೇರ, ಸಂಸ್ಥೆಯ ನಿರ್ದೇಶಕ, ಮಹೇಶ ಕಾಗಿನೆಲ್ಲಿ, ವಿನೋದ ಅಚಲಕರ, ಪ್ರಾಧ್ಯಾಪಕ ಡಾ| ಎಂ.ಎಚ್. ಹೊಳಿಯಣ್ಣನವರ ಪಾಲ್ಗೊಂಡಿದ್ದರು.