ಭಾರತದಲ್ಲಿ ಅನೇಕ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಸಾಧನೆ ಮಾಡಿದರೂ ಕ್ರಿಕೆಟ್ ಆಟಗಾರರಂತೆ ಮಿಂಚುವುದು ಕಡಿಮೆ. ಎಷ್ಟು ದೊಡ್ಡ ಸಾಧನೆ ಮಾಡಿದರೂ ಬಹಳಷ್ಟು ಸಲ ಜನರ ಮನ್ನಣೆ ಸಿಗುವುದಿಲ್ಲ. ಕ್ರಿಕೆಟ್ ನಲ್ಲಿ ದೇಶಿಯ ಮಟ್ಟದಲ್ಲಿ ಸಾಧನೆ ಮಾಡಿದರೂ ಸಿಗುವ ಮರ್ಯಾದೆ ಬೇರೆ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆಗೆ ಸಿಗುವುದಿಲ್ಲ ಎಂಬ ಆರೋಪವೂ ಇದೆ. ಇಂತಹ ದೊಡ್ಡ ಸಾಧನೆ ಮಾಡಿದ ಆಟಗಾರರು ಕೆಲವೊಮ್ಮೆ ಹೊಟ್ಟೆ ಪಾಡಿಗಾಗಿ ಕಷ್ಟ ಪಡುವುದೂ ಇದೆ.
ಫುಟ್ ಬಾಲ್ ಕ್ರೀಡೆಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋ, ಲಿಯೋನೆಲ್ ಮೆಸ್ಸಿಗೆ ಸಾಕಷ್ಟು ಅಭಿಮಾನಿಗಳು ಭಾರತದಲ್ಲಿದ್ದಾರೆ. ಆದರೆ ಹೆಚ್ಚಿನವರಿಗೆ ಸುನೀಲ್ ಚೆತ್ರಿ ಬಿಟ್ಟರೆ ಬೇರೆ ಭಾರತೀಯ ಫುಟ್ ಬಾಲ್ ಆಟಗಾರನ ಹೆಸರೂ ಗೊತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮಹಿಳಾ ಫುಟ್ ಬಾಲ್ ಭಾರತದಲ್ಲಿನ್ನೂ ಪ್ರಸಿದ್ದಿಯ ಮಟ್ಟದಲ್ಲಿ ತುಂಬಾ ಕೆಳ ಸ್ಥರದಲ್ಲಿದೆ ಎನ್ನಬಹುದು.
ಸಂಗೀತಾ ಸೊರೆನ್. 20 ವರ್ಷ ಪ್ರಾಯದ ಭಾರತೀಯ ಫುಟ್ ಬಾಲರ್. ಜಾರ್ಖಂಡ್ ಮೂಲದ ಆಟಗಾರ್ತಿ. ಭಾರತೀಯ ಮಹಿಳಾ ಫುಟ್ ಬಾಲ್ ಯಾವ ಹಂತದಲ್ಲಿದೆ ಎನ್ನುವುದಕ್ಕೆ ಈಕೆ ಸಾಕ್ಷಿ. ಯಾಕೆಂದರೆ ಅಂತಾರಾಷ್ಟ್ರೀಯ ಮಟ್ಟದ ಆಟಗಾರ್ತಿಯಾದರೂ ಕುಟುಂಬದ ಹೊಟ್ಟೆ ತುಂಬಿಸಲು ಈಕೆ ದಿನಗೂಲಿ ಕೆಲಸ ಮಾಡಬೇಕಾದ ಪರಿಸ್ಥಿತಿಯಿದೆ.
ತೀರಾ ಬಡತನದ ಕುಟುಂಬದ ಹಿನ್ನೆಲೆಯಿಂದ ಬಂದ ಸಂಗೀತಾ ಸೊರೆನ್ ಗೆ ಫುಟ್ ಬಾಲ್ ಎಂದರೆ ಪ್ರಾಣ. ಸ್ಥಳೀಯವಾಗಿ ಆಡುತ್ತಾ ಒಂದೊಂದೇ ಹಂತ ಮೇಲಕ್ಕೇರಿದ ಸಂಗೀತಾ, ಅಂಡರ್ 17 ವಯೋಮಿತಿ ಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2018-19ರಲ್ಲಿ ಭೂತಾನ್ ಮತ್ತು ಥೈಲ್ಯಾಂಡ್ ನಲ್ಲಿ ನಡೆದ ಕೂಟದಲ್ಲಿ ಭಾರತದ ಪರವಾಗಿ ಆಡಿದ್ದ ಸಂಗೀತಾಗೆ ರಾಷ್ಟ್ರೀಯ ಹಿರಿಯರ ತಂಡದ ಅವಕಾಶವೂ ಬಂದಿತ್ತು. ಇನ್ನೇನು ರಾಷ್ಟ್ರೀಯ ತಂಡದಲ್ಲಿ ಆಡಬೇಕು ಎನ್ನುವಷ್ಟರಲ್ಲಿ ಕೋವಿಡ್ ಲಾಕ್ ಡೌನ್ ಜಾರಿಯಾಗಿತ್ತು. ಇದು ಸಂಗೀತಾಗೆ ದೊಡ್ಡ ಹಿನ್ನಡೆ ನೀಡಿತ್ತು.
ಸಂಗೀತಾರ ತಂದೆ ದುಬೆ ಸೊರೆನ್ ಅವರ ಕಣ್ಣಿನ ದೃಷ್ಟಿ ಭಾಗಶಃ ಕಡಿಮೆಯಾಗಿದೆ. ಇದರಿಂದಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದ ಸಹೋದರನೂ ಲಾಕ್ ಡೌನ್ ಕಾರಣದಿಂದ ಕೆಲಸವಿಲ್ಲದೆ ಮನೆಯಲ್ಲೇ ಇರುವಂತಾಗಿದೆ. ಇಂತಹ ಸಂದರ್ಭದಲ್ಲಿ ಕುಟುಂಬದ ಹೊಟ್ಟೆ ತುಂಬಿಸಲು ಸ್ವತಃ ಸಂಗೀತಾ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಪರಿಣಾಮ ಸ್ಥಳೀಯ ಇಟ್ಟಿಗೆ ಗೂಡಿನಲ್ಲಿ ಸಂಗೀತಾ ಕೆಲಸ ಆರಂಭಿಸಿದರು. ಅಲ್ಲೇ ಕೆಲಸ ಮಾಡುತ್ತಿರುವ ತಾಯಿಗೆ ಸಂಗೀತಾ ಸಾಥ್ ನೀಡಿದರು. ತಾಯಿ -ಮಗಳು ದಿನಪೂರ್ತಿ ದುಡಿದರೆ ಕುಟುಂಬಕ್ಕೆ ಅನ್ನ ಆಹಾರ!
ಇಷ್ಟೇಲ್ಲಾ ಕಷ್ಟಗಳ ನಡುವೆಯೂ ಸಂಗೀತಾ ತನ್ನ ಕನಸನ್ನು ಮರೆಯಲಿಲ್ಲ. ಕೆಲಸಕ್ಕೆ ತೆರಳುವ ಮೊದಲು ಪ್ರತಿದಿನ ಬೆಳಗ್ಗೆ ಬಿಡುವು ಮಾಡಿಕೊಂಡು ಸ್ಥಳೀಯ ಮೈದಾನದಲ್ಲಿ ಫುಟ್ ಬಾಲ್ ಅಭ್ಯಾಸ ನಡೆಸುತ್ತಿದ್ದರು.
ನೆರವು: ಸಂಗೀತಾ ಸೊರೆನ್ ರ ಕಷ್ಟದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಆಕೆಗೆ ನೆರವು ದೊರೆತಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧಿಕಾರಿಗಳು ಆಕೆಯ ಮನೆಗೆ ಧಾವಿಸಿ ತುರ್ತು ಹಣಕಾಸಿನ ನೆರವು ಮತ್ತು ಆಕೆಯ ಮನೆಗೆ ದಿನಸಿ ಸಾಮಾಗ್ರಿಗಳನ್ನು ನೀಡಿದ್ದಾರೆ.
ಅದಲ್ಲದೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅವರು ಟ್ವೀಟ್ ಮಾಡಿ, ಸಂಗೀತಾಗೆ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. ಧನ್ ಬಾದ್ ಜಿಲ್ಲಾಧಿಕಾರಿಯವರು ‘ಖಿಲಾಡಿ ಕಲ್ಯಾಣ್ ಕೋಶ್’ ಯೋಜನೆಯಡಿಯಲ್ಲಿ ಸಂಗೀತಾಗೆ ಒಂದು ಲಕ್ಷ ರೂ. ನೀಡಿದ್ದಾರೆ.
ಧನ್ ಬಾದ್ ನಲ್ಲಿ ನಾವು ಬಾಲಕಿಯರ ಫುಟ್ ಬಾಲ್ ಬೋರ್ಡಿಂಗ್ ಕೇಂದ್ರವನ್ನು ನಿರ್ಮಿಸುತ್ತಿದ್ದೇವೆ. ಅದರಲ್ಲಿ ಸಂಗೀತಾ ಸೊರೆನ್ ತರಬೇತುದಾರರಾಗಿ ಕೆಲಸ ಮಾಡಲಿದ್ದಾರೆ. ಇದರಿಂದ ಆಕೆಯ ದಿನನಿತ್ಯದ ವರಮಾನಕ್ಕೂ ದಾರಿಯಾಗುತ್ತದೆ ಮತ್ತು ಧನ್ ಬಾದ್ ನ ಹುಡುಗಿಯರ ಫುಟ್ ಬಾಲ್ ಗೂ ಸಹಾಯವಾಗುತ್ತದೆ ಎಂದು ಸ್ಥಳೀಯ ಜಿಲ್ಲಾಧಿಕಾರಿ ಉಮಾ ಶಂಕರ್ ಸಿಂಗ್ ಹೇಳುತ್ತಾರೆ.
ಇಂತಹ ಪ್ರತಿಭೆಗಳನ್ನು ಗುರುತಿಸುವ ಜವಾಬ್ದಾರಿ ಸಮಾಜದ ಮೇಲಿದೆ. ಸಂಗೀತಾ ಸೊರೆನ್ ರಂತಹ ಹಳ್ಳಿ ಪ್ರತಿಭೆಗಳು ಮುಂದೊಂದು ದಿನ ಭಾರತದ ಮಹಿಳಾ ಫುಟ್ ಬಾಲ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುವುದರಲ್ಲಿ ಸಂಶಯವಿಲ್ಲ.
ಕೀರ್ತನ್ ಶೆಟ್ಟಿ ಬೋಳ