ಮಹಾಲಿಂಗಪುರ: ನಾವು ಹುಟ್ಟಿದ ಭೂಮಿಯ ಮೇಲೆ ಶರಣರು ಹುಟ್ಟಿದರು. ನಾವು ತಿನ್ನುವ ಆಹಾರವನ್ನೇ ಅವರು ತಿಂದರು. ಶರಣರ ಬದುಕು ಸ್ಫೂ ರ್ತಿದಾಯಕವಾಗಿದ್ದು, ನಮ್ಮೆಲ್ಲರ ಬಾಳಿಗೆ ಬೆಳಕಾಗಬೇಕು ಎಂದು ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಲಿಂ.ಶರಣ ಬಾಲಚಂದ್ರಣ್ಣ ಚೆಣ್ಣಿ ಪ್ರತಿಷ್ಠಾನದ ವತಿಯಿಂದ ಬಾಲಚಂದ್ರಣ್ಣ ಚೆಣ್ಣಿ ಅವರ 13ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಾಳೆಗೆ ಬೇಕು ಎಂಬ ಹಂಬಲ ಶರಣರಿಗಿರಲಿಲ್ಲ. ಅತಿ ಆಸೆಗೆ ಯಾವತ್ತೂ ಮನಸ್ಸು ಮಾಡಲಿಲ್ಲ. ಇದ್ದಿದರಲ್ಲೇ ಸಂತೃಪ್ತ ಬದುಕು ಸಾಗಿಸಿದವರು ಬಸವಾದಿ ಶರಣರು. ಬಡತನ ಎಂಬುದು ಶರಣರಿಗಿಲ್ಲ. ಸತ್ಯ, ಶುದ್ಧ ಕಾಯಕ, ಸರಳ ಬದುಕು, ನುಡಿದಂತೆ ನಡೆಯುವ ಪರಂಪರೆ ಶರಣರದ್ದಾಗಿತ್ತು ಎಂದರು.
ಬಸವಾದಿ ಶರಣರ ಜೀವನ ದರ್ಶನ ಕುರಿತು ಮಾತನಾಡಿದ ಶಿಕ್ಷಕ ಹುಮಾಯೂನ ಸುತಾರ, ನಮ್ಮ ಅಮೂಲ್ಯ ಶರೀರವನ್ನು ಪರರ ಹಿತಕ್ಕಾಗಿ ಮೀಸಲಿಟ್ಟು, ವಿಶ್ವ ಕುಟುಂಬ ಒಂದೇ ಎಂಬ ಭಾವ ಉಳ್ಳ ಕನಸು ಶರಣರದ್ದಾಗಿತ್ತು. ಅಸಮಾನತೆಯನ್ನು ಹೋಗಲಾಡಿಸಿ, ದೀಕ್ಷಾ ಸಂಸ್ಕಾರ ಕೊಟ್ಟು ಎಲ್ಲರಲ್ಲೂ ಸಮಾನತೆಯನ್ನು ಬಿತ್ತಿದವರು ಬಸವಣ್ಣನವರು ಎಂದರು.
ಪ್ರೊ| ಬಿ.ಎಚ್.ಮಾರದ, ನೇಕಾರ ಮುಖಂಡ ಅಂಬಾದಾಸ ಕಾಮೂರ್ತಿ ಮಾತನಾಡಿದರು. ಸಮಾಜ ಸೇವಕ ಚನಬಸು ಹುರಕಡ್ಲಿ ಅವರಿಗೆ 2023ನೇ ಸಾಲಿನ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿದ್ಧೇಶ್ವರ ಶ್ರೀಗಳ ಭಕ್ತಿಗೀತೆ ಲೋಕಾರ್ಪಣೆ ಮಾಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಗೋಲೇಶ ಅಮ್ಮಣಗಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶೈಲಪ್ಪ ಉಳ್ಳಾಗಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ರೈತ ಯಲ್ಲನಗೌಡ ಪಾಟೀಲ, ಬಂದು ಪಕಾಲಿ, ಮಹೇಶ ಇಟಕನ್ನವರ,
ಮಹೇಶ ಆರಿ, ಮಹಾದೇವ ಕದ್ದಿಮನಿ, ಲಕ್ಷ್ಮಣ ಕಿಶೋರ, ಬಸವರಾಜ ಮೇಟಿ, ಪ್ರೊ| ಭೀಮಶಿ ನೇಗಿನಾಳ ಇದ್ದರು.