ಕಾಸರಗೋಡು: ಸ್ವಂತದ್ದಾದ ಒಂದು ಮನೆಗಾಗಿ ದೈನಬಿ ಅವರು ಪಟ್ಟ ಸಂಕಷ್ಟ ಕೊನೆಗೂ ಪರಿಹಾರವಾಗಿದೆ. ಅನೇಕ ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದು, ದುರಿತ ಅನುಭವಿಸುತ್ತಿದ್ದ ಅವರೀಗ ಸ್ವಂತ ಮನೆಯಲ್ಲಿ ನೆಮ್ಮದಿಯ ಉಸಿರಿನೊಂದಿಗೆ ಬದುಕುತ್ತಿದ್ದಾರೆ. ರಾಜ್ಯ ಸರಕಾರದ ಲೈಫ್ ಮಿಷನ್ ಯೋಜನೆ ಇವರ ಅನೇಕ ವರ್ಷಗಳ ಬಯಕೆಯನ್ನು ನನಸಾಗಿಸಿದೆ.
ರಾಜ್ಯ ಸರಕಾರದಿಂದ ಅನೇಕ ವರ್ಷಗಳ ಹಿಂದೆಯೇ ಜಾಗ ಲಭಿಸಿದ್ದರೂ, ಸ್ವಂತ ಮನೆ ಕಟ್ಟಿಕೊಳ್ಳಲಾರದೆ ದೈನಬಿ ಬಸವಳಿಯುತ್ತಿದ್ದರು. ಕೂಲಿ ಕಾರ್ಮಿಕನಾದ ಪತಿ, 4 ಮಕ್ಕಳನ್ನು ಹೊಂದಿದ್ದ ಈ ಬಡಕುಟುಂಬದ ಮಹಿಳೆ ಮೊಗ್ರಾಲ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೂಲತ: ಕರ್ನಾಟಕ ನಿವಾಸಿಯಾದ ಇವರು ತಮ್ಮ ಹಿರಿಯರೊಂದಿಗೆ ಅನೇಕ ವರ್ಷಗಳ ಹಿಂದೆ ಕಾಸರಗೋಡು ಜಿಲ್ಲೆಗೆ ಆಗಮಿಸಿ ಚೆರ್ಕಳದಲ್ಲಿ ವಾಸ ಆರಂಭಿಸಿದ್ದರು. 25 ವರ್ಷಗಳ ಹಿಂದೆ ಮಂಜೇಶ್ವರ ನಿವಾಸಿ ಇಸ್ಮಾಯಿಲ್ ಆಲಿಯಾಸ್ ಹಸನಬ್ಬ ಅವರನ್ನು ವಿವಾಹವಾಗಿದ್ದರು. ಅಂದಿನಿಂದ ಸ್ವಂತದೊಂದು ಪುಟ್ಟ ಮನೆ ಕಟ್ಟಿಕೊಳ್ಳಬೇಕು ಎಂಬ ಬಯಕೆ ಹಾಗೆಯೇ ಉಳಿದಿತ್ತು.
ಇಂದು ಲೈಫ್ ಮಿಷನ್ ಯೋಜನೆಯ ಮೂಲಕ ಕುಂಬಳೆ ಗ್ರಾಮ ಪಂಚಾಯತ್‌ನ ಕಿದೂರಿನ 4 ಸೆಂಟ್ಸ್ ಜಾಗದಲ್ಲಿ ಎರಡು ಕೋಣೆಗಳು, ಒಂದು ಹಾಲ್, ಅಡುಗೆ ಮನೆ ಹೊಂದಿರುವ ಸುಂದರ ನಿವಾಸ ಇವರಿಗೆ ಸ್ವಂತವಾಗಿದೆ. ಕೊಡುಗೈ ದಾನಿಯಾಗಿರುವ ವ್ಯಕ್ತಿಯೊಬ್ಬರು ಈ ಪ್ರದೇಶದಲ್ಲಿ ಸಾರ್ವಜನಿಕರಿಗಾಗಿ ಕೊಳವೆ ಬಾವಿ ನಿರ್ಮಿಸಿದ್ದು, ದೈನಬಿ ಅವರ ಕುಟುಂಬವೂ ಈ ನೀರನ್ನೇ ಆಶ್ರಯಿಸುತ್ತಿದೆ. ತಮ್ಮ ಬದುಕಿನ ದೊಡ್ಡ ನಿರೀಕ್ಷೆಯಾಗಿದ್ದ ಮನೆ ಲಭಿಸಿದ್ದು, ಜೀವನಕ್ಕೆ ಹೊಸ ಉತ್ಸಾಹ ತಂದಿದೆ. ರಾಜ್ಯ ಸರಕಾರಕ್ಕೆ, ಗ್ರಾಮ ಪಂಚಾಯತ್ ಪದಾಧಿ ಕಾರಿಗಳಿಗೆ, ಸರಕಾರಿ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ತಾವು ಕೃತಜ್ಞರು ಎಂದು ದೈನಬಿ ಅವರು ಕಣ್ಣು ನೀರು ತುಂಬಿ ತಿಳಿಸುತ್ತಾರೆ.
ಇವರ ಇಬ್ಬರು ಗಂಡು ಮಕ್ಕಳು ಶಿಕ್ಷಣ ನಿಲುಗಡೆ ಮಾಡಿ ದುಡಿಮೆ ನಡೆಸುತ್ತಿದ್ದಾರೆ. ಒಬ್ಬ ಮಗಳು ವಿವಾಹಿತರಾಗಿದ್ದಾರೆ. ಕೊನೆಯ ಪುತ್ರಿ ಪ್ಲಸ್‌ವನ್ ವಿದ್ಯಾರ್ಥಿನಿಯಾಗಿದ್ದಾರೆ.