ಇಪ್ಪತ್ತನೇ ಶತಮಾನದ ಅತಿ ಶ್ರೇಷ್ಠ ಭೌತವಿಜ್ಞಾನಿಗಳನ್ನು ಪಟ್ಟಿ ಮಾಡಿ ಎಂದರೆ ಅದರಲ್ಲಿ ತಪ್ಪದೇ ಕಾಣಿಸಿಕೊಳ್ಳುವ ಒಂದು ಹೆಸರು ಡಿರಾಕ್‌ನದು. ಪಾಲ್ ಡಿರಾಕ್ ಸ್ವಿಸ್ ಪ್ರಜೆ.
ಇಂಗ್ಲೆಂಡಿನ ಕೇಂಬ್ರೀಡ್ಜ್ ವಿಶ್ವವಿದ್ಯಾಲಯದಲ್ಲಿ ಆತ ಲ್ಯುಕೇಶಿಯನ್‌ಪ್ರೊಫೆಸರ್ ಆಗಿದ್ದ (ಅವನಿಗಿಂತ ಮೊದಲು ಆಹುದ್ದೆಯಲ್ಲಿದ್ದ ಪ್ರಮುಖರು ಐಸಾಕ್ ನ್ಯೂಟನ್ ಮತ್ತು ಚಾರ್ಲ್ಸ್ ಬ್ಯಾಬೇಜ್. ಡಿರಾಕ್ ವಿಜ್ಞಾನ ದಲ್ಲಿ ಎಂಥ ಪ್ರತಿಭಾವಂತನೋ ಖಾಸಗಿ ಬದುಕಿನಲ್ಲಿ ಅಷ್ಟೇ ವಿಲಕ್ಷಣನೆಂದು ಹೆಸರು ಮಾಡಿದವನು. ಅವನದುಚಿಪ್ಪಿನೊಳಗಿನ ಜೀವಿಯಂಥ ವ್ಯಕ್ತಿತ್ವ. ನಾಲ್ಕು ಮಂದಿ ಇದ್ದಲ್ಲಿ ಆತ ಮಾತೇ ಆಡುತ್ತಿರಲಿಲ್ಲ. ಡಿರಾಕ್‌ನಿಂದ ಮಾತು ಹೊರಡಿಸಬೇಕಾದರೆಅಪರಿಚಿತರ ಮಾತಂತಿರಲಿ, ಸ್ವತಃ ಸ್ನೇಹಿತರೇ ಕಷ್ಟ ಪಡಬೇಕಾಗುತ್ತಿತ್ತು! ಅವನು ಅಂತರ್ಮುಖೀ, ಅನ್ಯಮನಸ್ಕ, ನಾಚಿಕೆ ಸ್ವಭಾವದವನು. ಆ ವ್ಯಕ್ತಿತ್ವಕ್ಕೆತದ್ವಿರುದ್ಧ ಎಂಬಂತಿದ್ದವನು ಇನ್ನೋರ್ವ ಭೌತವಿಜ್ಞಾನಿ ವರ್ನರ್ ಹೈಸನ್‌ಬರ್ಗ್. ವಾಚಾಳಿ, ಪ್ರತಿ ಕ್ಷಣವನ್ನೂ ಸಂಭ್ರಮಿಸುವವನು.
ಅವನಿದ್ದಲ್ಲಿ ಒಂದಷ್ಟು ಮಾತು, ನಗು, ಕೇಕೆಗಳಿಗೆ ಕೊರತೆ ಇರಲಿಲ್ಲ. 1929ರ ಆಗಸ್ಟ್ ನಲ್ಲಿ ಈ ಇಬ್ಬರೂ ವಿಜ್ಞಾನಿಗಳು ಜೊತೆಯಾಗಿ ಜಪಾನ್‌ನಲ್ಲಿ ನಡೆಯುತ್ತಿದ್ದ ಒಂದು ವಿಜ್ಞಾನ ಸಮ್ಮೇಳನಕ್ಕೆಂದು ಹಡಗಿನಲ್ಲಿ ಪಯಣ ಹೊರಟಿದ್ದರು. ಹಡಗೆಂದ ಮೇಲೆ ಕೇಳ ಬೇಕೆ? ನೂರಾರು ಪ್ರಯಾಣಿಕರು, ಒಂದಷ್ಟು ಮೋಜು, ಮಸ್ತಿ, ಪಾರ್ಟಿಗಳು ಸಾಮಾನ್ಯ. ಹೈಸನ್‌ಬರ್ಗ್ ಹುಡುಗಿಯರ ಜೊತೆ ಬಹಳ ಆರಾಮಾಗಿರುತ್ತಿದ್ದ. ಅವರ ಜೊತೆ ಮಾತುಕತೆಗಿಳಿಯುತ್ತಿದ್ದ. ಪಾರ್ಟಿಗಳಲ್ಲಿ ಕುಡಿತ, ಕುಣಿತಗಳಲ್ಲಿ ಎಗ್ಗಿಲ್ಲದೆ ಭಾಗವಹಿಸುತ್ತಿದ್ದ. ಇದನ್ನೆಲ್ಲ ದೂರದಿಂದಮುಜುಗರಪಡುತ್ತ ನೋಡುತ್ತಿದ್ದ ಡಿರಾಕ್‌ಗೆ ಆಶ್ಚರ್ಯ. ಒಮ್ಮೆ ತನ್ನ ಅಚ್ಚರಿಯನ್ನು ಆತ ಹೈಸನ್
ಬರ್ಗ್‌ನ ಮುಂದಿಟ್ಟ. “ನೀನೇಕೆ ಡ್ಯಾನ್ಸ್ ಮಾಡುತ್ತೀಯಾ?” ಎಂಬುದು ಅವನ ಪ್ರಶ್ನೆ. ಹೈಸನ್‌ಬರ್ಗ್ ಡಿರಾಕ್‌ನನ್ನು ನೋಡಿ ನಗುತ್ತ “ಏನಯ್ಯ ಹೀಗೆ ಕೇಳುತ್ತೀಯಾ! ಒಳ್ಳೇ ಹುಡುಗಿಯರ ಜೊತೆ ಡ್ಯಾನ್ಸ್ ಮಾಡಲು ಯಾರಿಗೆ ತಾನೇ ಇಷ್ಟವಾಗುವುದಿಲ್ಲ!” ಎಂದ. “ಅವರು ಒಳ್ಳೆಯವರು ಎಂದು ಡ್ಯಾನ್ಸ್ ಗೂ ಮುನ್ನ ಹೇಗೆ ಗೊತ್ತಾಗುತ್ತದೆ ನಿನಗೆ?”, ಅನುಮಾನ ಮುಂದಿಟ್ಟ ಡಿರಾಕ್.
ಡಿರಾಕ್‌ಗೆ ಮದುವೆಯಾಯಿತು. ಯೂಜೀನ್ ವಿಗ್ನರ್ ಎಂಬ ಪ್ರಸಿದ್ಧ ಭೌತವಿಜ್ಞಾನಿಯ ತಂಗಿ ಮಾರ್ಗಿಟ್ ವಿಗ್ನರ್ ಅವನ ಮಡದಿಯಾಗಿಬಂದಳು. ಒಮ್ಮೆ ಡಿರಾಕ್‌ನನ್ನು ಭೇಟಿಯಾಗಲುಬಂದಿದ್ದ ಸ್ನೇಹಿತನೊಬ್ಬನಿಗೆ ಡಿರಾಕ್‌ನ ಮನೆಯಲ್ಲಿ ಹೆಣ್ಣೊಬ್ಬಳನ್ನು ಕಂಡು ಅಚ್ಚರಿಯಾಯಿತು! ಖಾಸಗಿವಿಷಯಗಳನ್ನು ಹೊರಜಗತ್ತಲ್ಲಿ ಅಪ್ಪಿತಪ್ಪಿಯೂಚರ್ಚಿಸದಿದ್ದ ಡಿರಾಕ್ ತಾನು ವಿವಾಹಿತನೆಂಬುದನ್ನೂಹೆಚ್ಚಿನವರಲ್ಲಿ ಹೇಳಿಕೊಂಡವನಲ್ಲ. ಸ್ನೇಹಿತನ ಮುಖದಲ್ಲಾದ ಬದಲಾವಣೆ ನೋಡಿ ಡಿರಾಕ್ ಸಂಕೋಚಪಡುತ್ತ ಹೇಳಿದ: “ಇವಳು… ಇವಳು.. ಅದೇ.. ವಿಗ್ನರ್ ಇದ್ದಾರಲ್ಲ, ಅವರ ತಂಗಿ’.
– ರೋಹಿತ್ ಚಕ್ರತೀರ್ಥ