Advertisement

ಬಾರೋ ಸಾಧಕರ ಕೇರಿಗೆ : ಪಾಪದ ಕೊಳೆಯನ್ನು ತೊಳೆದ ಮಳೆ

08:03 PM Dec 29, 2020 | Team Udayavani |

ಇಂಗ್ಲೆಂಡಿನ ಸ್ಟಾಫ‌ರ್ಡ್‌ಶೈರ್‌ ನಲ್ಲಿರುವ ಯುಟೋಕ್ಸಿಟರ್‌ ಎಂಬ ಮಾರುಕಟ್ಟೆ. ಅಲ್ಲಿ ನೂರಾರು ಅಂಗಡಿಗಳು, ವ್ಯಾಪಾರ ವಹಿವಾಟಿನ ಗದ್ದಲ,ಕೊಳ್ಳುವ-ಮಾರುವ ಮಾತುಕತೆಗಳು. ಆ ಗದ್ದಲದ ಗೂಡಿನಲ್ಲಿ ಓರ್ವ ಆಜಾನುಬಾಹು ವ್ಯಕ್ತಿ ನಡೆಯುತ್ತಿದ್ದಾನೆ. ನಡಿಗೆಯಲ್ಲಿ ಸಂಕೋಚ ಮತ್ತು ಉದ್ವೇಗ ಎರಡೂ ಇವೆ. ನೀಳ ಕೋಟು, ತಲೆಗೊಂದು ಟೋಪಿ ಹಾಕಿರುವ ಆ ವ್ಯಕ್ತಿಯನ್ನು ಹೆಸರಿನಿಂದ ಗುರುತು ಹಿಡಿಯುವಷ್ಟು ಪ್ರಬುದ್ಧರ ಜಂಗುಳಿ ಅಲ್ಲಿರಲಿಲ್ಲ. ಅದು ಅವನ ಪುಣ್ಯವೆಂದೇ ಹೇಳಬೇಕು. ಆ ವ್ಯಕ್ತಿ ಆತುರಾತುರದಿಂದ ಜನಸಮೂಹವನ್ನು ಮೆತ್ತಗೆ ತಳ್ಳಿಕೊಂಡು ಒಂದು ನಿರ್ದಿಷ್ಟ ಜಾಗಕ್ಕೆ ಬಂದುನಿಂತ. ಆಚೀಚೆ ನೋಡಿದ. ಆ ಜಾಗವನ್ನು ಆತ ಬಹಳ ಚೆನ್ನಾಗಿ ಬಲ್ಲನೆಂಬುದೂ, ಅಲ್ಲಿಗೆ ಬರದೆ ಬಹಳ ವರ್ಷಗಳೇ ಕಳೆದಿವೆಯೆಂಬುದೂ ಅವನ ಹಾವಭಾವ- ವರ್ತನೆಗಳಿಂದ ಸ್ಪಷ್ಟವಾಗುತ್ತಿತ್ತು. ಆತ ಅತ್ತಿತ್ತ ನಡೆದು ನೋಡಿ ಕೊನೆಗೆ ಒಂದು ಸ್ಥಳದಲ್ಲಿ ನಿಂತುಕೊಂಡ.

Advertisement

ಟೊಪ್ಪಿಯನ್ನು ತೆಗೆದು ಕೈಯಲ್ಲಿ ಹಿಡಿದ. ತಲೆಕೆಳಗೆಮಾಡಿದ. ಸಮಾಧಿಯ ಮುಂದೆ ನಿಂತು ಶೋಕಾಚರಣೆ ಮಾಡುವವರ ರೀತಿಯಲ್ಲಿ ನಿಂತ. ಅವನು ನಿಂತ ಸ್ಥಳದಲ್ಲಿ ಅಂಗಡಿಯಾಗಲೀ ಏನೊಂದು ಸ್ಮಾರಕವಾಗಲೀ ಇರಲಿಲ್ಲ. ಸುತ್ತ ಓಡಾಡುತ್ತಿದ್ದ ಜನರಿಗೆ ಏನೊಂದೂ ಆಕರ್ಷಣೆ ಹುಟ್ಟಿಸದ ಆ ಜಾಗವನ್ನು ಆತ ಮಾತ್ರ ಪವಿತ್ರವೆಂದು ಭಾವಿಸಿದಂತಿತ್ತು. ಇಂಗ್ಲೆಂಡಿನ ಹವೆ ಎಂದರೆ ಕೇಳಬೇಕೆ? ಬಿಸಿಲು ಅಡ್ಡವಾಯಿತು/ ಮೋಡ ಆವರಿಸಿತು. ತುಸು ಹೊತ್ತಿನಲ್ಲೇ ತುಂತುರು ಶುರುವಾಯಿತು. ನಂತರ

ಒಂದು ತಾಸು ಬಿಟ್ಟೂಬಿಡದೆ ಮಳೆ ಸುರಿಯಿತು. ಗದ್ದಲದ ಸಂತೆ ಮಳೆ ಹುಯ್ಯುತ್ತಲೇ ನಿರ್ಜನವಾದರೂ ಆತ ಮಾತ್ರ ಅಲ್ಲಿ ಕಂಬದಂತೆ ನಿಂತೇ ಇದ್ದ. ಸುಮಾರು ಎರಡು ತಾಸು ಹಾಗೆ ನಿಂತು ಕಣ್ಣೀರುಗರೆದ ಬಳಿಕ ಆ ವ್ಯಕ್ತಿ ತನ್ನ ದಾರಿಹಿಡಿದು ಹೊರಟ. ಮಡುಗಟ್ಟಿದ ನೋವನ್ನು ಪ್ರತಿನಿಧಿಸುವಂತಿದ್ದ ಆತನ ನಡಿಗೆಯ ಭಾರವನ್ನು ಯಾರೂ ಗುರುತಿಸಬಹುದಾಗಿತ್ತು.ಆತನೇ ಇಂಗ್ಲಿಷ್‌ ಭಾಷೆಗೆ ಮೊಟ್ಟಮೊದಲ ಬೃಹತ್‌ ನಿಘಂಟನ್ನು ಕೊಟ್ಟ ಸ್ಯಾಮುಯೆಲ್‌ ಜಾನ್ಸನ್‌. ಬ್ರಿಟಿಷರ ಬಾಯಲ್ಲಿ ಆತ ಡಾಕ್ಟರ್‌ ಜಾನ್ಸನ್‌.

ಅಂದು ಆತ ನಿಂತದ್ದು ತನ್ನ ತಂದೆ ಒಂದಾನೊಂದು ಕಾಲದಲ್ಲಿ ಪುಸ್ತಕ ಮಾರುತ್ತಿದ್ದ ಜಾಗದಲ್ಲಿ. ಜಾನ್ಸನ್‌ ನದು ಬಡತನದ ಕುಟುಂಬ. ಹೊಟ್ಟೆಗಿದ್ದರೆ ಬಟ್ಟೆಗಿಲ್ಲ; ಬಟ್ಟೆಗಿದ್ದರೆ ಜುಟ್ಟಿಗಿಲ್ಲ ಎಂಬಂಥ ಸನ್ನಿವೇಶ. ಜಾನ್ಸನ್‌ನ ಅಪ್ಪಒಂದಷ್ಟು ಹಳೆ-ಹೊಸ ಪುಸ್ತಕಗಳನ್ನು ಯುಟೋಕ್ಸಿಟರ್‌ ಸಂತೆಯಲ್ಲಿ ಮಾರಿ, ಬಂದ ಪುಡಿಗಾಸಿನಲ್ಲಿ ಕುಟುಂಬ ನಿರ್ವಹಣೆ ಮಾಡಬೇಕಾಗಿತ್ತು. ಬಡತನಕ್ಕೆವಿರುದ್ಧವೆಂಬಂತೆ ಜಾನ್ಸನ್‌ಗೆ ಚಿಕ್ಕಂದಿನಿಂದಲೂ ಮೂಗಿನ ತುದಿಯಲ್ಲಿ ಸಿಟ್ಟು, ಸೆಡವು! ಯಾರಾದರೂ ಆತನನ್ನು ಕೆಲಸಕ್ಕೆ ಹಚ್ಚಿದರೆ ಉರಿದುಬೀಳುತ್ತಿದ್ದ. ಯಾರ ಅಂಕೆಗೂ ಸಿಕ್ಕದ ಸ್ವೇಚ್ಛೆಯ ಮನೋಭಾವ ಅವನದಾಗಿತ್ತು. ಅದೊಂದು ದಿನ, ತಂದೆ ಜ್ವರ ಬಂದು ಹಾಸಿಗೆ ಹಿಡಿದಾಗ ಮಗ ಜಾನ್ಸನ್‌ ನನ್ನು ಕರೆದು ಸಂತೆಗೆ ಪುಸ್ತಕ ಕೊಂಡೊಯ್ದು ಮಾರಲು ಹೇಳಿದ. ಆದರೆ ಜಾನ್ಸನ್‌ಗೆ ಅದು ಪಥ್ಯವಾಗಲಿಲ್ಲ. ಅಪ್ಪನ ಮಾತನ್ನು ಧಿಕ್ಕರಿಸಿ ಹೊರಟ. ಮಗನ ಹಠಮಾರಿತನದ ಪರಿಚಯವಿದ್ದ ಅಪ್ಪ ಮಾತಾಡಲಿಲ್ಲ. ಜ್ವರದ ಸುಡುಬಿಸಿಯಲ್ಲೂ ಪುಸ್ತಕಗಳನ್ನು ಗಂಟುಕಟ್ಟಿಕೊಂಡು ಹೊರಟ ಸಂತೆಗೆ! ಯಾಕೆಂದರೆ ಆ ವಾರದ ಮಾರಾಟ ನಡೆಯದಿದ್ದರೆ ಮನೆಯಲ್ಲಿ ಬೇಯಿಸಲು ಹಿಡಿಗಂಜಿಯೂ ಇರುವುದಿಲ್ಲವೆಂಬ ವಾಸ್ತವ ಅಪ್ಪನಿಗೆ ತಿಳಿದಿತ್ತು; ಆದರೆ ಮಗನಿಗೆ ಅದರ ಪರಿವೇ ಇರಲಿಲ್ಲ. ಕಾಲ ಸರಿಯಿತು.

ಜಾನ್ಸನ್‌ ಪ್ರಚಂಡ ಬುದ್ಧಿವಂತ. ಹಲವು ಲೇಖನಗಳನ್ನು ಬರೆದ. ವಿದ್ವಾಂಸನೆಂದು ಪ್ರಸಿದ್ಧನಾದ. ನಿಘಂಟು ಬರೆವ ಜವಾಬ್ದಾರಿ ಅವನ ಹೆಗಲ ಮೇಲೆ ಬಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ. ಇಂಗ್ಲೆಂಡಿನಲ್ಲೇ

Advertisement

ಖ್ಯಾತನಾದ. ದೇಶದ ಉದ್ದಾಮ ಪಂಡಿತ ಎಂದು ಯುರೋಪಿನ ವಿದ್ವದ್ವಲಯವೇ ಅವನನ್ನು ಕೊಂಡಾಡಿತು. ಇಷ್ಟರಲ್ಲಿ ಜಾನ್ಸನ್‌ನ ಅಪ್ಪ ತೀರಿಕೊಂಡಿದ್ದ. ಸ್ವತಃ ಜಾನ್ಸನ್‌ಗೆ ನಲವತ್ತೈದರ ಗಡಿ ದಾಟಿತ್ತು. ದೇಶದ ಅತಿ ದೊಡ್ಡ ವಿದ್ವಾಂಸ ಎಂದು ಹೊಗಳಿಸಿಕೊಂಡರೂ ಜಾನ್ಸನ್‌ಗೆ ಹಿಂದೊಮ್ಮೆಅಪ್ಪನ ವಿನಂತಿಯನ್ನು ಧಿಕ್ಕರಿಸಿಹೋದ ನೋವು ಮಾತ್ರ ಕಾಡುತ್ತಲೇ ಇತ್ತು.ಕೊನೆಗೊಂದು ದಿನ ಯುಟೋಕ್ಸಿಟರ್‌ನ, ಅಪ್ಪನ ಅಂಗಡಿ ಇದ್ದ ಜಾಗಕ್ಕೆ ಬಂದು ಜಾನ್ಸನ್‌ ಕಲ್ಲಿನಂತೆ ನಿಂತು ಕಣ್ಣೀರು ಹಾಕಿ, ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡ.

 

 

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next