Advertisement
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಗಾಯತ್ರಿ ಮ್ಯೂಸಿಕಲ್ ವರ್ಕ್ಸ್ ಎಂಬ ವಾದ್ಯಗಳ ಅಂಗಡಿ ನಡೆಸುತ್ತಿದ್ದಾರೆ ಮಲ್ಲಮ್ಮ. ಇದು ಅವರ ಸ್ವಂತ ಕೊಠಡಿಯಲ್ಲ. ಬಾಡಿಗೆಯ ಜಾಗದಲ್ಲಿ ಅಂಗಡಿ ನಡೆಸುತ್ತಾ, ಜೀವನದ ತಂತಿಯನ್ನು ಮೀಟುತ್ತಿದ್ದಾರೆ. ತಬಲಾ, ಡಗ್ಗಾ, ಡೋಲಕ್, ಮೃದಂಗ, ನಗಾರಿ, ರಣ ಹಲಗೆ, ಸಮಳ, ಚೌಡಕಿ, ಜಗ್ಗಲಗಿ ಹೀಗೆ ಅನೇಕ ವಾದ್ಯಗಳನ್ನು ಮಲ್ಲಮ್ಮನವರೇ ತಯಾರಿಸಿ, ಮಾರಾಟ ಮಾಡುತ್ತಾರೆ.
ಇವರಿಗೆ ನಾಟಕ ಕಂಪನಿಯವರು, ಭಜನಾ ಸಂಘದವರು ಡೊಳ್ಳಿನ ಸಂಘದವರೇ ಗ್ರಾಹಕರು. ಯಾವ ವಾದ್ಯ ಬೇಕೆಂದು ಗ್ರಾಹಕರು ಬೇಡಿಕೆ ಇಡುತ್ತಾರೋ, ಆ ವಾದ್ಯವನ್ನು ಮಲ್ಲಮ್ಮ ತಯಾರಿಸುತ್ತಾರೆ. ಚರ್ಮ ವಾದ್ಯಗಳನ್ನು ತಯಾರಿಸಿಟ್ಟುಕೊಂಡು ಗ್ರಾಹಕರಿಗಾಗಿ ಕಾಯುವುದೂ ಉಂಟು. ಯಾವ ವಾದ್ಯದ ಮೇಲೆ ಯಾವ ಕಲಾವಿದರ ಋಣವಿರುತ್ತದೋ ಯಾರಿಗೆ ಗೊತ್ತು ಎಂದು ಹೇಳುತ್ತಾರೆ ಮಲ್ಲಮ್ಮ ಬಗರಿಕಾರ. ಶೃತಿ ಜ್ಞಾನವೂ ಇದೆ
ತಬಲಾ ತಯಾರಿಕೆಗೆ ಚರ್ಮ, ಗಟ್ಟಿ, ಪಡಗ, ಕರಣಿ, ಚರ್ಮದ ದಾರ ಬೇಕಾಗುತ್ತದೆ. ತಯಾರಿಸಿದ ನಂತರ ವಾದ್ಯವನ್ನು ನುಡಿಸಿ, ನಾದ ಸರಿಯಾಗಿ ಹೊಮ್ಮುತ್ತಿದೆಯೇ ಎಂದು ಪರೀಕ್ಷಿಸಿ, ಹೊಮ್ಮದಿದ್ದರೆ ಮತ್ತೆ ಚರ್ಮದ ದಾರವನ್ನು ಬಿಗಿಗೊಳಿಸಿ ಅಪಶ್ರುತಿ ಬರದ ಹಾಗೆ ಸರಿ ಮಾಡಬೇಕು. ಹಾಗಾಗಿ ವಾದ್ಯ ತಯಾರಿಕರಿಗೂ ಶೃತಿಜ್ಞಾನ ಅಗತ್ಯವಾಗಿ ಇರಬೇಕು. ಈ ವಿಷಯದಲ್ಲಿ ಮಲ್ಲಮ್ಮ, ಯಾವ ಸಂಗೀತಗಾರರಿಗೂ ಕಡಿಮೆಯಿಲ್ಲ.
Related Articles
ಆರು ತಿಂಗಳಿಗೊಮ್ಮೆ ಮೀರಜ್, ಕೊಲ್ಲಾಪುರ, ದಾವಣಗೆರೆಗೆ ಹೋಗಿ ಚರ್ಮವಾದ್ಯಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ತರುತ್ತಾರೆ. ನಂತರ ವಾದ್ಯಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ಒಂದು ನಗಾರಿಯನ್ನು ತಯಾರಿಸಲು ಕನಿಷ್ಠ ಒಂದು ವಾರ ಸಮಯ ಬೇಕಾಗುತ್ತದೆ. ಫೈಬರ್ ವಾದ್ಯಗಳ ಭರಾಟೆಯಲ್ಲಿ ಚರ್ಮವಾದ್ಯಗಳನ್ನು ಕೇಳುವವರು ತೀರ ಕಡಿಮೆಯಾದರೂ ಕುಲ ಕಸುಬು ಬಿಡುವ ಹಾಗಿಲ್ಲ. ತಯಾರಿ ಇಲ್ಲದ ದಿನಗಳಲ್ಲಿ, ರಿಪೇರಿಗೆ ಬಂದ ವಾದ್ಯಗಳನ್ನು ಸರಿಪಡಿಸಿ, ಅವುಗಳಿಗೆ ಜೀವ ತುಂಬುವುದು ಮಲ್ಲಮ್ಮನ ಕಾಯಕ.
Advertisement
ಮಲ್ಲಮ್ಮ ಬಗರಿಕಾರ ಅವರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಪತಿ ತೀರಿಕೊಂಡ ಬಳಿಕ ಸಂಸಾರದ ನೊಗ ಇವರ ಹೆಗಲಿಗೆ ಬಿತ್ತು. ಒಬ್ಬ ಮಗಳಿಗೆ ವಿವಾಹವಾಗಿದೆ. ಮಗ, ಬೀಡಾ ಅಂಗಡಿ ನಡೆಸುತ್ತಿದ್ದರೆ, ಇನ್ನೊಬ್ಬ ಮಗಳು ಈಗ ಹೈಸ್ಕೂಲ್ ಓದುತ್ತಿದ್ದಾಳೆ. ಬಡತನವೇ ಹಾಸಿ ಹೊದ್ದು ಮಲಗಿರುವ ಮಲ್ಲಮ್ಮನ ಕುಟುಂಬಕ್ಕೆ ಕಲಾಸೇವೆಯೇ ಶ್ರೀರಕ್ಷೆ.
ತಯಾರಿಸಿದ ವಾದ್ಯದಿಂದ ನಾದ ಸರಿಯಾಗಿ ಹೊಮ್ಮುತ್ತಿದೆಯೇ ಅಂತ ಪರೀಕ್ಷಿಸಿ, ಅಪಸ್ವರ ಹೊರಡುತ್ತಿದ್ದರೆ ಚರ್ಮದ ದಾರವನ್ನು ಪುನಃ ಬಿಗಿಗೊಳಿಸಬೇಕಾಗುತ್ತೆ. ಹಾಗಾಗಿ ವಾದ್ಯ ತಯಾರಿಕರಿಗೂ ಶೃತಿಜ್ಞಾನ ಅಗತ್ಯ. – ಮಲ್ಲಮ್ಮ -ಟಿ. ಶಿವಕುಮಾರ್