Advertisement

ಕೋವಿಡ್ ಕಲಿಸುತ್ತಿರುವ ಬದುಕಿನ ಪಾಠಗಳು

01:31 PM Apr 30, 2020 | mahesh |

“ಅತ್ಯಗತ್ಯ’ ಮೀಟಿಂಗ್‌ಗಳು ವಿರಳವಾಗಿರುತ್ತವೆ ಎನ್ನುವುದು ಅರ್ಥವಾಗಿದೆ. ನಾನು ಇದುವರೆಗೂ ವಿಮಾನವೇರಿ ಒಂದು ಮೀಟಿಂಗ್‌ನಿಂದ ಇನ್ನೊಂದು ಬಹುಮುಖ್ಯ ಮೀಟಿಂಗ್‌ನಲ್ಲಿ ಭಾಗಿಯಾಗಲು ಓಡಾಡುತ್ತಿದ್ದೆ. ವಿಮಾನದಲ್ಲೇ ಮುಂದಿನ ಮೀಟಿಂಗ್‌ಗಳಿಗೆ ಸಿದ್ಧತೆ ನಡೆಸುತ್ತಿದ್ದೆ. ಆದರೆ ಯಾವಾಗ ಈ ವೈರಸ್‌ ದಾಳಿ ಮಾಡಿತೋ, ಎಲ್ಲಾ ವಿಮಾನಗಳೂ ಹಾರಾಟವನ್ನೇ
ನಿಲ್ಲಿಸಿಬಿಟ್ಟವು.

Advertisement

ನಾನು ಸುಮಾರು 40 ವರ್ಷಗಳಿಂದ ವೈದ್ಯ ವೃತ್ತಿಯಲ್ಲಿದ್ದೇನೆ. ಏಡ್ಸ್‌ ಸಾಂಕ್ರಾಮಿಕ ಅಧಿಕವಿದ್ದ ವೇಳೆಯಲ್ಲಿ ಮತ್ತು ಅಮೆರಿಕದಲ್ಲಿ ಡ್ರಗ್ಸ್‌ ದಂಧೆಯ ವಿರುದ್ಧ ರೊನಾಲ್ಡ್‌ ರೇಗನ್‌ ಆಡಳಿತ ಸಮರ ಸಾರಿದ್ದ ಸಮಯದಲ್ಲಿ ನಾನು ಆ ದೇಶದಲ್ಲಿ ಇದ್ದೆ. ನನ್ನ ವೃತ್ತಿಜೀವನದಲ್ಲಿ ಎಚ್‌1ಎನ್‌1, ಸಾರ್ಸ್‌ ಮತ್ತು ಮರ್ಸ್‌ ರೋಗಿಗಳಿಗೂ ನಾನು ಚಿಕಿತ್ಸೆ ನೀಡಿದ್ದೇನೆ. ಆದರೆ, ಖಚಿತವಾಗಿ ಹೇಳಬಲ್ಲೆ; ಈ ಕೋವಿಡ್‌-19ನಂಥದ್ದನ್ನು ನಾನು ಎಂದೂ ನೋಡಿರಲಿಲ್ಲ. ಈ ವೈರಸ್‌ನ ಬಗ್ಗೆ ನಾವಿನ್ನೂ ಕಲಿಯುತ್ತಿದ್ದೇವೆ, ಅದರ ವಿರುದ್ಧ ಹೋರಾಡುವ ಮಾರ್ಗವನ್ನು ಅನ್ವೇಷಿಸುತ್ತಿದ್ದೇವೆ. ಈ ಸಾಂಕ್ರಾಮಿಕದಿಂದಾಗಿ ಬಹಳ ಸಂಕಷ್ಟವಂತೂ ಎದುರಾಗಿದೆಯಾದರೂ, ಈ ಸಮಯದಲ್ಲಿ ಜನಸಾಮಾನ್ಯರು ಇಡುತ್ತಿರುವ ಜವಾಬ್ದಾರಿಯುತ ಹೆಜ್ಜೆಯೂ ಅಚ್ಚರಿಹುಟ್ಟಿಸುವಂತಿದೆ. ಒಂದೆಡೆ, ಸ್ವಯಂಸೇವಕರು ಅಗತ್ಯವಿರುವವರಿಗೆ ಆಹಾರ ಪೂರೈಸುತ್ತಿದ್ದರೆ, ಹಿರಿಯ ನಾಗರಿಕರಿಗೆ ಸಹಾಯ ಮಾಡುತ್ತಿದ್ದರೆ, ಇನ್ನೊಂದೆಡೆ ಪ್ರಾಣಿಪ್ರಿಯರು, ಬೀದಿಯಲ್ಲಿ ಆಹಾರ ಮತ್ತು ನೀರು ಇಟ್ಟು ಪ್ರಾಣಿಪಕ್ಷಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಜನರು ಸ್ಥಳೀಯ ಧೋಬಿಗಳು ಮತ್ತು ಜಾಡಮಾಲಿಗಳಿಗೆ ಸಹಾಯ ಮಾಡಲು ಹಣ-ಆಹಾರ ಸಂಗ್ರಹಿಸುತ್ತಿದ್ದಾರೆ. ಒಟ್ಟಲ್ಲಿ ಪ್ರತಿಯೊಬ್ಬರೂ ತಮ್ಮಿಂದ ಸಾಧ್ಯವಾದಷ್ಟೂ ಸಹಾಯ ಮಾಡುತ್ತಿದ್ದಾರೆ. ಇನ್ನು, ಕೆಲ ವಾರಗಳ ಹಿಂದೆ ದೇಶವಾಸಿಗಳೆಲ್ಲ ಆರೋಗ್ಯ ವಲಯದ ಕೆಲಸಗಾರರು ಮತ್ತು ಅಗತ್ಯ ಸೇವೆಗಳನ್ನು ಪೂರೈಸುವವರನ್ನು ಪ್ರೋತ್ಸಾಹಿಸಲು ಹೊರಬಂದು ಚಪ್ಪಾಳೆ ತಟ್ಟಿದ್ದು (ಸರಿಯಾದ ಅಂತರ ಕಾಯ್ದುಕೊಂಡು) ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು. ಖಾಸಗಿ ಮತ್ತು ಸಾರ್ವಜನಿಕ ವಲಯವೂ ಸಹ ಈ ರೋಗದ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವುದೂ ಮನಮುಟ್ಟುವಂತಿದೆ.

ಇದೆಲ್ಲದರ ಪರಿಣಾಮವು ಸ್ವಾಸ್ಥ್ಯ ಮತ್ತು ಆರ್ಥಿಕತೆಯ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎನ್ನುವುದನ್ನು ನಾವೆಲ್ಲ ಕಾದು ನೋಡುತ್ತಿರುವ ವೇಳೆಯಲ್ಲೇ, ಬದುಕು ಎದುರಿಟ್ಟಿರುವ ಈ ಹೊಸ ಜೀವನಶೈಲಿಗೆ ಒಗ್ಗಿಕೊಳ್ಳುವುದನ್ನೂ ಕಲಿಯಲಾರಂಭಿಸಿದ್ದೇವೆ. ನನಗಂತೂ ಈ ಲಾಕ್‌ಡೌನ್‌ ಆತ್ಮಾವಲೋಕನ ಮಾಡಿಕೊಳ್ಳಲು ಸಮಯ ನೀಡಿದೆ. ಅಲ್ಲದೇ, ನನ್ನ ದಿನಚರ್ಯೆಯನ್ನು ಪ್ಲ್ರಾನ್‌ ಮಾಡುವ ರೀತಿಯನ್ನು ಬದಲಿಸಿಕೊಳ್ಳುವಂತೆ ಮಾಡಿದೆ. ಒಟ್ಟಲ್ಲಿ ಇದೆಲ್ಲದರಿಂದಾಗಿ ನಾನು ಕಲಿತ ಪಾಠಗಳು ಇಂತಿವೆ:

1)ನಿಜಕ್ಕೂ “ಅಗತ್ಯ’ ಮೀಟಿಂಗುಗಳೆಷ್ಟು?: ಎಲ್ಲರಂತೆಯೇ ನಾನೂ ಕೂಡ “ಅಗತ್ಯ’ದ ವ್ಯಾಖ್ಯಾನವನ್ನು ಮರುಮೌಲ್ಯಮಾಪನ ಮಾಡಲಾರಂಭಿಸಿದ್ದೇನೆ. ನಿಜಕ್ಕೂ “ಅತ್ಯಗತ್ಯ’ ಮೀಟಿಂಗ್‌ಗಳು ವಿರಳವಾಗಿರುತ್ತವೆ ಎನ್ನುವುದು ಅರ್ಥವಾಗಿದೆ. ನಾನು ಇದುವರೆಗೂ ವಿಮಾನವೇರಿ ಒಂದು ಮೀಟಿಂಗ್‌ನಿಂದ ಇನ್ನೊಂದು ಬಹುಮುಖ್ಯ ಮೀಟಿಂಗ್‌ನಲ್ಲಿ ಭಾಗಿಯಾಗಲು ಅತ್ತಿಂದಿತ್ತ-ಇತ್ತಿಂದತ್ತ ಅಡ್ಡಾಡುತ್ತಿದ್ದೆ. ವಿಮಾನದಲ್ಲೇ ಮುಂದಿನ ಮೀಟಿಂಗ್‌ಗಳಿಗೆ ಸಿದ್ಧತೆ ನಡೆಸುತ್ತಿದ್ದೆ. ಆದರೆ ಯಾವಾಗ ಈ ವೈರಸ್‌ ದಾಳಿ ಮಾಡಿತೋ, ಎಲ್ಲಾ ವಿಮಾನಗಳೂ ಹಾರಾಟವನ್ನೇ ನಿಲ್ಲಿಸಿಬಿಟ್ಟವು. ಯಾವ ಮೀಟಿಂಗ್‌ಗಳಲ್ಲಿ ನಾನು ಭಾಗಿಯಾಗುವುದು “ಅಗತ್ಯ’ ಎಂದು ಭಾವಿಸಲಾಗಿತ್ತೋ, ಆ ಮೀಟಿಂಗ್‌ಗಳು ನಾನಿಲ್ಲದೇ ನಡೆದವು ಮತ್ತು ಆಗಬೇಕಾದ ಕೆಲಸವೂ ಆದವು! ಈಗ ವಿಡಿಯೋ ಕಾನ್ಫರೆನ್ಸಿಂಗ್‌ ಮತ್ತು ಟೆಲಿಕಾನ್ಫರೆನ್ಸಿಂಗ್‌ಗಳು ಅನಗತ್ಯ ಸಣ್ಣ ಪುಟ್ಟ ಮಾತುಕತೆಗಳನ್ನು ಕಡಿತಗೊಳಿಸುವುದರಿಂದಾಗಿ, ಮೀಟಿಂಗ್‌ಗಳು ಸುಗಮವಾಗುವಂತಾಗಿದೆ. ಇನ್ನು ನನ್ನ ಕಾರ್ಬನ್‌ ಫ‌ುಟ್‌ಪ್ರಿಂಟ್‌ ಕೂಡ ತಗ್ಗಿರುವುದರಿಂದ ನನ್ನ ಹೆಣ್ಣುಮಕ್ಕಳಿಗೆ(ಮತ್ತು ಭೂಮಿಗೂ) ಖುಷಿಯಾಗಿದೆ.

2Time spent planning is still time spent:  ಅಬ್ರಹಾಂ ಲಿಂಕನ್‌ ಒಮ್ಮೆ ಹೇಳಿದ್ದರು- “”ಒಂದು ಮರವನ್ನು ಕಡಿಯಲು ನನಗೆ ಆರು ಗಂಟೆ ಕೊಟ್ಟರೆ, ಅದರಲ್ಲಿ ಐದು ಗಂಟೆಗಳನ್ನು ನಾನು ಕೊಡಲಿ ಮೊನಚು ಮಾಡಲು ವಿನಿಯೋಗಿಸುತ್ತೇನೆ” ಎಂದು. ನಾನು ಮ್ಯಾನೇಜ್‌ಮೆಂಟ್‌ ಜವಾಬ್ದಾರಿಯನ್ನು ಹೊತ್ತುಕೊಂಡಾಗ, ಈ ತತ್ವವನ್ನೇ  ಅಳವಡಿಸಿಕೊಳ್ಳಲಾರಂಭಿಸಿದೆ. ಇದರಿಂದಾಗಿ, ನನ್ನ ದಿನದ ಬಹುಪಾಲು ಸಮಯ ಪ್ಲ್ರಾನಿಂಗ್‌ ಮಾಡುವುದರಲ್ಲೇ ಕಳೆದುಹೋಗುತ್ತಿತ್ತು. ಹೆಚ್ಚಿನ ಮೀಟಿಂಗುಗಳನ್ನು ಮಾಡುವುದು ಹೇಗೆ ಎಂದು ಪ್ಲ್ರಾನ್‌ ಮಾಡುವುದಕ್ಕಾಗಿಯೇ ನಾವು ಹೆಚ್ಚೆಚ್ಚು ಮೀಟಿಂಗ್‌ಗಳನ್ನು ಮಾಡಲಾರಂಭಿಸಿದ್ದೆವು! ಪಂಚವಾರ್ಷಿಕ ಪ್ಲ್ರಾನ್‌ಗಳನ್ನು ಮಾಡಿದೆವು, ವಾರ್ಷಿಕ ಪ್ಲ್ರಾನ್‌ಗಳು, ಮಾಸಿಕ ಪ್ಲ್ರಾನ್‌ಗಳು ಹಾಗೂ ದಿನವಹಿ ಪ್ಲ್ರಾನ್‌ಗಳನ್ನೂ ಮಾಡಿಕೊಂಡೆವು. ಒಟ್ಟಲ್ಲಿ ನಾವು ಬಹಳ ಸಮಯವನ್ನು(ಮತ್ತು ಬೃಹತ್‌ ಸಂಪನ್ಮೂಲವನ್ನು) ಪ್ಲ್ರಾನಿಂಗ್‌ಗೇ ವಿನಿಯೋಗಿಸಿದೆವು. ಆದರೆ, ಈಗ ಈ ಎಲ್ಲಾ ಪ್ಲ್ರಾನ್‌ಗಳೂ ಅಪ್ರಸ್ತುತವಾಗಿವೆ ಮತ್ತು ಸಮಯವೂ ಸರಿದುಹೋಗಿದೆ. ಸತ್ಯವೇನೆಂದರೆ, ಪ್ಲ್ರಾನಿಂಗ್‌ನ ಮಹತ್ವದ ಬಗ್ಗೆ ನನಗೆ ಈಗಲೂ ನಂಬಿಕೆಯಿದೆ. ಆದರೆ ಇನ್ಮುಂದೆ ಈ ವಿಚಾರದಲ್ಲಿ ಸ್ವಲ್ಪ ಸಮತೋಲಿತ ಮಾರ್ಗವನ್ನು ಅಳವಡಿಸಿಕೊಳ್ಳುತ್ತೇನೆ. “doing”ಗೆ ಹೆಚ್ಚು ಸಮಯ ಮೀಸಲಿಡುತ್ತೇನೆ.

Advertisement

ಕಾಮನ್‌ಮ್ಯಾನ್‌ನ ಕಾಮನ್‌ಸೆನ್ಸ್‌ ಅನ್ನು ನಂಬಬೇಕು: ನಾವು ಅತ್ಯಂತ ಸಂಕೀರ್ಣ ದತ್ತಾಂಶಗಳ ಮಾಡೆಲ್‌ಗಳು, ಪರಿಣತರ ಅಭಿಪ್ರಾಯಗಳು ಮತ್ತು ತಜ್ಞರ ಮುನ್ಸೂಚನೆಗಳನ್ನು ಎಷ್ಟೊಂದು ನಂಬಿಬಿಡುತ್ತೇವೆ ಎಂದರೆ, ಭವಿಷ್ಯ ನುಡಿಯುವುದಕ್ಕೂ ಒಂದು ಮಿತಿಯಿದೆ ಎನ್ನುವುದನ್ನೇ ಅರ್ಥಮಾಡಿಕೊಳ್ಳಲು ವಿಫ‌ಲರಾಗುತ್ತೇವೆ. ನನಗನ್ನಿಸುವುದೇನೆಂದರೆ, ಅತಿಯಾದ ವಿಶ್ಲೇಷಣೆಯು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಕಟ್ಟಿಹಾಕಿಬಿಡುತ್ತದೆ. ಇತ್ತೀಚೆಗೆ ನಾನೊಂದು ಪುಸ್ತಕ ಓದಿದೆ. ಅನಿಲ್‌ ಗಾಬಾ, ರಾಬಿನ್‌ ಹೊಗಾರ್ಥ್ ಮತ್ತು ಮಕ್ರಿಡಾಕಿಸ್‌ ಬರೆದ Dance with Chance: Making Luck Work for You ಎನ್ನುವ ಈ ಪುಸ್ತಕವು ಹೇಗೆ ನಾವೆಲ್ಲ, ಭವಿಷ್ಯದ ಬಗ್ಗೆ ಒಂದು ಭ್ರಮೆಯಲ್ಲಿ ಇರುತ್ತೇವೆ ಎನ್ನುವುದನ್ನು ಅನ್ವೇಷಿಸುತ್ತದೆ. “”ಭವಿಷ್ಯವು ಹೆಚ್ಚು ಅನಿಶ್ಚಿತವಾಗಿರುವುದಿಲ್ಲ ಮತ್ತು ಅದನ್ನು ಸುಲಭವಾಗಿ ಊಹಿಸಬಹುದು ಎಂಬ ಭ್ರಮಾಲೋಕದಲ್ಲಿ ನಾವಿರುತ್ತೇವೆ, ನಾವು ಈ ಭ್ರಮೆಯನ್ನು ಬಿಟ್ಟಷ್ಟೂ, ಬದುಕಿನ ಮೇಲೆ ನಮಗಿರುವ ನಿಯಂತ್ರಣ ಹೆಚ್ಚುತ್ತದೆ” ಎನ್ನುವುದನ್ನು ಲೇಖಕರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಈ ಪುಸ್ತಕವು, “ಏಕೆ ಕೆಲವೊಂದು ರಾಷ್ಟ್ರಗಳು ಬಹಳ ಪ್ಲ್ರಾನಿಂಗ್‌ನಿಂದ ತಮ್ಮ ಆರ್ಥಿಕತೆಯನ್ನು ನಿಯಂತ್ರಿಸಿದರೂ, ಇತರೆ ರಾಷ್ಟ್ರಗಳಿಗಿಂತ ಅವುಗಳ ಪ್ರದರ್ಶನ ಉತ್ತಮವಾಗಿರುವುದಿಲ್ಲ ‘ ಎಂಬಂಥ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ನನ್ನ ಅನುಭವದ ಆಧಾರದಲ್ಲಿ ಹೇಳುವುದಾದರೆ,  ಕೆಲವೊಮ್ಮೆ ಪರಿಣತರು ಚಿಕ್ಕಪುಟ್ಟ ವಿವರಗಳಿಗೇ ಎಷ್ಟು ಗಮನಕೊಟ್ಟುಬಿಡುತ್ತಾರೆಂದರೆ, ಬೃಹತ್‌ ಚಿತ್ರಣವನ್ನೇ ಅವರು ಗಮನಿಸುವುದಿಲ್ಲ.
ಹಾಗೆಂದು, ತಜ್ಞರ/ಪರಿಣತರ ಅಭಿಪ್ರಾಯಗಳನ್ನು ಕಡೆಗಣಿಸಬೇಕು ಎಂದು ನಾನು ಹೇಳುತ್ತಿಲ್ಲ ಅಥವಾ ಭಾವನೆಗಳು ಸತ್ಯಕ್ಕೆ ಪರ್ಯಾಯವಾಗಬಲ್ಲವು ಎನ್ನುವುದೂ ನನ್ನ ಮಾತಿನ ಅರ್ಥವಲ್ಲ. ತಜ್ಞರು ಆಳವಾದ ಅಧ್ಯಯನ ನಡೆಸಿ,  ಪರಿಪೂರ್ಣತೆ ಸಾಧಿಸಿರುವಂಥ ಅನೇಕ ಸಂಗತಿಗಳಿವೆ. ಉದಾಹರಣೆಗೆ- ಲಸಿಕೆ ನೀಡುವುದರಿಂದ (ಮತ್ತು ಈ ಸಮಯದಲ್ಲಿ ಸಾಮಾಜಿಕ ಅಂತರ ಪಾಲಿಸುವುದು, ಕೈ ಸ್ವತ್ಛವಾಗಿಟ್ಟುಕೊಳ್ಳುವುದರಿಂದ) ಜೀವಗಳು ಉಳಿಯುತ್ತವೆ ಎಂಬುದಕ್ಕೆ ನಮ್ಮ ಬಳಿ ನಿಖರ ಪುರಾವೆಗಳಿವೆ.  ಆದರೆ ನನ್ನ ಅವಲೋಕನವೆಂದರೆ, ವೃತ್ತಿಜೀವನದಲ್ಲಿ ನಾವು ಮೇಲೇರುತ್ತಾ ಹೋದಂತೆ, ಅದರೊಂದಿಗೆ  ಹೆಚ್ಚು ಅಹಂ/ಗರ್ವವನ್ನೂ ನಾವು ಸಂಗ್ರಹಿಸುತ್ತಾ ಹೋಗಿಬಿಡುತ್ತೇವೆ. ನಮ್ಮ ಏಳಿಗೆ ಹಾಗೂ ನಮಗೆ ದೊರೆತ ಸವಲತ್ತುಗಳೆಲ್ಲವೂ ನಮ್ಮದೇ ಪ್ರತಿಭೆ ಹಾಗೂ ಕಠಿಣ ಪರಿಶ್ರಮದ ಫ‌ಲ ಎಂದು ಭಾವಿಸುತ್ತೇವೆ. ಆದರೆ ಈ ಏಳಿಗೆಯಲ್ಲಿ “ಅದೃಷ್ಟ’ವು ಪ್ರಮುಖ ಪಾತ್ರ ನಿರ್ವಹಿಸಿರುತ್ತದೆ ಎನ್ನುವುದನ್ನು ಮರೆತುಬಿಡುತ್ತೇವೆ.

ನನಗಂತೂ ಈ ಬಿಕ್ಕಟ್ಟಿದೆಯಲ್ಲ, ಇದು-“ಯಾವಾಗಲೂ ನಾವು ಉದ್ದೇಶಿಸಿದ ಹಾಗೆಯೇ ನಮ್ಮ ಯೋಜನೆಗಳು ಕೆಲಸ ಮಾಡುವುದಿಲ್ಲ’ ಎನ್ನುವ ವಾಸ್ತವವನ್ನು ನೆನಪು
ಮಾಡಿಕೊಟ್ಟಿದೆ. ಹೀಗಾಗಿ ನನ್ನ ನಿಯಂತ್ರಣದಲ್ಲಿ  ಏನು ಸಾಧ್ಯವೋ ಅದನ್ನು ಮಾಡಲು ಹಾಗೂ ನನ್ನಲ್ಲಿನ  ದೋಷಗಳನ್ನು ಒಪ್ಪಿಕೊಳ್ಳುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ(ನನ್ನ ಪತ್ನಿ ಸ್ವಯಂಪ್ರೇರಿತವಾಗಿ ಈ ವಿಷಯದಲ್ಲಿ ಸಹಾಯ ಮಾಡಲು ಮುಂದಾಗಿದ್ದಾಳೆ).

ಕೋವಿಡ್ ದ ಕಾರ್ಮೋಡವು ಬಹಳ ಕಷ್ಟಗಳನ್ನು  ಎದುರಿಡುತ್ತಿರುವ ವೇಳೆಯಲ್ಲೇ, ಅದು ನಮಗೆ, ಅಜ್ಞಾತ ಸಂಗತಿಗಳನ್ನು ನಿಭಾಯಿಸುವಂಥ ಹಾಗೂ ಅನಿಶ್ಚಿತತೆಯ
ವೇಳೆಯೂ ಗತ್ತಿಂದ ಬದುಕುವಂಥ ಪಾಠವನ್ನು ಕಲಿಸಲಿ ಎಂಬುದೇ ಆಶಯ.

ಯಾವ ಮೀಟಿಂಗ್‌ಗಳಲ್ಲಿ ನಾನು ಭಾಗಿಯಾಗುವುದು “ಅಗತ್ಯ’ ಎಂದು ಭಾವಿಸಲಾಗಿತ್ತೋ  ಆ ಮೀಟಿಂಗ್‌ಗಳು ನಾನಿಲ್ಲದೇ ನಡೆದವು ಮತ್ತು ಆಗಬೇಕಾದ ಕೆಲಸಗಳೂ ಆದವು.

ಭವಿಷ್ಯವು ಹೆಚ್ಚು ಅನಿಶ್ಚಿತವಾಗಿರುವುದಿಲ್ಲ ಮತ್ತು ಅದನ್ನು ಸುಲಭವಾಗಿ ಊಹಿಸಬಹುದು ಎಂಬ ಭ್ರಮಾಲೋಕದಲ್ಲಿ ನಾವಿರುತ್ತೇವೆ

ಕೆಲವೊಮ್ಮೆ ಪರಿಣತರು ಚಿಕ್ಕಪುಟ್ಟ ವಿವರಗಳಿಗೇ ಎಷ್ಟು ಗಮನಕೊಟ್ಟುಬಿಡುತ್ತಾರೆಂದರೆ, ಬೃಹತ್‌ ಚಿತ್ರಣವನ್ನೇ ಅವರು ಗಮನಿಸುವುದಿಲ್ಲ.

ಡಾ| ಸುದರ್ಶನ್‌ ಬಲ್ಲಾಳ್‌ , ಚೇರ್ಮನ್‌, ಮಣಿಪಾಲ್‌ ಆಸ್ಪತ್ರೆಗಳು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next