**
-“”ನಿನಗೆ ಅಡುಗೆ ಮಾಡಲು ಬರುತ್ತಾ? ಅಡುಗೆ ಮನೆಯಲ್ಲಿ ಮುಖ್ಯವಾಗಿ ಏನೇನು ಇರಬೇಕು ಅಂತ ಗೊತ್ತಿದೆಯಾ?” – ಭಾವೀ ವಧುವನ್ನು ಅವರು ಕೇಳಿದರು. ಆಕೆ, ತತ್‌ಕ್ಷಣವೇ ಉತ್ತರಿಸಿದಳು:
ನೀವು ತಪ್ಪು ವಿಳಾಸದ ಮನೆಗೆ ಬಂದಿದ್ದೀರಾ. ಅಲ್ಲಿ ಕಾಣುತ್ತಾ ಇದೆಯಲ್ಲ ಕೊನೆಯ ಮನೆ; ಅಡುಗೆ ಕೆಲಸದ ಹೆಂಗಸರು ಅಲ್ಲಿ ಸಿಕ್ತಾರೆ…
**
-ಆಫೀಸ್‌ಗೆ ಹೋಗುವ ಹೊತ್ತಾಗ್ತಾ ಬಂತು. ಇನ್ನೂ ನನ್ನ ಬಟ್ಟೆ ಐರನ್ ಮಾಡಿಲ್ವಲ್ಲ ಯಾಕೆ? ತಿಂಡಿ ಮಾಡೋಕೆ ಇನ್ನೂ ಎಷ್ಟು ಹೊತ್ತು ಬೇಕು? ಆಫೀಸ್ ಫೈಲ…, ಬೈಕ್ ಕೀನ ಟೇಬಲ್ ಮೇಲೆ ಇಟ್ಟಿರಬೇಕು ಅಂತ ಹೇಳಿ¨ªೆ ಅಲ್ವ? ಅದೆಲ್ಲಿದೆ? ನನ್ನ ಶೂ ಪಾಲಿಶ್ ಮಾಡಿಡು ಅಂತ ನಿನ್ನೆನೇ ಹೇಳಿದ್ದೇನಲ್ಲ, ಯಾಕೆ ಮಾಡಿಲ್ಲ?- ಅವನು ಹೀಗೆಲ್ಲಾ ರೇಗುತ್ತಲೇ ಇದ್ದ.
ಅವಳು ತಣ್ಣಗೆ ಉತ್ತರಿಸಿದಳು. “”ನೀವು ಮನೆ ಕೆಲಸದವಳನ್ನು ಇಟ್ಕೊಂಡಿಲ್ಲಾರೀ, ನನ್ನನ್ನು ಮದುವೆ ಆಗಿದ್ದೀರಾ!”
**
-“”ಅವಳ ಕೊರಳಲ್ಲಿ ಮಂಗಳ ಸೂತ್ರವಿಲ್ಲ, ಹಣೆಯಲ್ಲಿ ಕುಂಕುಮವಿಲ್ಲ, ಬಿಂದಿ ಕೂಡಾ ಇಟ್ಕೊಂಡಿಲ್ಲ. ಕೈಗೆ ಬಳೆಯೂ ಇಲ್ಲ. ಕಾಲುಂ ಗುರವೂ ಕಾಣಿಸ್ತಾ ಇಲ್ಲ. ಅವಳಿಗೆ ಮದುವೆ ಆಗಿದೆ ಅನ್ನೋದಕ್ಕೆ ಯಾವ ಸಾಕ್ಷಿ ಕೂಡ ಸಿಕ್ತಾ ಇಲ್ಲ. ಹೀಗಿರುವಾಗ, ಗೃಹಿಣಿಯರಿಗೆಂದೇ ಏರ್ಪಡಿಸಲಾದ ಫ್ಯಾಷನ್ ಶೋನಲ್ಲಿ ಅವಳು ಹೇಗೆ ಭಾಗವಹಿಸಿದಳು?”- “ಅವಳನ್ನು’ ಕುರಿತು, “ಇವಳು’ ಹೀಗೆಲ್ಲಾ ಯೋಚಿಸುತ್ತಿದ್ದಳು…
**
-ಮದುವೆ ಆದಮೇಲೆ, ಲೈಫ್ ತುಂಬಾ ಚೇಂಜ್ ಆಗಿಬಿಡುತ್ತೆ- ಹಾಗಂತ ಎಲ್ಲರೂ ಹೇಳುತ್ತಿದ್ದರು. ಮದುವೆ ಆದಮೇಲೆ, ಲೈಫ್ನಲ್ಲಿ ತುಂಬಾ ಕಷ್ಟ ಬರುತ್ತೆ ಅನ್ನುವುದನ್ನು ಸಾಪ್ಟ್ ಆಗಿ ಹೇಳ್ಳೋಕೆ – “”ಚೇಂಜ್ ಆಗ್ಬಿಡುತ್ತೆ” ಎಂಬ ಪದ ಬಳಸ್ತಾರೆ ಎಂದು ಅವಳಿಗೆ ಆಮೇಲೆ ಅರ್ಥವಾಯಿತು!
**
-ವರದಕ್ಷಿಣೇನಾ? ಛೆ ಛೆ… ನಾವು ತಗೋಳಲ್ಲ, ಚೌಲಿóಲಿ ಮದುವೆ ಮಾಡಿ ಅಂತ ಕೂಡ ನಾವು ಡಿಮ್ಯಾಂಡ್ ಮಾಡಲ್ಲ; ನಮ್ಮ ಸಂಪ್ರದಾಯದ ಪ್ರಕಾರ, ವಧುವಿಗೆ 2 ಕೆಜಿ ಬಂಗಾರ ಹಾಕಬೇಕು. ಅದೊಂದನ್ನು ನೀವು ಪಾಲಿಸಿದರೆ ಸಾಕು-ಹುಡುಗನ ಮನೆಯವರು ಹೀಗೆಂದರು!
**
-ಆಕೆ ಸಂಕೋಚದಿಂದಲೇ ಕೇಳಿದಳು- “”ಆಗಲೇ ಎಂಟೂವರೆ ಆಗ್ತಾ ಬಂತು. ನನಗೆ ಸ್ವಲ್ಪ ತಲೆನೋವು. ಇವತ್ತು ಒಂದು ದಿನ ನೀವು ಪಾತ್ರೆ ತೊಳೆದು, ಈರುಳ್ಳಿ ಹೆಚ್ಚಿ ಕೊಡ್ತೀರಾ? ಏನಾದ್ರೂ ತಿಂಡಿ ಮಾಡಿಬಿಡ್ತೇನೆ…”
“”ಇನ್ನೊಂದರ್ಧ ಗಂಟೆಯಲ್ಲಿ ತಲೆನೋವುಬಿಡಬ ಹುದು, ಇವತ್ತು 10 ಗಂಟೆಗೆ ತಿಂಡಿ ಕೊಡು ಪರ್ವಾಗಿಲ್ಲ. ನಾನಂತೂ ಅಡುಗೆ ಮನೆ ಕಡೆ ತಲೆಹಾಕಲ್ಲ”- ಈತ, ದರ್ಪದಿಂದಲೇ ಉತ್ತರಿಸಿದ!
**
-ಇಪ್ಪತ್ತೈದು ವರ್ಷಗಳ ಅವಧಿಯ ಬದುಕಿನಲ್ಲಿ ಅವಳಿಗೆ ಎಪ್ಪತ್ತೈದು ಬಗೆಯ ಕಷ್ಟಗಳು ಬಂದವು. ಈ ಸಂದರ್ಭದಲ್ಲಿ, ಅವಳ ಜತೆಗಿದ್ದವರೆಲ್ಲಾ ಜವಾಬ್ದಾರಿಯಿಂದ ನುಣುಚಿ ಕೊಂಡು ಒಬ್ಬೊಬ್ಬರೇ ಎದ್ದು ಹೋಗಿ ಬಿಟ್ಟರು.ಆದರೆ ಒಬ್ಬ ವ್ಯಕ್ತಿ ಮಾತ್ರ ಬಂಡೆಯಂತೆ ನಿಂತು ಅವಳನ್ನು ರಕ್ಷಿಸುತ್ತಲೇ ಇದ್ದ. ಆತ- ಅವಳ ತಂದೆ!
**
-ಅವನು ದಿನವೂ ಒತ್ತಾಯಿಸುತ್ತಿದ್ದ. “”ನನಗದು ಇಷ್ಟವಿಲ್ಲ” ಎಂದು ಇವಳೂ ತಡೆಯಲು ಪ್ರಯತ್ನಿಸುತ್ತಿ ದ್ದಳು. ಆಗೆಲ್ಲಾ, ನಾನು ನಿನ್ನನ್ನು ಮದುವೆ ಆಗಿಲ್ವಾ? ಅನ್ನುತ್ತಲೇ ಅವನು ಪ್ರತಿ ರಾತ್ರಿಯೂ ಅವಳನ್ನು ರೇಪ್ ಮಾಡುತ್ತಲೇ ಇದ್ದ. ಈ ಸರ್ಟಿಫಿಕೇಟ್ ಇರೋದ್ರಿಂದ ತಾನೇ ಇಷ್ಟೆಲ್ಲಾ ಆಗ್ತಿರೋದು ಅನ್ನಿಸಿದಾಗ, ಅವಳು “”ಮ್ಯಾರೇಜ್ ಸರ್ಟಿ ಫಿಕೇಟ್” ಅನ್ನು ಚೂರು ಚೂರಾಗಿ ಹರಿದುಹಾಕಿದಳು!
**
-ಅದು ಸುಡುಬಿಸಿಲ ಮಧ್ಯಾಹ್ನ. ಸೆಖೆಗೆ ಬೆವೆತು ಹೋಗಿದ್ದ ಅವನು, ಉಸ್ಸಪ್ಪಾ ಅನ್ನುತ್ತಲೇ ಆಫೀಸ್‌ನಿಂದ ಮನೆಗೆ ಬಂದ. ಅವನ ದಣಿವು, ಕಳೆಗುಂದಿದ ಮುಖ ಕಂಡು ಇವಳು ಗಡಿಬಿಡಿಯಿಂದಲೇ ನಿಂಬೆ ಶರಬತ್ತು ಮಾಡಿ ಕೊಟ್ಟಳು. ಅದನ್ನು ಕುಡಿಯುತ್ತಿದ್ದಾಗಲೇ ಅವನೊಮ್ಮೆ ಅವಳನ್ನು ಹಾಗೆ ಸುಮ್ಮನೆ ದಿಟ್ಟಿಸಿ ನೋಡಿದ. ನಂತರ ಗ್ಲಾಸ್ ಕೆಳಗಿಟ್ಟು- “”ಚೂಡಿದಾರ್ ಮೇಲೆ ವೇಲ್ ಹಾಕಿಕೊಳ್ಳದೆ ಮೈ ತೋರಿಸೋಕೆ ನಿಂತಿದೀಯಾ, ಕತ್ತೆ .. ” ಎಂದು ಬೈಯುತ್ತಾ ಅವಳ ಮೈ ನೀಲಿಗಟ್ಟುವಂತೆ ಹೊಡೆದ.
**
-ಗಂಡನ ಹೆಸರು ಹೇಳಲಿಲ್ಲ ಎಂಬ ಒಂದೇ ಕಾರಣಕ್ಕೆ ಅವಳನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಿಲ್ಲ. ಗಂಡನ ಹೆಸರಿಲ್ಲ ಎಂಬ ಒಂದೇ ಕಾರಣಕ್ಕೆ, ಅವಳ ಮಗುವಿಗೆ ಶಾಲೆಯಲ್ಲಿ ಪ್ರವೇಶ ಕೊಡಲಿಲ್ಲ. ಆದರೆ, ಈ ಎರಡೂ ಸಂಸ್ಥೆಗಳ ಮುಖ್ಯಸ್ಥರು ಆಗಾಗ- ಅಯ್ಯೋ, ಹೆಸರಲ್ಲಿ ಏನಿದೆ ಬಿಡ್ರೀ, ಹೆಸರಿಗೆ ಯಾಕೆ ಅಷ್ಟು ಮಹತ್ವ ಕೊಡಬೇಕು?- ಎಂಬ ಡೈಲಾಗ್ ಹೊಡೆಯುತ್ತಿದ್ದರು!
**
-ಗಂಡನ ಮನೆಯಲ್ಲಿ ಮಗಳು ಸುಖವಾಗಿಲ್ಲ, ಅವಳಿಗೆ ಚಿತ್ರಹಿಂಸೆ ಕೊಡಲಾಗುತ್ತಿದೆ ಎಂದು ಗೊತ್ತಾದಾಗ ಅವನಿಗೆ ವಿಪರೀತ ಸಂಕಟವಾಯಿತು. ಹತ್ತು ನಿಮಿಷದ ಬಳಿಕ ತನ್ನ ಮಾವನಿಗೆ ಕಾಲ್ ಮಾಡಿದ ಆತ ಪಶ್ಚಾತ್ತಾಪದ ದನಿಯಲ್ಲಿ ಹೇಳಿದ: “”30 ವರ್ಷದ ಹಿಂದೆ, ಮಗಳನ್ನು ನೆನೆದು ನೀವು ಎಷ್ಟು ಕಣ್ಣೀರು ಹಾಕಿರಬಹುದು ಅಂತ ಈಗ ಅರ್ಥ ಆಗ್ತಾ ಇದೆ. ನನ್ನನ್ನು ದಯವಿಟ್ಟು ಕ್ಷಮಿಸಿ…”
**
-ಒಂದು ಕಾಲದಲ್ಲಿ ಮಕ್ಕಳನ್ನೆಲ್ಲ ಕರೆದು – ನಾನು ಬ್ಯುಸಿ ಇದ್ದೇನೆ. ನನ್ನನ್ನು ಯಾರೂ ಐದು ನಿಮಿಷ ದವರೆಗೆ ಮಾತಾಡಿ ಸಬಾರದು, ಎಂದು ಅಮ್ಮ ಕಂಡೀಶನ್ ಹಾಕುತ್ತಿದ್ದಳು. ಈಗ ಕಾಲ ಬದಲಾ ಗಿದೆ. ಅದೇ ಆಮ್ಮ- “”ಐದೇ ಐದು ನಿಮಿಷ ಆ ದ್ರೂ ನನ್ನ ಜೊತೆ ಮಾತಾಡ್ರಪ್ಪಾ” ಅನ್ನುತ್ತಿದ್ದಾಳೆ!”
**
-ಸಮಯ ಕಳೆಯುತ್ತಾ ಹೋದಂತೆಲ್ಲಾ ನೋವಿನ ಸಂಗತಿಗಳೂ ಮರೆತುಹೋಗುತ್ತವೆ ಎಂದು ಹಿರಿಯರು ಹೇಳಿದರು. ಆ ಮಾತು ಗಳನ್ನು ನಂಬಿದ ಆ ಮುಗ್ದೆ, ಮರುದಿನವೇ ಅಂಗಡಿಗೆ ಹೋಗಿ 10 ಗಡಿಯಾರಗಳನ್ನು ತಂದಳು!
**
ನೀನು ನನ್ನ ಪಾಲಿನ ಅದೃಷ್ಟ ದೇವತೆ. ನಿನ್ನಂಥವಳನ್ನು ಪಡೆಯಲಿಕ್ಕೆ ನಾನು ಅದೆಷ್ಟು ಜನ್ಮದ ಪುಣ್ಯ ಮಾಡಿದ್ದೆನೋ… – ಅವನು ಭಾವುಕ ನಾಗಿ ಹೇಳಿದ್ದ. ಒಲ್ಲದ ಮನಸ್ಸಿನಿಂದಲೇ ಅವನನ್ನು ಬೀಳ್ಕೊಟ್ಟು ಈಕೆ ರೂಮ್ ಗೆ ಬಂದಳು. ಅವತ್ತು ರಾತ್ರಿ ಅವರಿಬ್ಬರೂ ನಿದ್ರೆ ಮಾಡಲಿಲ್ಲ. ಅವನ ಜೊತೆಗಿನ ಬದುಕು ಹೇಗೆಲ್ಲಾ ಇರುತ್ತದೆ ಎಂದು ಕಲ್ಪಿಸಿಕೊಳ್ಳುತ್ತಲೇ ಅವಳು ರಾತ್ರಿ ಕಳೆದಳು. ಅವಳಿಗೆ ಹೇಳಿದ್ದಂಥ ಮಾತುಗಳನ್ನೇ ಉಳಿದ ಗೆಳತಿಯರಿಗೂ ಹೇಳುತ್ತಾ ಅವನೂ ಇಡೀ ರಾತ್ರಿ ಕಳೆದ!
**
-ಕನ್ನಡಿಯ ಮುಂದೆ ಗಂಟೆಗಟ್ಲೆ ಮೇಕ್ ಅಪ್ ಮಾಡಿಕೊಳ್ತೀಯಲ್ಲ; ನಿನ್ನನ್ನು ಯಾರು ನೋಡಿ ಮೆಚ್ಕೋ ಬೇಕು?- ಅವರು ಕುಚೋದ್ಯದಿಂದ ಕೇಳಿದರು.
ನನ್ನನ್ನು ನಾನು ಮೆಚ್ಕೋಬೇಕು ರೀ, ಅದಕ್ಕೋಸ್ಕರ ಮೇಕ್ ಅಪ್ ಮಾಡ್ಕೊಳ್ತೇನೆ!- ಅವಳು ಮುಖಕ್ಕೆ ಹೊಡೆದಂತೆ ಉತ್ತರಿಸಿದಳು.
Advertisement
– ಎ.ಆರ್.ಮಣಿಕಾಂತ್