Advertisement

ಶಶಿಕಾಂತ್‌ ಬತ್ತಳಿಕೆಯಲ್ಲಿ ನೂರಾರು ನೆನಪುಗಳು

12:26 PM Apr 22, 2021 | Team Udayavani |

ಜೀವನದ ಗಾಲಿಗಳು ಎಲ್ಲಿ, ಯಾವಾಗ, ಹೇಗೆ ಉರುಳುತ್ತವೆ ಎನ್ನುವುದೇ ಸೋಜಿಗ. ಎಣಿಸದೆ ಇರುವ ಊರಿಗೆ, ಕಾಣದೆ ಇರುವ ನಾಡಿಗೆ, ತಿಳಿಯದೆ ಇರುವ ಪ್ರಪಂಚಕ್ಕೆ ನಾವು ಹೇಗೆ ಹೋಗುವೆವೊ, ಹೋದ ಮೇಲೆ ಎಲ್ಲಿ ಕಳೆದು ಹೋದೆವೋ ಅಥವಾ ಇನ್ನೇನನ್ನೋ ಪಡೆದೆವೋ ತಿಳಿಯದು. ಇದು ಬದುಕಿನ ವಿಸ್ಮಯ. ಆದರೆ ಇದನ್ನು ಬದುಕಾಗಿಸಿಕೊಂಡ ಮೂಲತಃ ಚಿಕ್ಕಮಗಳೂರಿನ ಬೀರೂರಿನ ಶಶಿಕಾಂತ್‌ ಎಚ್‌.ಟಿ.  ಅಪಾರ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಹಲವಾರು ವಿಭಿನ್ನ ಹವ್ಯಾಸಗಳನ್ನು ಬೆಳೆಸಿಕೊಂಡು ಇಂಗ್ಲೆಂಡ್‌ನಲ್ಲಿ ತಮ್ಮದೇ ಆದ ಖ್ಯಾತಿ ಗಳಿಸಿಕೊಂಡವರು.

Advertisement

ಬಾಲ್ಯದಲ್ಲಿ ಅಂಚೆ ಚೀಟಿ ಸಂಗ್ರಹಿಸುತ್ತಿದ್ದ ಇವರ ಬಳಿ ಈಗ ದೇಶ, ವಿದೇಶಗಳ ಅಪಾರ ನಾಣ್ಯಗಳು, ಪ್ರಾಚೀನ ವಸ್ತುಗಳ ಬಹುದೊಡ್ಡ ಸಂಗ್ರಹವೇ ಇದೆ. ಬೀರೂರಿನಲ್ಲಿ ಶಿಕ್ಷಣ ಆರಂಭಿಸಿದ ಶಶಿಕಾಂತ್‌, ಅಲ್ಲಿಂದ ಬ್ಯಾಚುಲರ್‌ ಆಫ್ ಆರ್ಕಿಟೆಕ್ಟ್ ಎಂಜಿನಿಯರಿಂಗ್‌ಗಾಗಿ ಹುಬ್ಬಳಿಯತ್ತ ಪ್ರಯಾಣ ಮಾಡಿ, ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದು ಏಳು ವರ್ಷಗಳ ಕಾಲ ದುಡಿದು, ಹೊರದೇಶದಲ್ಲಿ ಜೀವನ ರೂಪಿಸಿಕೊಳ್ಳುವ ಹಂಬಲದಿಂದ 2004ರಲ್ಲಿ ಇಂಗ್ಲೆಂಡ್‌ಗೆ ಬಂದು ನೆಲೆಯಾದರು.

ಆರಂಭದಲ್ಲಿ  ಅಂಚೆ ಚೀಟಿಗಳನ್ನು ಸಂಗ್ರಹಿಸುತ್ತಿದ್ದ ಇವರ ಆಸಕ್ತಿ ಬಳಿಕ ನಾಣ್ಯಗಳು, ಅನಂತರ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರ ಹಸ್ತಾಕ್ಷರ, ವಸ್ತುಗಳ ಸಂಗ್ರಹ, ಬಳಿಕ ವಸ್ತು ಸಂಗ್ರಹಾಲಯದಲ್ಲಿ ಇಡಬಹುದಾದ ವಸ್ತು, ಪುಸ್ತಕಗಳ ಸಂಗ್ರಹವನ್ನು ಬೆಳೆಸಿಕೊಂಡ ಇವರು ತಮ್ಮ ಹವ್ಯಾಸಗಳಿಂದಾಗಿ ಎಲ್ಲೇ ಹೋಗಲಿ ಒಂದಷ್ಟು ಹೊಸ ಗೆಳೆಯರ ಬಳಗವನ್ನು ಕಟ್ಟಿಕೊಳ್ಳುತ್ತಾರೆ. ಇವರ ಸ್ನೇಹಗುಣಕ್ಕೆ ಎಲ್ಲರೂ ಮೆಚ್ಚುವಂತೆ  ಮಾಡುತ್ತಾರೆ.

ಇಂಗ್ಲೆಂಡ್‌ಗೆ ಬಂದ ಆರಂಭವದು. ಏನೋ ಪಡೆಯಲು ಬಂದು ಇನ್ನೇನನ್ನೋ ಕಳೆದುಕೊಂಡ ಭಾವನೆಯಲ್ಲಿದ್ದಾಗ ಕನ್ನಡಿಗರು ಯುಕೆ, ಸ್ಯಾಂಡಲ್‌ವುಡ್‌ ಎಂಟಟೈìನ್‌ಮೆಂಟ್‌, ಸಾಗರೋತ್ತರ ಕನ್ನಡಿಗರು ಸಂಘಗಳಲ್ಲಿ ಭಾಗಿಯಾಗಿ ತಮ್ಮದೇ ಆದ ಸ್ನೇಹಿತ ವಲಯವನ್ನು ವಿಸ್ತರಿಸುತ್ತ ಸಾಗಿದರು.

Advertisement

ಇವರಲ್ಲಿ  19ನೇ ಶತಮಾನದಲ್ಲಿ ದಕ್ಷಿಣ ಭಾರತದ ರಾಜರು, ರಾಜಕುಮಾರರು ಬಳಸುತ್ತಿದ್ದ ಮಾಣಿಕ್ಯ ಸೆಟ್‌ ಮಕರ ಹೆಡ್‌ ಚಿನ್ನದ ಕಂಕಣ,  1801ರಲ್ಲಿ ಕಾನ್‌ರಾಡ್‌ ಹೆನ್ರಿಕ್‌ ಕೋಚ್ಲರ್‌ ವಿನ್ಯಾಸಗೊಳಿಸಿದ ಚಿನ್ನ, ಬೆಳ್ಳಿ, ಕಂಚು ಮತ್ತು ತಾಮ್ರದಿಂದ ಮಾಡಿರುವ ಪದಕ, ಭಾರತೀಯ ದಂಗೆ 1857- 59ನ್ನು ನೆನಪಿಸುವ ಪದಕಗಳು, ಪಿಕಾಸೋ, ಪಿಕಾಸೋ ಮ್ಯೂಸ್‌ ಸಿಲ್ವೆಟ್‌,  ಸೇರಿದಂತೆ  ಶಶಿಕಾಂತ್‌ ಅವರಲ್ಲಿ  ಸುಮಾರು 5,000 ಹೆಚ್ಚು ಅಂಚೆಚೀಟಿಗಳು, ಹಳೆಯ ಕಾಲದ ಸುಮಾರು 500ಕ್ಕೂ ಹೆಚ್ಚು ನಾಣ್ಯಗಳು, ಕತ್ತಿ, ಕೋವಿ, ಕಡಗ, ಪ್ರತಿಮೆಗಳು ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಅತ್ಯಮೂಲ್ಯ ವಸ್ತುಗಳು ಇವೆ. ಭಾರತೀಯ ಇತಿಹಾಸಕ್ಕೆ ಸಂಬಂಧಿಸಿದ ದಾಖಲೆಗಳು, ಕರ್ನಾಟಕಕ್ಕೆ ಸಂಬಂಧಿಸಿದ ಹಲವಾರು ಬೆಲೆಬಾಳುವ ವಸ್ತುಗಳ ಅಪಾರ ಸಂಗ್ರಹ ಇವರ ಬಳಿ ಇವೆ. ಲಂಡನ್‌ ವಸ್ತು ಸಂಗ್ರಹಾಲಯದಲ್ಲಿ ಆಗಾಗ ನಡೆಯುವ ಹರಾಜುಗಳಲ್ಲಿ ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಬಂಗಾಳ ಹುಲಿಯ ಚಿತ್ರವಿರುವ ಕಂಚಿನ ಪದಕ, ಮುಸ್ಲಿಂ ಯೋಧರ ಶಸ್ತ್ರಾಸ್ತ್ರಗಳು, ಚಿನ್ನ, ಬೆಳ್ಳಿ, ಕಂಚು, ತಾಮ್ರದಿಂದ ಮಾಡಿರುವ ನಾಣ್ಯಗಳು ಮತ್ತಿತರ ಕೆಲವು ವಸ್ತುಗಳು, ಶ್ರೀರಂಗಪಟ್ಟಣದ ಮೆಡಲ್‌ಗಳನ್ನು  ಪಡೆದುಕೊಂಡಿದ್ದಾರೆ.  ಇವರ ಇನ್ನೊಂದು ಪ್ರಮುಖ ಹವ್ಯಾಸವೆಂದರೆ ಫೋಟೋಗ್ರಫಿ. 50 ಸಾವಿರಕ್ಕೂ ಹೆಚ್ಚು ಫೋಟೋಗಳ ಸಂಗ್ರಹ ಇವರಲ್ಲಿದೆ.

ಶಶಿಕಾಂತ್‌ ಅವರ ಇನ್ನೊಂದು ಆಸಕ್ತಿಯ ಕ್ಷೇತ್ರವೆಂದರೆ ಕ್ರೀಡೆ. ಆಡಿ ನಲಿಯುವ ವಯಸ್ಸಿನಲ್ಲಿ  ಉಳಿದ ಮಕ್ಕಳು ಚಂದಮಾಮದಂತಹ ಕಥೆ ಪುಸ್ತಕಗಳನ್ನು ಓದುತ್ತಿದ್ದರೆ ಶಿಶಿಕಾಂತ್‌ ಮಾತ್ರ ಇಂಗ್ಲಿಷ್‌ನ ನ್ಪೋರ್ಟ್ಸ್ ಮ್ಯಾಗಜೀನ್‌ಗಳನ್ನು ಓದುತ್ತಿದ್ದರು ಮಾತ್ರವಲ್ಲ ಒಲಂಪಿಕ್ಸ್‌ ಕ್ರೀಡೆಗಳು, ಹಲವಾರು ಕ್ರೀಡಾಪಟುಗಳ ಬಗ್ಗೆ ಉಳಿದವರಿಗೆ ಸವಿಸ್ತಾರವಾಗಿ ಪರಿಚಯಿಸುತ್ತಿದ್ದರು. ಈ ಆಸಕ್ತಿ ಅವರನ್ನು 2012ನೇ ಒಲಿಂಪಿಕ್ಸ್‌ನಲ್ಲಿ  ಸ್ವಯಂ ಸೇವಕನಾಗಿ ಕಾರ್ಯನಿರ್ವಹಿಸುವಂತೆ ಮಾಡಿತು. ಈ ಕಾರ್ಯಕ್ಕೆ ಇಂಗ್ಲೆಂಡ್‌ನ‌ ಪ್ರಧಾನ ಮಂತ್ರಿಯವರಿಂದ ಮೆಚ್ಚುಗೆಯ ಪತ್ರವನ್ನೂ ಪಡೆದಿದ್ದಾರೆ. ಈ ಒಲಿಂಪಿಕ್ಸ್‌ನಿಂದ ಹೆಸರಾಂತ ಕ್ರೀಡಾಪಟುಗಳನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿತು. ಅನೇಕ ಕ್ರೀಡಾಪಟುಗಳ ಸಹಿ, ಅವರು ಉಪಯೋಗಿಸುತ್ತಿದ್ದ ಕ್ರೀಡಾ ಸಾಮಗ್ರಿಗಳ ಬೃಹತ್‌ ಸಂಗ್ರಹವನ್ನೇ ಹೊಂದಿರುವ ಶಶಿಕಾಂತ್‌

ಅವರಿಗೆ ಕೆಲವನ್ನು ಸ್ವತಃ ಕ್ರೀಡಾಪಟುಗಳೇ ನೀಡಿದ್ದರೆ, ಇನ್ನು ಕೆಲವನ್ನು  ಹರಾಜಿನಲ್ಲಿ ಪಾಲ್ಗೊಂಡು ತನ್ನದಾಗಿಸಿಕೊಂಡಿದ್ದಾರೆ. ಭಾರತ ಮೊಟ್ಟ ಮೊದಲ ಬಾರಿ ಗೆದ್ದ 1983ರಲ್ಲಿ  ಕ್ರಿಕೆಟ್‌ ಚಾಂಪಿಯನ್‌ ಶಿಪ್‌ ತಂಡದ ಎಲ್ಲ ಆಟಗಾರರು ಸಹಿ ಮಾಡಿರುವ ಬ್ಯಾಟ್‌ ಇವರ ಸಂಗ್ರಹದಲ್ಲಿದೆ.

ಪ್ರಸ್ತುತ ಇಂಗ್ಲೆಂಡ್‌ನ‌ ರೀಡಿಂಗ್‌ನಲ್ಲಿರುವ ಶಶಿಕಾಂತ್‌ ಇಲ್ಲಿನ ಅನೇಕ ತಮಿಳರು, ತೆಲುಗಿನವರು, ಬೆಂಗಾಲಿಗಳು ಮತ್ತು ಶ್ರೀಲಂಕಾದವರೊಡನೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದು, ಅನೇಕ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಭಾಗಿಯಾದ ನೆನಪು

2012ರ ಸೆಪ್ಟಂಬರ್‌ 17ರಂದು ಒಂದು ಸರಕಾರಿ ಪತ್ರ ಬಂತು. ಯಾವುದೇ ಉತ್ಸಾಹವಿಲ್ಲದೆ ತೆರೆದು ನೋಡಿದರೆ ಸಾಮಾನ್ಯ ವ್ಯಕ್ತಿಯೊಬ್ಬರಿಗೆ ದೇಶದ ಉನ್ನತ ಸ್ಥಾನದಲ್ಲಿರುವ ಪ್ರಧಾನ ಮಂತ್ರಿ ಬರೆದ ಪತ್ರ ಆದಾಗಿತ್ತು. ಒಂದು ಕ್ಷಣ ಊಹಿಸಲೂ ಸಾಧ್ಯವಾಗಲಿಲ್ಲ. ಪದೇ ಪದೇ ಪ್ರತೀ ಅಕ್ಷರವನ್ನು ಆಸ್ವಾದಿಸುತ್ತಾ ಓದಿದೆ. ಅವರು ವಿಶಾಲ ಮನಸ್ಸಿನಿಂದ ಒಲಿಂಪಿಕ್ಸ್‌ನಲ್ಲಿ  ಸ್ವಯಂ ಸೇವಕನಾಗಿ ಕರ್ತವ್ಯ ನಿರ್ವಹಿಸಿದ್ದ ನನಗೆ ಕೃತಜ್ಞತೆ ಸಲ್ಲಿಸಿದ್ದರು.

ಲಂಡನ್‌ನಲ್ಲಿರುವಾಗ ಒಲಿಂಪಿಕ್ಸ್‌ ನಡೆಯುತ್ತದೆ ಎಂದು ತಿಳಿಯುತ್ತಿದ್ದಂತೆ ಹೇಗಾದರೂ ಮಾಡಿ ಈ ಕ್ರೀಡೆಯಲ್ಲಿ ಪಾಲುದಾರನಾಗಬೇಕು ಎಂದುಕೊಂಡು ಸ್ವಯಂ ಸೇವಕನಾಗಿ ಸೇರಿಕೊಂಡೆ. ಇದರ ತರಬೇತಿಯಲ್ಲಿ  ಪ್ರಪಂಚವೇ ಎದುರು ನೋಡುತ್ತಿರುವ ಇಂತಹ ಅತ್ಯುನ್ನತ ಕಾರ್ಯಕ್ರಮಗಳಲ್ಲಿ ಎನೆಲ್ಲ ಅನಾಹುತಗಳಾಗಬಹುದು, ದುಷ್ಟಕೃತ್ಯಗಳು ನಡೆದಾಗ ಅದನ್ನು ನಿಭಾಯಿಸುವುದು ಹೇಗೆ, ನಾವು ಎಷ್ಟು ಮಾನಸಿಕವಾಗಿ ಸದೃಢರಾಗಿರಬೇಕು, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಹಂತಹಂತವಾಗಿ ಹೇಳಿಕೊಟ್ಟರು. ಇದರೊಂದಿಗೆ ಜನದಟ್ಟಣೆ ನಿಯಂತ್ರಣ, ಕ್ರೀಡಾ ಉದ್ವೇಗದಲ್ಲಿ ಆಗುವ ಅನಾಹುತಗಳನ್ನು ನಿಭಾಯಿಸುವುದು, ಆಟಗಾರರು ಮತ್ತು ನೋಡುಗರ ಮಧ್ಯೆ ಯಾವ ರೀತಿಯ ಕಡಿವಾಣ ಹಾಕಬೇಕು ಎಂಬುದನ್ನು ತಿಳಿಸಿದರು.

ಒಂದು ರೀತಿಯಲ್ಲಿ ಇದು ಬೇರೆಯದೇ ಜಗತ್ತನ್ನು ಪರಿಚಯಿಸಿತು. ಮೊದಲ ದಿನ ಬ್ಯಾಡ್ಮಿಂಟನ್‌ ಪಂದ್ಯವನ್ನು  ನಿಭಾಯಿಸುವ ಹೊಣೆಗಾರಿಕೆ. ಬ್ಯಾಡ್ಮಿಂಟನ್‌ ಕ್ರೀಡೆ ಚೀನಾ ಮತ್ತು ಜಪಾನ್‌ ದೇಶದ ರಾಷ್ಟ್ರೀಯ ಕ್ರೀಡೆ ಎಂದು ನನಗೆ ಗೊತ್ತಾಗಿದ್ದು ಆಗ. ಈ ವೇಳೆ ಬೇರೆಬೇರೆ ಭಾಗಗಳಿಂದ ಬಂದಿದ್ದ ಜನರು ನನ್ನ ಬಳಿ ಬಂದು ಪರಿಚಯಿಸಿಕೊಂಡು ನನ್ನೊಂದಿಗೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದುದ್ದನ್ನು ನೋಡಿ ನಾನೂ ಸೆಲೆಬ್ರಿಟಿ ಆಗಿಬಿಟ್ಟೆ ಎನ್ನುವ ಖುಷಿಯಾಗಿತ್ತು. ಈ ನಡುವೆ ಗೋಪಿಚಂದ್‌, ಜ್ವಾಲಾ, ಕಶ್ಯಪ್‌ ಹಾಗೂ ಸೈನಾ ಇವರನ್ನೆಲ್ಲ ಹತ್ತಿರದಿಂದ ನೋಡಿ, ಮಾತನಾಡಿ, ಅವರಿಗೆ ಶುಭ ಹಾರೈಸಿದ್ದು, ಹಲವಾರು ಕ್ರೀಡಾಪಟುಗಳ ಜತೆಗೆ ಕುಳಿತು ಸುಮಾರು 10 ಪಂದ್ಯಗಳನ್ನು ನೋಡಿದ್ದು, 20 ಆಟಗಾರರ ಸಹಿ ಪಡೆದುಕೊಂಡದ್ದು ಮರೆಯಲಾಗದ ನೆನಪು. ಬಳಿಕ ಹಲವಾರು  ವಿಂಬಲ್ಡನ್‌ ಪಂದ್ಯಗಳು, 2012 ಪ್ಯಾರ ಒಲಿಂಪಿಕ್ಸ್‌, 2019ರ ಕ್ರಿಕೆಟ್‌ ವರ್ಲ್ಡ್ಕಪ್‌ನಲ್ಲಿ ವೀಕ್ಷಕನಾಗಿ ಪಾಲ್ಗೊಂಡು ಹಲವಾರು ನೆನಪುಗಳನ್ನು ಹೊತ್ತು ತಂದಿದ್ದೆ.

ನಾನು ಟಿಪ್ಪು ಸುಲ್ತಾನನ ಇನ್ನು ಕೆಲವು ವಸ್ತುಗಳ ಖರೀದಿಸಲು ಯೋಚಿಸುತ್ತಿದ್ದೇನೆ. ಒಮ್ಮೆ ಅವರ ಉಂಗುರವನ್ನು ಪಡೆಯಲು ಪ್ರಯತ್ನಿಸಿದೆ. ಆದರೆ ಹೆಚ್ಚಿನ ಬಿಡ್‌ನಿಂದ ಸಾಧ್ಯವಾಗಲಿಲ್ಲ. ಅದಕ್ಕಾಗಿ ಈಗಲೂ ಕೊರಗಿದೆ ಎನ್ನುತ್ತಾರೆ ಶಶಿಕಾಂತ್‌.

ಪ್ರಶಾಂತ್‌ ಬೀಚಿ, ಕೆನಡಾ

Advertisement

Udayavani is now on Telegram. Click here to join our channel and stay updated with the latest news.

Next