ಮಣಿಪಾಲ: ‘ರವಿ ಬೆಳಗೆರೆ’ ಈ ಒಂದು ಹೆಸರು ಅದೆಷ್ಟೋ ಯುವ ಮನಸ್ಸುಗಳನ್ನು ಕನ್ನಡ ಸಾಹಿತ್ಯದತ್ತ ಮತ್ತೆ ಮುಖಮಾಡುವಂತೆ ಮಾಡಿತ್ತು. ವರದಿಗಾರನಾಗಿ, ಸಂಪಾದಕನಾಗಿ, ಕಾದಂಬರಿಕಾರನಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ‘ಸ್ಟಾರ್ ಬರಹಗಾರ’ ನಾಗಿ ಪ್ರಸಿದ್ದರಾದವರು.
62 ವರ್ಷ ಪ್ರಾಯದ ರವಿ ಬೆಳಗೆರೆ ಅವರು ನ.12ರ ಮಧ್ಯರಾತ್ರಿ ತಮ್ಮ ಬೆಂಗಳೂರಿನ ಪದ್ಮನಾಭ ನಗರದ ಕಚೇರಿಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ರವಿ ಬೆಳಗಿ ಬಂದ ಹಾದಿ
ರವಿ ಬೆಳಗೆರೆ ಅವರು ಜನಿಸಿದ್ದು 1958ರ ಮಾರ್ಚ್ 15ರಂದು. ಬಳ್ಳಾರಿಯಲ್ಲಿ ಜನಿಸಿದ ಅವರು ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ವೃತ್ತಿ ಆರಂಭಿಸಿದ್ದು ಪ್ರಾಧ್ಯಾಪಕರಾಗಿ.
ಇದನ್ನೂ ಓದಿ:‘ಬೆಳಗಿ’ ಮುಳುಗಿದ ‘ರವಿ’: ಹಿರಿಯ ಪತ್ರಕರ್ತ, ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ!
ಪತ್ರಿಕೋದ್ಯಮದ ಒಲವು ಹೊಂದಿದ್ದ ರವಿ ಬೆಳಗೆರೆ ಅವರು ಬೆಂಗಳೂರಿಗೆ ಬಂದು ಪತ್ರಿಕಾ ವೃತ್ತಿ ಆರಂಭಿಸಿದ್ದು ಅಭಿಮಾನ ಪತ್ರಿಕೆಯಲ್ಲಿ. ನಂತರ 1995ರ ಸಪ್ಟೆಂಬರ್ ನಲ್ಲಿ ‘ಹಾಯ್ ಬೆಂಗಳೂರು’ ವಾರಪತ್ರಿಕೆಯನ್ನು ಆರಂಭಿಸಿದ್ದರು. ಈ ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತು. ನಂತರ ‘ಓ ಮನಸೇ’ ಪಾಕ್ಷಿಕವನ್ನೂ ಆರಂಭಿಸಿದರು.
‘ಖಾಸ್ ಬಾತ್’, ‘ಬಾಟಮ್ ಐಟಮ್’ ಅಂಕಣಗಳು ರವಿ ಬೆಳಗೆರೆ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು. ತನಿಖಾ ವರದಿ, ಅಪರಾಧ ವರದಿಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ರವಿ ಬೆಳಗೆರೆ ಅವರು ಯುದ್ಧ ಭೂಮಿಗೆ ಸ್ವತಃ ತೆರಳಿ ಸುದ್ದಿ ಮಾಡಿದವರು. ಅಮೆರಿಕ- ತಾಲಿಬಾನ್ ಯುದ್ಧದ ವೇಳೆ ಸ್ವತಃ ಅಫ್ಘಾನಿಸ್ಥಾನಕ್ಕೆ ತೆರಳಿ ವರದಿ ಮಾಡಿದ್ದರು. ಪುಲ್ವಾಮಾ ದಾಳಿಯ ವೇಳೆ ತಕ್ಷಣ ಆ ನೆಲಕ್ಕೆ ತೆರಳಿ ಗ್ರೌಂಡ್ ರಿಪೋರ್ಟ್ ಮಾಡಿದವರು.
ಕ್ರೈಂ ಡೈರಿ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಡೈರಿ ಎಂಬ ಅಪರಾಧ ಜಗತ್ತಿನ ಕಾರ್ಯಕ್ರಮ ರವಿ ಬೆಳಗೆರೆ ಅವರ ಪ್ರಸಿದ್ಧಿಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿತ್ತು. ರವಿ ಬೆಳಗೆರೆ ಅವರ ‘ವಿಶಿಷ್ಟ ಸ್ವರ’ ಟ್ರೆಂಡ್ ಹುಟ್ಟಿಸಿತ್ತು.
ಕಾದಂಬರಿಗಳು: ರವಿ ಬೆಳಗೆರೆ ಅವರು ಪತ್ರಿಕೆಯೊಂದಿಗೆ ಬಹಳಷ್ಟು ಕಾದಂಬರಿಗಳನ್ನು ಬರೆದಿದ್ದಾರೆ. ಹಲವಷ್ಟು ಕಾದಂಬರಿಗಳನ್ನು ಅನುವಾದ ಮಾಡಿದವರು. ಗೋಲಿಬಾರ್, ಅರ್ತಿ, ಮಾಂಡೋವಿ, ಮಾಟಗಾತಿ, ಒಮರ್ಟಾ, ಸರ್ಪ ಸಂಬಂಧ, ಹೇಳಿ ಹೋಗು ಕಾರಣ, ನೀ ಹಿಂಗ ನೋಡಬ್ಯಾಡ ನನ್ನ, ಗಾಡ್‌ಫಾದರ್, ಕಾಮರಾಜ ಮಾರ್ಗ, ಹಿಮಾಗ್ನಿ ಮುಂತಾದ ಕಾದಂಬರಿಗಳು, ವಿವಾಹ, ನಕ್ಷತ್ರ ಜಾರಿದಾಗ, ಹಿಮಾಲಯನ್ ಬ್ಲಂಡರ್, ಕಂಪನಿ ಆಫ್ ವಿಮೆನ್, ಟೈಂಪಾಸ್, ರಾಜ ರಹಸ್ಯ, ಹಂತಕಿ ಐ ಲವ್ ಯೂ, ದಂಗೆಯ ದಿನಗಳು ಮುಂತಾದ ಅನುವಾದಿತ ಪುಸ್ತಕಗಳನ್ನು ಬರೆದಿದ್ದಾರೆ.
ಪ್ರಶಸ್ತಿ: ರವಿ ಬೆಳೆಗೆರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.
ಪ್ರಾರ್ಥನಾ ಶಾಲೆ: ರವಿ ಬೆಳಗೆರೆ ಅವರು ವಿಶೇಷ ಶಾಲೆಯನ್ನು ನಿರ್ಮಿಸಿದ್ದರು. ಪ್ರಾರ್ಥನಾ ಎಂದು ಹೆಸರಿಟ್ಟು ನಡೆಸುತ್ತಿದ್ದರು.