Advertisement

ಜೀವನ ಪ್ರೀತಿಯ ಬದುಕು ಮತ್ತು ಬರಹ

07:16 PM Apr 13, 2019 | mahesh |

ವಾಸ್ತವದ ಕೆಲ ಘಟನೆಗಳು ಕಥೆ-ಕಾದಂಬರಿಗಳಿಗಿಂತಲೂ ಹೃದ್ರಾವಕ ಹಾಗೂ ಆಶ್ಚರ್ಯಕರವಾಗಿರುತ್ತವೆ; ಪಠ್ಯಪುಸ್ತಕಗಳಿಗಿಂತಲೂ ಹೆಚ್ಚು ಬೋಧನಾತ್ಮಕವಾಗಿರುತ್ತವೆ. ಈ ಬದುಕು ನಮಗೆ ಒದಗಿಸಿಕೊಡುವ ಕಷ್ಟಕಾರ್ಪಣ್ಯಗಳ ಹಿಂದೆ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದಾದ ಅಮೂಲ್ಯ ಸಂದೇಶವಿರುತ್ತದೆ; ಆದ್ದರಿಂದಲೇ ಎಲ್ಲರ ಪಾಲಿಗೂ ಬದುಕೆನ್ನುವುದು ಅಮೂಲ್ಯ ಕೊಡುಗೆ ಎನ್ನುವ ಮಾತನ್ನು ನಾವು ನೀವೆಲ್ಲ ಕೇಳುತ್ತಲೇ ಬಂದಿದ್ದೇವೆ. ವೈದ್ಯಕೀಯ ಕ್ಷೇತ್ರದಲ್ಲಿ ಇಂಥ “ಬದುಕು ಬದಲಿಸುವ’ ವಿಸ್ಮಯಕಾರಿ ಸಂಗತಿಗಳು ನಿತ್ಯವೂ ಜರಗುತ್ತಲೇ ಇರುತ್ತವೆ. ಯಾರೂ ಎಂದೂ ಕಲ್ಪಿಸಿಯೇ ಇರದಂಥ ಕೆಲ ವಿಚಿತ್ರ ಕಾಯಿಲೆಗಳು ಕೆಲವರಲ್ಲಿ ಎಳೆ ವಯಸ್ಸಿನಲ್ಲೇ ತಗುಲಿಕೊಳ್ಳುವುದುಂಟು. ಕಾಯಿಲೆ ತಗುಲಿದ ಮಗು, ಅದರ ಹೆತ್ತವರು, ಬಂಧುಗಳು, ಹಿತಚಿಂತಕರು, ಔಷಧೋಪಚಾರ ನೀಡುವ ವೈದ್ಯ ವರ್ಗದವರು ಇಂಥ ಪ್ರಕರಣಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನೆಲ್ಲ ದಾಖಲಿಸಿದರೆ ಒಬ್ಬೊಬ್ಬ ರೋಗಿಯದೂ ಒಂದೊಂದು ಬೃಹತ್ಕಾದಂಬರಿಯೇ ಆದೀತು! ಮೊಣಕಾಲಿನ ಎದ್ದ ಗಂಟೊಂದರಿಂದ ನಡೆಯಲು ಕಷ್ಟಪಟ್ಟ ಹದಿಹರೆಯದ ಹುಡುಗಿಯೊಬ್ಬಳು, ಮುಂದೆ ಅದು ಮೂಳೆಯ ಕ್ಯಾನ್ಸರ್‌ನ ಪರಿಣಾಮ ಎಂದು ತಿಳಿದಾಗ ಆಕೆ ಆ ಕಹಿವಾಸ್ತವವನ್ನು ಎದುರಿಸಿದ ಬಗೆಯನ್ನು ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ ಎಂಬ ಈ ಪುಸ್ತಕ ಬಹು ಪರಿಣಾಮಕಾರಿಯಾಗಿ ದಾಖಲಿಸಿದೆ.

Advertisement

ವಯಸ್ಸು ಅರಳುವ ಹೊತ್ತಿನಲ್ಲಿ ತಗುಲಿದ ಮಾರಕ ಕಾಯಿಲೆ ಒಮ್ಮೆಗೆ ತನ್ನಲ್ಲಿ ಭಯ, ಆತಂಕ, ಹತಾಶೆ, ನಿರಾಶೆಗಳನ್ನು ಮೂಡಿಸಿದರೂ ಮುಂದೆ ಅವುಗಳನ್ನು ಅದುಮಿ ಹಿಡಿದು, ಬಂದದ್ದನ್ನು ಎದುರಿಸಿ ಗೆಲ್ಲುವೆನೆಂಬ ಆತ್ಮವಿಶ್ವಾಸದಿಂದ ಗುಣಮುಖಳಾದ ರೋಚಕ ಅನುಭವ ಕಥನ ಇದು. ತನ್ನನ್ನು ಉಪಚರಿಸಿದ ವೈದ್ಯಕೀಯ ಸಿಬಂದಿಯ ವಾತ್ಸಲ್ಯದ ನಡವಳಿಕೆ ಹಾಗೂ ತನ್ನಂತೆಯೇ ಕಾಯಿಲೆ ತಗುಲಿದ ಕೆಲ ಅಪರೂಪದ ರೋಗಿಗಳ ಚೇತರಿಕೆ ಯತ್ನದ ಹಿಂದಿನ ಸಕಾರಾತ್ಮಕ ನಿಲುವು ತನ್ನ ಚೇತರಿಕೆಗೆ ನೆರವಾಯಿತು ಎಂಬ ಕೃತಜ್ಞತಾಭಾವದಿಂದ ಈ ಕಥಾನಕ ತೇವಗೊಂಡಿದೆ.

“ಈಗ ತಿರುಗಿ ನೋಡಿದರೆ ಆ ಹಳೆಯ ಶ್ರುತಿ ಹಿಂದೆಯೇ ಎಲ್ಲೋ ತಪ್ಪಿಹೋಗಿ ಜೀವನದೆಡೆಗೆ ಒಂದು ಹೊಸ ದೃಷ್ಟಿಯನ್ನಿಟ್ಟುಕೊಂಡ ಒಬ್ಬ ಹೊಸ ಶ್ರುತಿ ಕಾಣುತ್ತಾಳೆ’ ಎಂಬ “ಭರತವಾಕ್ಯ’ದಲ್ಲಿ ಲೇಖಕಿ ತನಗೆ ತಗುಲಿದ ಕಾಯಿಲೆಗೇ ಕೃತಜ್ಞತೆ ಹೇಳುತ್ತಿದ್ದಾಳೆ. ಇಂಥ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರು ಮಾತ್ರವಲ್ಲ, ಅವರ ಮನೆಮಂದಿಯನ್ನೊಳಗೊಂಡಂತೆ ಎಲ್ಲ ಹಿತಚಿಂತಕರು ಕೂಡ ಓದಲೇಬೇಕಾದ ಪುಸ್ತಕ ಇದು.

ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ…
ಲೇ.: ಶ್ರುತಿ ಬಿ.ಎಸ್‌.
ಪ್ರ.: ಗೋಮಿನಿ ಪ್ರಕಾಶನ, ಶ್ರೀ ವೀರಭದ್ರಸ್ವಾಮಿ ನಿಲಯ, ಒಂದನೇ ಮುಖ್ಯರಸ್ತೆ, ಐದನೇ ಅಡ್ಡ ರಸ್ತೆ, ವಿಶ್ವಣ್ಣ ಲೇಔಟ್‌, ಶಾಂತಿನಗರ, ತುಮಕೂರು-572102
ಮೊಬೈಲ್‌: 9986692342, 9986693113
ದ್ವಿತೀಯ ಮುದ್ರಣ: 2018 ಬೆಲೆ: ರೂ. 100

Advertisement

Udayavani is now on Telegram. Click here to join our channel and stay updated with the latest news.

Next