Advertisement

ಸೇವಂತಿಯಿಂದ ಬದುಕಿನ save ಆಯ್ತು!

01:01 PM Jan 22, 2018 | |

ಈ ಹೂವನ್ನು ಬೆಳೆಯುವುದರಿಂದ ಇಷ್ಟೊಂದು ಖುಷಿಯಾಗುತ್ತದೆ ಎಂಬ ಅಂದಾಜು ಖಂಡಿತ ನನಗಿರಲಿಲ್ಲ. ಆದರೆ,  ಈಗ ನೆಮ್ಮದಿ ಇದೆ. ಈ ಬೆಳೆ ಲಾಭದಾಯಕ ಬೇಸಾಯವೂ ಆಗಿದೆ ಎಂದು ಸೇವಂತಿಗೆ ಹೂವನ್ನು ತೋರಿಸುತ್ತ ಪ್ರಕಾಶ ಸೂಗಿ ಹೇಳುವಾಗ ಅವರ ಮೊಗದಲ್ಲಿ ನಗು ಅರಳುತ್ತಿತ್ತು. ಅವರ ಮುಂದೆ ಸೇವಂತಿ ಹೂವು ಅರಳಿ ನಗುತ್ತಿತ್ತು.

Advertisement

ಉತ್ತರ ಕನ್ನಡದ ಬನವಾಸಿ ಕದಂಬರ ರಾಜಧಾನಿಯಾಗಿದ್ದ ಊರು. ಇಲ್ಲಿನ ಭೂಮಿ ಅನಾನಸ್‌ ಬೇಸಾಯಕ್ಕೆ ಪ್ರಸಿದ್ಧಿ.  ಆದರೆ, ಈಗ ಹೂವಿನ ಬೇಸಾಯಕ್ಕೂ ಹೆಸರಾಗುತ್ತಿದೆ. ಇಲ್ಲಿನ ಪ್ರಗತಿಪರ ಕೃಷಿಕ ಪ್ರಕಾಶ ಅಡವೆಪ್ಪ ಸೂಗಿ ಹಾಗೂ ನಾಗೇಶ ರೆಡ್ಡಿ ಜೊತೆಯಾಗಿ ಆರಂಭಿಸಿದ ಪುಷ್ಪ ಕೃಷಿಯಲ್ಲಿ ಸೇವಂತಿಗೆ ಹೂವು ಅವರ ಕೈ ಹಿಡಿದಿದೆ. 

ಶುರುವಾದದ್ದು…: ಹೂವಿನ ಮಾರುಕಟ್ಟೆ, ಬೇಸಾಯದ ಕ್ರಮದಲ್ಲಿ ಪಳಗಿದ್ದ ರೆಡ್ಡಿ ಅವರು ಪ್ರಕಾಶ್‌ ಅವರೊಂ ದಿಗೆ  ಬನವಾಸಿಯಲ್ಲಿ ಹೂವಿನ ಬೇಸಾಯ ಆರಂಭಿಸಿಲು ಯೋಚಿಸಿದರು. ತೋರಗಲ್‌ ಮಾಸ್ತರ್‌ ಅವರ ತೋಟದಲ್ಲಿ ಇರುವ ಆರು ಗುಂಟೆ ಕ್ಷೇತ್ರದ ಪಾಲಿಹೌಸ್‌ ಅನ್ನು 18 ತಿಂಗಳ ಕರಾರಿನ ಮೇಲೆ ಬಾಡಿಗೆಗೆ ಪಡೆದು ಕೃಷಿ ಆರಂಭಿಸಿದರು.

ರೆಡ್ಡಿ  ಬೆಂಗಳೂರಿಗೆ ಹೋಗಿ ಎರಡುವರೆ ಸಾವಿರ ಮ್ಯಾರಿಗೋಲ್ಡ್‌ ಸೇವಂತಿಗೆ ಸಸಿಗಳನ್ನು ತಲಾ ಒಂದಕ್ಕೆ ಆರುವರೆ ರೂಪಾಯಿ ಕೊಟ್ಟು ಖರೀದಿಸಿ ತಂದರು. ಒಂದುವರೆ ತಿಂಗಳ ಸಸಿ ಬನವಾಸಿಗೆ ಬರುವದರೊಳಗೆ ಒಂದುವರೆ ಅಡಿ ಎತ್ತರ, ಮೂರು ಅಡಿ ಅಗಲದಲ್ಲಿ ಮಡಿ  ಮಣ್ಣಿನ ಓಳಿ ಮಾಡಿ, ಅದಕ್ಕೆ ಗೊಬ್ಬರ ಕೂಡ ಹಾಕಿ ಡ್ರಿಪ್‌ ಪೈಪ್‌ ಎಳೆದು ನಾಟಿಗೆ ಸಿದ್ಧ ಮಾಡಿಟ್ಟುಕೊಟ್ಟರು ಪ್ರಕಾಶ್‌. ಅಲ್ಲಿಂದ ಶುರುವಾಯ್ತು ಸೇವಂತಿಗೆ ಬೇಸಾಯ. 

ಕಾಲಕಾಲಕ್ಕೆ ಔಷಧ, ಗೊಬ್ಬರ ಕೊಟ್ಟರು. ಇಬ್ಬರು ಹೆಣ್ಣು ಮಕ್ಕಳು ಆರುಗುಂಟೆಯ ಹೂವಿನ ಬೇಸಾಯದ ನಿರ್ವಹಣಾ ಪಾಠವನ್ನೂ ಮಾಡಿದರು. ಕಳೆ, ಕಸ, ರೋಗ ಬಾರದಂತೆ ಎಚ್ಚರ ವಹಿಸಿದರು. ಸೇವಂತಿಗೆ ತುಂಬಾ ತೆಳ್ಳಗಿನ ಗಿಡ ಆಗಿರುವುದರಿಂದ  ಏನಾದರೂ ತಾಗಿದರೂ ಕಟ್‌ ಆಗುವ ಸಾಧ್ಯತೆ ಇದೆ. ಅದಕ್ಕೂ ಮುನ್ನೆಚ್ಚರಿಕೆ ವಹಿಸಿದರು. ಮೂರು ತಿಂಗಳಿಗೆ ಹೂವು ಬಿಡಲು ಆರಂಭಿಸಿದವು.

Advertisement

ಆದಾದ ಹದಿನೈದನೇ ದಿನಕ್ಕೇ 30-40 ಕೆ.ಜಿ ಹೂವು ಕೋಯ್ಲು ಆರಂಭಿಸಿ ಈಗ ಕಳೆದ ಮೂರು ತಿಂಗಳಲ್ಲಿ ಸರಾಸರಿ 70ರಿಂದ 80 ಕೆ.ಜಿ ಹೂವು ಕೋಯ್ಲು ಮಾಡುತ್ತಿದ್ದಾರೆ. ತಿಂಗಳಿಗೆ ಚೆಂದದ ಗುಂಡನೆಯ ಮಾರಿಗೋಲ್ಡ್‌ ಸೇವಂತಿಗೆ 2 ಕ್ವಿಂಟಾಲ್‌ ಆಗುತ್ತಿದೆ. ಕ್ವಿಂಟಾಲ್‌ ಗಟ್ಟಲೆ ಹೂವನ್ನೇನೋ ಬೆಳೆದರು, ಆದರೆ, ಮಾರುಕಟ್ಟೆ?  ಪ್ರಕಾಶ ರೆಡ್ಡಿ ಅವರಿಗೆ ಮಾರುಕಟ್ಟೆಯ ಆಳ-ಅಗಲ ಅರಿವಿದ್ದ ಕಾರಣ ತಲೆಬಿಸಿ ಆಗಲಿಲ್ಲ.

ಈಗ ಪ್ರಕಾಶ್‌ ಅವರು ಬೆಳೆದ ಸೇವಂತಿಗೆ,  ಶಿರಸಿ, ಹುಬ್ಬಳ್ಳಿ, ಸೊರಬ, ಸಾಗರ, ಬೆಂಗಳೂರಿಗೂ ಹೋಗುತ್ತಿದೆ. ಖಾಯಂ ಆಗಿ ಹೂವನ್ನು ಕೊಳ್ಳುವ ವರ್ತಕರು ಪ್ರತಿ ಕೆ.ಜಿಗೆ 150 ರೂ. ಕೊಡುತ್ತಾರೆ. ಖಾಸಗಿಯಾಗಿ ಬೇಕಿದ್ದರೆ 200 ರೂ.ಗೆ ಒಯ್ಯುತ್ತಾರೆ. ಪಾಲಿಹೌಸ್‌ ಬಾಡಿಗೆ ಹೊರತುಪಡಿಸಿ ನಮಗೆ 25 ಸಾವಿರ ರೂ. ಖರ್ಚು ಬಂದಿತ್ತು.

ಈಗ ತಿಂಗಳಿಗೆ ಸೇವಂತಿಗೆ ನಿರ್ವಹಣೆ, ಔಷಧ ಸೇರಿ 20 ಸಾವಿರ ರೂ. ಖರ್ಚು ಬಂದರೆ 60 ಸಾವಿರ ರೂ. ಆದಾಯ ಬರುತ್ತಿದೆ ಎನ್ನುತ್ತಾರೆ ಪ್ರಕಾಶ್‌. ಒಂದು ಕಾಲಕ್ಕೆ ಪೂಜೆಗಾಗಿ ಹೂವು ಖರೀದಿಸುತ್ತಿದ್ದ ಪ್ರಕಾಶರು, ಈಗ ಹೂವಿನ ಬೇಸಾಯ, ಮಾರಾಟವೂ ಮಾಡುತ್ತಿದ್ದಾರೆ. 

ಮಾಹಿತಿಗೆ: 8762653197.

* ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next