Advertisement

ಪರಸ್ತ್ರೀ ವ್ಯಾಮೋಹಿ ಬಾಳೆಲ್ಲ ಪರಮ ಕಹಿ…

06:00 AM Jun 27, 2018 | |

ಯಜಮಾನರಿಗೆ ಬಿಟ್ಟು ಬಿಡದ ಜ್ವರ; ಶ್ವಾಸಕೋಶದಲ್ಲಿ ಗಮನಾರ್ಹ ತೊಂದರೆ ಇದ್ದುದರಿಂದ ವೈದ್ಯಕೀಯ ತಪಾಸಣೆ ನಡೆದಿತ್ತು. ಆಸ್ಪತ್ರೆಯಲ್ಲೇ ಪತಿ ಕುಸಿದು ಬೀಳಲು ತಕ್ಷಣವೇ ಅಡ್ಮಿಟ್‌ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಪರೀಕ್ಷೆಗಳಲ್ಲಿ ಪತಿಗೆ ಹೆಚ್‌ಐವಿ ಸೋಂಕು ತಗುಲಿದ್ದು ಖಚಿತವಾಗಿ, ಪತ್ನಿಗೂ ರಕ್ತ ಪರೀಕ್ಷೆ ನಡೆಸುವುದು ವಾಡಿಕೆ.

Advertisement

  ಪ್ರತಿಮಾಗೂ ಹೆಚ್‌ಐವಿ ಸೋಂಕು ತಗುಲಿದೆ! ಅವರ ತುಟಿ ಅದುರತಿತ್ತು. ಕೈಕಾಲು ನಡುಗುತಿತ್ತು. ಮಾತು ಬಿಕ್ಕಳಿಸುತ್ತಿತ್ತು. ಪತಿಯ ಪರಸ್ತ್ರೀ ವ್ಯಾಮೋಹ ಮದುವೆಯಾದ ನಂತರ ತಿಳಿಯಿತು. ಅತ್ತೆಗೆ ಚಾಡಿ ಹೇಳುವಂತಿಲ್ಲ. ಮನೆಗೆ ದುಡ್ಡು ಕೊಡದಿದ್ದರೂ ಕಚೇರಿಯಲ್ಲಿ ಯಾವ ಹೆಂಗಸಿಗೆ ತೊಂದರೆಯಾದರೂ ಕೊಡುಗೈ ದಾನಿ. ಅತ್ತೆ ಮಗಳ ಜೊತೆ ಅತಿರೇಕದ ತುಂಟಾಟ. ಪರ ಹೆಂಗಸರ ನೋವಿಗೆ ಮೇಲುಸ್ತುವಾರಿ ಸಚಿವ. ಪ್ರತಿಮಾ ವಿರೋಧಿಸುತ್ತಿದ್ದರು. ಹೆಂಡತಿಗೆ ಗಂಡನನ್ನು ಶಂಕಿಸುವ ಚಟವಿದೆಯೆಂದು, ಮನೋವೈದ್ಯರಲ್ಲಿ ಮಾತ್ರೆ ಕೊಡಿಸಿದ್ದು, ಅದನ್ನು ಪ್ರತಿಮಾ ತಿಪ್ಪೆಗೆಸೆದಿದ್ದು, ಹುಚ್ಚಿ ಪಟ್ಟ ಕಟ್ಟಿದ್ದು; ನೆನಪುಗಳು ಕಣ್ಣೀರಾದವು.

  ಸಹ್ಯವಾದದ್ದು ಏನೂ ಇಲ್ಲ ಅನಿಸಿದ ಮೇಲೆ, ರಾತ್ರಿ ಅಸಹ್ಯವೇ. ಬೇರೆ ಯಾರ ಬಗ್ಗೆಯೂ ವ್ಯಾಮೋಹ/ ಸಂಪರ್ಕ ಇಲ್ಲ ಎಂದು ಸಾಬೀತು ಮಾಡಲು ಒತ್ತಾಯದ ಮಿಲನ. ಮನೆಯ- ಮಕ್ಕಳ ಅವಶ್ಯಕತೆಗಳಿಗೆ ಹಣ ಇಲ್ಲ. ಶಾಲೆಗೆ ಫೀಸು ಕಟ್ಟುತ್ತಿರಲಿಲ್ಲ. ಸಮಾಜಕ್ಕೆ ತೋರಿಸಲು ಸಂಸಾರ ಬೇಕು. ಕೊಟ್ಟಿದ್ದೇ ಆದರೂ ಎಂಥಾ ಆಸ್ತಿ ಕೊಟ್ಟರು? ಸಕ್ಕರೆ ಕಾಯಿಲೆ ಪಿತ್ರಾರ್ಜಿತ, ಏಡ್ಸ್‌ ಇವರಿಗೆ ಸ್ವಯಾರ್ಜಿತ, ನಾನು ದುರ್ದಾನ ಪಡೆದೆ ಎಂದು ಹೇಳಿ ಪ್ರತಿಮಾ ಸಮತೋಲನ ಕಳಕೊಂಡು ನಗಲು ಶುರುಮಾಡಿದರು. 

   ಪಕ್ಕದ ವಾರ್ಡಿನಲ್ಲಿ ಮಗನಿಗೆ ಸಮಾಧಾನ ಹೇಳುತ್ತಿದ್ದ ತಾಯಿ, ಗುಟ್ಟಿನಲ್ಲಿ ನನಗೆ ಹೇಳಿದರು: “ಮೇಡಂ, ಅವಳು ಸರಿ ಇರಲಿಲ್ಲ. ನಮಗೆ ಎಂಥಾ ದುರ್ಗತಿ ತಂದಳು ನೋಡಿ, ಯಾರ ಜೊತೆ ಸಂಪರ್ಕ ಇತ್ತೋ? ಪ್ರತೀ ರಾತ್ರಿ ಜಗಳವಾಡುತ್ತಿದ್ದಳಂತೆ. ಅವಮಾನದ ಮಡುವಿನಲ್ಲಿ ಪ್ರತಿಮಾ ಆರು ತಿಂಗಳಲ್ಲಿ ಚಿರಶಾಂತಿ ಹೊಂದಿದರು. ನನ್ನ ನೋವು, ಪುಸ್ತಕ ಮಾಡಿ ಮೇಡಂ, ಕೌಟುಂಬಿಕ ನೆಮ್ಮದಿಯ ಬಗ್ಗೆ ಜನರಿಗೆ ಗೌರವ ಬರಲಿ’ ಎನ್ನುತ್ತಿದ್ದರು. ಬೇರೆಯವರ ನೋವಿಗೆ ಮಾರುಕಟ್ಟೆ ಇರಬಹುದು, ಅರಿವು ಬರಬಹುದೇ?

  ಏಡ್ಸ್ ಕಾಯಿಲೆಯನ್ನು ಸುಲಭವಾಗಿ ತಡೆಗಟ್ಟಲು ನಿಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳಿ. ಕಡ್ಡಾಯವಾಗಿ ಕಾಂಡೋಮ್‌ ಬಳಸಿ. ನಿಗದಿತವಾಗಿ ರಕ್ತಪರೀಕ್ಷೆ ಮಾಡಿಸಿಕೊಳ್ಳಿ. ಚಟಗಳಿಂದ ದೂರವಿರಿ. ಅಪರಿಚಿತರೊಂದಿಗೆ, ಮಿಲನ ಬೇಡ. ಕ್ಷೌರದ ಅಂಗಡಿಯಲ್ಲಿ ಹೊಸ ಬ್ಲೇಡ್‌ ಬಳಸಬೇಕು. ಆಸ್ಪತ್ರೆಗಳಲ್ಲಿ ಹೊಸ ಸೂಜಿ- ಸಿರಿಂಜನ್ನು ಪಡೆಯಿರಿ. ಸಿಗರೇಟಿನ ಚಟ ಇದ್ದು, ಹೆಚ್‌ಐವಿ ಸೋಂಕು ತಗುಲಿದರೆ, ಶ್ವಾಸಕೋಶ ಬೇಗ ದುರ್ಬಲವಾಗಿ, ರೋಗನಿರೋಧಕ ಶಕ್ತಿ ಕುಸಿಯುತ್ತದೆ. ಸಂಗಾತಿಯಲ್ಲಿ ನಿಜಾಂಶವನ್ನು ಮುಚ್ಚಿಡಬೇಡಿ. ಸೋಂಕು ತಗುಲಿದ ಗರ್ಭಿಣಿಯರಿಂದ ಹುಟ್ಟುವ ಮಕ್ಕಳಿಗೆ, ಸೋಂಕು ವರ್ಗಾವಣೆ ಆಗಬಹುದು. ಮುಂಜಾಗ್ರತೆ ವಹಿಸಿ. ವೈದ್ಯರಲ್ಲಿ ಮಾರ್ಗದರ್ಶನ ಪಡೆಯಿರಿ. 

Advertisement

  (ವಿ.ಸೂ.: ಹೆಚ್‌ಐವಿ ಸೋಂಕು ತಗುಲಿದ ನಂತರ ಏಡ್ಸ್ ಬರಲು, window period ಇರುತ್ತದೆ. ವೈದ್ಯರನ್ನು ತಕ್ಷಣ ಸಂಪರ್ಕಿಸಿ.)

ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next